ಕೊಡಗಿನ ನಿರ್ಗತಿಕರ ಮೇಲೆ ದರ್ಪ ತೋರಿಸಿದ್ರಾ ಕಂದಾಯ ಇಲಾಖೆ ಅಧಿಕಾರಿಗಳು, 18 ಶೆಡ್ಡುಗಳು ನೆಲಸಮ

By Suvarna NewsFirst Published Mar 4, 2024, 8:07 PM IST
Highlights

ಕಳೆದ 16 ವರ್ಷಗಳಿಂದ ಶೆಡ್ಡ್ ನಿರ್ಮಿಸಿಕೊಂಡು ಬದುಕು ದೂಡುತ್ತಿದ್ದ ಬಡ ಕುಟುಂಬಗಳ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ದರ್ಪ ತೋರಿಸಿರುವ ಆರೋಪ ಕೇಳಿ ಬಂದಿದೆ.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಮಾ.4): ಕಳೆದ 16 ವರ್ಷಗಳಿಂದ ಶೆಡ್ಡ್ ನಿರ್ಮಿಸಿಕೊಂಡು ಬದುಕು ದೂಡುತ್ತಿದ್ದ ಬಡ ಕುಟುಂಬಗಳ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ದರ್ಪ ತೋರಿಸಿರುವ ಆರೋಪ ಕೇಳಿ ಬಂದಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಚೆರಿಯಪರಂಬು ಪೈಸಾರಿಯಲ್ಲಿ ಬದುಕುತ್ತಿರುವ ಕುಟುಂಬಗಳ ಗುಡಿಸಲುಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಕಿತ್ತೆಸೆದಿದ್ದಾರೆ ಎನ್ನಲಾಗಿದೆ.

ಮಳೆಗಾಲ ಆರಂಭವಾಗುವುದರಿಂದ ತಮ್ಮ ಗುಡಿಸಲುಗಳನ್ನು ಈ ಕುಟುಂಬಗಳು ಸರಿಪಡಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕಂದಾಯ ಇಲಾಖೆ ಅಧಿಕಾರಿಗಳು ನೀವೆಲ್ಲರೂ ಎಲ್ಲಿಂದಲೋ ಬಂದು ಶೆಡ್ಡ್ಗಳನ್ನು ಹಾಕಿಕೊಂಡು ಸರ್ಕಾರಿ ಜಾಗವನ್ನು ಕಬಳಿಸುತ್ತಿದ್ದೀರ ಎಂದು ಏಕಾಏಕಿ ಬಡವರ ಶೆಡ್ಗಳನ್ನು ಕಿತ್ತೆಸೆದಿದ್ದಾರೆ ಎನ್ನಲಾಗಿದೆ. 18 ಕುಟುಂಬಗಳ ಶೆಡ್ಡುಗಳನ್ನು ಅಲ್ಲಿನ ಕಂದಾಯ ಅಧಿಕಾರಿ ಮತ್ತು ಗ್ರಾಮಲೆಕ್ಕಿಗರು ಅಮಾನವೀಯವಾಗಿ ವರ್ತಿಸಿ ಶೆಡ್ಡುಗಳನ್ನು ಕಿತ್ತೆಸೆದಿದ್ದಾರೆ ಎಂದು ದೂರಿದ್ದಾರೆ. ಬೆಳಿಗ್ಗೆ 10 ಗಂಟೆ ಹೊತ್ತಿಗೆ ಬಂದ ಅಧಿಕಾರಿಗಳು ಯಾವುದೇ ಸೂಚನೆ ನೀಡದೆ ಶೆಡ್ಡುಗಳನ್ನು ಕಿತ್ತೆಸೆದಿದ್ದಾರೆ.

ಗಲಾಟೆ ಮಾಡಿ ಸಾಯಲು ಹೊರಟ ಮಗ ರಕ್ಷಿಸಲು ಹೋದ ತಾಯಿ ಕೂಡ ರೈಲಿಗೆ ಬಲಿ, ತಂಗಿ ಆತ್ಮಹತ್ಯೆ!

