ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಕ್ಕಳ ಪರಿಪೂರ್ಣ ಕಲಿಕೆಗೆ ಮುಂದಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಗುಬ್ಬಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಕ್ಕಳ ಪರಿಪೂರ್ಣ ಕಲಿಕೆಗೆ ಮುಂದಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಗುಬ್ಬಿ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಶನಿವಾರ ಆಟದ ಮೈದಾನವನ್ನು ಶಾಲೆಗೆ ಹಸ್ತಾಂತರಿಸಿ ಮಾತನಾಡಿ, ಮಕ್ಕಳ ಕಲಿಗೆ ಶಿಕ್ಷಕರು ಮುಂದಾಗಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಕಲಿಕೆಯಿಂದ ಹಿಂದೆ ಉಳಿಯುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಶಿಕ್ಷಕರು ಜವಬ್ದಾರಿಯಿಂದ ಮಕ್ಕಳ ಕಲಿಕೆಗೆ ಮುಂದಾಗಬೇಕು ಜೂತೆಗೆ ಪೋಷಕರು ಸಹಕಾರ ನೀಡಬೇಕು ಎಂದರು.
ಆಟಲ್ ಬಿಹಾರಿ ವಾಜಪೇಯ್ ಕಾಲದಲ್ಲಿ ಪದ್ದತಿ ಬದಲಾವಣೆಯಾಗಿತ್ತು. ಆದರೆ ಈಗ ಸರ್ವಶಿಕ್ಷಣ ಅಭಿಯಾನ ಅಡಿಯಲ್ಲಿ ಮಕ್ಕಳ ಬೌದ್ದಿಕ ಮಟ್ಟವನ್ನು ಹೆಚ್ಚಿಸುವಂತಹ ಶೈಕ್ಷಣಿಕ ಪದ್ದತಿಗಳು ಆರಂಭವಾಗಿದ್ದವು. ಅದೇ ರೀತಿ ಡಬಲ್ ಇಂಜಿನ್ ಸರ್ಕಾರದಲ್ಲಿ ಮಕ್ಕಳ ಅಭಿವೃದ್ಧಿಗೆ ಹೆಚ್ಚು ಆದ್ಯತೆಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಸಚಿವ ಬಿ.ಸಿ.ನಾಗೇಶ್ ಅವರು ಸರ್ಕಾರಿ ಶಾಲೆಯ ಆಫೀಸ್ ರೋಮ್ ಗೆ ಭೇಟಿ ನೀಡಿ ಶಿಕ್ಷಕರ ಹಾಜರಾತಿ ಪರೀಶಿಲಿಸಿದರು. ಹಾಜರಾತಿಯಲ್ಲಿ ಶಿಕ್ಷಕರು ಸರಿಯಾದ ರೀತಿಯಲ್ಲಿ ಹಾಜರಾತಿಯನ್ನು ಹಾಕದೇ ಇರುವುದರಿಂದ ಸಚಿವರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ಶಿಕ್ಷಕರು ಪ್ರತಿ ದಿನ ಶಾಲೆಗೆ ಬಂದ ತಕ್ಷಣ ಕಡ್ಡಾಯವಾಗಿ ಹಾಜರಾತಿಯನ್ನು ಹಾಕಬೇಕು ಎಂದು ಶಿಕ್ಷಕರಿಗೆ ಸೂಚಿಸಿದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶದ ಸರ್ಕಾರಿ ಶಾಲೆಗೆ ಆಗಮಿಸಿದಾಗ ಶಾಲಾ ಮಕ್ಕಳು ಸಚಿವರಿಗೆ ಹೂಗುಚ್ಚ ನೀಡಿ ಸ್ವಾಗತ ನೀಡಿದರು.
ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಯೋಗೀಶ್, ತಾಲೂಕು ಪಂಚಾಯಿತಿ ಸದಸ್ಯ ಅ.ನ.ಲಿಂಗಪ್ಪ , ಗ್ರಾ.ಪಂ ಸದಸ್ಯ ಎಂ.ಎನ್ ಭೀಮಶೆಟ್ಟಿ, ಬಿಓ ಸೋಮಶೇಖರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಉಮೇಶ್, ಎಸ್‌ಡಿಎಂಸಿ ಅಧ್ಯಕ್ಷ ಲಿಂಗರಾಜು, ಮುಖ್ಯ ಶಿಕ್ಷಕ ಕೃಷ್ಣಪ್ಪ ಮುಖಂಡರಾದ ಸೋಮಣ್ಣ ಸೋಮಲಾಪುರ, ಮಹೇಶ್, ಶಿಕ್ಷಕರು ಗ್ರಾಮಸ್ಥರು ಭಾಗವಹಿಸಿದ್ದರು.
ಸರ್ಕಾರಿ ಶಾಲೆ ಅಭಿವೃದ್ಧಿಯಾದರೆ ಗುಣಮಟ್ಟದ ಶಿಕ್ಷಣ
ಶಿರಾ : ಸರ್ಕಾರಿ ಶಾಲೆಗಳ ಅಭಿವೃದ್ಧಿಯಾದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಲು ಸಾಧ್ಯ. ಈ ನಿಟ್ಟಿನಲ್ಲಿ ಹೂವಿನಹೊಳೆ ಸಂಘ ಸಂಸ್ಥೆಯು ಸರ್ಕಾರಿ ಶಾಲೆಯನ್ನು ಸುಂದರವಾಗಗಿ ಉನ್ನತೀಕರಿಸಿರುವುದು ಶ್ಲಾಘನೀಯ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್ ಹೇಳಿದರು.
