Ballari News: ವಿಶ್ವಕವಿ ಸಮ್ಮೇಳನದಲ್ಲಿ ಕಾವ್ಯಗಳ ಧಾರಾಕಾರ ಮಳೆ

By Kannadaprabha News  |  First Published Oct 23, 2022, 1:26 PM IST

ನಗರದ ಬಿಐಟಿಎಂ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಸಂಗಂ-ವಿಶ್ವಕವಿ ಸಮ್ಮೇಳನದ ಎರಡನೇ ದಿನವಾದ ಶನಿವಾರ ನಿರೀಕ್ಷೆಯಂತೆ ಕಾವ್ಯಗಳ ಧಾರಾಕಾರ ಮಳೆ ಸುರಿದಂತೆ ಭಾಸವಾಯಿತು. ದೇಶ-ವಿದೇಶಗಳಿಂದ ಆಗಮಿಸಿದ್ದ ಪ್ರಸಿದ್ಧ ಕವಿಗಳು ತಮ್ಮದೇ ವಿಶಿಷ್ಟನೆಲೆಯ ಕಾವ್ಯಗಳ ಮೂಲಕ ಬದುಕಿನ ಬಹು ವಿಸ್ತಾರತೆಯ ಚಿಂತನೆಯನ್ನು ಹರಿಬಿಟ್ಟರು.


ಕೆ.ಎಂ.ಮಂಜುನಾಥ್‌

ಬಳ್ಳಾರಿ (ಅ.23) :ನಗರದ ಬಿಐಟಿಎಂ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಸಂಗಂ-ವಿಶ್ವಕವಿ ಸಮ್ಮೇಳನದ ಎರಡನೇ ದಿನವಾದ ಶನಿವಾರ ನಿರೀಕ್ಷೆಯಂತೆ ಕಾವ್ಯಗಳ ಧಾರಾಕಾರ ಮಳೆ ಸುರಿದಂತೆ ಭಾಸವಾಯಿತು. ದೇಶ-ವಿದೇಶಗಳಿಂದ ಆಗಮಿಸಿದ್ದ ಪ್ರಸಿದ್ಧ ಕವಿಗಳು ತಮ್ಮದೇ ವಿಶಿಷ್ಟನೆಲೆಯ ಕಾವ್ಯಗಳ ಮೂಲಕ ಬದುಕಿನ ಬಹು ವಿಸ್ತಾರತೆಯ ಚಿಂತನೆಯನ್ನು ಹರಿಬಿಟ್ಟರು. ಸಮ್ಮೇಳನದಲ್ಲಿ ವಾಚನಗೊಂಡ ಬಹುತೇಕ ಕವಿತೆಗಳು ಸೂಚ್ಯತೆ, ಸೂಕ್ಷ್ಮತೆಯಿಂದಾಗಿ ಒಪ್ಪಿತಗೊಂಡವು. ಅಷ್ಟೇ ಅಲ್ಲ; ಕವಿ ಪದಪರವಶೆಗೆ ಒಳಗಾಗಿಲ್ಲ ಎಂಬುದನ್ನು ಸ್ಪಷ್ಟಗೊಳಿಸಿದವು!

