ಕಠಿಣವಾದ ಹಾದಿ, ರಸ್ತೆಯಲ್ಲೇ ಹರಿಯುತ್ತಿದ್ದ ನೀರು, ಗುಂಡಿಮಯ ರಸ್ತೆ, ಪ್ರತಿಕೂಲದ ವಾತಾವರಣ, ದೊಡ್ಡ ಬೈಕ್‌ನಲ್ಲಿ ಬೆಂಗಳೂರಿನಿಂದ ನೇಪಾಳದ ಲೋ ಮಂಥಾಂಗ್‌ಗೆ ಸವಾರಿ...! ಕೊಡಗಿನ ಯುವಕರು ಇಂತಹದೊಂದು ಸಾಹಸಕ್ಕೆ ಕೈ ಹಾಕಿ ಗೆಲುವು ಸಾಧಿಸಿದ್ದಾರೆ. ಸವಾಲುಗಳ ನಡುವೆಯೇ ಬೆಂಗಳೂರಿನಿಂದ ನೇಪಾಳ ಸವಾರಿ ನಡೆಸಿದ ಯುವಕರ ರೋಚಕ ರೈಡಿಂಗ್ ಸ್ಟೋರಿ ಇಲ್ಲಿದೆ.
ಮಡಿಕೇರಿ(ಸೆ.25): ಮೂಲತಃ ಕೊಡಗು ಜಿಲ್ಲೆಯ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಯಶ್ವಂತ್ ಕಾಳಪ್ಪ ಹಾಗೂ ದಕ್ಷಿಣ ಕನ್ನಡ ಮೂಲದ ಅಭಿಜಿತ್ ಕೋಟ್ಯಾನ್ ಅವರು ಟ್ರೈಂಪ್ ಟೈಗರ್ 800 ಎಕ್ಸ್‌ಸಿಎಕ್ಸ್ ಮೋಟಾರ್ ಸೈಕಲ್‌ನಲ್ಲಿ ನೇಪಾಳದ ಲೋ ಮಂಥಾಂಗ್ (ಅಪ್ಪರ್ ಮುಸ್ತಾಂಗ್) ತಲುಪಿದ ವಿಶ್ವದ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಅವರು ಚಲಿಸಿದ ದಾರಿಯ ಚಿತ್ರಣವಿದು.
ದೀರ್ಘ ಪ್ರಯಾಣ:
ಲೋ ಮಂಥಾಂಗ್ ಪ್ರಾಚೀನ ಟಿಬೆಟಿಯನ್ ಸಾಮ್ರಾಜ್ಯದ ಲೋ ರಾಜಧಾನಿ. ಕೊಡಗು ಜಿಲ್ಲೆಯ ಕಂಡಂಗಾಲ ಗ್ರಾಮದ ಯಶ್ವಂತ್ ಕಾಳಪ್ಪ ಮತ್ತೊಬ್ಬ ಬೈಕರ್ ಬೆಂಗಳೂರಿನ ಅಭಿಜಿತ್ ಕೋಟ್ಯಾನ್ ಅವರೊಂದಿಗೆ ಸೆ.7 ರಂದು ಬೆಂಗಳೂರಿನಿಂದ ಪ್ರಯಾಣ ಪ್ರಾರಂಭಿಸಿದ್ದರು. 17 ದಿನಗಳ ಸವಾರಿಯ ಬಳಿಕ ಸೆ.23ರಂದು ಅಪ್ಪರ್ ಮುಸ್ತಾಂಗ್ ತಲುಪಿದರು. ಪ್ರತಿಕೂಲ ವಾತಾವರಣದ ನಡುವೆ, ಹದಗೆಟ್ಟಿದ್ದ ರಸ್ತೆಯನ್ನೂ ಲೆಕ್ಕಿಸದೆ ಸತತ 17 ದಿನಗಳ ಕಾಲ ಬೈಕ್ ಸವಾರಿ ಮಾಡಿ ಗುರಿ ತಲುಪಿದ್ದಾರೆ.
