Kodagu: ತಂದೆ ತಾಯಿ ಪತ್ನಿ ಮಕ್ಕಳಿಲ್ಲದೆ ಅನಾಥನಾಗಿ ಕತ್ತಲೆ ಕೋಣೆಯಲ್ಲಿ ಕುಳಿತಿದ್ದ ಅನಾರೋಗ್ಯ ಪೀಡಿತ ವ್ಯಕ್ತಿಯ ರಕ್ಷಣೆ!

ಮನುಷ್ಯ ಎಷ್ಟೇ ಆಸ್ತಿವಂತನಾಗಿರಲಿ ನಾನು, ನನ್ನವರು ಎನ್ನುವವರೇ ಇಲ್ಲ ಎಂದರೆ ಬದುಕು ಎಷ್ಟೊಂದು ನಶ್ವರ ಎನಿಸಿಬಿಡುತ್ತದೆ ಅಲ್ವಾ. ಅದರಲ್ಲೂ ಆ ಒಬ್ಬಂಟಿತನದ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿ ಅನ್ನ ನೀರಿಲ್ಲದೆ ಹಾಸಿಗೆ ಹಿಡಿದರೆಂದರೆ ಬದುಕು ಏನಾಗಬಹುದು ಒಮ್ಮೆ ಯೋಚಿಸಿ.


ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಆ.10): ಮನುಷ್ಯ ಎಷ್ಟೇ ಆಸ್ತಿವಂತನಾಗಿರಲಿ ನಾನು, ನನ್ನವರು ಎನ್ನುವವರೇ ಇಲ್ಲ ಎಂದರೆ ಬದುಕು ಎಷ್ಟೊಂದು ನಶ್ವರ ಎನಿಸಿಬಿಡುತ್ತದೆ ಅಲ್ವಾ. ಅದರಲ್ಲೂ ಆ ಒಬ್ಬಂಟಿತನದ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿ ಅನ್ನ ನೀರಿಲ್ಲದೆ ಹಾಸಿಗೆ ಹಿಡಿದರೆಂದರೆ ಬದುಕು ಏನಾಗಬಹುದು ಒಮ್ಮೆ ಯೋಚಿಸಿ. ಹಾಗೆಯೇ ಒಬ್ಬಂಟಿಯಾಗಿ ಬದುಕುತ್ತಿದ್ದ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿ ಬದುಕು ನಶ್ವರ ಎನಿಸಿ ತಮ್ಮ ಆಸ್ತಿಯನ್ನು ಯಾವುದಾದರೂ ಅನಾಥ ಆಶ್ರಮಕ್ಕೆ ಬರೆದು ತಾನೂ ಅಲ್ಲಿಗೆ ಸೇರಿ ಬದುಕು ಸಾಗಿಸಬೇಕು ಎಂದು ನಿರ್ಧರಿಸಿದ್ದಾರೆ. ಇಡೀ ಮನೆಯ ಯಾವುದೇ ಭಾಗಕ್ಕೆ ತಿರುಗಿ ನೋಡಿದರೂ ಎಷ್ಟೋ ವರ್ಷಗಳ ಹಿಂದೆ ಸಿಕಿದ್ದೆಲ್ಲವನ್ನೂ ತುಂಬಿರುವ ಗುಜರಿಯಂತೆ ಭಾಸವಾಗುತ್ತದೆ. 

Latest Videos

ಇಡೀ ಮನೆಯ ಯಾವ ಕೋಣೆಗೂ ಗಾಳಿ ಬೆಳಕಿಲ್ಲ. ಅಂತ ಕತ್ತಲೇ ಕೋಣೆ ಒಳಗೆ ಕಣ್ಣೀರಿಡುತ್ತಾ ಏದುಸಿರು ಬಿಡುತ್ತಿರುವ ಈ ವ್ಯಕ್ತಿಯನ್ನು ನೋಡಿದರೆ ಯಾರಿಗಾದರೂ ಕರುಳು ಚುರುಕ್ ಎನ್ನದೆ ಇರದು ಅಲ್ವಾ. ಇವರು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಗಣಪತಿ ಬೀದಿಯ ನಿವಾಸಿ ದಿಲೀಪ್. ತಾತ ತಂದೆಯ ಕಾಲದಿಂದಲೂ ಇಲ್ಲಿಯೇ ಹುಟ್ಟಿ ಬೆಳೆದಿದ್ದ 52 ವರ್ಷದ ದಿಲೀಪ್ ನ ತಂದೆ ತಾಯಿ ಕಳೆದ ಐದು ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು. ಅದಕ್ಕೂ ಮುಂಚೆಯೇ ದಿಲೀಪ್ ನ ಪತ್ನಿ ಇವರಿಂದ ದೂರವಾಗಿದ್ದರು. ಒಬ್ಬಂಟಿಯಾಗಿ ಬದುಕುತ್ತಿದ್ದ ಇವರು ಬ್ಯಾಂಕ್ ಮತ್ತು ಮಡಿಕೇರಿಯ ಎಫ್ಎಂಸಿ ಕಾಲೇಜಿನಲ್ಲಿ ಸೈಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಾ ತಮ್ಮ ಬದುಕನ್ನು ತಾವೇ ಸವೆಸುತ್ತಿದ್ದರು. 

