ರೇಣುಕಾಸ್ವಾಮಿ ಕೇಸ್: ಜೈಲಲ್ಲಿ ಹೆಡ್‌ಫೋನ್ ಬಳಸಿ ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾದ ಪವಿತ್ರಾ ಗೌಡ!

Published : Aug 13, 2026, 04:52 PM IST
Actress Pavithra Gowda

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವೇಳೆ, ನ್ಯಾಯಾಧೀಶರು ಪವಿತ್ರಾ ಗೌಡರ ನಡವಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದರ್ಶನ್ ಖುದ್ದು ಹಾಜರಾತಿ ಕುರಿತ ಆದೇಶವನ್ನು ಸೋಮವಾರಕ್ಕೆ ಕಾಯ್ದಿರಿಸಲಾಗಿದ್ದು, ಮಾಫಿ ಸಾಕ್ಷಿ ವಿಚಾರವಾಗಿ ದರ್ಶನ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ತೀವ್ರ ಕುತೂಹಲಕಾರಿಯಾಗಿ ನಡೆದಿದ್ದು, ಹಲವು ಪ್ರಮುಖ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಮತ್ತೊಂದು ಕಡೆ ನಟ ದರ್ಶನ್ ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ.

ದರ್ಶನ್ ಖುದ್ದು ಹಾಜರಾತಿ: ಸೋಮವಾರಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ

ಪ್ರಕರಣದ ಪ್ರಮುಖ ಎರಡನೇ ಆರೋಪಿಯಾಗಿರುವ ನಟ ದರ್ಶನ್ ನನ್ನು ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸುಜಾತ ಎಂ. ಸಂಬ್ರಾಣಿ ಅವರು, ಈ ಕುರಿತ ನಿರ್ಧಾರವನ್ನು ಸೋಮವಾರಕ್ಕೆ ಕಾಯ್ದಿರಿಸಿದ್ದಾರೆ. ಹೀಗಾಗಿ ದರ್ಶನ್ ಕೋರ್ಟ್‌ಗೆ ಖುದ್ದು ಹಾಜರಾಗಬೇಕೇ ಅಥವಾ ವಿಡಿಯೋ ಕಾನ್ಫರೆನ್ಸ್ (VC) ಮೂಲಕ ಹಾಜರಾಗಬೇಕೇ ಎಂಬ ಕುರಿತು ಸೋಮವಾರ ಅಂತಿಮ ಆದೇಶ ಹೊರಬೀಳಲಿದೆ.

'ಎ1' ಪವಿತ್ರಾ ಗೌಡ ವಿಚಾರದಲ್ಲಿ ಗರಂ ಆದ ನ್ಯಾಯಾಧೀಶರು

ಇನ್ನು ವಿಚಾರಣೆ ವೇಳೆ ಜೈಲಾಧಿಕಾರಿಗಳ ನಡೆ ಹಾಗೂ 'ಎ1' ಆರೋಪಿ ಪವಿತ್ರಾ ಗೌಡ ಅವರ ನಡವಳಿಕೆ ಬಗ್ಗೆ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಮುಖವಾಗಿ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಕಾರಾಗೃಹದ ಅಧಿಕಾರಿಗಳಿಗೆ ಕ್ಲಾಸ್ ತಗೆದುಕೊಂಡರು.

ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ವೀಡಿಯೋ ಕಾನ್ಫರೆನ್ಸ್‌ಗೆ ಲೇಟಾಗಿ ಹಾಜರಾಗಿದ್ದೇಕೆ? ವಿಚಾರಣೆಗೆ ತಡವಾಗಲು ಕಾರಣವೇನು? ಅವರು ಹೆಡ್‌ಫೋನ್ ಯಾಕೆ ಬಳಸುತ್ತಿದ್ದಾರೆ? ಕೋರ್ಟ್ ವಿಚಾರಣೆ ವೇಳೆ ಹೆಡ್‌ಫೋನ್ ಬಳಸಲು ಯಾರು ಪರ್ಮಿಷನ್ ಕೊಟ್ರು? ವುಮೆನ್ಸ್ ಸೆಲ್‌ನಲ್ಲಿ ಆರೋಪಿಗಳಿಗೆ ಹೆಡ್‌ಫೋನ್ಸ್ ಕೊಡ್ತಾರಾ? ನಾನು ಇದನ್ನು ಸ್ಪಷ್ಟವಾಗಿ ಗಮನಿಸಿದ್ದೇನೆ ಎಂದು ಜಡ್ಜ್ ಗರಂ ಆದರು.