ಒಟ್ಟು 4,300 ಕಿ.ಮೀ ಬೈಕ್ ರೈಡಿಂಗ್:
ಬೆಂಗಳೂರಿನಿಂದ ಪ್ರಯಾಣ ಆರಂಭಿಸಿದ ತಂಡ ರಾಜಮುಂಡ್ರಿ, ವಿಶಾಖಪಟ್ಟಣಂ, ಭುವನೇಶ್ವರ (ಒರಿಸ್ಸಾ), ಮಾಲ್ಡಾ, ಸಿಲಿಗುರಿ (ಪಶ್ಚಿಮ ಬಂಗಾಳ) ದಾಟಿ ಭೂತಾನ್ ದೇಶಕ್ಕೆ ತೆರಳಿದರು. ನಂತರ ಅಲ್ಲಿಂದ ಭೂತಾನ್ ಫಂಟ್ ಶೋಲಿಂಗ್, ಥಿಂಪು, ಫುಂಕಾ, ಪಾರೋ, ಸಿಲಿಗುರಿ, ಡಾರ್ಜಿಲಿಂಗ್‌ಗೆ ಮರಳಿ ಸಿಲಿಗುರಿ, ಕಠ್ಮಂಡು (ನೇಪಾಳ), ಬಾಗ್ಲುಂಗ್, ಮಾರ್ಫಾ, ಮುಕ್ತಿನಾಥ್ ಟು ಲೋ-ಮಂಥಾಂಗ್ ದಾರಿಯಾಗಿ (ಮೇಲಿನ ಮುಸ್ತಾಂಗ್) ಒಟ್ಟು 4,300 ಕಿ.ಮೀ.ಬೈಕ್‌ನಲ್ಲೇ ಸಾಗಿದರು.
ನೇಪಾಳದ ಹಿಮಾಲಯದ ಮೇಲ್ ಮುಸ್ತಾಂಗ್ 1992ರ ವರೆಗೆ ನಿರ್ಬಂಧಿತ ಸೈನ್ಯೀಕರಣಗೊಂಡ ಪ್ರದೇಶವಾಗಿತ್ತು. ಇದು ವಿಶ್ವದ ಅತ್ಯಂತ ಸಂರಕ್ಷಿತ ಪ್ರದೇಶಗಳಲ್ಲಿ ಒಂದು. ಹೆಚ್ಚಿನ ಜನಸಂಖ್ಯೆಯು ಇನ್ನೂ ಸಾಂಪ್ರದಾಯಿಕ ಟಿಬೆಟಿಕ್ ಭಾಷೆಗಳನ್ನು ಮಾತನಾಡುತ್ತಿದೆ. ಮುಸ್ತಾಂಗ್‌ನಲ್ಲಿನ ಜೀವನವು ಪ್ರವಾಸೋದ್ಯಮ, ಪಶುಸಂಗೋಪನೆ ಮತ್ತು ವ್ಯಾಪಾರವಾಗಿದೆ.
ನಾಲ್ಕು ಮಂದಿಯ ತಂಡ:
ಯಶ್ವಂತ್ ಸೇರಿದಂತೆ ನಾಲ್ಕು ಮಂದಿ ಅಪ್ಪರ್ ಮುಸ್ತಾಂಗ್ ತಲುಪಿದ ತಂಡದಲ್ಲಿದ್ದರು. ಯಶ್ವಂತ್ ಹಾಗೂ ಅಭಿಜಿತ್ ಬೆಂಗಳೂರಿನಿಂದಲೇ ಬೈಕ್ ಮೂಲಕ ಅಪ್ಪರ್ ಮುಸ್ತಾಂಗ್‌ಗೆ ತೆರಳಿದರು. ಉಳಿದ ರಾಮ್, ಬುಲ್ ಪಾಟ್ನಾಯಕ್ ಇಬ್ಬರು ಉತ್ತರ ಪ್ರದೇಶದಿಂದ ಮೋಟಾರ್ ಬೈಕ್‌ನಲ್ಲಿ ಸವಾರಿ ಮಾಡಿದರು.
ದೈತ್ಯ ಸಾಹಸ: ಇಸ್ರೋ ಸಾಧನೆಗೆ ಪಾಕ್‌ನ ಗಗನಯಾತ್ರಿ ಬಹುಪರಾಕ್!
ಯಶ್ವಂತ್ ಕಾಲೇಜು ದಿನಗಳಿಂದಲೂ ಬೈಕ್ ರೈಡ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಮೋಟಾರು ರಾರಯಲಿಯಲ್ಲಿ ಕೂಡ ಪಾಲ್ಗೊಂಡಿದ್ದರು. ಬೈಕ್ ರೈಡ್‌ನಲ್ಲಿ ಅಪಾರ ಆಸಕ್ತಿ ಹೊಂದಿರುವ ಅವರು ನೇಪಾಳದ ಅಪ್ಪರ್ ಮುಸ್ತಾಂಗ್‌ಗೆ ತೆರಳುವುದಾಗಿ ಟ್ರೈಂಪ್ ಟೈಗರ್ ಬೈಕ್ ಸಂಸ್ಥೆಗೆ ಸವಾಲು ಹಾಕಿದ್ದರು.
