ಚುನಾವಣೆಗೋಸ್ಕರ ಮೀಸಲಾತಿ, ನಿಗಮ ಮಂಡಳಿ ಮಾಡುವುದರಿಂದ ಆ ಸಮುದಾಯಗಳು ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ತಿಳಿಸಿದರು.
ಗುಬ್ಬಿ : ಚುನಾವಣೆಗೋಸ್ಕರ ಮೀಸಲಾತಿ, ನಿಗಮ ಮಂಡಳಿ ಮಾಡುವುದರಿಂದ ಆ ಸಮುದಾಯಗಳು ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಎಸ್‌ಕೊಡುಗೆಹಳ್ಳಿ, ಚೆನ್ನಯ್ಯನ ಪಾಳ್ಯ, ಮಲ್ಲಪ್ಪನ ಪಾಳ್ಯ, ಎಂಎಸ್ ಪಾಳ್ಯ, ಸುರುಗೇನಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಶಿರಾ ಚುನಾವಣೆ ಸಮಯದಲ್ಲಿ ಕಾಡುಗೊಲ್ಲ ಸಮುದಾಯಕ್ಕೆ ನಿಗಮ ಮಂಡಳಿ ಮಾಡಲಾಯಿತು ಒಂದೇ ಒಂದು ರುಪಾಯಿ ಅದಕ್ಕೆ ಹಣವನ್ನು ಹಾಕಿಲ್ಲ. ಹಿಂದೆ ಗೊಲ್ಲ ಸಮುದಾಯಕ್ಕೆ ಹತ್ತರಿಂದ ಹದಿನೈದು ಕೊಳವೆ ಬಾವಿಗಳು ಬರುತ್ತಿದ್ದು ಈಗ ಕೇವಲ ಒಂದು ಕೂಡ ಕೊಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕೇವಲ ಚುನಾವಣೆಗೋಸ್ಕರ ಈ ಗಿಮಿಕ್ಕುಗಳು ಅವಶ್ಯಕತೆ ಇಲ್ಲ. ಈಗ ಹೇಳಿರುವ ಮೀಸಲಾತಿಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತದೆ ಅಲ್ಲಿ ಅದು ಮಾನ್ಯವಾಗುತ್ತದೆಯಾ ನೋಡಬೇಕಾಗಿದೆ ಎಂದು ತಿಳಿಸಿದರು.
ನಾನು ಜೆಡಿಎಸ್ ಪಕ್ಷ ಬಿಟ್ಟಕೂಡಲೇ ಒಕ್ಕಲಿಗ ಸಮುದಾಯದವರು ಮತ ಹಾಕುವುದಿಲ್ಲ ಎಂಬುದು ಸುಳ್ಳು. ನಾನು ಸಹ ಒಕ್ಕಲಿಗನೇ ಚುನಾವಣೆಯೆಂದ ಮೇಲೆ ಪ್ರತಿಯೊಂದು ಸಮುದಾಯವು ಸಹ ಬಹಳ ಮುಖ್ಯ ಮತ್ತು ಮತಗಳು ಮುಖ್ಯವಾಗಿರುತ್ತವೆ. ಚುನಾವಣೆ ಬಂದಾಗ ಇಂತಹ ಮಾತುಗಳು ಸರ್ವೇಸಾಮಾನ್ಯವಾಗಿರುತ್ತವೆ ಎಂದು ತಿಳಿಸಿದರು.
ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿಲ್ಲ. ಹಾಗಾಗಿ ಕಾಂಗ್ರೆಸ್ ಪಟ್ಟಿಯ 124 ಜನರಲ್ಲಿ ನನ್ನ ಹೆಸರು ಇಲ್ಲ. ರಾಜೀನಾಮೆ ನೀಡಿದ ನಂತರ ಪಕ್ಷಕ್ಕೆ ಸೇರ್ಪಡೆಯಾದ ಮೇಲೆ ಎರಡನೇ ಲಿಸ್ಟ್ ನಲ್ಲಿ ನನ್ನ ಹೆಸರು ಬರುತ್ತದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಮುಖಂಡರಾದ ಲೋಕೇಶ್,ದಿವಾಕರ್, ಗಿರೀಶ್, ರಂಗಸ್ವಾಮಿ, ಅಶ್ವಥ್, ಗಂಗಾಧರ್ ಗುತ್ತಿಗೆದಾರರಾದ ರಾಮು, ರಾಮಲಿಂಗೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.
