ಚಿತ್ರದುರ್ಗ: ವಾಕಿಂಗ್ ಹೋದಾಗ ಹಾವು ಕಚ್ಚಿ RFO ಸಾವು, ಸಿಪಿಐ ಹೃದಯಾಘಾತದಿಂದ ನಿಧನ

By Gowthami KFirst Published Jun 8, 2023, 5:43 PM IST
Highlights

ಚಿತ್ರದುರ್ಗದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಸರಕಾರಿ ಅಧಿಕಾರಿಗಳು ಮರಣ ಹೊಂದಿದ್ದಾರೆ. ಓರ್ವ ಅಧಿಕಾರಿಗೆ ಹಾವು ಕಚ್ಚಿ ಸಾವನ್ನಪ್ಪಿದ್ರೆ ಮತ್ತೋರ್ವ ಅಧಿಕಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಚಿತ್ರದುರ್ಗ (ಜೂ.8): ಚಿತ್ರದುರ್ಗದಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಸರಕಾರಿ ಅಧಿಕಾರಿಗಳು ಮರಣ ಹೊಂದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿ ಒಬ್ಬರು ಹಾವು ಕಚ್ಚಿ ಸಾವನ್ನಪ್ಪಿದ್ದರೆ. ಮತ್ತೊಂದು ಪ್ರಕರಣದಲ್ಲಿ  ಸಿಪಿಐಯೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಜಿಲ್ಲೆಯ ಮೊಳಕಾಲ್ಮೂರುನಲ್ಲಿ RFO ಟಿ.ಆರ್.ಪ್ರಕಾಶ ಹಾವು ಕಚ್ಚಿ ಸಾವು ಕಂಡಿದ್ದಾರೆ. ಮಹಾದೇವ ಸಸ್ಯ ಕ್ಷೇತ್ರದಲ್ಲಿ ವಾಕಿಂಗ್ ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. ಘಟನೆ ನಡೆದ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗ ಮದ್ಯೆ  RFO ಪ್ರಕಾಶ್(35) ಸಾವು ಕಂಡಿದ್ದಾರೆ. ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಒಂದೇ ಹುದ್ದೆಗೆ ಇಬ್ಬರು ಶಿಕ್ಷಣಾಧಿಕಾರಿಗಳ ಕಿತ್ತಾಟ, ನೀ ಕೊಡೆ- ನಾ ಬಿಡೆ ಎಂದು ಡಿಡಿಪಿಐಗಳ ಗಲಾಟೆ!

ಸಿಪಿಐಗೆ ಹೃದಯಾಘಾತ:
ಚಿತ್ರದುರ್ಗದಲ್ಲಿ ಸಿಪಿಐ ಲಿಂಗರಾಜ್‌(39) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರು ಬೆಂಗಳೂರಲ್ಲಿ ಸಿಪಿಐ ಆಗಿ ಸೇವೆ ಸಲ್ಲಿಸುತ್ತಿದ್ದರು. ಈ ಹಿಂದೆ PSI ಆಗಿ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸಿದ್ದರು. ಹೀಗಾಗಿ ಜೂನ್ 7ರಂದು ಬೆಂಗಳೂರಿಂದ ಚಿತ್ರದುರ್ಗ ನಗರಕ್ಕೆ ಆಗಮಿಸಿದ್ದರು. ಖಾಸಗಿ ಲಾಡ್ಜ್ (ನವೀನ್ ರೆಸಿಡೆನ್ಸಿ) ನಲ್ಲಿ ವಾಸ್ತವ್ಯ ಹೂಡಿದ್ದ ಲಿಂಗರಾಜ್ ಬೆಳಗ್ಗೆ ಎದೆ ನೋವು ಎಂದು ಆಸ್ಪತ್ರೆಗೆ ತೆರಳುವ ವೇಳೆ ತೀವ್ರ ಎದೆನೋವು ಕಾಣಿಸಿತ್ತು. ಬಸವೇಶ್ವರ ಆಸ್ಪತ್ರೆಗೆ ತೆರಳುವ ಮಾರ್ಗ ಮದ್ಯೆ ಸಾವು ಕಂಡಿದ್ದಾರೆ. ಚಿತ್ರದುರ್ಗ ನಗರದ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Bengaluru: ಶಾಲಾ ಬಸ್ ಹರಿದು ಸ್ಥಳದಲ್ಲೇ 7 ವರ್ಷದ ವಿದ್ಯಾರ್ಥಿನಿ ಸಾವು 

ಕಾರ್ಡ್‌ ಬದಲಾಯಿಸಿ ವಂಚಿಸುತ್ತಿದ್ದ ಆರೋಪಿ ಸರೆಹಿಡಿದ ಪೊಲೀಸರು
ಹೊಸದುರ್ಗ: ಎಟಿಎಂನಿಂದ ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್‌ ಬದಲಾಯಿಸಿ ವಂಚಿಸುತ್ತಿದ್ದ ಆರೋಪಿಯನ್ನು ಹೊಸದುರ್ಗ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಹೊಸದುರ್ಗ ತಾಲೂಕು ಗೊರವಿನಕಲ್ಲು ಗ್ರಾಮದ ಶಿವಲಿಂಗ (24) ಬಂಧಿತ ಆರೋಪಿ. ವಯೋವೃದ್ಧರು, ಮಹಿಳೆಯರು, ಎಟಿಎಂ ಬಳಸಲು ಬಾರದ ಗ್ರಾಹಕರಿಗೆ ಹಣ ತೆಗೆದುಕೊಡುವುದಾಗಿ ಪಿನ್‌ ನಂಬರ್‌ ತಿಳಿದುಕೊಂಡು ಎಟಿಎಂ ಕಾರ್ಡ್‌ನ್ನು ಬದಲಾಯಿಸುತ್ತಿದ್ದ. ನಂತರ ಎಟಿಎಂ ಕೇಂದ್ರಗಳಲ್ಲಿ ಗ್ರಾಹಕರ ಎಟಿಎಂ ಕಾರ್ಡ್‌, ಪಿನ್‌ ನಂಬರ್‌ ಬಳಸಿ ಹಣ ದೋಚುತ್ತಿದ್ದನು. ಈ ಪ್ರಸಂಗ ಸಿಸಿಟವಿಯಲ್ಲಿ ಸೆರೆಯಾಗಿತ್ತು. ಆರೋಪಿ ವಿರುದ್ಧ ಹೊಸದುರ್ಗ ಹಾಗೂ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು.

ಬಂಧನಕ್ಕೆ ತಂಡ ರಚನೆ:
ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್‌ ಇಲಾಖೆ ಆರೋಪಿ ಬಂಧನಕ್ಕಾಗಿ ತಂಡ ರಚನೆ ಮಾಡಲಾಗಿತ್ತು. ಮಂಗಳವಾರ ಬೆಳಗ್ಗೆ ಹೊಸದುರ್ಗ ಪಟ್ಟಣದ ಎಸ್‌ಬಿಐ ಬ್ಯಾಂಕ್‌ ಮುಂಭಾಗ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಆರೋಪಿ ಶಿವಲಿಂಗನನ್ನು ಪೋಲೀಸರು ಠಾಣೆಗೆ ಕರೆತಂದು, ವಿಚಾರಣೆ ಮಾಡಿದಾಗ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತ ಆರೋಪಿಯಿಂದ ಹೊಸದುರ್ಗ ಠಾಣೆಯ 2, ಚಿತ್ರದುರ್ಗ ಗ್ರಾಮಾಂತರ ಠಾಣೆಯ 1 ಪ್ರಕರಣಕ್ಕೆ ಸಂಬಂಧಿಸಿದಂತೆ 30.200 ರು. ನಗದು, ಕೃತ್ಯಕ್ಕೆ ಉಪಯೋಗಿಸಿದ್ದ 3 ಲಕ್ಷ ರು. ಮೌಲ್ಯದ ಟಾಟಾ ಇಂಡಿಕಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ವಂಚನೆ ಪ್ರಕರಣವನ್ನು ಬೇಧಿಸಿದ ಪಿಐ ತಿಮ್ಮಣ್ಣ, ಪಿಎಸ್‌ಐಗಳಾದ ರೂಪ್ಲಿಬಾಯಿ, ಮಹೇಶ್‌ ಗೌಡ, ಭೀಮನಗೌಡ ಪಾಟೀಲ್‌, ಸಿಬ್ಬಂದಿಗಳಾದ ಮಂಜುನಾಥ, ಕುಮಾರನಾಯ್ಕ, ಗಂಗಾಧರ, ತಿಪ್ಪೇಸ್ವಾಮಿ, ಪವನ್‌ ತಂಡವನ್ನು ಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ.

click me!