ಸಕ್ಕರೆ ಉತ್ಪಾದನೆಗಾಗಿ ಉತ್ತರ ಕನ್ನಡ ಜಿಲ್ಲೆಯ ಸಾವಿರಾರು ರೈತರು ಲಕ್ಷಾಂತರ ಟನ್ ಕಬ್ಬುಗಳನ್ನು ಉತ್ಪಾದಿಸಿ ಪೂರೈಸುತ್ತಾರೆ. ಆದ್ರೆ, ಎಫ್.ಆರ್.ಪಿ ದರ ಕಡಿಮೆ ನಿಗದಿ ಮಾಡಿರುವುದಲ್ಲದೇ, ಎಸ್.ಎ.ಪಿ. ದೊರೆಯದ ಕಾರಣ ಸಾಕಷ್ಟು ಸಮಯಗಳಿಂದ ರೈತರು ಆರ್ಥಿಕ ಹೊಡೆತ ಎದುರಿಸುತ್ತಿದ್ದಾರೆ.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ (ಅ.14): ಸಕ್ಕರೆ ಉತ್ಪಾದನೆಗಾಗಿ ಉತ್ತರ ಕನ್ನಡ ಜಿಲ್ಲೆಯ ಸಾವಿರಾರು ರೈತರು ಲಕ್ಷಾಂತರ ಟನ್ ಕಬ್ಬುಗಳನ್ನು ಉತ್ಪಾದಿಸಿ ಪೂರೈಸುತ್ತಾರೆ. ಆದ್ರೆ, ಎಫ್.ಆರ್.ಪಿ ದರ ಕಡಿಮೆ ನಿಗದಿ ಮಾಡಿರುವುದಲ್ಲದೇ, ಎಸ್.ಎ.ಪಿ. ದೊರೆಯದ ಕಾರಣ ಸಾಕಷ್ಟು ಸಮಯಗಳಿಂದ ರೈತರು ಆರ್ಥಿಕ ಹೊಡೆತ ಎದುರಿಸುತ್ತಿದ್ದಾರೆ. ಫ್ಯಾಕ್ಟರಿಯಿಂದ ಮೋಸವಾಗಿದೆ ಎಂದು ಆರೋಪಿಸಿ ಕಳೆದ 17 ದಿನಗಳ ರೈತರು ಮುಷ್ಕರ ಹೂಡಿದ್ದರು. ಇದೀಗ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ರೈತರ ಸಮಸ್ಯೆಗಳನ್ನು ಆಲಿಸಿದ್ದಲ್ಲದೇ, ಪರಿಹಾರದ ಭರವಸೆ ಕೂಡಾ ನೀಡಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.
undefined
ಹೌದು! ಕಬ್ಬು ಬೆಳೆಗಾರ ರೈತರಿಗೆ ಎಫ್.ಆರ್.ಪಿ. (ಫೇರ್ ಆ್ಯಂಡ್ ರೆಮ್ಯುನರೇಟಿವ್ ಪ್ರೈಸ್) ದರ ಕಡಿಮೆ ನಿಗದಿ ಮಾಡಿರುವುದಲ್ಲದೇ, ಎಸ್.ಎ.ಪಿ. ದೊರೆಯದ ಕಾರಣ ಸಾಕಷ್ಟು ಸಮಯಗಳಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಎಫ್.ಆರ್.ಪಿ. ಬೆಲೆಯನ್ನು ಕೇಂದ್ರ ಸರಕಾರ ನಿಗದಿ ಪಡಿಸುತ್ತಾದರೂ, ಕಳೆದ ವರ್ಷ ಸಾಗಾಣಿಕೆ ಹಾಗೂ ಕಟಾವು ಹೊರತುಪಡಿಸಿ ಈ ಬೆಲೆ 2592.80ರೂ. ಬೆಲೆಯಿತ್ತಾದರೂ, ಈ ಬಾರಿ 2371ರೂ. ಮಾಡಲಾಗಿದೆ. ಒಂದೆಡೆ ಗೊಬ್ಬರದ ಬೆಲೆ ಒಂದು ಚೀಲಕ್ಕೆ 1600ರೂ.ವರೆಗೆ ಏರಿಕೆಯಾಗಿದ್ದು, ಕೂಲಿ ಕಾರ್ಮಿಕರ ವೇತನವೂ ಹೆಚ್ಚಾಗಿರುತ್ತದೆ. ಮತ್ತೊಂದೆಡೆ ಎಫ್.ಆರ್.ಪಿ. ಬೆಲೆ ಕಡಿಮೆಯಾಗಿರುವುದರಿಂದ ಎಲ್ಲಾ ನಷ್ಟವನ್ನು ರೈತರೇ ಅನುಭವಿಸುವಂತಾಗಿದೆ.
