* ಡಿಸಿ ನಿವಾಸದಲ್ಲಿ ಈಜುಕೊಳ ನಿರ್ಮಾಣಕ್ಕೆ ಅನುಮತಿ ಪಡೆದಿರಲಿಲ್ಲ
* ರೋಹಿಣಿ ಸಿಂಧೂರಿ ವಿರುದ್ಧ ಪ್ರಾದೇಶಿಕ ಆಯುಕ್ತರ ತನಿಖಾ ವರದಿ
* ನಿರ್ಮಿತಿ ಕೇಂದ್ರದ ಮೂಲಕ ಈಜುಕೊಳ ನಿರ್ಮಾಣ
ಮೈಸೂರು(ಜೂ.23): ಚಾಮರಾಜನಗರ ಕೋವಿಡ್ ಆಸ್ಪತ್ರೆ ದುರಂತ, ಶಾಸಕ ಸಾ.ರಾ.ಮಹೇಶ್ ಅವರ ಒಡೆತನದ ಚೌಲ್ಟ್ರಿ ಪ್ರಕರಣಗಳಲ್ಲಿ ತೀವ್ರ ಹಿನ್ನೆಡೆಗೊಳಗಾಗಿದ್ದ ಮೈಸೂರಿನ ನಿಕಟಪೂರ್ವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇದೀಗ ಈಜುಕೊಳ ಪ್ರಕರಣದಲ್ಲೂ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರೋಹಿಣಿ ಸಿಂಧೂರಿ ತಮ್ಮ ಅಧಿಕೃತ ನಿವಾಸದಲ್ಲಿ ಈಜುಕೊಳ ನಿರ್ಮಿಸುವುದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಹೊಂದಿಲ್ಲ ಎಂದು ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಅವರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ಜನತೆ ಕೊರೋನಾ ಸಂಕಷ್ಟದಲ್ಲಿರುವಾಗ ಪಾರಂಪರಿಕ ಕಟ್ಟಡವಾದ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ಸುಮಾರು 50 ಲಕ್ಷ ವೆಚ್ಚದಲ್ಲಿ ಈಜುಕೊಳ, ಜಿಮ್ ನಿರ್ಮಿಸಿ, ಮೋಜು- ಮಸ್ತಿಯಲ್ಲಿ ತೊಡಗಿದ್ದಾರೆ ಎಂದು ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಮತ್ತಿತರು ಆರೋಪದ ಮೇರೆಗೆ ರಾಜ್ಯ ಸರ್ಕಾರ ಈ ಬಗ್ಗೆ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ವರದಿ ಸಲ್ಲಿಸಿದ್ದಾರೆ.
ಈಜುಕೊಳ ವಿಚಾರ : ಸರ್ಕಾರಕ್ಕೆ ಉತ್ತರಿಸಿದ ರೋಹಿಣಿ ಸಿಂಧೂರಿ
ಜಿಲ್ಲಾಧಿಕಾರಿ ಅಧಿಕೃತ ನಿವಾಸ ‘ಜಲಸನ್ನಿಧಿ’ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿದ್ದು, ಈಜುಕೊಳವನ್ನು ನಿರ್ಮಿತಿ ಕೇಂದ್ರದ ಮೂಲಕ ನಿರ್ಮಿಸಲಾಗಿದೆ. ನಿರ್ಮಿಸುವ ಮುಂಚೆ ಯಾವುದೇ ಸಭೆಯಲ್ಲಿ ಮಂಡಿಸಿ, ಪೂರ್ವ ಅನುಮೋದನೆ ಪಡೆದಿರುವುದಿಲ್ಲ.
ನಿರ್ಮಾಣಕ್ಕೆ 32,55,131.49ಕ್ಕೆ ಅಂದಾಜು ಪಟ್ಟಿ ತಯಾರಿಸಿದ್ದು, ತಾಂತ್ರಿಕ ವರ್ಗ ಅಥವಾ ಲೋಕೋಪಯೋಗಿ ಇಲಾಖೆ ಅನುಮತಿ ಪಡೆದಿಲ್ಲ. ಜೊತೆಗೆ ಯಾವುದೇ ಪೂರ್ವಭಾವಿ ಆಡಳಿತಾತ್ಮಕ ಮಂಜೂರಾತಿ ಪಡೆದಿಲ್ಲ, ಯಾವುದೇ ಕಾರ್ಯಾದೇಶ ಇಲ್ಲ. ಕಾಮಗಾರಿ ನಿರ್ವಹಿಸಿದವರ ಒಪ್ಪಂದ ಪತ್ರಗಳೂ ಇಲ್ಲ. ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮೋದನೆ ಪಡೆದಿಲ್ಲ. ಅಂತಿಮವಾಗಿ ಇದನ್ನು ಯಾವುದೇ ಸಾರ್ವಜನಿಕರು ಉಪಯೋಗಿಸಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಕಲಾಗಿದೆ.