ಲಸಿಕೆ ಭೀತಿ: ಯಾದಗಿರಿಯಲ್ಲಿ ಮನೆಗೆ ಬೀಗ ಜಡಿದು ಕಾಲ್ಕಿತ್ತ ಗ್ರಾಮಸ್ಥರು..!

By Kannadaprabha News  |  First Published Jun 23, 2021, 12:10 PM IST

* ಯಾದಗಿರಿ ಸಮೀಪದ ಕೆಂಚಗಾರಹಳ್ಳಿಯಲ್ಲಿ ಲಸಿಕಾಕರಣಕ್ಕೆ ಗ್ರಾಮಸ್ಥರ ಹಿಂದೇಟು
* ಸಹಾಯಕ ಆಯುಕ್ತ, ತಹಸೀಲ್ದಾರರು ಬಂದಾಗ ಲಸಿಕೆಗೆ ಹೆದರಿ ಓಡಿದ ಜನರು
* ಲಸಿಕೆ ಹಾಕಿಸಿಕೊಳ್ಳದಿದ್ದರೆ ರೇಷನ್‌, ವಿದ್ಯುತ್‌, ಪಿಂಚಣಿ ಬಂದ್‌ ?
 


ಯಾದಗಿರಿ(ಜೂ.23): ಕೋವಿಡ್‌-19 ಲಸಿಕಾಕರಣಕ್ಕೆಂದು ಬಂದ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರನ್ನು ಕಂಡು ಗ್ರಾಮಸ್ಥರು ಮನೆಗಳಿಗೆ ಬೀಗ ಜಡಿದು ಹೊಲಗದ್ದೆಗಳತ್ತ ಕಾಲ್ಕಿತ್ತ ಘಟನೆ ಸಮೀಪದ ಕೆಂಚಗಾರಹಳ್ಳಿಯಲ್ಲಿ ನಡೆದಿದೆ. 

ಲಸಿಕೆ ಪಡೆಯಲು ಹಿಂದೇಟು ಹಾಕಿದ ಕೆಲವು ಗ್ರಾಮಸ್ಥರನ್ನು ಮನವೊಲೈಸಲು ಯತ್ನಿಸಿದರಾದರೂ, ಅದಕ್ಕೊಪ್ಪದ ಅನೇಕರು ಅಧಿಕಾರಿಗಳೊಡನೆ ವಾಗ್ವಾದಕ್ಕಿಳಿದು ಹೊರಬಂದಿದ್ದಾರೆ. ಕೆಂಚಗಾರಹಳ್ಳಿ ಹಾಗೂ ಅಲ್ಲಿಪೂರ ಸೇರಿದಂತೆ ಸುತ್ತಮುತ್ತ ಕೆಲವು ಗ್ರಾಮಗಳಲ್ಲಿ ಲಸಿಕಾಕರಣಕ್ಕೆ ಹಿನ್ನೆಡೆಯುಂಟಾಗಿದೆ.

Tap to resize

Latest Videos

undefined

ಸಹಾಯುಕ ಆಯುಕ್ತ ಸೇರಿದಂತೆ ತಹಸೀಲ್ದಾರರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ತೆರಳಿದಾಗ ಅನೇಕರು ಲಸಿಕೆಗೆ ಒಪ್ಪಲಿಲ್ಲ. ವದಂತಿಗಳ ಬಗ್ಗೆ ಸ್ಪಷ್ಟನೆ ನೀಡುವ ಯತ್ನ ನಡೆಸಿದರಾದರೂ ಕೆಲವರು ಮನೆಯೊಳಗೆ ಬೀಗ ಹಾಕಿಕೊಂಡು ಕುಳಿತರೆ, ಇನ್ನೂ ಕೆಲವರು ಮನೆಗೆ ಹೊರಗಿನಿಂದ ಬೀಗ ಹಾಕಿ ಹೆದರಿ ಕಾಲ್ಕಿತ್ತರು. ಬೆರಳಣಿಕೆಯಷ್ಟು ಲಸಿಕೆ ಹಾಕಿಸಿಕೊಂಡರಾದರೂ, ಅವರಿಗೆ ಇದಕ್ಕೊಪ್ಪಿಸುವಲ್ಲಿ ಅಧಿಕಾರಿಗಳು ಹರಸಾಹಸ ಪಡಬೇಕಾಯಿತು.

 ಶಹಾಪುರ: ಬೊಗಸೆ ನೀರಿಗಾಗಿ ಕೃಷ್ಣೆಯೊಡಲು ಬಗೆಯಬೇಕು..!

