ಎಲ್ಲರೂ ಒಂದಾಗಿ ಬದುಕಬೇಕೆಂಬ ನೀತಿ ಹೇಳುವುದೇ ಧರ್ಮವಾಗಿದೆ ಧರ್ಮಕ್ಕಾಗಿ ಜನರಿಲ್ಲ, ಜನರಿಗಾಗಿ ಧರ್ಮವಿದೆ. ಜಾತಿಯ ವಿಭಜನೆಗೆ ಧರ್ಮದ ಚೌಕಟ್ಟು ಕೊಟ್ಟಿದ್ದಾರೆ. ಧರ್ಮ ದೇವರು ಮಾಡಿದ್ದಲ್ಲ ನಾವೇ ಮಾಡಿದ್ದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಎಚ್.ಡಿ. ರಂಗಸ್ವಾಮಿ
ನಂಜನಗೂಡು (ಜ.21) : ಎಲ್ಲರೂ ಒಂದಾಗಿ ಬದುಕಬೇಕೆಂಬ ನೀತಿ ಹೇಳುವುದೇ ಧರ್ಮವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುತ್ತೂರು ಶ್ರೀ ಕ್ಷೇತ್ರದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸದಲ್ಲಿ ದೇಸಿ ಆಟಗಳು, ಚಿತ್ರಕಲಾ ಸ್ಪರ್ಧೆ ಹಾಗೂ ಗಾಳಿ ಪಟ ಸ್ಪರ್ಧೆಯನ್ನು ಆಟ ಆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ಧರ್ಮ ಬೋಧನೆಯಿಂದ ಬದುಕು ಹಸನಾಗುವುದಿಲ್ಲ, ಧರ್ಮಕ್ಕಾಗಿ ಜನರಿಲ್ಲ, ಜನರಿಗಾಗಿ ಧರ್ಮವಿದೆ. ಜಾತಿಯ ವಿಭಜನೆಗೆ ಧರ್ಮದ ಚೌಕಟ್ಟು ಕೊಟ್ಟಿದ್ದಾರೆ. ಧರ್ಮ ದೇವರು ಮಾಡಿದ್ದಲ್ಲ ನಾವೇ ಮಾಡಿದ್ದು ಎಂದರು.
ಪ್ರಧಾನಿ ಮೋದಿ ಕರ್ನಾಟಕದ ರೈತರಿಗೆ ಟೋಪಿ ಹಾಕಿ ಮೋಸ ಮಾಡಿದ್ದಾರೆ: ಸಿದ್ದರಾಮಯ್ಯ
ಎರಡು ಸಾವಿರ ವರ್ಷಗಳ ಹಿಂದೆ ಮಹಿಳೆಯರಿಗೆ ಪೂಜ್ಯನೀಯ ಸ್ಥಾನವಿತ್ತು. ಪ್ರಸ್ತುತ ಮಹಿಳೆ ಮನೆಗೆ ಮಾತ್ರ ಸೀಮಿತವಾಗಿದೆ ಎಂಬಂತಾಗಿದೆ. ಮಹಿಳೆಯರಿಗೆ ಶಿಕ್ಷಣ ದೊರಕಿದ್ದು, ಬಸವಾದಿ ಶರಣರಿಂದ ಐತಿಹಾಸಿಕ ಕಾರಣಕ್ಕೆ ಸಮಾಜದಲ್ಲಿ ವೈರುದ್ಯ ನಿರ್ಮಾಣವಾಗಿತ್ತು. ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದೆ. ಸಾವಿರಾರು ವರ್ಷಗಳಿಂದ ಶೋಷಣೆಗೊಳಗಾದ ಜನರಿಗೆ ಸಮಾನ ಅವಕಾಶ ನೀಡದಿದ್ದರೆ ಜನರೇ ವ್ಯವಸ್ಥೆಯ ಸೌಧವನ್ನು ಧ್ವಂಸಗೊಳಿಸಲಿದ್ದಾರೆಂದು ಅಂಬೇಡ್ಕರ್ ಹೇಳಿದ್ದರು. ಆದರೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸಹ ಅಸಮಾನತೆ ದೂರವಾಗಿಲ್ಲ, ಎಲ್ಲರಿಗೂ ಸಾಮಾಜಿಕ, ಆರ್ಥಿಕ ಸಮಾನತೆಯಿಂದ ಮಾತ್ರ ಸಾಮಾಜಿಕ ವ್ಯವಸ್ಥೆ ಚಲನೆಗೊಳ್ಳುತ್ತದೆ. ಸಂಪತ್ತು ಅಧಿಕಾರಗಳು ಒಂದೇ ಕಡೆ ಕೇಂದ್ರೀಕೃತವಾಗಬಾರದು, ಹಂಚಿಕೆಯಾಗಬೇಕು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬಂತೆ ಬರೀ ಭಾಷಣಕ್ಕೆ ಮಾತ್ರ ಸೀಮಿತಗೊಳ್ಳಬಾರದು ಅದು ಅಕ್ಷರಸಃ ಜಾರಿಗೊಳ್ಳಬೇಕು ಎಂದರು.