Tap to resize

Latest Videos

undefined

Kannada Rajyotsava: ನ.1ಕ್ಕೆ ಪ್ರತಿ ಮನೆಯಲ್ಲೂ ಕನ್ನಡ ಧ್ವಜ ಹಾರಿಸಿ: ಕಸಾಪ

ಕವಿ ಸಮ್ಮೇಳನಕ್ಕೆಂದೇ ಸಿದ್ಧಪಡಿಸಿದ್ದ ಕಾವ್ಯಗಳು ಮಾಗಿದ್ದವು. ಹಣ್ಣಾಗಿ ಸಿಹಿ ಉಣಿಸಿದವು. ಕಾವ್ಯಾಸಕ್ತರ ನಿರೀಕ್ಷೆ ಎಲ್ಲೂ ಹುಸಿಗೊಳ್ಳದಂತೆ ನೋಡಿಕೊಂಡವು ಎಂಬುದನ್ನು ನಾಡಿನ ಖ್ಯಾತ ಕವಿ-ಲೇಖಕ ಚಿಂತಕರು ನುಡಿ ಸ್ಪಂದನೆಯಲ್ಲಿ ಒಪ್ಪಿತ ಮುದ್ರೆ ಹಾಕಿದರು. ಒರಿಸ್ಸಾದ ಖ್ಯಾತ ಕವಿ ಕೇದಾರ ಮಿಶ್ರಾ ಅವರು ‘ಪಂಜರದ ಕಥೆ’ ಶೀರ್ಷಿಕೆಯಡಿ ವಾಚಿಸಿದ ಕಾವ್ಯ ಸಮ್ಮೇಳನದ ಗೋಷ್ಠಿಯಲ್ಲಿ ಹೆಚ್ಚು ಗಮನ ಸೆಳೆಯಿತು.

‘ಪಂಜರದೊಳಗೆ ವಾಕ್‌ ಸ್ವಾತಂತ್ರ್ಯ. ಪಂಜರದೊಳಗೆ ಸಂಚಾರ ಸ್ವಾತಂತ್ರ್ಯ. ಪಂಜರದೊಳಗೆ ಪ್ರಜಾತಂತ್ರ. ನನ್ನ ಪಂಜರದ ಗಡಿಯನ್ನು ರಕ್ಷಿಸಬೇಕು. ಇದು ನನ್ನ ಶಪಥ’..ಕವಿ ಹೀಗೆ ತನ್ನ ಪಂಜರದೊಳಗಿನ ಅನಂತ ಸುಖವನ್ನು ಹೇಳುತ್ತಲೇ ಪಂಜರವನ್ನು ರಕ್ಷಿಸಿಕೊಳ್ಳುವುದಾಗಿ ಶಪಥಗೈದರು. ಕಾವ್ಯದ ಮೂಲಕ ಪಂಜರದೊಳಗಿನ ಬದುಕನ್ನೂ ಪ್ರೀತಿಸುವುದು ಹೇಗೆ? ಎಂಬುದರ ಹಲವು ಸ್ತರಗಳ ಅರ್ಥಸಾಧ್ಯತೆಯನ್ನು ಕವಿ ಕಾವ್ಯಾತ್ಮಕವಾಗಿ ಉಣಬಡಿಸುತ್ತಿದ್ದರೆ, ಕಾವ್ಯ ಕೇಳುಗ ಕಿವಿಗಳು ಪಂಜರದ ಬದುಕು ಕೊನೆ ಹೇಗೆ ಎಂಬ ಪ್ರಶ್ನಾರ್ಥಕದಲ್ಲಿ ಕಾವ್ಯದ ಕೊನೆಯ ಸಾಲಿನತ್ತ ಕಣ್ಣಾಯಿಸುತ್ತಿದ್ದರು. ಕಾವ್ಯದ ಮುಂದುವರಿದ ಭಾಗ ಹೀಗಿತ್ತು; ‘ಹಾಡುವೆ ಪಂಜರಕ್ಕೆಂದು. ಬರೆಯುವೆ ಪಂಜರಕ್ಕೊಂದು ರಾಷ್ಟ್ರಗೀತೆ. ಆಚರಿಸುವೆ ಪಂಜರದ ಸ್ವಾತಂತ್ರ್ಯವನ್ನು. ನನ್ನ ಪಂಜರದಲ್ಲಿ ಸ್ವತಂತ್ರ ನಾನು. ನನ್ನ ಪಂಜರವೆಂದರೆ ಪ್ರೀತಿ ನನಗೆ’ ಎಂದರು. ವಸಂತ ಗೀತೆ’ ಶೀರ್ಷಿಕೆಯಡಿ ಮತ್ತೊಂದು ಕಾವ್ಯ ವಾಚಿಸಿ ಕವಿ ಕೇದಾರ ಮಿಶ್ರಾ ಗಮನ ಸೆಳೆದರು.