ಒಬ್ಬಂಟಿಯಾಗಿ ಬದುಕು ಕಳೆಯುತ್ತಿದ್ದ ಇವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಟ್ಟು 9 ತಿಂಗಳ ಹಿಂದೆಯೇ ಹಾಸಿಗೆ ಹಿಡಿದಿದ್ದರು. ಉಸಿರಾಟದಲ್ಲೂ ಏರುಪೇರಾಗಿ ಹೃದಯ ಬಡಿತವೂ ಕಡಿಮೆಯಾಗಿತ್ತು. ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಸ್ಟೆಂಟ್ ಅಳವಡಿಸಲಾಗಿತ್ತು. ಹೇಗೋ ಬದುಕು ನಡೆಸುತ್ತಿದ್ದ ದಿಲೀಪ್ ಅವರಿಗೆ 3 ತಿಂಗಳ ಹಿಂದೆ ಬರ ಸಿಡಿಲು ಬಿಡದಂತೆ ಸ್ಟ್ರೋಕ್ ಆಗಿತ್ತು. ಅದುವರೆಗೆ ಹೇಗೋ ಓಡಾಡಿಕೊಂಡು ಮನೆಯ ಮುಂದಿನ ಕೊಠಡಿಯಲ್ಲಿ ಇದ್ದ ಸಣ್ಣ ಅಂಗಡಿಯಿಂದ ಬರುತ್ತಿದ್ದ ಆದಾಯದಲ್ಲಿ ಜೀವನ ನಡೆಸುತ್ತಿದ್ದ ದಿಲೀಪ್ ಸಂಪೂರ್ಣ ಹಾಸಿಗೆ ಹಿಡಿಯುವಂತಾಗಿತ್ತು. ಆಗಲೇ ನೋಡಿ ತನ್ನವರು ಎಂಬುವರೇ ಇಲ್ಲದೆ ಊಟ ತಿಂಡಿಯೂ ಇಲ್ಲದೆ ಮಲಗಿದ ಹಾಸಿಗೆಯಲ್ಲಿಯೇ ನರಳಾಡುತ್ತಾ ಬದುಕೇ ಸಾಕು ಎಂದು ಕಣ್ಣೀರಿಟ್ಟಿದ್ದಾರೆ. 

ಸಿದ್ದರಾಮಯ್ಯ ಅವರೊಂದಿಗೆ ಇಡೀ ಕಾಂಗ್ರೆಸ್ ಇದೆ, ಅವರನ್ನು ತೆಗೆಯಲು ಸಾಧ್ಯವಿಲ್ಲ: ಸಚಿವ ಮುನಿಯಪ್ಪ

ನೆಂಟರಿಷ್ಟರು ಇರುವವರಾದರೂ ಯಾರೂ ಇದುವರೆಗೆ ತಿರುಗಿಯೂ ನೋಡಿಲ್ಲ. ಆದರೆ ತಮ್ಮ ಮನೆಯ ಎದುರಿನ ಮನೆಯಲ್ಲಿ ಇರುವ ಮುಸ್ಲಿಂ ಕುಟುಂಬವೊಂದು ಅವರಿಗೆ ರೆವೆ ಗಂಜಿ ಮಾಡಿಕೊಡುತ್ತಾ ಅವರ ಆರೋಗ್ಯ ವಿಚಾರಿಸಿದ್ದಾರೆ. ಸಂಪೂರ್ಣ ಕೃಷರಾಗಿದ್ದ ದಿಲೀಪ್ ಅವರಿಗೆ ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಇಲ್ಲಿನ ಜನಸೇವಾ ಟ್ರಸ್ಟ್ ಅನಾಥ ಆಶ್ರಮಕ್ಕೆ ಸೇರಿಸಿದ್ದಾರೆ. ಅನಾಥ ಆಶ್ರಮ ಸೇರಿರುವ ದಿಲೀಪ್ ಮಡಿಕೇರಿ ನಗರದ ಗಣಪತಿ ಬೀದಿಯಲ್ಲಿರುವ ತಮ್ಮ ಮನೆಯನ್ನು ಅನಾಥ ಆಶ್ರಮಕ್ಕೆ ದಾನ ಬರೆಯಲು ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ ನಗರದಲ್ಲೇ ಆಸ್ತಿ ಇದ್ದರೂ ತಂದೆ ತಾಯಿ ಹೆಂಡತಿ ಮಕ್ಕಳು ಯಾರೂ ಇಲ್ಲದೆ ಅನಾಥಾಶ್ರಮ ಸೇರಿರುವ ದಿಲೀಪ್ ಆಸ್ತಿಯನ್ನೂ ಅನಾಥಾಶ್ರಮಕ್ಕೆ ದಾನ ಬರೆಯಲು ಮುಂದಾಗಿದ್ದಾರೆ.

click me!