Uttara Kannada: ಮಿನಿ ಬಿಹಾರವಾಗಿದೆ ಶಿರವಾಡದ ರೆಸಾರ್ಟ್: ಸ್ಥಳೀಯರಿಗೆ ಆತಂಕ

By Govindaraj S  |  First Published Nov 28, 2022, 9:48 PM IST

ಪ್ರವಾಸಿಗರ ಉಳಿವಿಕೆಗಾಗಿ ಪ್ರಾರಂಭಿಸಿದ ಆ ರೆಸಾರ್ಟ್ ಸುತ್ತಮುತ್ತ ಪ್ರಸ್ತುತ ಸ್ಥಳೀಯರು ಓಡಾಡುವುದಕ್ಕೂ ಭಯ ಪಡೋ ಪರಿಸ್ಥಿತಿಯಿದೆ.  ರೆಸಾರ್ಟ್‌ನಲ್ಲಿ ಪ್ರವಾಸಿಗರನ್ನು ಉಳಿಸುವ ಬದಲು  ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಹೊರ ರಾಜ್ಯದ ಸುಮಾರು ಐನೂರಕ್ಕೂ ಅಧಿಕ ಕಾರ್ಮಿಕರನ್ನು ರಾಶಿ ಹಾಕಲಾಗಿದೆ.‌ 


ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ನ.28): ಪ್ರವಾಸಿಗರ ಉಳಿವಿಕೆಗಾಗಿ ಪ್ರಾರಂಭಿಸಿದ ಆ ರೆಸಾರ್ಟ್ ಸುತ್ತಮುತ್ತ ಪ್ರಸ್ತುತ ಸ್ಥಳೀಯರು ಓಡಾಡುವುದಕ್ಕೂ ಭಯ ಪಡೋ ಪರಿಸ್ಥಿತಿಯಿದೆ. ರೆಸಾರ್ಟ್‌ನಲ್ಲಿ ಪ್ರವಾಸಿಗರನ್ನು ಉಳಿಸುವ ಬದಲು  ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಹೊರ ರಾಜ್ಯದ ಸುಮಾರು ಐನೂರಕ್ಕೂ ಅಧಿಕ ಕಾರ್ಮಿಕರನ್ನು ರಾಶಿ ಹಾಕಲಾಗಿದೆ.‌ ಇದರಿಂದಾಗಿ ಸುತ್ತಮುತ್ತಲಿನ ಜನರು ಅದರಲ್ಲೂ ಮಹಿಳೆಯರು ರಾತ್ರಿಯಾದರೆ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಅನುಮತಿ ಇಲ್ಲದೇ ಕಾರ್ಮಿಕರನ್ನು ರಾಶಿ ಹಾಕಿರುವ ಸಂಬಂಧಪಟ್ಟ ಕಂಪೆನಿ ಹಾಗೂ ರೆಸಾರ್ಟ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ. 

Tap to resize

Latest Videos

ಊರು- ಪರವೂರಿನ ಜನರು ರೆಸಾರ್ಟ್‌‌ಗಳಲ್ಲಿ ಉಳಿಯುವುದು ಸಾಮಾನ್ಯ. ಆದರೆ, ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಸುಮಾರು ಐನೂರಕ್ಕೂ ಅಧಿಕ ಹೊರ ರಾಜ್ಯದ ಕಾರ್ಮಿಕರನ್ನು ರಾಶಿ ಹಾಕಲಾಗಿದೆ. ರೆಸಾರ್ಟ್‌ಗೆ ಅನುಮತಿ ನೀಡಿದ ಜಾಗದಲ್ಲಿ ಕಾರ್ಮಿಕರನ್ನು ರಾಶಿ ಹಾಕಲು ಅವಕಾಶ ನೀಡಿದ್ದಾದರೂ ಯಾರು..? ಅನ್ನೋ ಪ್ರಶ್ನೆಯನ್ನು ಸ್ಥಳೀಯರು ಮಾಡ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಚಾಲ್ತಿಯಲ್ಲಿದ್ದ ರೆಸಾರ್ಟ್‌ನಲ್ಲಿ ಕದಂಬ ನೌಕಾನಲೆ ಎರಡನೇ ಹಂತದ ವಿಸ್ತರಣೆ ಕಾಮಗಾರಿ ಗುತ್ತಿಗೆ ಪಡೆದ ಐಟಿಡಿಸಿ ಎನ್ನುವ ಕಂಪೆನಿಯು ಬಿಹಾರ ಸೇರಿದಂತೆ ಉತ್ತರ ಭಾರತದ ರಾಜ್ಯದ ಸುಮಾರು ಐನೂರಕ್ಕೂ ಅಧಿಕ ಕಾರ್ಮಿಕರನ್ನು ರಾಶಿ ಹಾಕಿದೆ. 

