ಒತ್ತುವರಿ ತೆರವು ಹೆಸರಲ್ಲಿ ಮಹಿಳೆಯೊಬ್ಬಳು ಕಷ್ಟಪಟ್ಟು ಕೆರೆ ಪ್ರದೇಶದಲ್ಲಿ ಬೆಳೆದಿದ್ದ ಟೊಮ್ಯಾಟೋ ಬೆಳೆಯನ್ನು ಕಂದಾಯ ಇಲಾಖೆ ಅಧಿಕಾರಿ ಜೆಸಿಬಿ ಮೂಲ ನಾಶ ಮಾಡಿದ್ದಾರೆ.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ (ಜೂ.05): ಒತ್ತುವರಿ ತೆರವು ಹೆಸರಲ್ಲಿ ಮಹಿಳೆಯೊಬ್ಬಳು ಕಷ್ಟಪಟ್ಟು ಕೆರೆ ಪ್ರದೇಶದಲ್ಲಿ ಬೆಳೆದಿದ್ದ ಟೊಮ್ಯಾಟೋ ಬೆಳೆಯನ್ನು ಕಂದಾಯ ಇಲಾಖೆ ಅಧಿಕಾರಿ ಜೆಸಿಬಿ ಮೂಲ ನಾಶ ಮಾಡಿದ್ದು, ಮಾನವೀಯತೆ ಮರೆತು ಕ್ರೂರವಾಗಿ ನಡೆದುಕೊಂಡಿರುವ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕನ ಕ್ರಮಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಬೆಳೆ ಕಳೆದುಕೊಂಡ ರೈತ ಮಹಿಳೆಯ ಆಕ್ರಂದನ ಮುಗಿಲು ಮುಟ್ಟಿದೆ. ಫಲವತ್ತಾಗಿ ಬೆಳೆದಿರುವ ಟೊಮ್ಯಾಟೋ ಬೆಳೆ, ಬೆಳೆಯನ್ನು ಜೆಸಿಬಿಯಲ್ಲಿ ನಾಶ ಮಾಡುತ್ತಿರುವ ಅಧಿಕಾರಿಗಳು, ಮತ್ತೊಂದೆಡೆ ನಾಶವಾದ ಬೆಳೆಯನ್ನು ಕಂಡು ಕಣ್ಣೀರಾಕುತ್ತಿರುವ ಮಹಿಳೆ.
undefined
ಇಂಥಾದ್ದೊಂದು ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ನೆರ್ನಹಳ್ಳಿ ಗ್ರಾಮದಲ್ಲಿ. ಅಷ್ಟಕ್ಕೂ ಈ ಮಹಿಳೆಯ ಆಕ್ರಂದನಕ್ಕೆ ಕಾರಣ ಏನು ಅನ್ನೋದನ್ನ ನೋಡೋದಾದ್ರೆ ಮಾನವೀಯತೆ ಮರೆತ ಅಧಿಕಾರಿಯ ಕೆಲಸಕ್ಕೆ ಇಂದು ಈ ಮಹಿಳೆ ಕಣ್ಣೀರಾಕುವ ಪರಿಸ್ಥಿತಿ ಬಂದಿದೆ. ಅಷ್ಟಕ್ಕೂ ಆಗಿದ್ದೇನು ಎಂದು ನೋಡೋದಾದ್ರೆ ನೆರ್ನಹಳ್ಳಿ ಗ್ರಾಮದ ಶಾಂತಮ್ಮ ಎಂಬಾಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದಲ್ಲಿ ಸಾಲ ತೆಗೆದುಕೊಂಡು ಊರಿನ ಕೆರೆಯಲ್ಲಿ ಟೊಮ್ಯಾಟೋ ಬೆಳೆ ಬೆಳೆದಿದ್ದರು. ಆದರೆ ಕಳೆದ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ಥವ್ಯ ಕಾರ್ಯಕ್ರಮದ ವೇಳೆ ಕೆರೆ ಒತ್ತುವರಿ ತೆರವು ಮಾಡುವಂತೆ ಕೆಲವು ಗ್ರಾಮದವರ ದೂರಿನ ಮೇರೆಗೆ ಜಿಲ್ಲಾಧಿಕಾರಿಗಳು, ಕೆರೆಯಲ್ಲಿಯಲ್ಲಿರುವ ಬೆಳೆ ಕಟಾವು ಮಾಡಿದ ನಂತರ ಕೆರೆ ಒತ್ತುವರಿ ಮಾಡಲು ಸೂಚನೆ ನೀಡಿದ್ದರು.
ಯಾವಾಗ ಬೇಕಾದ್ರೂ ಬೀಳುತ್ತೆ ನೀರಿನ ಟ್ಯಾಂಕ್: ಶಿಥಿಲಗೊಂಡ ಟ್ಯಾಂಕ್‌ನಿಂದ ನಿರಂತರ ನೀರು ಸೋರಿಕೆ!
