ಗಗನಕ್ಕೇರಿದ ತರಕಾರಿ ಬೆಲೆ ಏರಿಕೆ: ಕಂಗಾಲಾದ ಜನತೆ

By Kannadaprabha NewsFirst Published Oct 2, 2020, 10:13 AM IST
Highlights

ಸಗಟು ಮಾರುಕಟ್ಟೆಯಲ್ಲೇ ತರಕಾರಿ ದರ ಹೆಚ್ಚಳ|  ದುಪ್ಪಟ್ಟು ಬೆಲೆಗೆ ತರಕಾರಿ ಮಾರಾಟ ಮಾಡುತ್ತಿರುವ ಚಿಲ್ಲರೆ ವ್ಯಾಪಾರಿಗಳು|  ರಾಜ್ಯದಲ್ಲಿ ಮಳೆಗೆ ಬಹುತೇಕ ಕಡೆಗೆ ತರಕಾರಿ ಬೆಳೆ ಹಾನಿ| 

ಬೆಂಗಳೂರು(ಅ.02): ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪೂರೈಕೆಯಲ್ಲಿ ಕೊರತೆ ಉಂಟಾಗಿ ಬೆಲೆ ಹೆಚ್ಚಳ ಕಂಡಿದ್ದು, ಸಗಟು ಮಾರುಕಟ್ಟೆಯಲ್ಲಿ ಕ್ಯಾರೆಟ್‌, ಬೀನ್ಸ್‌, ಟೊಮೆಟೋ, ಈರುಳ್ಳಿ ದರ ಗಗನಕ್ಕೇರಿದೆ. ಸಗಟು ಮಾರುಕಟ್ಟೆಯಲ್ಲೇ ತರಕಾರಿ ದರ ಹೆಚ್ಚಳ ಆಗಿರುವುದರಿಂದ ವಿವಿಧ ಪ್ರದೇಶಗಳ ಚಿಲ್ಲರೆ ವ್ಯಾಪಾರಿಗಳು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಜನರು ಕಂಗಾಲಾಗಿದ್ದಾರೆ.

ರಾಜ್ಯದಲ್ಲಿ ಮಳೆಗೆ ಬಹುತೇಕ ಕಡೆಗೆ ತರಕಾರಿ ಬೆಳೆ ಹಾನಿಯಾಗಿದೆ. ಟೊಮೆಟೋ, ಈರುಳ್ಳಿ ಸೇರಿದಂತೆ ವಿವಿಧ ತರಕಾರಿ ಬೆಳೆ ನೆಲಕಚ್ಚಿದ್ದು ಪೂರೈಕೆ ಕಡಿಮೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಈ ಹಿಂದೆ ಕೆ.ಜಿ. 60 ರು. ಇದ್ದ ಟೊಮೆಟೋ ದರ 40ಕ್ಕೆ ಇಳಿಕೆಯಾಗಿದೆ. ಕೆಲ ಪ್ರದೇಶಗಳಲ್ಲಿ ಬೆಲೆ ಕಡಿಮೆ ಇದ್ದರೆ, ವ್ಯಾಪಾರ-ವಹಿವಾಟು ಹೆಚ್ಚಾಗಿ ನಡೆಯುವ ಪ್ರದೇಶಗಳಲ್ಲಿ ಹೆಚ್ಚಿನ ಬೆಲೆ ಇದೆ ಎಂದು ವ್ಯಾಪಾರಿಗಳು ಹೇಳಿದರು.

ಸಗಟು ಮಾರುಕಟ್ಟೆಯಲ್ಲಿ ಕ್ಯಾರೆಟ್‌ ಕೆ.ಜಿ. 80 ರು., ಬೀನ್ಸ್‌, ಹಾಗಲಕಾಯಿ, ಹಸಿಮೆಣಸಿನಕಾಯಿ ಕೆ.ಜಿ. 40 ರು., ಹಸಿರು ಬೀನ್ಸ್‌ ಕೆ.ಜಿ. 60 ರು., ತೊಂಡೆಕಾಯಿ ಕೆ.ಜಿ. 30 ರು., ನವಿಲುಕೋಸು ಕೆ.ಜಿ. 20 ರು., ನುಗ್ಗೆಕಾಯಿ ಕೆ.ಜಿ. 30 ರು., ಸೀಮೆಬದನೆಕಾಯಿ ಕೆ.ಜಿ. 15 ರು.ಗೆ ಮಾರಾಟವಾಗುತ್ತಿದೆ. ದೇವನಹಳ್ಳಿ, ಹೊಸಕೋಟೆ, ಕೋಲಾರ ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಂದ ತರಕಾರಿ ಬರುತ್ತದೆ. ಒಂದು ತಿಂಗಳು ಕಳೆದ ನಂತರ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬರುವುದರಿಂದ ಬೆಲೆಯೂ ಇಳಿಕೆಯಾಗಬಹುದು ಎಂದು ಕೆ.ಆರ್‌. ಮಾರುಕಟ್ಟೆಸಗಟು ತರಕಾರಿ-ಹಣ್ಣು ವ್ಯಾಪಾರಿಗಳ ಸಂಘದ ಶ್ರೀಧರ್‌ ತಿಳಿಸಿದರು.