ಶೆಡ್ಡುಗಳಲ್ಲಿ ಮಕ್ಕಳು, ಮಹಿಳೆಯರು ಮತ್ತು ಬಾಣಂತಿಯರಿದ್ದರೂ ಅವರನ್ನೆಲ್ಲಾ ಏಕಾಏಕಿ ಮನೆಯಿಂದ ಹೊರಗೆ ಹಾಕಿ ಬಳಿಕ ಶೆಡ್ಡುಗಳನ್ನು ಕಿತ್ತೆಸೆದ್ದಿದ್ದಾರೆ ಎನ್ನಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳ ನಡವಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಈ ಕುಟುಂಬಗಳು ಮಡಿಕೇರಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ. ಅಮಾನವೀಯವಾಗಿ ವರ್ತಿಸಿರುವ ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು. ಶೆಡ್ಡು ಕಿತ್ತೆಸೆದು ನಮಗೆ ಮಾಡಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ನಿವಾಸಿ ಜನನಿ ಕಳೆದ ಹದಿನಾಲ್ಕು ವರ್ಷಗಳಿಂದ ನಮ್ಮ ಕುಟುಂಬಗಳು ಇಲ್ಲಿ ಬದುಕು ನಡೆಸುತ್ತಿವೆ. ಹಳೇ ಶೆಡ್ಡುಗಳನ್ನು ಸರಿಪಡಿಸುವುದಕ್ಕಾಗಿ ಶೆಡ್ಡುಗಳನ್ನು ಬಿಚ್ಚಿರುವಾಗ ಸ್ಥಳಕ್ಕೆ ಬಂದ ಕಂದಾಯ ಇಲಾಖೆ ಸಿಬ್ಬಂದಿ ಈ ರೀತಿ ವರ್ತಿಸಿ ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ.

ಚಿತ್ರದುರ್ಗಕ್ಕೆ ಆಂಧ್ರದಿಂದ ಕುಡಿಯುವ ನೀರು ಪೂರೈಕೆ, ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ದ ಸಿಡಿದೆದ್ದ ಜನತೆ

ಇದರಿಂದ ನಮ್ಮ ಬದುಕು ಬೀದಿಗೆ ಬಿದ್ದಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಬದುಕುವ ಹಕ್ಕಿಲ್ಲವೇ? ನಾವೇನು ಹೊರ ದೇಶಗಳಿಂದ ಬಂದಿರುವ ಜನರೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ನಳ ಸಂಪರ್ಕ ಕೂಡ ಕೊಡಲಾಗಿದೆ. ನಾವು ಇಲ್ಲಿಯೇ ಹುಟ್ಟಿ ಬೆಳೆದು ನಮ್ಮ ಎಲ್ಲಾ ದಾಖಲೆಗಳು ಇವೆ.

ನಮ್ಮ ತಾತ, ತಂದೆಯರು ಮೃತಪಟ್ಟಿರುವ ಬಗ್ಗೆ ಮರಣ ದೃಢೀಕರಣ ಪತ್ರಗಳಿವೆ. ಇಷ್ಟಾದರೂ ನಮನ್ನು ಹೊರದೇಶದಿಂದ ಬಂದವರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ನಿವಾಸಿ ಶಾಂತರಾಜ್ ಅಳಲು ತೋಡಿಕೊಂಡಿದ್ದಾರೆ. ಮಡಿಕೇರಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಬಳಿಕ ಶಿರಸ್ತೇದಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಹೋರಾಟಗಾರ ಪಿ.ಆರ್. ಭರತ್ ಅವರು ಜಿಲ್ಲೆಯಲ್ಲಿ ಸರ್ಕಾರಿ ಜಾಗವನ್ನು ಹತ್ತಾರು ಎಕರೆಯಷ್ಟು ಭೂಮಿ ಒತ್ತುವರಿ ಮಾಡಿಕೊಂಡಿರುವ ಬಂಡವಾಳಿಗರಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಕೈಯಲ್ಲಾಗದ ಅಧಿಕಾರಿಗಳು, ಬಡವರ ಶೆಡ್ಡಗಳನ್ನು ಕಿತ್ತೆಸೆದು ತಮ್ಮ ಮೃಗೀಯ ವರ್ತನೆಯನ್ನು ತೋರಿಸಿದ್ದಾರೆ. ಅಧಿಕಾರಿಗಳು ಮಾಡಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

click me!