ಆದರೆ ಜಿಲ್ಲಾಧಿಕಾರಿಗಳ ಮಾತನ್ನೇ ಮುಂದೆ ಹಿಡಿದುಕೊಂಡ ಕಂದಾಯ ರಾಜಸ್ವ ನಿರೀಕ್ಷಕ ವಿನೋದ್, ಹಾಗೂ ಜಯಚಂದ್ರ ಎಂಬುವರು ಕೆರೆಯಲ್ಲಿ ಬೆಳೆದಿದ್ದ ಟೊಮ್ಯಾಟೋ ಬೆಳೆಯನ್ನು ನಾಶ ಮಾಡಿದ್ದಾರೆ. ಯಾವುದೇ ಸೂಚನೆ ನೀಡದೆ ಶಾಂತಮ್ಮ ಕೂಲಿ ಕೆಲಸಕ್ಕೆ ಹೋಗಿದ್ದಾಗ ಶಾಂತಮ್ಮಳಿಗೆ ಬೆಳೆಯನ್ನು ಕಟಾವು ಮಾಡಿಕೊಳ್ಳಲು ಒಂದು ಅವಕಾಶ ನೀಡದೆ ಸಾಲ ಮಾಡಿ ಬೆಳೆದಿದ್ದ ಇಡೀ ಬೆಳೆಯನ್ನೇ ಜೆಸಿಬಿ ತಂದು ಕ್ಷಣಾರ್ಧದಲ್ಲಿ ನಾಶ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಶಾಂತಮ್ಮ ಹಾಗೂ ಅಕ್ಕಪಕ್ಕದ ಜಮೀನಿನವರು ಅಧಿಕಾರಿಗಳನ್ನು ಗೋಗರೆದರೂ ಕೇಳದ ಬೆಳೆ ನಾಶ ಮಾಡಿದ್ದಾರೆ.
ಇನ್ನು ಶಾಂತಮ್ಮಗೆ ಮೂರು ಜನ ಮಕ್ಕಳು, ತಂಡ ಅಂಗವಿಕಲ ಇಡೀ ಕುಟುಂಬವನ್ನು ಕೂಲಿ ಮಾಡಿ ಜೀವನ ನಡೆಸುತ್ತಿದ್ದ ಶಾಂತಮ್ಮ, ತಮ್ಮ ಊರಿನ ಕೆರೆಯಲ್ಲಿ ನೀರಿಲ್ಲ, ಮುಂಗಾರು ಮಳೆ ಬಂದು ಕೆರೆಗೆ ನೀರು ಬರುವ ಹೊತ್ತಿಗೆ ಒಂದು ಬೆಳೆ ಬೆಳೆದುಕೊಳ್ಳೋಣ ಎಂದು ಧರ್ಮಸ್ಥಳ ಸಂಘದಿಂದ ಸಾಲ ಮಾಡಿ ಅದರಲ್ಲಿ ಟೊಮ್ಯಾಟೋ ಬೆಳೆ ಬೆಳೆದಿದ್ದರು. ಶಾಂತಮ್ಮ ಅದೃಷ್ಟ ಚೆನ್ನಾಗಿತ್ತು ಅನ್ಸುತ್ತೆ ಟೊಮ್ಯಾಟೋಗೆ ಉತ್ತಮ ಬೆಲೆ ಇತ್ತು. ಶಾಂತಮ್ಮ ಇದೊಂದು ಬೆಳೆಯಲ್ಲಿ ಒಂದು ಹಣ ಸಂಪಾದನೆ ಮಾಡುವ ಆಸೆ ಇಟ್ಟುಕೊಂಡಿದ್ದರು. ಅಷ್ಟರಲ್ಲಿ ಯಮಧರ್ಮ ನಂತೆ ಜೆಸಿಬಿ ಸಹಿತ ಬಂದ ಕಂದಾಯ ಇಲಾಖೆ ಅಧಿಕಾರಿಗಳು ಇಡೀ ಟೊಮ್ಯಾಟೋ ಬೆಳೆಯನ್ನು ನಾಶ ಮಾಡಿದ್ದಾರೆ.
ಇನ್ನೇನು ಕಟಾವಿಗೆ ಬಂದಿದ್ದ ಟೊಮ್ಯಾಟೋ ಬೆಳೆ ಕಟಾವು ಮಾಡಿ ಮಾರುಕಟ್ಟೆಗೆ ಹಾಕಿದ್ದಿದ್ದರೆ ಸಾವಿರಾರು ರೂಪಾಯಿ ಹಣ ಸಿಗುತ್ತಿತ್ತು. ಆದರೆ ಅದ್ಯಾವುದನ್ನು ಲೆಕ್ಕಿಸದೆ ಕೊನೆ ಪಕ್ಷ ಟೊಮ್ಯಾಟೋ ತೋಟದಲ್ಲಿದ್ದ ಡ್ರಿಪ್ ಪೈಪ್ ಅಥವಾ ಟೊಮ್ಯಾಟೋ ಕಡ್ಡಿಗಳನ್ನಾದರೂ ತೆಗೆದುಕೊಳ್ಳುತ್ತೇವೆ ಎಂದು ಕೇಳಿಕೊಂಡರು ಕಂದಾಯ ಇಲಾಖೆ ಅಧಿಕಾರಿಗಳು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಅಧಿಕಾರಿಗಳ ಈ ಕ್ರಮಕ್ಕೆ ಸ್ಥಳೀಯರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಇನ್ನು ಈ ಬಗ್ಗೆ ವಿಸ್ತೃತ ವರದಿಯನ್ನು ಏಷಿಯಾ ನೆಟ್ ಸುವರ್ಣ ನ್ಯೂಸ್ ಪ್ರಸಾರ ಮಾಡಿದ ಬಳಿಕ ರೈತ ಮಹಿಳೆ ಶಾಂತಮ್ಮಗೆ ನೆರವಿನ ಹಸ್ತ ಚಾಚುತ್ತಿದ್ದಾರೆ.
ಸುದ್ದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ. ಸುದ್ದಿ ಗಮನಿಸಿದ ಹಲವರ ಪೈಕಿ ನೇರವಾಗಿ ಶಾಂತಮ್ಮ ಬಳಿಯೇ ತೆರಳಿ ಸಮಾಜ ಸೇವಕ ಗುಂಜೂರು ಶ್ರೀನಿವಾಸರೆಡ್ಡಿ ಎಂಬುವವರು 20 ಸಾವಿರ,ಶ್ರೀನಿವಾಸಪುರ ಜೆಡಿಎಸ್ ಮುಖಂಡ ಬಿ.ವಿ ಶಿವಾರೆಡ್ಡಿ 10 ಸಾವಿರ ಹಾಗೂ ಕೋಲಾರ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ತೂಪಲ್ಲಿನಾರಾಯಣಸ್ವಾಮಿ 10 ಸಾವಿರ ಸಹಾಯ ಮಾಡಿ, ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇನ್ನು ನಾಳೆ ಕೋಲಾರ ಜಿಲ್ಲೆಯ ಸಂಸದ ಎಸ್. ಮುನಿಸ್ವಾಮಿ ವೈಯಕ್ತಿಕವಾಗಿ 25 ಸಾವಿರದ ಚೆಕ್ ನೀಡಲಿದ್ದಾರೆ.
ಕೋಲಾರದಲ್ಲಿ ಮತ್ತೊಮ್ಮೆ ರೈತರ ಆವಿಷ್ಕಾರ: ಅಪರೂಪದ ಜುಕಿನಿ ಬೆಳೆಯನ್ನು ಬೆಳೆದ ರೈತ!
ಇನ್ನು ಸಾಕಷ್ಟು ಜನರು ಭೇಟಿ ಕೊಟ್ಟು ಸಹಾಯ ಮಾಡುವ ನಿರೀಕ್ಷೆ ಇದ್ದು ಏಷಿಯಾನೆಟ್ ಸುವರ್ಣ ನ್ಯೂಸ್‌ನ ಕಾರ್ಯಕ್ಕೆ ರೈತ ಮಹಿಳೆ ಶಾಂತಮ್ಮ ಹಾಗೂ ದಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ವರ್ಷಾನುಗಟ್ಟಲೆಯಿಂದ ಒತ್ತುವರಿಯಾಗಿದ್ದ ಕೆರೆ ತೆರವು ಮಾಡದ ಅಧಿಕಾರಿಗಳು,ಈಗ ಟೊಮ್ಯಾಟೊಗೆ ಒಳ್ಳೆಯ ಬೆಲೆ ಇದ್ದಾಗ, ಆ ಒಂಟಿ ಮಹಿಳೆ ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನು ಮಾನವೀಯತೆ ಮರೆತು ಬೆಳೆಯನ್ನು ನಾಶ ಮಾಡುವ ಮೂಲಕ ರೈತ ಮಹಿಳೆಯ ಬದುಕಿನ ಮೇಲೆ ಚೆಲ್ಲಾಟವಾಡಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಜೊತೆಗೆ ಮಹಿಳೆಗೆ ಪರಿಹಾರ ನೀಡಬೇಕು ಅನ್ನೋದು ಸಾರ್ವಜನಿಕರ ಆಗ್ರಹ.