ಚೆಕ್ ಬೌನ್ಸ್ ಪ್ರಕರಣ: ಸ್ವತಃ ವಾದಿಸಿ ಹೈಕೋರ್ಟ್‌ನಲ್ಲೂ ಗೆಲುವು ಸಾಧಿಸಿದ 85 ವರ್ಷದ ನಿವೃತ್ತ ಯೋಧ

Published : Jun 11, 2026, 10:28 PM IST
retired army man

ಸಾರಾಂಶ

ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ 85 ವರ್ಷದ ನಿವೃತ್ತ ಯೋಧರೊಬ್ಬರು ವಕೀಲರ ಸಹಾಯವಿಲ್ಲದೆ ಸ್ವತಃ ತಾವೇ ವಾದ ಮಂಡಿಸಿ, ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿಗೆ ಸೋಲಿನ ರುಚಿ ತೋರಿಸಿದ್ದಾರೆ.

ಕಾರವಾರ (ಜೂ.11): ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ 85 ವರ್ಷದ ನಿವೃತ್ತ ಯೋಧರೊಬ್ಬರು ವಕೀಲರ ಸಹಾಯವಿಲ್ಲದೆ ಸ್ವತಃ ತಾವೇ ವಾದ ಮಂಡಿಸಿ, ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿಗೆ ಸೋಲಿನ ರುಚಿ ತೋರಿಸಿದ್ದಾರೆ. ಬರೋಬ್ಬರಿ 11 ವರ್ಷಗಳ ಸುದೀರ್ಘ ಕಾನೂನು ಹೋರಾಟದಲ್ಲಿ ಈ ಇಳಿವಯಸ್ಸಿನ ಸೇನಾನಿಗೆ ಅಂತಿಮ ಜಯ ಸಿಕ್ಕಿದೆ. ಕಾರವಾರದ ಕೋಡಿಬಾಗದ ನಿವಾಸಿ ಹಾಗೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅಶೋಕ್ ದತ್ತಾತ್ರಯ ಜೋಶಿ (85) ಅವರೇ ನ್ಯಾಯಕ್ಕಾಗಿ ಹೋರಾಡಿ ಗೆದ್ದ ಛಲವಾದಿ.

ಗೋವಾದ ಪೊಂಡಾ ಮೂಲದ ಸುರಕ್ಷಾ ಇಂಡಿಯಾದ ಸಂಸ್ಥಾಪಕ ಸಂತೋಷ್ ಬಾಲಚಂದ್ರ ಕಾಮತ್ ಎಂಬವರು 2013-14ನೇ ಸಾಲಿನಲ್ಲಿ ಅಶೋಕ್ ಜೋಶಿ ಅವರಿಂದ ₹2 ಲಕ್ಷ ಕೈಗಡ ಸಾಲ ಪಡೆದಿದ್ದರು. ಈ ಹಣವನ್ನು ಮರಳಿಸಲು 2015ರಲ್ಲಿ ₹2 ಲಕ್ಷ ಮುಖಬೆಲೆಯ ಚೆಕ್ ನೀಡಿದ್ದರು. ಆದರೆ, ಬ್ಯಾಂಕ್‌ನಲ್ಲಿ ಹಣವಿಲ್ಲದೆ ಆ ಚೆಕ್ ಬೌನ್ಸ್ ಆಗಿತ್ತು. ಹಣ ಮರುಪಾವತಿಸದ ಸಂತೋಷ್ ಕಾಮತ್ ವಿರುದ್ಧ ಅಶೋಕ್ ಜೋಶಿ ಕಾರವಾರದ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು 28-10-2024ರಂದು ಸಂತೋಷ್ ಕಾಮತ್ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದಲ್ಲದೆ, ಅಶೋಕ್ ಅವರಿಗೆ ₹3,63,800 ಪಾವತಿಸುವಂತೆ ಆದೇಶಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆರೋಪಿ ಸಂತೋಷ್ ಕಾಮತ್, ಕಾರವಾರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ 24-04-2025ರಂದು ನ್ಯಾಯಾಲಯ ಈ ಮೇಲ್ಮನವಿಯನ್ನು ವಜಾಗೊಳಿಸಿತ್ತು.

ತೀರ್ಪನ್ನು ಎತ್ತಿಹಿಡಿದಿದೆ

ಇದರ ಹೊರತಾಗಿಯೂ ಪಟ್ಟು ಬಿಡದ ಆರೋಪಿ, ಧಾರವಾಡದ ಹೈಕೋರ್ಟ್ ಪೀಠದಲ್ಲಿ ಮೇಲ್ಮನವಿ ದಾಖಲಿಸಿದ್ದರು. ಜೂ. 5ರಂದು ವಿಚಾರಣೆ ನಡೆಸಿದ ಕರ್ನಾಟಕ ಉಚ್ಚ ನ್ಯಾಯಾಲಯವು ಆರೋಪಿಯ ಅರ್ಜಿಯನ್ನು ವಜಾಗೊಳಿಸಿ, ಕೆಳಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ವಿಶೇಷವೆಂದರೆ, 85ರ ಇಳಿವಯಸ್ಸಿನಲ್ಲೂ ಅಶೋಕ್ ದತ್ತಾತ್ರಯ ಜೋಶಿ ಯಾವುದೇ ವಕೀಲರನ್ನು ನೇಮಿಸಿಕೊಳ್ಳದೆ, ಕೆಳಹಂತದ ನ್ಯಾಯಾಲಯದಿಂದ ಹಿಡಿದು ಹೈಕೋರ್ಟ್‌ವರೆಗೆ ಎಲ್ಲಾ ನ್ಯಾಯಾಲಯಗಳಲ್ಲೂ ತಾವೇ ಖುದ್ದಾಗಿ ವಾದ ಮಂಡಿಸಿ ನ್ಯಾಯ ಪಡೆದುಕೊಂಡಿದ್ದಾರೆ.

PREV
Read more Articles on
click me!

Recommended Stories

ಮುಂಬೈ-ಹೈದರಾಬಾದ್ ಬುಲೆಟ್ ರೈಲು ಯೋಜನೆ: ಡಿಪಿಆರ್ ವರದಿ ಸಿದ್ಧ, ಕಲಬುರಗಿಗೆ ಸಿಗಲಿದೆ ಹೈ-ಸ್ಪೀಡ್ ನಿಲ್ದಾಣ!
ಕಲಬುರಗಿಯಿಂದ ಮಂಗಳೂರಿಗೆ ವಿಮಾನ ಸೇವೆ ಆರಂಭಿಸಲು ಒತ್ತಾಯ, 16 ಗಂಟೆಗಳ ರಸ್ತೆ ಪ್ರಯಾಣಕ್ಕೆ ಮುಕ್ತಿ ಸಿಗುವುದೇ?