ಪಡಿತರ, ಕರೆಂಟ್‌, ಪಿಂಚಣಿ ಕಟ್‌:

ಇನ್ನೊಂದೆಡೆ, ಕೋವಿಡ್‌-19 ಲಸಿಕೆ ಹಾಕಿಸಿಕೊಳ್ಳದಿದ್ದರೆ ಅಂತವರಿಗೆ ಪಡಿತರ ನೀಡಲಾಗುವುದಿಲ್ಲ ಎಂದು ಡಂಗೂರ ಸಾರಲಾಗಿದೆಯಲ್ಲದೆ, ಪಡಿತರ ಪಡೆಯಲು ತೆರಳಿದ್ದ ಕೆಲವರಿಗೆ ವಾಪಸ್‌ ಕಳುಹಿಸಿದ್ದಾರಂತೆ. ಲಸಿಕೆ ಪಡೆದ ನಂತರವೇ ಪಡಿತರ ನೀಡಲಾಗಿದೆ ಎಂದು ದೂರಿದ ಅಲ್ಲಿಪೂರ ಗ್ರಾಮಸ್ಥ ಸಾಯಿಬಣ್ಣ, ಲಸಿಕಾಕರಣ ಕುರಿತು ಜಾಗೃತಿ ಮೂಡಿಸುವ ಬದಲು ಹೀಗೆ ಮಾಡುವುದರಿಂದ ಭೀತಿ ಮೂಡಿಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಂಗೂರ ಸಾರಿ ರೇಷನ್‌ ನೀಡುವುದಿಲ್ಲ ಅನ್ನೋದು, ಒತ್ತಾಯಪೂರ್ವಕವಾಗಿ ಜನರನ್ನು ಆಟೋಗಳಲ್ಲಿ ಹೇರಿಕೊಂಡು ಹೋಗುತ್ತಿರುವುದರಿಂದ ಜನರಲ್ಲಿ ಭೀತಿ ಉಂಟಾಗಿದೆ. ಲಸಿಕೆ ನೀಡಿದ ನಂತರ ಅಸ್ವಸ್ಥಗೊಂಡ ಕೆಲವರಿಗೆ ನಂತರ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿರುವುದರಿಂದ ಸಹಜವಾಗಿ ಜನರು ಆತಂಕಕ್ಕೊಳಗಾಗಿದ್ದಾರೆ ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದ ಗ್ರಾಮದ ದೇವೇಂದ್ರ ಹಾಗೂ ಸಾಯಿಬಣ್ಣ, ಲಸಿಕೆ ನೀಡಿದ ನಂತರ ವಹಿಸಬೇಕಾದ ಕಾಳಜಿಯ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದೇ ಲಸಿಕಾಕರಣ ಹಿಂದೇಟಿಗೆ ಕಾರಣ ಎಂದರು.

ಆದರೆ, ಈ ಆರೋಪಗಳನ್ನು ತಳ್ಳಿ ಹಾಕುವ ಅಧಿಕಾರಿಗಳು, ಲಸಿಕಾಕರಣಕ್ಕೆ ಬಂದ ಸಿಬ್ಬಂದಿಗಳ ಮೇಲೆ ಹಲ್ಲೆ ಅಥವಾ ನಿಂದಿಸುವ ಕೆಲಸ ಮಾಡಿದರೆ ಕಾನೂನು ರೀತ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದರು.

ಕೆಂಚಗಾರಹಳ್ಳಿಯಲ್ಲಿ 1300 ಜನಸಂಖ್ಯೆಯಿದೆ. ಕೇವಲ 100-107 ಜನರ ಮಾತ್ರ ಜನರು ಲಸಿಕೆ ಪಡೆದಿದ್ದಾರೆ. ಎಷ್ಟು ಮನವಿ ಮಾಡಿದರೂ ಉಳಿದವರು ಮುಂದೆ ಬರುತ್ತಿಲ್ಲ. ಲಸಿಕೆ ಸುರಕ್ಷಿತ ಎಂದು ಹೇಳಿದರೂ ನಂಬುತ್ತಿಲ್ಲ ಎಂದು ಕೆಂಚಗಾರಹಳ್ಳಿ ಗ್ರಾಮ ಲೆಕ್ಕಿಗ ಚೆನ್ನಬಸವ ತಿಳಿಸಿದ್ದಾರೆ. 

ಏಪ್ರೀಲ್‌-ಮೇ ತಿಂಗಳ ವೇಳೆಗೆ ಲಸಿಕಾಕರಣಕ್ಕೆ ಹೆಚ್ಚಿನ ಆಸಕ್ತಿ ತೋರಿ, ಲಸಿಕೆ ಹಾಕಿಸಿಕೊಳ್ಳಲು ಕೇಂದ್ರಗಳಲ್ಲಿ ಜನ ಮುಗಿಬಿದಿದ್ದರು. ವದಂತಿಗಳನ್ನು ನಂಬದಂತೆ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಯಾದಗಿರಿ ಡಿಎಚ್‌ಒ ಡಾ.ಇಂದುಮತಿ ಪಾಟೀಲ್‌ ಹೇಳಿದ್ದಾರೆ.
 

click me!