Puneeth Rajkumar Inspiration: ಮಿಸ್ಡ್‌ ಕಾಲ್‌ ಕೊಟ್ರೆ ನೇತ್ರದಾನಕ್ಕೆ ನೋಂದಣಿ..!

By Kannadaprabha NewsFirst Published Dec 30, 2021, 9:00 AM IST
Highlights

*  ಡಾ.ರಾಜ್‌ ಐ ಬ್ಯಾಂಕ್‌, ನಾರಾಯಣ ನೇತ್ರಾಲಯದಿಂದ ವಿನೂತನ ಯೋಜನೆ
*  ಅಪ್ಪು ಸಮಾಧಿ ಬಳಿ ಚಾಲನೆ
*  ಅಪ್ಪು ಆದರ್ಶ ವ್ಯಕ್ತಿ
 

ಬೆಂಗಳೂರು(ಡಿ.30):  ನೇತ್ರದಾನ(Eye Donation) ಮಾಡಲು ನೋಂದಣಿ ಮಾಡಿಕೊಳ್ಳಬೇಕೆ? ಹಾಗಾದರೆ ಆಂಡ್ರಾಯ್ಡ್‌ ಮೊಬೈಲ್‌ನಿಂದ 8884018800 ನಂಬರ್‌ಗೆ ಒಂದು ಮಿಸ್ಡ್‌ ಕಾಲ್‌(Missed Call) ಕೊಡಿ ಸಾಕು. ನಿಮ್ಮ ಮೊಬೈಲ್‌ಗೇ ಅರ್ಜಿ ಬರುತ್ತದೆ. ಭರ್ತಿ ಮಾಡಿ ಕಳುಹಿಸಿದರೆ ಸಾಕು ನೋಂದಣಿ ಸರ್ಟಿಫಿಕೇಟ್‌ ಕೈಸೇರಲಿದೆ. ಈ ವಿನೂತನ ಯೋಜನೆಗೆ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅವರ ಸಮಾಧಿ ಬಳಿ ಬುಧವಾರ ಚಾಲನೆ ನೀಡಲಾಯಿತು.

ಶಿವರಾಜ್‌ ಕುಮಾರ್‌(Shivaraj Kumar) ಮತ್ತು ರಾಘವೇಂದ್ರ ರಾಜ್‌ಕುಮಾರ್‌(Raghavendra Rajkumar) ಅವರು ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್‌ ಸಮಾಧಿಗೆ 2 ತಿಂಗಳ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ಆಗಮಿಸಿದ್ದ ಸಂದರ್ಭದಲ್ಲಿಯೇ ನಾರಾಯಣ ನೇತ್ರಾಲಯ(Narayana Nethralaya) ರೂಪಿಸಿರುವ ಈ ಯೋಜನೆಯನ್ನು ಲೋಕಾರ್ಪಣೆಗೊಳಿಸಲಾಯಿತು.

Puneeth Rajkumar Eye Donation: ಅಪ್ಪು ನಿಧನದ ಬಳಿಕ 400 ಜನ ನೇತ್ರದಾನ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಕೆ.ಭುಜಂಗಶೆಟ್ಟಿ(Dr K Bhujangashetty), ಡಾ.ರಾಜ್‌ಕುಮಾರ್‌ ಐ ಬ್ಯಾಂಕ್‌(Dr Rajkumar Eye Bank) ಮತ್ತು ನಾರಾಯಣ ನೇತ್ರಾಲಯ ಸಂಯುಕ್ತವಾಗಿ ಈ ಯೋಜನೆ ಜಾರಿಗೆ ತಂದಿವೆ. ನೇತ್ರದಾನ ಮಾಡಲು ಇಚ್ಛಿಸುವವರಿಗಾಗಿ ಸೇವೆ ಆರಂಭಿಸಲಾಗಿದೆ. ಯಾರೇ ಆಗಲಿ, ಯಾವುದೇ ಸ್ಥಳದಲ್ಲಿರಲಿ, ಯಾವುದೇ ತೊಂದರೆ ಇಲ್ಲದಂತೆ ತಮ್ಮ ಕಣ್ಣುಗಳನ್ನು ದಾನ ಮಾಡುವ ಪ್ರತಿಜ್ಞೆ ಸ್ವೀಕರಿಸಬಹುದು ಎಂದು ವಿವರಿಸಿದರು.

ವರನಟ ಡಾ.ರಾಜ್‌ಕುಮಾರ್‌, ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌(Parvathamma Rajkumar), ನಟ ಪುನೀತ್‌ ರಾಜ್‌ಕುಮಾರ್‌ ಸಹ ನೇತ್ರದಾನ ಮಾಡಿರುವುದರಿಂದ ಯೋಜನೆಗೆ ಚಾಲನೆ ನೀಡಲು ಸಮಾಧಿ ಸ್ಥಳ ಆಯ್ಕೆ ಮಾಡಿಕೊಳ್ಳಲಾಗಿದೆ. ನಾರಾಯಣ ನೇತ್ರಾಲಯವು ತನ್ನ ಡಾ.ರಾಜ್‌ಕುಮಾರ್‌ ನೇತ್ರ ಬ್ಯಾಂಕ್‌ ಮೂಲಕ 1994 ರಿಂದ ನೇತ್ರದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ(Awareness) ಮೂಡಿಸುತ್ತ ಬಂದಿದೆ ಎಂದು ಸ್ಪಷ್ಟಪಡಿಸಿದರು.

ನೇತ್ರದಾನದ ಅಲೆ

ಎರಡು ತಿಂಗಳ ಹಿಂದೆ ನಟ ಪುನೀತ್‌ ರಾಜ್‌ಕುಮಾರ್‌ ಅವರು ನಿಧನರಾಗಿದ್ದಾಗ ಅವರ ಕಣ್ಣುಗಳನ್ನು ದಾನ ಮಾಡಲಾಯಿತು. ಹೊಸ ತಂತ್ರಜ್ಞಾನದಿಂದಾಗಿ ಪುನೀತ್‌ ಅವರ ಕಣ್ಣುಗಳನ್ನು ನಾಲ್ವರಿಗೆ ಅಳವಡಿಸುವಲ್ಲಿ ನಾರಾಯಣ ನೇತ್ರಾಲಯವು ಯಶಸ್ವಿಯಾಗಿದೆ. ಪುನೀತ್‌ ಅವರ ನೇತ್ರದಾನದ ನಂತರ ನೇತ್ರದಾನದ ದೊಡ್ಡ ಅಲೆಯೇ ಉಂಟಾಗಿದೆ ಎಂದು ಬಣ್ಣಿಸಿದರು.

2021ರ ನವೆಂಬರ್‌ನಲ್ಲಿ 10,000 ಜನರು ನೇತ್ರದಾನಕ್ಕೆ ನೋಂದಾಯಿಸಿದ್ದು, ದಾನಿಗಳಿಂದ 234 ನೇತ್ರ ಸಂಗ್ರಹಿಸಲಾಗಿದೆ. ಡಿಸೆಂಬರ್‌ನಲ್ಲಿ 209 ನೇತ್ರ ಸಂಗ್ರಹಿಸಲಾಗಿದೆ. ಈ ಹಿಂದೆ ತಿಂಗಳಲ್ಲಿ 100ರಿಂದ 200 ಜನ ಮಾತ್ರ ನೇತ್ರದಾನಕ್ಕೆ ಒಪ್ಪಂದ ಮಾಡಿಕೊಳ್ಳುತ್ತಿದ್ದರು. ಆದರೆ ಆ ಸಂಖ್ಯೆ ಇದೀಗ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಅಪ್ಪು ನಿಧನದ ನಂತರ 12,000 ಜನ ನೇತ್ರದಾನಕ್ಕೆ ನೋಂದಣಿ(Registration) ಮಾಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

Puneeth Rajkumar ಪ್ರೇರಣೆ: ನೇತ್ರದಾನದಲ್ಲಿ ದಾಖಲೆಯ ಏರಿಕೆ

ಅಪ್ಪು ಆದರ್ಶ ವ್ಯಕ್ತಿ

ನನ್ನ ಸಹೋದರ ಅಪ್ಪು ಯಾವ ರೀತಿ ಸಮಾಜ ಸೇವಾ ಕಾರ್ಯಗಳನ್ನು(Social Service Work) ಮಾಡಿದ್ದಾರೆ ಎಂಬುದು ಅವರ ನಿಧನದ ನಂತರವೇ ನಮಗೆ ಅರಿವಾಯಿತು. ಅವರ ಈ ರೀತಿಯ ಕಾರ್ಯದಿಂದಾಗಿ ನಟ ಎಂಬುದಕ್ಕಿಂತ ಹೆಚ್ಚಾಗಿ ಸಮಾಜದ ಒಬ್ಬ ಆದರ್ಶ ವ್ಯಕ್ತಿಯನ್ನಾಗಿ ನೋಡುವಂತಾಯಿತು ಎಂದು ರಾಘವೇಂದ್ರ ರಾಜ್‌ಕುಮಾರ್‌ ಸ್ಮರಿಸಿದರು.

ವೈದ್ಯರನ್ನು(Doctors) ನಾರಾಯಣನ ಸ್ವರೂಪವಾಗಿ ಕಾಣಬೇಕು ಎಂದು ನಮ್ಮ ತಂದೆ ಯಾವಾಗಲೂ ಹೇಳುತ್ತಿದ್ದರು. ನಾನು ಕೂಡ ಇದನ್ನು ನಂಬುತ್ತೇನೆ. ನೇತ್ರದಾನವನ್ನು ಒಂದು ಜನಾಂದೋಲನವನ್ನಾಗಿ ಮಾಡಲು ಡಾ.ಭುಜಂಗಶೆಟ್ಟಿ ಮತ್ತು ನಾರಾಯಣ ನೇತ್ರಾಲಯ ಶ್ರಮಿಸುತ್ತಿದ್ದು ಶ್ಲಾಘನೀಯವಾಗಿದೆ. ಇದಕ್ಕೆ ನಾನು ಸಹ ಎಲ್ಲ ರೀತಿಯ ನೆರವು ನೀಡುತ್ತೇನೆ ಎಂದು ತಿಳಿಸಿದರು. ಮಿಸ್ಡ್‌ ಕಾಲ್‌ ನೀಡಿ ನೇತ್ರದಾನ ಮಾಡಲು ನೋಂದಣಿ ಮಾಡಿಕೊಳ್ಳುವ ಯೋಜನೆಗೆ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್‌ ರಾಜ್‌ಕುಮಾರ್‌ ಸಮಾಧಿ ಬಳಿ ಬುಧವಾರ ಚಾಲನೆ ನೀಡಲಾಯಿತು.
 

click me!