BDAನಲ್ಲಿ ಹೊಸ ಹುದ್ದೆ ಸೃಷ್ಟಿಗೆ ಬ್ರೇಕ್; ಪ್ರಸ್ತಾವಕ್ಕೆ ನಗರಾಭಿವೃದ್ಧಿ ಇಲಾಖೆ ತಿರಸ್ಕಾರ

Published : Oct 15, 2026, 08:06 AM IST
BDA

ಸಾರಾಂಶ

ಬಿಡಿಎನಲ್ಲಿ ವಲಯ ಆಯುಕ್ತರು ಎಂಬ ಹೊಸ ಹುದ್ದೆಗಳನ್ನು ಸೃಷ್ಟಿಸುವ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆ ತಿರಸ್ಕರಿಸಿದೆ. ಶಿವರಾಮ ಕಾರಂತ ಬಡಾವಣೆ ಕಾಮಗಾರಿ ಮುಗಿದರೂ ವಿಶೇಷ ಭೂಸ್ವಾಧೀನಾಧಿಕಾರಿಗಳನ್ನು ಉಳಿಸಿಕೊಳ್ಳಲು ಈ ಹುದ್ದೆ ಸೃಷ್ಟಿಗೆ ಯತ್ನಿಸಲಾಗಿತ್ತು.

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ವೃಂದ ಮತ್ತು ನೇಮಕಾತಿ ನಿಯಮದಲ್ಲಿ ವಲಯ ಆಯುಕ್ತರು ಎಂಬ ಹುದ್ದೆಗಳು ಇಲ್ಲದಿದ್ದರೂ, ಹೊಸ ಹುದ್ದೆಗಳನ್ನು ಸೃಷ್ಟಿಸುವ ಪ್ರಾಧಿಕಾರದ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆ ತಿರಸ್ಕರಿಸಿದೆ.

ಬಿಡಿಎ ನಿಯಮಗಳ ಪ್ರಕಾರ ನಾಲ್ಕು ಉಪ ಕಾರ್ಯದರ್ಶಿಗಳ (ಕೆಎಎಸ್‌ ಕಿರಿಯ ಶ್ರೇಣಿ) ಹುದ್ದೆಗಳ ನೇಮಕಾತಿಗೆ ಮಾತ್ರ ಅನುಮೋದನೆ ನೀಡಲಾಗಿದೆ. ಆದರೆ, ಇತ್ತೀಚೆಗೆ ಬಿಡಿಎ ಈ ಹುದ್ದೆಗಳನ್ನು ಉನ್ನತೀಕರಿಸಿ ವಲಯ ಆಯುಕ್ತರು (ಕೆಎಎಸ್‌ ಹಿರಿಯ ಶ್ರೇಣಿ) ಹುದ್ದೆಗಳನ್ನಾಗಿ ಮಾರ್ಪಡಿಸುವಂತೆ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆ ಸಲ್ಲಿಸಿತ್ತು. ಆದರೆ ಇದನ್ನು ನಿರಾಕರಿಸಿರುವ ನಗರಾಭಿವೃದ್ಧಿ ಇಲಾಖೆ ಈ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬಿಡಿಎ ಆಯುಕ್ತರಿಗೆ ಪತ್ರದ ಮೂಲಕ ತಿಳಿಸಿದೆ.

ಹೊಸ ಹುದ್ದೆ ಸೃಷ್ಟಿ ಯತ್ನ

ಬಿಡಿಎ ಸ್ಥಾಪನೆಯಾದಾಗಿನಿಂದಲೂ ಆಯುಕ್ತರು, ಎಂಜಿನಿಯರಿಂಗ್‌ ಸದಸ್ಯ, ಆರ್ಥಿಕ ಸದಸ್ಯರು, ನಗರ ಯೋಜನೆ ಸದಸ್ಯ, ಉಪ ಕಾರ್ಯದರ್ಶಿ ಇತ್ಯಾದಿ ಹುದ್ದೆಗಳು (ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ) ಮಾತ್ರ ಇದ್ದವು. ಆದರೆ, ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಶಿವರಾಮ ಕಾರಂತ ಬಡಾವಣೆ ಕಾರ್ಯಗಳು ತಡವಾದ ಕಾರಣ, ಸುಪ್ರೀಂ ಕೋರ್ಟ್‌ ಆದೇಶದಂತೆ ಬೇರೆ ಇಲಾಖೆಗಳಿಂದ ನಾಲ್ವರನ್ನು ವಿಶೇಷ ಭೂಸ್ವಾಧೀನ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ನಿಯಮಗಳ ಪ್ರಕಾರ ಈ ಹುದ್ದೆಗಳು ಇಲ್ಲದಿದ್ದರೂ ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಅವುಗಳನ್ನು ಮುಂದುವರಿಸಲಾಗಿತ್ತು.

ಮಾತೃ ಇಲಾಖೆಗೆ ವಾಪಸ್‌ ಕಳುಹಿಸಿ

ಆ ನಂತರ ಈ ವಿಶೇಷ ಭೂ ಸ್ವಾಧೀನ ಅಧಿಕಾರಿಗಳನ್ನುಅವರವರ ಮಾತೃ ಇಲಾಖೆ ವಾಪಸ್ ಕಳುಹಿಸುವ ಬದಲು, ಬಿಡಿಎ ಆಯುಕ್ತರು ವಲಯ ಆಯುಕ್ತರೆಂಬ ಹೊಸ ಹುದ್ದೆಗಳನ್ನು ಸೃಷ್ಟಿಸಿದರು. ಈಗಿರುವ ಉಪ ಕಾರ್ಯದರ್ಶಿ (ಕಿರಿಯ ಶ್ರೇಣಿ) ಹುದ್ದೆಗಳನ್ನು ಮೇಲ್ದರ್ಜೆಗೇರಿಸಿ ವಲಯ ಆಯುಕ್ತರನ್ನಾಗಿ ನೇಮಕ ಮಾಡಿಕೊಳ್ಳುವ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿಕೊಟ್ಟಿದ್ದರು ಎನ್ನಲಾಗಿದೆ.

ಶಿವರಾಮ ಕಾರಂತ ಬಡಾವಣೆ ಕಾಮಗಾರಿ ಮುಗಿದಿರುವ ಹಿನ್ನೆಲೆಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಗಳಾಗಿ ಬಂದವರನ್ನು ವಲಯ ಆಯುಕ್ತರನ್ನಾಗಿ ನೇಮಕ ಮಾಡುವ ಪ್ಲಾನನ್ನು ನಗರಾಭಿವೃದ್ಧಿ ಇಲಾಖೆ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಮಾತೃ ಇಲಾಖೆಗೆ ವಾಪಸ್‌ ಕಳುಹಿಸಬೇಕು. ಬಿಡಿಎ ನಿಯಮಗಳ ಪ್ರಕಾರ ಎಸ್‌ಎಲ್‌ಒ ಹುದ್ದೆಗಳಲ್ಲಿ ಅವರು ಮುಂದುವರೆಯಲು ಅವಕಾಶವಿಲ್ಲ ಎಂದು ಜಯಪ್ರಕಾಶ ನಾರಾಯಣ ವಿಚಾರವೇದಿಕೆ ಅಧ್ಯಕ್ಷ ಬಿ.ಎಂ.ಶಿವಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ವಲಯ ಆಯುಕ್ತ ಹುದ್ದೆಗಳು ಬಿಡಿಎನಲ್ಲಿ ಪುನರ್ವಸತಿ ಕೇಂದ್ರದಂತಿದ್ದು, ಲಕ್ಷಾಂತರ ಸಂಬಳ, ಕಾರು ಹಾಗೂ ಭತ್ಯೆಗಳನ್ನು ನೀಡಲಾಗುತ್ತಿದೆ. ವಲಯ ಆಯುಕ್ತರ ಹುದ್ದೆಗಳನ್ನು ಸೃಜಿಸದಂತೆ ಈ ಹಿಂದೆಯೇ ಬಿಡಿಎ ಮತ್ತು ಸರ್ಕಾರಕ್ಕೆ ಹಲವು ಬಾರಿ ದೂರುಗಳನ್ನು ನೀಡಲಾಗಿದೆ. ಎಸ್‌ಎಲ್‌ಎಒಗಳು ಕಳೆದ ಕೆಲವು ತಿಂಗಳಿನಿಂದ ಯಾವುದೆ ಅಧಿಕೃತ ಹುದ್ದೆಯಿಲದ್ದೆ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

PREV
Read more Articles on
click me!

Recommended Stories

ರಾಜ್ಯದ ಮಹಿಳೆಯರಿಗೆ ಸಿಎಂ ದಸರಾ ಗಿಫ್ಟ್! 33ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ, ಇನ್ನೆರಡು ದಿನದಲ್ಲಿ ಖಾತೆಗೆ!
ಕಾಂಗ್ರೆಸ್‌ಗೆ ಶೀಘ್ರದಲ್ಲೇ ಮೂರನೇ ಸಿಎಂ? ಪಕ್ಷದೊಳಗೇ ನಡೀತಿದೆ ದೊಡ್ಡ ಷಡ್ಯಂತ್ಯ, ವಿಜಯೇಂದ್ರ ಸ್ಫೋಟಕ ಹೇಳಿಕೆ!