ಕಾರವಾರದಲ್ಲಿ ವಿಶೇಷ ಈ ದಿಂಡಿ ಜಾತ್ರೆ: ಗಮನ ಸೆಳೆದ ದೈವ ನರ್ತಕ, ಪಂಜುರ್ಲಿ

ರೆಸಾರ್ಟಿನ ಬೋರ್ಡನ್ನು ತೆಗೆದು ಕಂಪೆನಿಯ ಬೋರ್ಡನ್ನು ಹಚ್ಚಿ ಉಳಿಯಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಕಳೆದ ಒಂದು ವರ್ಷದಿಂದ ರೆಸಾರ್ಟ್ ಸುತ್ತಮುತ್ತ ಮಿನಿ ಬಿಹಾರ ನಿರ್ಮಾಣವಾಗಿದ್ದು, ಸಂಜೆಯಾದ್ರೆ ಸಾಕು ಸುತ್ತಮುತ್ತಲಿನ ಮನೆಯವರು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವ ಆರೋಪ ಸ್ಥಳೀಯರದ್ದು. ಕೆಲಸ ಮುಗಿಸಿಕೊಂಡು ಬರುವ ಕಾರ್ಮಿಕರು ಸುತ್ತಮುತ್ತಲಿನ ಮನೆಗಳ ಹೆಣ್ಣು ಮಕ್ಕಳು ಓಡಾಡುವಾಗ ಅಸಭ್ಯ ವರ್ತನೆ ತೋರುವ ಘಟನೆಗಳು ನಡೆದಿದ್ದು, ಈ ಅವ್ಯವಸ್ಥೆ ವಿರುದ್ದ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಇತ್ತೀಚೆಗೆ ರೆಸಾರ್ಟ್‌ನಲ್ಲಿ ಕಾರ್ಮಿಕರು ಹೊಡೆದಾಡಿಕೊಂಡು ಭಾರೀ ಗಲಾಟೆಯನ್ನು ಕೂಡಾ ಮಾಡಿಕೊಂಡಿದ್ದರು. 

ಇದರಿಂದಾಗಿ ಹೊರ ರಾಜ್ಯದ ನೂರಾರು ಕಾರ್ಮಿಕರನ್ನು ತಂದು ಹಳ್ಳಿಯೊಂದರಲ್ಲಿ ಇಟ್ಟರೇ ಜನರು ಹೇಗೆ ಇರಬೇಕು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಇನ್ನು ರೆಸಾರ್ಟ್ ಇರುವ ಶಿರವಾಡ ಭಾಗದ ಕೆಲವು ಮನೆಗಳಿಗೆ ಇಂದಿಗೂ ಶೌಚಾಲಯಗಳಿಲ್ಲ. ಇದರಿಂದಾಗಿ ಜನರು ಬಹಿರ್ದೆಸೆಗೆ ಕಾಡಿನತ್ತ ಹೋಗುತ್ತಾರೆ. ಶೌಚಾಲಯಕ್ಕೆ ಮಹಿಳೆಯರು ತೆರಳಿದ ಸಂದರ್ಭದಲ್ಲಿ ಇದೇ ಹೊರ ರಾಜ್ಯದ ಕಾರ್ಮಿಕರು ಫೋಟೋ ತೆಗೆದಿದ್ದಾರ ಅನ್ನೋ ಆರೋಪ ಕೆಲವು ತಿಂಗಳ ಹಿಂದೆ ಕೇಳಿ ಬಂದಿತ್ತು. ಈ ಪ್ರಕರಣ ಸಂಬಂಧಿಸಿ ಸ್ಥಳೀಯರು ಪೊಲೀಸ್ ಠಾಣೆಯ ಮೆಟ್ಟಿಲನ್ನು ಕೂಡಾ ಏರಿದ್ದರಿಂದ ಇಲ್ಲಿರುವ ಕಾರ್ಮಿಕರಿಗೆ ಪೊಲೀಸರು ವಾರ್ನಿಂಗ್ ಕೂಡಾ ಮಾಡಿದ್ದರು ಎನ್ನಲಾಗಿದೆ. 