ಪೂರೈಕೆ ಕೊರತೆ: ತರಕಾರಿ, ಸೊಪ್ಪಿನ ಬೆಲೆ ಏರಿಕೆ, ಗ್ರಾಹಕರ ಜೇಬಿಗೆ ಕತ್ತರಿ..!

ರಾಜ್ಯದಲ್ಲಿ ಈರುಳ್ಳಿ ಬೆಳೆಯುವ ವಿವಿಧ ಜಿಲ್ಲೆಗಳಲ್ಲಿ ಅತಿವೃಷ್ಠಿಯಿಂದ ಬೆಳೆ ನಾಶವಾಗಿದೆ. ಹಿಂದೆ ಎಪಿಎಂಸಿಗೆ ಒಂದು ಸಾವಿರ ಲೋಡ್‌ ಈರುಳ್ಳಿ ಬರುತ್ತಿತ್ತು. ಆದರೆ, ಇಂದು 68,758 ಚೀಲ (340 ಗಾಡಿಗಳು) ಈರುಳ್ಳಿ ಬಂದಿದೆ. ಮಹಾರಾಷ್ಟ್ರ, ಗುಜರಾತ್‌, ರಾಜಸ್ತಾನ, ಆಂಧ್ರದಲ್ಲೂ ಮಳೆ ಇರುವುದರಿಂದ ಗುಣಮಟ್ಟದ ಈರುಳ್ಳಿ ಬರುತ್ತಿಲ್ಲ. ಮಹಾರಾಷ್ಟ್ರ ಈರುಳ್ಳಿಗೆ ಸಗಟು ದರ ಕೆ.ಜಿ. 40 ರು, ಕರ್ನಾಟಕದ ಈರುಳ್ಳಿಗೆ (ಗುಣಮಟ್ಟದ್ದು) ಕೆ.ಜಿ. 20-30 ರು., ಕೆಳ ದರ್ಜೆಯ ಈರುಳ್ಳಿ ಕೆ.ಜಿ. 2 ರು.ನಿಂದ 10 ರು. ಒಳಗೆ ಮಾರಾಟವಾಗುತ್ತಿದೆ. ಕಳೆದ ವರ್ಷ ಮಳೆಗೆ ಬೆಳೆ ಹಾನಿಯಾಗಿದ್ದರೂ ಈ ವರ್ಷದಷ್ಟುನಾಶವಾಗಿರಲಿಲ್ಲ. ಬೇಡಿಕೆಗೆ ತಕ್ಕಷ್ಟುಪೂರೈಕೆ ಇಲ್ಲ. ಮಳೆ ಕಡಿಮೆಯಾದರೆ ಉತ್ತಮ ಬೆಳೆ ಬರಬಹುದು. ಇಲ್ಲವಾದರೆ ಇರುವ ಬೆಳೆಯೂ ಕೊಳೆತು ಈರುಳ್ಳಿ ಧಾರಣೆ ಅತಿ ಹೆಚ್ಚಾಗುವ ಸಂಭವವಿದೆ ಎಂದು ಯಶವಂತಪುರ ಎಪಿಎಂಸಿ ರವಿ ಟ್ರೇಡಿಂಗ್‌ ಕಂಪನಿಯ ಬಿ. ರವಿಶಂಕರ್‌ ತಿಳಿಸಿದರು.

ಹಾಪ್‌ಕಾಮ್ಸ್‌ ಸೊಪ್ಪು, ತರಕಾರಿ ದರ (ಕೆ.ಜಿ.ಗಳಲ್ಲಿ)

ಹುರಳಿಕಾಯಿ 48 ರು.

ಬೀಟ್‌ರೂಟ್‌ 54 ರು.
ಸೌತೆಕಾಯಿ 23 ರು.
ದಪ್ಪ ಮೆಣಸಿನಕಾಯಿ 58 ರು.
ಬಜ್ಜಿ ಮೆಣಸಿನಕಾಯಿ 58 ರು.
ನುಗ್ಗೇಕಾಯಿ 72 ರು.
ಹಾರಿಕಾಟ ಬೀನ್ಸ್‌ 60 ರು.
ಹೊಸ ಶುಂಠಿ 46 ರು.
ನಿಂಬೆಹಣ್ಣು 110 ರು.
ಆಲೂಗಡ್ಡೆ 46 ರು.
ಹೀರೇಕಾಯಿ 67 ರು.
ಅವರೇಕಾಯಿ 58 ರು.
ಕೊತ್ತಂಬರಿ ಸೊಪ್ಪು 94 ರು.
ಈರುಳ್ಳಿ 58 ರು.
ಟೊಮೆಟೋ 55 ರು.
 

click me!