ಕೈಗಾ ಅಣು ವಿದ್ಯುತ್ ಸ್ಥಾವರ: 5 ಹಾಗೂ 6ನೇ ಘಟಕ ಸ್ಥಾಪನೆಗೆ ಎನ್‌ಜಿಟಿ ಬ್ರೇಕ್!
ಇದರೊಂದಿಗೆ ಹಾರ್ವೆಸ್ಟ್ ಹಾಗೂ ಟ್ರಾನ್ಸ್‌ಪೋರ್ಟೇಶನ್ ದರ ಕೂಡಾ ಪ್ರತೀ ಟನ್‌ಗೆ 893ರೂ. ಇತ್ತಾದರೂ ಹಳಿಯಾಳದ ಈ.ಐ.ಡಿ.ಪ್ಯಾರಿ ಶುಗರ್ ಫ್ಯಾಕ್ಟರಿಯವರು ಮಾತ್ರ ಇದನ್ನು ಹೆಚ್ಚಿಸುತ್ತಲೇ ಇರುವ ಆರೋಪಗಳು ಕೇಳಿಬಂದಿದೆ. ಇವರದ್ದೇ ಮತ್ತೊಂದು ಫ್ಯಾಕ್ಟರಿಯಲ್ಲಿ ಈ ಬೆಲೆ 770ರೂ. ಇದ್ದರೆ ಬೇರೆ ಬೇರೆ ಫ್ಯಾಕ್ಟರಿಗಳಲ್ಲಿ ಈ ಬೆಲೆ ಮತ್ತಷ್ಟು ಕಡಿಮೆಯಿದೆ. ಆದರೆ, ಹಳಿಯಾಳದಲ್ಲಿ ಮಾತ್ರ 130-150ರೂ. ವರೆಗೆ ಹೆಚ್ಚಿನ ದರ ರೈತರಿಂದಲೇ ಪಡೆಯಲಾಗುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ರೈತರು ಈ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಯಾರೂ ಈ ಬಗ್ಗೆ ಗಮನ ಹರಿಸಿರಲಿಲ್ಲ.
ಇದೇ ಕಾರಣದಿಂದ ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಈ.ಐ.ಡಿ.ಪ್ಯಾರಿ ಶುಗರ್ ಫ್ಯಾಕ್ಟರಿ ಮುಂದೆಯೇ ಭಾರೀ ಪ್ರತಿಭಟನೆ ಕೂಡಾ ನಡೆಸಿದ್ದಲ್ಲದೇ, ಕಳೆದ 17 ದಿನಗಳ ಮುಷ್ಕರ ಕೂಡಾ ಹೂಡಿದ್ದರು. ಯಾವಾಗ ರೈತ ಮುಖಂಡರು ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಬಿ. ಪಾಟೀಲ ಮುನೇನಕೊಪ್ಪ ಅವರ ಗಮನಕ್ಕೆ ಈ ಸಮಸ್ಯೆಯನ್ನು ತಂದರೋ ಕೂಡಲೇ ಇಲಾಖೆಯ ಆಯುಕ್ತರಿಗೆ ಸಮಸ್ಯೆಗೆ ಸ್ಪಂದಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆ ಆಯುಕ್ತ ಶಿವಾನಂದ ಎಚ್. ಕಲಕೇರಿ ಸಭೆ ನಡೆಸಿ ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರದ ಭರವಸೆ ನೀಡಿದ್ದಾರೆ.