ಮುಂದಿನ ವಾರ ಕೈ ಸೇರುವೆ
ಗುಬ್ಬಿ : ಕಾಡುಗೊಲ್ಲ ಸಮುದಾಯದ ಎಸ್‌ಟಿ ಮೀಸಲಾತಿಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಹಾಗಲವಾಡಿ ಹೋಬಳಿಯ ಜುಂಜಪ್ಪನಹಟ್ಟಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಿಸಿ ರಸ್ತೆಗೆ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿದರು.
ಕಳಪೆ ಕಾಮಗಾರಿ ನನ್ನ ಗಮನದಲ್ಲೂ ಇದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಗುಣಮಟ್ಟದ ಕಾಮಗಾರಿ ಮಾಡಲು ತಿಳಿಸುತ್ತೇನೆ. ಪ್ರತಿ ಗ್ರಾಮಕ್ಕೂ ಹೊಸ ಪೈಪ್‌ಲೈನ್ ಮಾಡಿ ಕಾಮಗಾರಿ ಮಾಡಲು ಸೂಚಿಸುತ್ತೇನೆ. ಪ್ರತಿ ಮನೆಮನೆಗೆ ನಲ್ಲಿ ಸಂಪರ್ಕ ಕಾಮಗಾರಿ ತಾಲೂಕಿನಲ್ಲಿ ಬಹುತೇಕ ಆಗಿದ್ದು, ಉಳಿದ ಎಲ್ಲ ಕಾಮಗಾರಿಗಳನ್ನು ಕೂಡಲೇ ಮಾಡಿಸುತ್ತೇನೆ. ಮುಂದಿನ ವಾರ ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಸೇರ್ಪಡೆಯಾಗುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅನಿಲ್‌ಕುಮಾರ, ಉಮೇಶ್, ಯರಣ್ಣ, ಮುದ್ದಣ, ಓಂಕಾರ್, ಕಿಟ್ಟಪ್ಪ, ಮಹೇಶ್, ಈಶಣ್ಣ, ಸಿದ್ದರಾಜು, ವೇಣುಗೋಪಾಲ್, ಹೇಮಂತ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಮೇ 2ನೇ ವಾರ ಚುನಾವಣೆ ನಡೆವ ನಿರೀಕ್ಷೆ
ಬೆಂಗಳೂರು(ಮಾ.19): ವಿಧಾನಸಭೆಯ ಚುನಾವಣೆಗೆ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಸಂಪೂರ್ಣ ಸಿದ್ಧತೆಗಳನ್ನು ಈಗಾಲೇ ಕೈಗೊಂಡಿದ್ದು, ಬಹುತೇಕ ಇದೇ ತಿಂಗಳ ಕೊನೆಯ ವಾರದಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ. ಮೇ 2ನೇ ವಾರ ಚುನಾವಣೆ ನಡೆವ ನಿರೀಕ್ಷೆಯಿದೆ.
ಕೇಂದ್ರ ಚುನಾವಣಾ ಆಯೋಗವು ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ರಾಜ್ಯ ಮುಖ್ಯಚುನಾವಣಾಧಿಕಾರಿ ಕಚೇರಿಯ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಅಲ್ಲದೇ, ಇತ್ತೀಚೆಗಷ್ಟೇ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ರಾಜ್ಯಕ್ಕೆ ಆಗಮಿಸಿ ಮೂರು ದಿನಗಳ ಸಿದ್ಧತೆಗಳ ಕುರಿತು ಸಂಪೂರ್ಣವಾಗಿ ಪರಿಶೀಲನೆ ನಡೆಸಿದೆ. ದೆಹಲಿಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿ ದಿನಾಂಕವನ್ನು ಅಂತಿಮಗೊಳಿಸುವ ಕಾರ್ಯ ನಡೆಯುತ್ತಿದ್ದು, ಇದೇ ತಿಂಗಳ ಕೊನೆಯ ವಾರದಲ್ಲಿ ಅಥವಾ ಏಪ್ರಿಲ್‌ನ ಮೊದಲ ವಾರದಲ್ಲಿ ಅಧಿಕೃತವಾಗಿ ಚುನಾವಣೆಯ ದಿನಾಂಕವನ್ನು ಪ್ರಕಟಿಸಲಿದೆ ಎಂದು ಮೂಲಗಳು ಹೇಳಿವೆ.