ತಾಲೂಕಿನ ಮೊಸರುಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ ಉನ್ನತೀಕರಿಸಿದ ಶಾಲಾ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶತಮಾನದ ಸರ್ಕಾರಿ ಶಾಲೆಯಾದ ಮೊಸರುಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶಿಥಿಲವಾಗಿದ್ದು ಅದರ ದುರಸ್ತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗ ಹೂವಿನಹೊಳೆ ಪ್ರತಿಷ್ಠಾನದ ಮುಖ್ಯಸ್ಥರಾದ ನಂದಿ.ಜೆ. ಅವರು ಪ್ರತಿಕ್ರಿಯಿಸಿ ನಾವು ನಿಮ್ಮೊಡನಿದ್ದೇವೆ ಎಂಬ ಭರವಸೆ ನೀಡಿದ್ದರು. ನುಡಿದಂತೆ ನಮ್ಮ ಶಾಲೆಯನ್ನು ಯಾವ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ ಎಂಬಂತೆ ಸುಮಾರು 11 ಲಕ್ಷ ರು. ವೆಚ್ಚದಲ್ಲಿ ಸುಂದರೀಕರಣ ಮಾಡಿದ್ದಾರೆ. ಶಾಲೆಯ ಉನ್ನತೀಕರಣದಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಸಿಗಲು ಸಾಧ್ಯವಾಗಲಿದೆ ಎಂದರು.
ಹೂವಿನಹೊಳೆ ಪ್ರತಿಷ್ಠಾನ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರಾದ ನಂದಿ.ಜೆ. ಮಾತನಾಡಿ, ಹೂವಿನಹೊಳೆ ಪ್ರತಿಷ್ಠಾನವು ಈವರೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸರಿಸುಮಾರು 32 ಸರ್ಕಾರಿ ಶಾಲೆಗಳನ್ನು ನವೀಕರಣ, ಸುಂದರೀಕರಣ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಯಶಸ್ವಿಯಾಗಿ ತಳಮಟ್ಟದಿಂದ ಉಳಿಸಿಕೊಳ್ಳುವ ಮೇಲೆತ್ತುವ ಕಾರ್ಯವನ್ನು ಮಾಡಲಾಗಿದೆ. ಈಗ ಮೊಸರುಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಶಾಲೆಯೂ ಸರಿಸುಮಾರು 103 ವರ್ಷಗಳನ್ನು ಪೂರೈಸುತ್ತಿದ್ದು ಮೂಲ ಸೌಕರ್ಯಗಳ ಕೊರತೆಯಿಂದ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿರುವುದನ್ನು ಗಮನಿಸಿ ಹೂವಿನಹೊಳ ಪ್ರತಿಷ್ಠಾನದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಇದೇ ಶಾಲೆಯ ಹಳೆಯ ವಿದ್ಯಾರ್ಥಿ ಎಂ.ಟಿ.ಗೋವಿಂದರಾಜು ಮತ್ತು ಪ್ರಸ್ತುತ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿರುವ ಶಾಲೆಯ ಹಳೆ ವಿದ್ಯಾರ್ಥಿ ಆನಂದಪ್ಪ, ಶ್ರೀನಿವಾಸ್‌ರ ಬೇಡಿಕೆಯಿಂದ ಶಾಲೆಯನ್ನು ಆಯ್ಕೆಮಾಡಿಕೊಂಡು ಸಮಗ್ರ ಅಭಿವೃದ್ಧಿಪಡಿಸಲಾಗಿದೆ. ಈ ಶಾಲೆಯನ್ನು ಅಭಿವೃದ್ಧಿಪಡಿಸಲು ಬೆಂಗಳೂರಿನ ‘ಇವೋರ ಐಟಿ ಸಲ್ಯೂಷನ್ಸ್’ ಕಂಪನಿಯು ಸಾಮಾಜಿಕ ಹೊಣೆಗಾರಿಕೆ ಕಾರ್ಯಗ್ರಾಮಗಳ ಅಡಿಯಲ್ಲಿ ಹೂವಿನಹೊಳೆ ಪ್ರತಿಷ್ಠಾನ ಮೂಲಕ ಬೆಂಬಲಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಆನಂದ್, ಗ್ರಾಮ ಪಂಚಾಯತಿಯ ಸದಸ್ಯರಾದ ಲಕ್ಷ್ಮೇದೇವಿ, ಮಾಜಿ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀನಿವಾಸ್, ಶಾಲಾ ಮುಖ್ಯ ಶಿಕ್ಷಕರಾದ ದ್ರಾಕ್ಷಾಯಿಣಿ, ಸಂಸ್ಥೆಯ ಸದಸ್ಯರಾದ ಗೋವಿಂದರಾಜು ಎಂ.ಟಿ.ಸೇರಿದಂತೆ ಹಲವರು ಹಾಜರಿದ್ದರು.