ಈ ಕಾರಣದಿಂದ ಸದ್ಯ ಮುಷ್ಕರ ಮುಂದುವರಿಸುವುದನ್ನು ನಿಲ್ಲಿಸಿರುವ ರೈತರು ಸರಕಾರ ಶೀಘ್ರದಲ್ಲಿ ಸ್ಪಂದಿಸುವ ಭರವಸೆ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಸರಕಾರದಿಂದ ಮತ್ತಷ್ಟು ನಿರ್ಲಕ್ಷ್ಯವಾದಲ್ಲಿ ಹೋರಾಟದ ತೀವ್ರತೆಯನ್ನು ಹೆಚ್ಚಿಸುವ ಎಚ್ಚರಿಕೆಯನ್ನು ಕೂಡಾ ಕಬ್ಬು ಬೆಳೆಗಾರರು ನೀಡಿದ್ದಾರೆ. ಇನ್ನು ಸಕ್ಕರೆ ಕಾರ್ಖಾನೆಯವರು ಪ್ರಾರಂಭಿಸಿರುವ ಹೊಸ ಘಟಕದಲ್ಲಿ ಕಳೆದ ಬಾರಿ 8 ಸಾವಿರ ಟನ್ ಕಬ್ಬು ಕ್ರಶ್ ಮಾಡಲಾಗಿದ್ದು, ಈ ಬಾರಿ 10-11 ಸಾವಿರ ಟನ್ ಕಬ್ಬು ಕ್ರಶ್ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದಾಗಿ ರೈತರ ಎಲ್ಲಾ ಕಬ್ಬುಗಳನ್ನು ಖರೀದಿಸುವ ಸಾಧ್ಯತೆಗಳಿವೆ. ಮುಂದಿನ ದಿನಗಳಲ್ಲಿ ಸರಕಾರದ ಸಹಕಾರದೊಂದಿಗೆ ರೈತರಿಗೆ ಉತ್ತಮ ದರ ಸಿಗುತ್ತದೆ ಎಂಬ ಭರವಸೆಯಿದ್ದು, ರೈತರು ಸಹಕಾರ ನೀಡಬೇಕು ಎಂದು ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ.
ಅಂದಹಾಗೆ, ಹಳಿಯಾಳ ಶುಗರ್ ಫ್ಯಾಕ್ಟರಿ ವ್ಯಾಪ್ತಿಯಲ್ಲಿ 13-14ಸಾವಿರ ರೈತರಿದ್ದು, 14-15 ಲಕ್ಷ ಟನ್ ಗಿಂತಲೂ ಹೆಚ್ಚಿನ ಕಬ್ಬು ಬೆಳೆಸಿ ಪೂರೈಸುತ್ತಾರೆ. ಆದರೆ, ಎಫ್.ಆರ್.ಪಿ. ದರ ಕಡಿಮೆ ನಿಗದಿ ಮಾಡಿರುವುದು, ಎಸ್.ಎ.ಪಿ. ಕೊರತೆ ದೊಡ್ಡ ಆರ್ಥಿಕ ನಷ್ಟಕ್ಕೆ ಕಾರಣವಾಗಿರೋದಲ್ಲದೇ, ನಿರ್ವಹಣೆಯೇ ಕಷ್ಟವಾದಂತಾಗಿದೆ. ಇದರೊಂದಿಗೆ 2016-17ನೇ ಸಾಲಿನಲ್ಲಿ ಈ.ಐ.ಡಿ ಸಕ್ಕರೆ ಕಾರ್ಖಾನೆಯವರು ರೈತರ ಖಾತೆಗಳಿಗೆ ಟನ್‌ಗೆ 305 ರೂ. ಹಾಕುತ್ತೇವೆ ಎಂಬ ಹೇಳಿಕೆಯನ್ನು ಕೂಡಾ ಪ್ರಕಟಿಸಿದ್ದರೂ, ಅದನ್ನು ಮಾತ್ರ ವಿತರಿಸಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಹಳಿಯಾಳ ತಾಲೂಕಿನ ಈ.ಐ.ಡಿ. ಪ್ಯಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರೊಂದಿಗೆ ಚರ್ಚಿಸಿ ಸೂಕ್ತ ರೀತಿಯಲ್ಲಿ ತಾಲೂಕಿನ ರೈತರಿಗೆ ಕಳೆದ ವರ್ಷಕ್ಕಿಂತ ಹೆಚ್ಚಿನ ಬೆಲೆ ನೀಡುವಂತೆ ಆದೇಶಿಸಲು ಕೋರಿಕೊಂಡಿದ್ದಾರೆ.