ರಾಮದುರ್ಗದ ಯುವ ಕವಿ ಕೃಷ್ಣ ದೇವಾಂಗಮಠ,‘ನಿನ್ನ ದೇಹ ಸೌಂದರ್ಯಕ್ಕೆ ದೇವರುಗಳು ಮರಳಾಗುತ್ತಾರೆ’ ಶೀರ್ಷಿಕೆಯಡಿ ಕಾವ್ಯ ವಾಚಿಸಿದರಲ್ಲದೆ, ‘ದೇವತೆಗಳಿಗೂ ಮೀರಿದ ನಿನ್ನ ಹೊಳಪಿಗೆ ರಾಕ್ಷಸರೂ ಮಂಡೆಯೂರುತ್ತಾರೆ. ನೀನು ಸಿಗದಿದ್ದರೂ ಅಮರ ಪ್ರೇಮಿಗಳಾಗಿ ಸಾಯಲು, ಸ್ಮರಣೆಯಲ್ಲಿ ಜೀವಂತವಾಗಿರಲು ಹೋರಾಡುತ್ತಾರೆ’ ಎಂದರು.

ಉತ್ತರ ಕನ್ನಡದ ಕವಿ ಶೋಭಾ ನಾಯಕ್‌, ‘ಬ್ರೈಲ್‌ ಲಿಪಿಯಲ್ಲಿ ಬರೆದ ಶೃಂಗಾರ ಕಾವ್ಯ ನಾನು. ದುರಂತವೆಂದರೆ ಓದಬೇಕಾದ ನೀನು ಕುರುಡನಲ್ಲ. ತಿರುತಿರುಗಿ ಪತಂಗಕ್ಕೆ ಡಿಕ್ಕಿ ಹೊಡೆಯುವ ಕುರುಡುಗಣ್ಣಿನ ದೀಪದಂತೆ ಸುಡುವವನೇ ಹೊರತು ಮುಡಿಯುವವನಲ್ಲ’ಎಂದರು.

ಗೊರಟಿ ವೆಂಕಣ್ಣನ ಕುಣಿಸಿದ ಕಾವ್ಯ:

ತೆಲಂಗಾಣದ ಕ್ರಾಂತಿಕಾರಿ ಕವಿ ಗೊರಟಿ ವೆಂಕಣ್ಣನವರ ‘ಮಳೆ ಬಂತಮ್ಮಾ’ಕಾವ್ಯಕ್ಕೆ ಶೋತೃಗಳು ಕುಳಿತಲ್ಲೇ ಕುಣಿದು ಕುಪ್ಪಳಿಸುವಂತೆ ಮಾಡಿತು. ಕಾವ್ಯಕ್ಕೆ ಹಾಡಿನ ಸ್ಪರ್ಶ ನೀಡಿದ ವೆಂಕಣ್ಣ, ಗುಬ್ಬಿ ಗೂಡಿನ ಕಲ್ಲು, ನೇಗಿನ ಒಡಲು, ಬಿಳಿಮಲ್ಲಿಗೆ ಹೂವಿನ ಬಿಳಿಪು, ದೀಪದ ಚಿಪ್ಪು, ನಿಗಿನಿಗಿ ಎನುವ ಹೂ ಬಿಸಿಲು ಕುರಿತು ಕಾವ್ಯ ವಾಚಿಸಿದರು. ತಮ್ಮ ಎರಡು ಕಾವ್ಯಗಳಿಗೆ ಧ್ವನಿಯಾದ ಗೊರಟಿ ವೆಂಕಣ್ಣನವರು, ಪರಿಸರ ತಂದೊಡ್ಡುವ ಸೌಖ್ಯ ಕುರಿತು ಹೇಳಿದರು. ಬೆಳಗಾವಿಯ ಕವಿ ಭುವನಾ ಹಿರೇಮಠ ‘ಟ್ರಯಲ್‌ ರೂಮಿನ ಅಪ್ಸರೆಯರು’ ಕುರಿತು ಕಾವ್ಯ ವಾಚಿಸಿ ಗಮನ ಸೆಳೆದರು.

