
ಬೆಂಗಳೂರು: ದೇಶದ ಹೈ-ಸ್ಪೀಡ್ ರೈಲು ನೆಟ್‌ವರ್ಕ್‌ನಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಲು ಭಾರತ ಮುಂದಾಗಿದೆ. ದೇಶದ ಆರ್ಥಿಕ ರಾಜಧಾನಿ ಮುಂಬೈ ಮತ್ತು ಪ್ರಮುಖ ತಂತ್ರಜ್ಞಾನ ಕೇಂದ್ರವಾದ ಹೈದರಾಬಾದ್ ನಡುವೆ ಪ್ರಸ್ತಾವಿತ ಬುಲೆಟ್ ರೈಲು ಯೋಜನೆಗೆ ಈಗ ದಾರಿಸುಗಮವಾಗಿದ್ದು, ಈ ಮಾರ್ಗದ ವಿವರವಾದ ಯೋಜನಾ ವರದಿ (DPR - Detailed Project Report) ಪೂರ್ಣಗೊಂಡಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳನ್ನು ಸಂಪರ್ಕಿಸುವ ಈ ಹೈ-ಸ್ಪೀಡ್ ರೈಲು ಕಾರಿಡಾರ್‌ನಲ್ಲಿ ಕರ್ನಾಟಕಕ್ಕೂ ಅತ್ಯಂತ ಪ್ರಮುಖ ಪಾತ್ರ ಲಭಿಸಿದೆ. ಯಾಕೆಂದರೆ ಪ್ರಮುಖ ನಿಲ್ದಾಣ ಕಲಬುರಗಿಯಲ್ಲಿ ನಿಲುಗಡೆ ಇದೆ.
ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮ ಲಿಮಿಟೆಡ್ (NHSRCL) ಸಿದ್ಧಪಡಿಸಿರುವ ಈ ಯೋಜನೆಯು ಒಟ್ಟು 671 ಕಿಲೋಮೀಟರ್ ಉದ್ದದ ಮಾರ್ಗವನ್ನು ಹೊಂದಿದೆ. ಇದು ಮೂರು ಪ್ರಮುಖ ರಾಜ್ಯಗಳ ಮೂಲಕ ಹಾದು ಹೋಗಲಿದ್ದು, ರಾಜ್ಯವಾರು ಹಂಚಿಕೆ ಈ ಕೆಳಗಿನಂತಿದೆ:
ಈ ಕಾರಿಡಾರ್‌ನಲ್ಲಿ ಕರ್ನಾಟಕದ ಮೂಲಕ ಹಾದುಹೋಗುವ 121 ಕಿ.ಮೀ. ಮಾರ್ಗದಲ್ಲಿ, ರಾಜ್ಯದ ಪ್ರಮುಖ ನಗರವಾದ ಕಲಬುರಗಿಯಲ್ಲಿ ಹೈ-ಸ್ಪೀಡ್ ನಿಲ್ದಾಣವನ್ನು ನಿರ್ಮಿಸಲು ಯೋಜಿಸಲಾಗಿದೆ. ಇದರಿಂದಾಗಿ ಇಡೀ ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ಭಾಗದ ಪ್ರಯಾಣಿಕರಿಗೆ ಮತ್ತು ಉದ್ಯಮಿಗಳಿಗೆ ಜಾಗತಿಕ ಮಟ್ಟದ ಸಾರಿಗೆ ಸೌಲಭ್ಯ ಸಿಕ್ಕಂತಾಗಲಿದೆ.
ಪ್ರಸ್ತುತ ಮುಂಬೈ ಮತ್ತು ಹೈದರಾಬಾದ್ ನಡುವೆ ಸಂಚರಿಸುವ ಸಮಯ ಸುಮಾರು 12 ರಿಂದ 15 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತವೆ. ಆದರೆ, ಪ್ರಸ್ತಾವಿತ ಬುಲೆಟ್ ರೈಲುಗಳು ಗಂಟೆಗೆ ಸುಮಾರು 300 ಕಿ.ಮೀ ವೇಗದಲ್ಲಿ ಚಲಿಸಲಿವೆ. ಇದು ಸದ್ಯದ ಎಕ್ಸ್‌ಪ್ರೆಸ್ ರೈಲುಗಳಿಗಿಂತ ಐದು ಪಟ್ಟು ಹೆಚ್ಚು ವೇಗವಾಗಿದೆ.
ಯೋಜನೆಯ ಅಂದಾಜಿನ ಪ್ರಕಾರ, ಯಾವುದೇ ನಿಲ್ದಾಣಗಳಲ್ಲಿ ನಿಲ್ಲದೆ ನೇರವಾಗಿ ಚಲಿಸಿದರೆ, ಮುಂಬೈನಿಂದ ಹೈದರಾಬಾದ್‌ಗೆ ಕೇವಲ 2 ಗಂಟೆ 55 ನಿಮಿಷಗಳಲ್ಲಿ ತಲುಪಬಹುದು. ಮಾರ್ಗ ಮಧ್ಯದ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಪಡೆದರೂ ಸಹ, ಇಡೀ ಪ್ರಯಾಣಕ್ಕೆ ಗರಿಷ್ಠ 3 ಗಂಟೆ 13 ನಿಮಿಷಗಳು ಮಾತ್ರ ಬೇಕಾಗಬಹುದು.