ಕಬ್ಬು ಬೆಳೆಗಾರರ ಬೇಡಿಕೆಗೆ ಸ್ಪಂದಿಸಿರುವ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆ ಆಯುಕ್ತರು, ಹಾರ್ವೆಸ್ಟಿಂಗ್ ಹಾಗೂ ಟ್ರಾನ್ಸ್‌ಪೋರ್ಟೇಶನ್ ದರ ಸಂಬಂಧಿಸಿ ಕಳೆದ 5 ವರ್ಷದಲ್ಲಿ ಪ್ಯಾರಿ ಶುಗರ್ ಫ್ಯಾಕ್ಟರಿಗೆ ಸಂಬಂಧಿಸಿದ ಒಟ್ಟು 3 ಫ್ಯಾಕ್ಟರಿಗಳಲ್ಲಿ ಸರಕಾರವೇ ಆಡಿಟ್ ಮಾಡಿಸಿ, ಹೆಚ್ಚುವರಿ ಹಣ ಪಡೆದಿದ್ದಲ್ಲಿ ವಾಪಾಸ್ ರೈತರಿಗೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂಬ ಭರವಸೆ ನೀಡಿದ್ದಾರೆ. ಅಲ್ಲದೇ, ಎಫ್.ಆರ್.ಪಿ. ಬದಲಾವಣೆಗೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗುತ್ತಿದ್ದು, ಕೇಂದ್ರದ ನಿರ್ದೇಶನದ ಮೇರೆಗೆ ಕ್ರಮ ಕೈಗೊಳ್ತೇವೆ.
ಉತ್ತರ ಕನ್ನಡಕ್ಕೆ ಉತ್ಕೃಷ್ಟ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ಧ: ಸಚಿವ ಸುಧಾಕರ
ಇದರ ಜತೆ ಎಸ್‌ಎಪಿ (ಸ್ಟೇಟ್ ಅಡ್ವೈಸರಿ ಪ್ರೈಸ್) ದರ ಪ್ರಕಾರ ರೈತರಿಗೆ ಬೆಲೆ ಪೂರೈಕೆಯಾಗಬೇಕೆಂಬ ಬೇಡಿಕೆಯನ್ನೂ ಸಕ್ಕರೆ ಖಾತೆ ಸಚಿವರು ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಎಲ್ಲಾ ಕಾರ್ಖಾನೆಗಳ ನಡೆಯುವ ಸಭೆಯಲ್ಲಿ ಮಾಡಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಕಬ್ಬು ಬೆಳೆಗಾರರು ತಮಗಾಗುತ್ತಿರುವ ಆರ್ಥಿಕ ಹೊಡೆತವನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರಕಾರದ ಮೊರೆ ಹೋಗಿದ್ದು, ಮುಂದಿನ ದಿನಗಳಲ್ಲಿ ಈ ರೈತರಿಗೆ ಶುಭ ಸುದ್ದಿ ದೊರೆಯುತ್ತದೆಯೇ ಅಥವಾ ಕಬ್ಬು ಬೆಳೆಗಾರರು ಮತ್ತಷ್ಟು ಭಾರೀ ಪ್ರತಿಭಟನೆ ನಡೆಸಲು ಕಾರಣವಾಗುತ್ತದೆಯೇ ಎಂದು ಕಾದು ನೋಡಬೇಕಷ್ಟೇ.