ಆದರೂ, ಹೊರ ರಾಜ್ಯದ ಕಾರ್ಮಿಕರು ತಮ್ಮ ಅಸಭ್ಯ ವರ್ತನೆಗಳನ್ನು ಮುಂದುವರೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಇದು ಸ್ಥಳೀಯರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡಿದೆ. ರೆಸಾರ್ಟ್‌ನಲ್ಲಿ ಪ್ರವಾಸಿಗರನ್ನು ಉಳಿಸುವ ಬದಲು ಕಾರ್ಮಿಕರನ್ನು ಉಳಿಸಿಕೊಳ್ಳಲು ರೆಸಾರ್ಟ್ ಮಾಲೀಕರು ಸ್ಥಳೀಯ ಪಂಚಾಯತ್‌ನಲ್ಲಾಗಲೀ, ತಾಲೂಕು ಆಡಳಿತದಲ್ಲಾಗಲೀ ಅನುಮತಿ ಪಡೆಯದೇ ಹಾಗೇ ಉಳಿಯಲು ಅವಕಾಶ ಮಾಡಿಕೊಟ್ಟಿದ್ದಾರೆ‌ ಅನ್ನೋ ದೂರು ಸ್ಥಳೀಯರದ್ದು. ಈ ಬಗ್ಗೆ ಸ್ಥಳೀಯ ಶಾಸಕರ ಬಳಿ ಕೇಳಿದರೆ,‌ ಈಗಾಗಲೇ ಸಮಸ್ಯೆ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು,‌‌ ಪೊಲೀಸ್ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. 

Kolar: ಜಿಲ್ಲೆಯಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಮಿಂಚಿನ ಸಂಚಾರ

ಕೊರೋನಾ ಸಂದರ್ಭದಲ್ಲಿ ರೆಸಾರ್ಟ್‌ನಲ್ಲಿ ವ್ಯವಹಾರ ಇಲ್ಲದ ಕಾರಣ ರೆಸಾರ್ಟ್ ಮಾಲೀಕರು ಕಾರ್ಮಿಕರು ಉಳಿಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಮಾಹಿತಿಯಿದೆ. ಆದರೆ, ಇದರಿಂದ ಸ್ಥಳೀಯರಿಗೆ ಸಾಕಷ್ಟು ಸಮಸ್ಯೆಗಳಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದು‌ ತಿಳಿಸಿದ್ದಾರೆ. ಒಟ್ಟಿನಲ್ಲಿ ಪ್ರವಾಸಿಗರಿಗಾಗಿ ಪ್ರಾರಂಭಿಸಿದ ರೆಸಾರ್ಟ್‌ನಲ್ಲಿ ಅನಧಿಕೃತವಾಗಿ ಐನೂರಕ್ಕೂ ಅಧಿಕ ಕಾರ್ಮಿಕರನ್ನು ಉಳಿಯಲು ಅವಕಾಶ‌ ನೀಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ಸಂಬಂಧ ಸ್ಥಳೀಯರ ಸುರಕ್ಷತೆಯ ಹಿನ್ನೆಲೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನು ಕಾದು ನೋಡಬೇಕಾಗಿದೆ.

click me!