ಈ ಸಂದರ್ಭದಲ್ಲಿ ವೀಡಿಯೋ ಕಾನ್ಫರೆನ್ಸ್‌ನಲ್ಲಿಯೇ ಉತ್ತರಿಸಿದ ಪವಿತ್ರಾಗೌಡ, ಇಲ್ಲ ಮೇಡಂ, ನಾನು ಹೆಡ್‌ಫೋನ್ ಬಳಸಿಲ್ಲ ಎಂದು ಸಮಜಾಯಿಷಿ ನೀಡಲು ಯತ್ನಿಸಿದರು. ಆದರೆ ಅದನ್ನು ಒಪ್ಪದ ನ್ಯಾಯಾಧೀಶರು, ನಾನು ಸ್ವತಃ ಕಣ್ಣಾರೆ ನೋಡಿದ್ದೇನೆ ಎಂದು ಖಡಕ್ ಆಗಿ ಹೇಳಿದ್ದಲ್ಲದೆ, ಈ ಶಿಸ್ತುಬದ್ಧ ಲೋಪದ ಕುರಿತು ತಕ್ಷಣವೇ ಸೂಕ್ತ ಸ್ಪಷ್ಟನೆ (Clarification) ನೀಡುವಂತೆ ಜೈಲಾಧಿಕಾರಿಗಳಿಗೆ ಆದೇಶಿಸಿದರು. ಕೂಡಲೇ ಈ ಕುರಿತು ಜೈಲಾಧಿಕಾರಿಗಳಿಂದ ಲಿಖಿತ ಸ್ಪಷ್ಟೀಕರಣ ನೀಡುವಂತೆ ನ್ಯಾಯಾಧೀಶೆ ಸುಜಾತ ಎಂ. ಸಂಬ್ರಾಣಿ ಅವರು ಆದೇಶಿಸಿದರು.

ಮಾಫಿ ಸಾಕ್ಷಿ ವಿಚಾರಣೆ ಪ್ರಶ್ನಿಸಿ ಹೈಕೋರ್ಟ್‌ಗೆ ದರ್ಶನ್ ಮೇಲ್ಮನವಿ

59ನೇ ಸಿಸಿಎಚ್ (CCH) ಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ನಟ ದರ್ಶನ್ ಪರ ವಕೀಲರು ಕರ್ನಾಟಕ ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಈ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ಪ್ರಕ್ರಿಯೆಯಲ್ಲಿ ನಟ ದರ್ಶನ್ ಅವರ ಪರ ವಾದ ಮಂಡಿಸಲು ಕೆಳ ನ್ಯಾಯಾಲಯ ಅನುಮತಿ ನೀಡಿಲ್ಲ. ಪ್ರಕ್ರಿಯೆಯಲ್ಲಾಗಿರುವ ಲೋಪದೋಷಗಳ ಕುರಿತು ವಾದಿಸಲು ನಮಗೆ ಅವಕಾಶ ಕೋರಲಾಗಿತ್ತಾದರೂ, ನ್ಯಾಯಾಲಯ ಅದಕ್ಕೆ ಸಮ್ಮತಿಸಲಿಲ್ಲ. ವಾದಕ್ಕೆ ಸೂಕ್ತ ಅವಕಾಶ ನೀಡದಿರುವುದರಿಂದಲೇ ನಾವು ಹೈಕೋರ್ಟ್ ಮೆಟ್ಟಿಲೇರಬೇಕಾಯಿತು ಎಂದು ಅವರು ವಾದಿಸಿದರು. ಅರ್ಜಿದಾರರ ಪರ ವಕೀಲರ ಮನವಿಯನ್ನು ಆಲಿಸಿದ ಹೈಕೋರ್ಟ್, ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ವಿಶೇಷ ಸರ್ಕಾರಿ ಅಭಿಯೋಜಕರಿಗೆ (SPP) ತಕ್ಷಣ ಮಾಹಿತಿ ನೀಡುವಂತೆ ಅರ್ಜಿದಾರರಿಗೆ ಸೂಚಿಸಿತಲ್ಲದೆ, ವಿಚಾರಣೆಯನ್ನು ಮುಂದೂಡಿತು

PREV
Read more Articles on
click me!

Recommended Stories

ವಿಜಯಪುರದ ದೇವರಹಿಪ್ಪರಗಿಯಲ್ಲಿ ₹453 ಕೋಟಿಯ ಎಥನಾಲ್ ಪ್ಲ್ಯಾಂಟ್‌ ನಿರ್ಮಾಣ ಯೋಜನೆಗೆ ಸರ್ಕಾರ ಒಪ್ಪಿಗೆ!
ಮೆಟ್ರೋ ಪ್ರಯಾಣಿಕರೇ ಗಮನಿಸಿ; ಆ.15ರಂದು ನಿಮ್ಮ ರೈಲು ಡಾ.ಬಿ.ಆರ್. ಅಂಬೇಡ್ಕರ್ ರೈಲು ನಿಲ್ದಾಣ ವಿಧಾನ ಸೌಧಕ್ಕೆ ನಿಲ್ಲುವುದಿಲ್ಲ!