ಅನುಭವಿ ಸವಾರ:
ಯಶ್ವಂತ್ ಈ ಹಿಂದೆ ಟೈಗರ್ ಟ್ರೇಲ್ ಸ್ಲೆಂಡಿಂಡ್ ಸ್ಪಿಟಿಂಗ್ 2.0 ಆವೃತ್ತಿಯನ್ನು ಏಸ್ ಬೈಕರ್ ರಾಜೀವ್ ಪರ್ಮಾರ್ ಅವರೊಂದಿಗೆ ಪೂರ್ಣಗೊಳಿಸಿದ್ದರು. ಕೊಡಗಿನಲ್ಲಿ ಕೆಎ12 ನೋಂದಣಿ ಟ್ರೈಂಪ್ ಟೈಗರ್ ಬೈಕ್ ಹೊಂದಿರುವ ಏಕೈಕ ವ್ಯಕ್ತಿ ಯಶ್ವಂತ್. ತನ್ನ ಬೈಕ್‌ನಲ್ಲಿ 13 ದಿನಗಳ ಕಾಲ ಹಿಮಾಲಯ ಪರ್ವತ ಸುತ್ತಾಡಿ. 18,380 ಅಡಿ ಎತ್ತರದಲ್ಲಿರುವ ಕಾರ್‌ದುಂಗ್ಲ ಪರ್ವತ ಶ್ರೇಣಿ ತುತ್ತತುದಿಗೇರುವ ಮೂಲಕ ಸಾಧನೆ ಮಾಡಿದ್ದರು.
ಬೈಕ್ ರೈಡ್ ಮಾಡಿ ಏನಾದರೂ ಸಾಧನೆ ಮಾಡಬೇಕು ಅಂದುಕೊಂಡಿದ್ದೆ. ಈ ಹಿನ್ನೆಲೆಯಲ್ಲಿ ಅಪ್ಪರ್ ಮುಸ್ತಾಂಗ್‌ಗೆ ತೆರಳಲು ನಿರ್ಧರಿಸಿದ್ದೆ. ಅದರಂತೆ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಅಗತ್ಯ ವಸ್ತುಗಳನ್ನು ತೆಗೆದುಕೊಂಡಿದ್ದೆ. ಎರಡು ಹೆಚ್ಚುವರಿ ಬೈಕ್ ಟಯರ್‌ಗಳನ್ನು ಕೊಂಡೊಯ್ಯಲಾಗಿತ್ತು. 17 ದಿನಗಳಲ್ಲಿ ನನ್ನ ಟ್ರೈಂಪ್ ಟೈಗರ್ 800 ಎಕ್ಸ್‌ಸಿಎಕ್ಸ್ ಮೋಟಾರ್ ಸೈಕಲ್‌ನಲ್ಲಿ ತಲುಪಿದ್ದು, ತುಂಬ ಖುಷಿಯಾಗುತ್ತಿದೆ ಎನ್ನುತ್ತಾರೆ ಯಶ್ವಂತ್.
ಹಾವು ಕಡಿದ ವ್ಯಕ್ತಿಯ 2.5 ಕಿ.ಮಿ ಹೊತ್ತು ಸಾಹಸ ಮೆರೆದ ಯೋಧರು!
ಜೀವನದಲ್ಲಿ ಏನಾದರು ವಿಭಿನ್ನ ಸಾಧನೆ ಮಾಡಬೇಕೆಂದುಕೊಂಡಿದ್ದೆ. ನನ್ನ ಟ್ರೈಂಪ್ ಟೈಗರ್ 800 ಎಕ್ಸ್‌ಸಿಎಕ್ಸ್ ಮೋಟಾರ್ ಸೈಕಲ್‌ನಲ್ಲಿ ಅಪ್ಪರ್ ಮುಸ್ತಾಂಗ್ ತೆರಳುತ್ತೇನೆ ಎಂದು ಬೈಕ್ ಕಂಪನಿಯವರಿಗೆ ಸವಾಲು ಹಾಕಿದ್ದೆ. ಇದೀಗ ಅಪ್ಪರ್ ಮುಸ್ತಾಂಗ್‌ನ್ನು ಬೆಂಗಳೂರಿನಿಂದಲೇ ಬೈಕ್ ರೈಡ್ ಮಾಡಿ ತಲುಪಿದ್ದೇನೆ. ನಂತರ ಚೀನಾ-ನೇಪಾಳ ಗಡಿ ತಲುಪಿದೆವು. ಇಲ್ಲಿ ವಾಲಗ ನೃತ್ಯ ಮಾಡಿ ಸಂಭ್ರಮಿಸಿದೆ ಎನ್ನುತ್ತಾರೆ ಬೈಕ್ ರೈಡರ್ ಯಶ್ವಂತ್ ಕಾಳಪ್ಪ.
- ವಿಘ್ನೇಶ್ ಎಂ. ಭೂತನಕಾಡು