ಮನುಷ್ಯನ ಬದುಕಿಗೆ ಕ್ರೀಡೆ ಮುಖ್ಯ, ಕ್ರೀಡೆಗಳು ಬದುಕನ್ನು ಕ್ರಿಯಾಶೀಲಗೊಳಿಸುತ್ತವೆ. ದೇಸೀ ಆಟಗಳಾದ ಚೆಂಡು, ಲಗ್ಗೆ, ಉಯ್ಯಾಲೆ, ಆಟ ಆಡುತ್ತಿದ್ದೆವು. ಇಂದಿನವರು ಅದನ್ನು ಮರೆತಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೂ ಇಸ್ಪೀಟ್ ಆಟದಲ್ಲಿ ತೊಡಗಿದ್ದಾರೆ. ಈ ಇಸ್ಪೀಟ್ ಆಟ ಮನೆಯಲ್ಲಿ ಸತ್ತರೂ ಸಹ ನೋಡಲು ಹೋಗಲಾರದಂತಹ ರೀತಿ ಚಟವಾಗಿ ಪರಿಣಮಿಸಿದೆ. ದೇಸೀ ಕ್ರೀಡೆಗಳಿಗೆ ಉತ್ತೇಜನ ದೊರಕಬೇಕು, ಕಬ್ಬಡ್ಡಿ, ಹಾಕಿಯಂತಹ ಕ್ರೀಡೆಗಳು ಭಾರತದೇಶದಲ್ಲಿ ಹುಟ್ಟಿದವು. ಆದರೆ ನೆದರ್‌ಲ್ಯಾಂಡ್, ಜರ್ಮನಿ, ಸ್ಪೈನ್ ಮುಂದೆ ಹೋಗಿವೆ. ಈ ದೇಸೀ ಆಟಗಳನ್ನು ಉತ್ತೇಜಿಸಲು ಸುತ್ತೂರು ಶ್ರೀಗಳು ಅವಕಾಶ ಕಲ್ಪಿಸಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಮಾತನಾಡಿ, ಭಾರತೀಯ ಪರಂಪರೆಯ ಅದ್ಬುತಗಳಲ್ಲಿ ಸುತ್ತೂರು ಜಾತ್ರೆ ಒಂದಾಗಿದೆ, ರೈತಾಪಿ ಜನ 6 ತಿಂಗಳು ಕೆಲಸ ಮಾಡಿ ಒಂದು ತಿಂಗಳ ಕಾಲ ನಿರಂತರವಾಗಿ ಊರಬ್ಬ, ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ತೊಡಗಿಕೊಳ್ಳುವ ವೈಭವ ಕಾಣುತ್ತದೆ. ಜನರು ತಲ್ಲೀನರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದರು.
ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ಸ್ವಾಮಿಜೀಗಳಿಗೆ ಜಾತ್ಯತೀತವಾಗಿ ಎಲ್ಲ ವರ್ಗದಜನರ ಪ್ರೀತಿ ವಿಶ್ವಾಸಗಳಿಸಿ ಎಲ್ಲರಿಗೂ ತಂದೆ ತಾಯಿಗಳಿಂತಿದ್ದಾರೆ. ಶ್ರೀ ಸಿದ್ದೇಶ್ವರ ಶ್ರೀಗಳು ಈ ಶತಮಾನಕಂಡಂತಹ ಅತ್ಯಂತ ಮಹಾನ್ ಚಿಂತಕರು. ಅವರನ್ನು ಇತರೆ ದೇಶದ ಚಿಂತಕರ ಜೊತೆ ಹೋಲಿಸಲು ಸಾಧ್ಯವಿಲ್ಲ ಎಂದರು.
ಸೊರಬ ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿ, ನಾನು ಸಣ್ಣ ನೀರಾವರಿ ಸಚಿವರಾಗಿದ್ದ ವೇಳೆ ಕೆರೆ ಹೂಳೆತ್ತಿಸಿ ಅಭಿವೃದ್ದಿ ಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. 200 ಕೆರೆಯಿಂದ ಪ್ರಸ್ತುತ 36 ಸಾವಿರ ಕೆರೆಗಳನ್ನು ಅಭಿವೃದ್ದಿಪಡಿಸಲಾಗಿದೆ ಎಂದರು.
ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, ಗ್ರಾಮೀಣ ಜನರು ಚೆಂಡಾಟ, ಅಳೆಗುಳಿ ಮನೆ, ಗಟ್ಟೆಮನೆ, ಹುಲಿ ಕಲ್ಲುಗಳಂತಹ ದೇಸೀ ಆಟಗಳನ್ನು ಮರೆತಿದ್ದಾರೆ. ಶ್ರೀ ಮಠ ಜಾತ್ರಾ ಮಹೋತ್ಸವದಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ಜನರನ್ನು ಒಗ್ಗೂಡಿಸುವ ಜೊತೆಗೆ ದುಂದು ವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಿ ಬಡವರಿಗೆ ನೆರವಾಗಿದ್ದಲ್ಲದೆ ಅಂತರ್ಜಾತಿ ಮದುವೆಗಳ ಮೂಲಕ ಎಲ್ಲರೂ ಒಂದೇ ಎಂಬ ಸಂದೇಶವನ್ನು ಸಾರುತ್ತಿದೆ ಎಂದರು.
ಕೋಲಾರದಲ್ಲಿ ಸಿದ್ದು ಸೋಲಿಸಲು ದಳಪತಿ ತಂತ್ರ: ಒಕ್ಕಲಿಗ, ಮುಸ್ಲಿಂ ಮತ ಸೆಳೆಯುವ ಜೆಡಿಎಸ್ ಪ್ಲಾನ್
ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಆರ್ಯ ಈಡಿಗ ಮಹಾಸಂಸ್ಥಾಪನ ಪೀಠದ ಶ್ರೀ ವಿಖ್ಯಾತನಂದ ಸ್ವಾಮೀಜಿ, ಈಶ ಪ್ರಿಯತೀರ್ಥ ಶ್ರೀ ಪಾದಂಗಳು ಶುಭ ಸಂದೇಶ ನೀಡಿದರು. ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು.
ಮಾಜಿ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಪುಟ್ಟರಂಗಶೆಟ್ಟಿ, ಆರ್. ನರೇಂದ್ರ, ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ. ಜಯಣ್ಣ, ಎ.ಆರ್. ಕೃಷ್ಣಮೂರ್ತಿ, ಸೋಮಶೇಖರ್, ವೆಂಕಟೇಶ್, ಪದ್ಮಶ್ರೀ ಪುರಸ್ಕೃತರಾದ ಡಾ. ಮಂಜಮ್ಮ ಜೋಗತಿ, ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್, ಕಾಡಾ ಅಧ್ಯಕ್ಷ ನಿಜಗುಣರಾಜು, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮರೀಗೌಡ, ಪುಷ್ಪ ಅಮರ್‌ನಾಥ್ ಇದ್ದರು.