ಸಾಲ್ವೆಡರ್‌ನ ಕಾರ್ಲಾ ಕೊರೆಸ್‌, ‘ ಬೆಳಗ್ಗೆ 9.35ಕ್ಕೆ ರೈಲಿನಲಿ’ ಶೀರ್ಷಿಕೆಯಡಿ ಕಾವ್ಯ ವಾಚಿಸಿದರೆ, ತಮಿಳುನಾಡಿನ ಕವಿ ಸುಕುಮಾರನ್‌ ಅವರು ‘ನಾನಿರುವೆ ಇಲ್ಲಿ’ ಶೀರ್ಷಿಕೆಯ ಮೂಲಕ ಅಸ್ವಸ್ಥವಾಗಿ ಸಾಗುತ್ತಿರುವ ಬದುಕನ್ನು ಬಿಚ್ಚಿಟ್ಟರು.

ಆನ್‌ಲೈನ್‌ ಮೂಲಕ ಕಾವ್ಯ ವಾಚನ ಮಾಡಿದ ಫೆರೋ ಐಲ್ಯಾಂಡ್‌ನ ಕವಿ ಬೆನೆರ್‌ ಬರ್ಗಸನ್‌ ಅವರು,‘ನನಗೂ ಕಡೆಗೂ ಅರ್ಥವಾಗಿದೆ ನಿನಗೆ ನನ್ನ ಕಳೆ ತುಂಬಿದ ಕೈ-ಕಾಲುಗಳ ಮೇಲೆ ನಿನ್ನ ಮಿರಿಮಿರಿ ಮಿರುಗನ್ನು ಚೆಲ್ಲಲು ಮನಸ್ಸಿಲ್ಲ’ ಎಂದು ಪ್ರೇಮಿಯೊಬ್ಬನ ವೇದನೆಯನ್ನು ಕಾವ್ಯದ ಮೂಲಕ ಅರುಹಿದರು. ಕೊಲಂಬಿಯಾ ದೇಶದ ಕವಿ ಯೊಹಾನಾ ಕರ್ವಹಾಲ್‌ ಅವರು ಬೇಟೆಗಾರನ ನಿರ್ದಯಿ ಬಾಣ ಹಾಗೂ ಒದ್ದೆ ಕೆಸರು, ಮಾರುವೇಷ ಕುರಿತು ಕಾವ್ಯ ವಾಚಿಸಿದರು. ವಿದೇಶಿ ಕವಿಗಳ ಕಾವ್ಯದ ಕನ್ನಡ ಅನುವಾದವನ್ನು ಪಿ.ಅನಿತಾ, ರಮೇಶ್‌ ಗಬ್ಬೂರು, ರಾಜೇಂದ್ರ ಪ್ರಸಾದ್‌, ರೇಣುಕಾ ರಮಾನಂದ, ಚೈತ್ರ ಶಿವಯೋಗಿಮಠ ಅವರು ವಾಚಿಸಿದರು.

Ballari News: ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಕ್ಕು ಮಂಡನೆ

ಸಂವರ್ಥ ಸಾಹಿಲ್‌, ಕಮಲಾಕರ ಭಟ್‌, ಪರಮೇಶ್ವರಯ್ಯ ಸೊಪ್ಪಿಮಠ, ಮೇಟಿ ಮಲ್ಲಿಕಾರ್ಜುನ, ಬಿ.ಜಿ.ಕಲಾವತಿ ಅವರು ನುಡಿ ಸ್ಪಂದಿಸಿದರು. ಡಾ.ದಿವಾಕರ ಗಡ್ಡಿ, ಶಿವರಾಜ ಬೆಟ್ಟದೂರು, ಶಿವಲಿಂಗಪ್ಪ ಹಂದ್ಯಾಳು, ಅಜಯ್‌ ಬಣಕಾರ್‌ ಉಪಸ್ಥಿತರಿದ್ದರು. ಹಿರಿಯ ಕವಿ ಎಚ್‌.ಎಸ್‌.ಶಿವಪ್ರಕಾಶ್‌ ಸಮ್ಮೇಳನ ಮುನ್ನಡೆಸಿದರು.

click me!