ಎರಡು ಮಾರ್ಗದಲ್ಲಿ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ಓಡಿಸುವಂತೆ ಮನವಿ ಸಲ್ಲಿಕೆ

Published : Oct 15, 2026, 08:49 AM IST
Vande Bharat

ಸಾರಾಂಶ

ಪ್ರಸ್ತಾವಿತ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲನ್ನು ಕರ್ನಾಟಕದ ಎರಡು ಪ್ರತ್ಯೇಕ ಮಾರ್ಗಗಳಲ್ಲಿ ಓಡಿಸಲು ನೈಋತ್ಯ ರೈಲ್ವೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕುರಿತು ರೈಲ್ವೆ ಮಂಡಳಿಯೊಂದಿಗೆ ಚರ್ಚಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಹುಬ್ಬಳ್ಳಿ: ಪ್ರಸ್ತಾವಿತ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲನ್ನು ಕರ್ನಾಟಕದ ಎರಡು ಪರ‍್ಯಾಯ ಮಾರ್ಗಗಳಲ್ಲಿ ವಾರದಲ್ಲಿ ಆರು ದಿನ ಸಂಚರಿಸುವಂತೆ ನೈಋತ್ಯ ರೈಲ್ವೆಯ ಪ್ರಾದೇಶಿಕ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ನೇತೃತ್ವದ ನಿಯೋಗವು ಮಹಾಪ್ರಬಂಧಕ ಪಿ. ಅನಂತ್ ಅವರನ್ನು ಭೇಟಿ ಮಾಡಿ ಈ ಪ್ರಸ್ತಾವನೆ ಸಲ್ಲಿಸಿತು.

ಎರಡು ಮಾರ್ಗಗಳ ಪ್ರಸ್ತಾವನೆ

ಪ್ರಸ್ತಾವನೆಯಂತೆ ವಾರದಲ್ಲಿ ಮೂರು ದಿನ ಬೆಂಗಳೂರು-ಕಲಬುರಗಿ-ವಾಡಿ-ಸೋಲಾಪುರ-ಪುಣೆ-ಮುಂಬೈ ಮಾರ್ಗದಲ್ಲಿ ಹಾಗೂ ಉಳಿದ ಮೂರು ದಿನ ಬೆಂಗಳೂರು-ದಾವಣಗೆರೆ-ಹುಬ್ಬಳ್ಳಿ-ಧಾರವಾಡ-ಬೆಳಗಾವಿ-ಮಿರಜ್-ಸಾಂಗ್ಲಿ-ಪುಣೆ-ಮುಂಬೈ ಮಾರ್ಗದಲ್ಲಿ ರೈಲು ಸಂಚರಿಸಬೇಕು. ಕಲಬುರಗಿ-ವಾಡಿ ಮಾರ್ಗದ ಮೂಲಕ ಈಶಾನ್ಯ ಕರ್ನಾಟಕದ ಪ್ರಯಾಣಿಕರಿಗೆ, ದಾವಣಗೆರೆ-ಹುಬ್ಬಳ್ಳಿ-ಬೆಳಗಾವಿ ಮಾರ್ಗದ ಮೂಲಕ ಮಧ್ಯ ಮತ್ತು ವಾಯವ್ಯ ಕರ್ನಾಟಕದ ಜನರಿಗೆ ಮುಂಬೈ, ಪುಣೆ ಸೇರಿದಂತೆ ಮಹಾರಾಷ್ಟ್ರದ ಪ್ರಮುಖ ನಗರಗಳಿಗೆ ಪ್ರಯಾಣಿಸಲು ಅನುಕೂಲವಾಗಲಿದೆ. ವ್ಯಾಪಾರಿಗಳು, ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ವೈದ್ಯಕೀಯ ಸೇವೆಗಾಗಿ ತೆರಳುವವರಿಗೆ ಈ ರೈಲು ಸಂಪರ್ಕ ಪ್ರಯೋಜನಕಾರಿಯಾಗಲಿದೆ ಎಂದು ನಿಯೋಗ ತಿಳಿಸಿದೆ.

ಎರಡೂ ಪ್ರದೇಶಗಳಿಗೆ ಸಮಾನ ಆದ್ಯತೆ

ಎರಡೂ ಪ್ರದೇಶಗಳಿಗೆ ಸಮಾನ ಆದ್ಯತೆ ನೀಡುವ ಮೂಲಕ ರೈಲು ಸೇವೆಯ ಪ್ರಯೋಜನ ರಾಜ್ಯದ ಹೆಚ್ಚಿನ ಜನರಿಗೆ ತಲುಪಿಸಬೇಕು ಎಂದು ಮಹೇಂದ್ರ ಸಿಂಘಿ ಒತ್ತಾಯಿಸಿದ್ದಾರೆ. ಎರಡೂ ಮಾರ್ಗಗಳ ಪ್ರಯಾಣಿಕರ ಬೇಡಿಕೆ, ದೂರ, ವೇಳಾಪಟ್ಟಿ ಹಾಗೂ ಕಾರ್ಯಾಚರಣೆಯ ಸಾಧ್ಯತೆಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮನವಿಯಲ್ಲಿ ಕೋರಲಾಗಿದೆ.

ಪ್ರಸ್ತಾವನೆ ಕುರಿತು ರೈಲ್ವೆ ಮಂಡಳಿಯೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲು ಪ್ರಯತ್ನಿಸುವುದಾಗಿ ಮಹಾಪ್ರಬಂಧಕ ಪಿ. ಅನಂತ್ ಭರವಸೆ ನೀಡಿದ್ದಾರೆ.

ಈ ವೇಳೆ ಡಿಜಿಎಂ ಅನಿಲಕುಮಾರ, ಮಹಾವೀರ ಲಿಂಬ್, ಗೌತಮ್ ಗೋಲೆಚಾ, ಗಿರೀಶ ಸುಂಕದ, ಸುಭಾಷ್ ಚಂದ್ರ ಡಂಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಕರ್ನಾಟಕ ಒಂದರಲ್ಲೇ 30 ಲಕ್ಷ ಅಕ್ರಮ ಬಾಂಗ್ಗನ್ನರು! ವೋಟ್‌ ಬ್ಯಾಂಕ್‌ಗಾಗಿ ಕಾಂಗ್ರೆಸ್ SIR ವಿರೋಧ, ಮಾಜಿ ಡಿಸಿಎಂ ಆಕ್ರೋಶ
ಕುಷ್ಟಗಿ BEO ಕಚೇರಿಯಲ್ಲಿ ₹70 ಲಕ್ಷದ ನಿಗೂಢ ಹಗರಣ: ಸರ್ಕಾರಿ ಹಣದ ದುರುಪಯೋಗದ ಆರೋಪ