ಈ ಹೈ-ಸ್ಪೀಡ್ ಕಾರಿಡಾರ್ ಮುಂಬೈ-ಪುಣೆ-ಸೋಲಾಪುರ-ಕಲಬುರಗಿ-ಹೈದರಾಬಾದ್ ನಗರಗಳನ್ನು ಜೋಡಿಸಲಿದ್ದು, ದೇಶದ ಪ್ರಮುಖ ಹಣಕಾಸು ಮತ್ತು ಐಟಿ ಕೇಂದ್ರಗಳನ್ನು ಬೆಸೆಯುವ ಶಕ್ತಿಶಾಲಿ ಆರ್ಥಿಕ ಕಾರಿಡಾರ್ ಆಗಿ ಮಾರ್ಪಡಲಿದೆ.
ಮಹಾರಾಷ್ಟ್ರ: ವಿಖ್ರೋಲಿ, ಥಾಣೆ, ನವಿ ಮುಂಬೈ, ಲೋನಾವಾಲಾ, ಪಿಂಪ್ರಿ-ಚಿಂಚ್‌ವಾಡ್, ಪುಣೆ, ಬಾರಾಮತಿ, ಪಂಢರಪುರ ಮತ್ತು ಸೋಲಾಪುರ್.
ಕರ್ನಾಟಕ: ಕಲಬುರಗಿ (ಪ್ರಮುಖ ನಿಲುಗಡೆ).
ತೆಲಂಗಾಣ: ಕೋಕಾಪೇಟ್, ವಿಕಾರಾಬಾದ್ ಮತ್ತು ಶಂಶಾಬಾದ್. (ಶಂಶಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ರೈಲುಗಳ ನಿರ್ವಹಣೆಗಾಗಿ ಬೃಹತ್ ಡಿಪೋವನ್ನು ಕೂಡ ನಿರ್ಮಿಸಲಾಗುತ್ತದೆ).
ಈ ಬೃಹತ್ ಯೋಜನೆಯಲ್ಲಿ ತಾಂತ್ರಿಕವಾಗಿ ಅತ್ಯಂತ ಕಠಿಣವಾದ ಭಾಗವೆಂದರೆ ಮಹಾರಾಷ್ಟ್ರದ ಖಂಡಾಲಾ ಘಾಟ್ ಪ್ರದೇಶ. ಈ ಪಶ್ಚಿಮ ಘಟ್ಟಗಳ ಸವಾಲಿನ ಭೂಪ್ರದೇಶವನ್ನು ದಾಟಲು ಇಂಜಿನಿಯರಿಂಗ್ ಮಟ್ಟದಲ್ಲಿ ದೈತ್ಯ ಯೋಜನೆ ರೂಪಿಸಲಾಗಿದೆ. ಇಲ್ಲಿ ಸುಮಾರು 24 ಕಿ.ಮೀ ವ್ಯಾಪ್ತಿಯಲ್ಲಿ 13 ಅತ್ಯಾಧುನಿಕ ಸುರಂಗ ಮಾರ್ಗಗಳನ್ನು (Tunnels) ನಿರ್ಮಿಸಲಾಗುವುದು. ಇದರೊಂದಿಗೆ ಒಟ್ಟು 35 ಕಿ.ಮೀ ಉದ್ದದ ಭೂಗತ (Underground) ಮಾರ್ಗವನ್ನು ವಿನ್ಯಾಸಗೊಳಿಸಲಾಗಿದ್ದು, ಇದು ಭಾರತೀಯ ರೈಲ್ವೆ ಇತಿಹಾಸದಲ್ಲೇ ಅತ್ಯಂತ ಸಂಕೀರ್ಣ ಹಾಗೂ ಸಾಹಸಮಯ ಯೋಜನೆಯಾಗಲಿದೆ.
ಪ್ರಸ್ತುತ ವಿವರವಾದ ಯೋಜನಾ ವರದಿ (DPR) ಅಂತಿಮ ಹಂತಕ್ಕೆ ತಲುಪಿರುವುದರಿಂದ, ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮ ಲಿಮಿಟೆಡ್ (NHSRCL) ಈಗ ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳ ಸಹಕಾರವನ್ನು ಕೋರಿದೆ. ವಿಶೇಷವಾಗಿ ಬುಲೆಟ್ ರೈಲು ಹಳಿಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ (Land Acquisition) ಪ್ರಕ್ರಿಯೆ ಮತ್ತು ವಿವಿಧ ಇಲಾಖೆಗಳ ಶಾಸನಬದ್ಧ ಅನುಮೋದನೆಗಳನ್ನು ಶೀಘ್ರವಾಗಿ ಪಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಮಾತುಕತೆ ಆರಂಭವಾಗಿದೆ.
ಎಲ್ಲಾ ಅಧಿಕೃತ ಒಪ್ಪಿಗೆಗಳು ಮತ್ತು ಅಂತಿಮ ಅನುಮತಿಗಳು ದೊರೆತ ನಂತರ, ಅಂದರೆ ಬಹುಶಃ 2026 ರ ಅಂತ್ಯದ ವೇಳೆಗೆ ಈ ಯೋಜನೆಯ ತಳಮಟ್ಟದ ನಿರ್ಮಾಣ ಕಾರ್ಯಗಳು ಆರಂಭವಾಗುವ ನಿರೀಕ್ಷೆಯಿದೆ. ಮುಂದಿನ 10 ವರ್ಷಗಳಲ್ಲಿ ಈ ಸಂಪೂರ್ಣ ಬುಲೆಟ್ ರೈಲು ಕಾರಿಡಾರ್ ಅನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.