Bengaluru Rain| ವಾರಾಂತ್ಯಕ್ಕೆ ಅಲ್ಪವಿರಾಮ ಕೊಟ್ಟ ಮಳೆರಾಯ..!

By Kannadaprabha NewsFirst Published Nov 21, 2021, 9:47 AM IST
Highlights

*   ನಿರಂತರವಾಗಿ ಸುರಿಯುತ್ತಿದ್ದ ಮಳೆಗೆ ಕೊಂಚ ಬ್ರೇಕ್‌
*   ದಿನವಿಡೀ ಮೋಡಕವಿದ ವಾತಾವರಣ
*   ಮುಂದುವರೆದ ಚಳಿ ಚಳಿ ಹವಾಮಾನ
 

ಬೆಂಗಳೂರು(ನ.21):  ಕಳೆದ ಮೂರ್ನಾಲ್ಕು ದಿನಗಳಿಂದ ಸಿಲಿಕಾನ್‌ ಸಿಟಿಯಲ್ಲಿ(Silicon City) ಬಿಟ್ಟು ಬಿಡದೆ ಸುರಿದ ಮಳೆ ಎರಡು ದಿನಗಳಿಂದ ಸ್ವಲ್ಪ ವಿರಾಮ ನೀಡಿದ್ದು, ವಾರಾಂತ್ಯದಲ್ಲಿ(Weekend) ಜನರಲ್ಲಿ ಸಂತಸ ಮೂಡಿಸಿದೆ. ವ್ಯಾಪಾರ ವಹಿವಾಟುಗಳು, ಬೀದಿ ಬದಿ ವ್ಯಾಪಾರ ಮಾಮೂಲಿ ಸ್ಥಿತಿಗೆ ಬಂದಿದೆ. ಮಳೆ ಹಾಗೂ ಶೀತಗಾಳಿಯಿಂದ ಮನೆಯೊಳಗಿದ್ದ ಉದ್ಯಾನ ನಗರಿಯ ಜನರು ಶನಿವಾರ ರಸ್ತೆಗಿಳಿದಿದ್ದರು.

ಮುಂಜಾನೆಯಿಂದಲೇ ಎಲ್ಲೆಡೆ ಮೋಡ ಕವಿದ ವಾತಾವರಣ ಇದ್ದರೂ ಕೂಡ ಮಳೆ ಸುರಿಯುವ ಮುನ್ಸೂಚನೆ ಇರಲಿಲ್ಲ. ಆದರೂ ಬಸವನಗುಡಿ, ಮಲ್ಲೇಶ್ವರ, ಕೊಡಿಗೆಹಳ್ಳಿ, ಯಶವಂತಪುರ, ಬೊಮ್ಮನಹಳ್ಳಿ, ಶಿವಾಜಿನಗರ, ಎಂ.ಜಿ.ರಸ್ತೆ, ಲಾಲ್‌ಬಾಗ್‌, ಡೈರಿ ವೃತ್ತ, ಕಾಕ್ಸ್‌ಟೌನ್‌, ರಾಜಾಜಿನಗರ, ಮಹಾಲಕ್ಷ್ಮಿಲೇಔಟ್‌, ಮಡಿವಾಳ, ಬೊಮ್ಮನಹಳ್ಳಿ ಸೇರಿದಂತೆ ಕೆಲವೆಡೆ ತುಂತುರು ಮಳೆಯಾದರೂ(Rain) ಜನರ ಓಡಾಟಕ್ಕೆ ಯಾವುದೇ ತೊಂದರೆ ಆಗಲಿಲ್ಲ.
ಮಳೆ ಬಿಡುವು ನೀಡಿದ್ದರಿಂದ ಕೆ.ಆರ್‌.ಮಾರುಕಟ್ಟೆ, ಯಶವಂತಪುರ ಎಪಿಎಂಸಿ, ಮಡಿವಾಳ ಮಾರುಕಟ್ಟೆ, ಶಿವಾಜಿನಗರ ರೆಸಲ್‌ ಮಾರುಕಟ್ಟೆ, ಕೆಂಪೇಗೌಡ ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಜನ ಸಂದಣಿ ಹೆಚ್ಚಾಗಿತ್ತು. ರಸ್ತೆ ಬದಿ ವ್ಯಾಪಾರ, ಮಾರುಕಟ್ಟೆಗಳು, ವಾಣಿಜ್ಯ ಚಟುವಟಿಕೆಯ ತಾಣಗಳಲ್ಲಿ ಜನದಟ್ಟಣೆ ಕಂಡುಬಂದಿತು. ಪ್ರಮುಖವಾಗಿ ಕೆ.ಆರ್‌.ಮಾರುಕಟ್ಟೆ, ಕಲಾಸಿಪಾಳ್ಯ, ಎಸ್‌ಕೆ ರಸ್ತೆ, ಯಶವಂತಪುರ ಎಪಿಎಂಸಿ, ಕೆ.ಆರ್‌.ಪುರಂ, ಯಲಹಂಕ ಸೇರಿದಂತೆ ಆರ್ಥಿಕ ಚಟುವಟಿಕೆಯ ಸ್ಥಳಗಳಲ್ಲಿ ವ್ಯಾಪಾರ ವಹಿವಾಟು ಚುರುಕುಗೊಂಡಿತ್ತು.

Bengaluru Rain| ನಗರದಲ್ಲಿ ಅವಾಂತರ ಸೃಷ್ಟಿಸಿದ ಮಳೆ

ರಸ್ತೆಗುಂಡಿಗಳಿಗೆ ತೇಪೆ:

ಬೆಳಗ್ಗೆ ಮಳೆ ತಗ್ಗಿದ್ದರಿಂದ ಬಿಬಿಎಂಪಿ(BBMP) ಕೂಡ ರಸ್ತೆ ಗುಂಡಿಗಳ ಮುಚ್ಚುವ ಕೆಲಸಕ್ಕೆ ಮುಂದಾಗಿದ್ದು ಕಂಡು ಬಂತು. ನಗರದ ಬಹುತೇಕ ಕಡೆಗಳಲ್ಲಿ ಮಳೆಯಿಂದಾದ ರಸ್ತೆ ಗುಂಡಿಗಳಿಗೆ ಜಲ್ಲಿಕಲ್ಲುಗಳು, ಎಂಸ್ಯಾಂಡ್‌ ತುಂಬುವ ಕಾರ್ಯದಲ್ಲಿ ಬಿಬಿಎಂಪಿ ಸಿಬ್ಬಂದಿ ಮಗ್ನರಾಗಿದ್ದರು. ಇನ್ನು ಹಲವೆಡೆ ದ್ವಿಚಕ್ರ ವಾಹನಗಳ ಸಂಚಾರ ಹೆಚ್ಚಾಗಿದ್ದು, ಕೊಡಿಗೆಹಳ್ಳಿ, ಯಶವಂತಪುರ, ಮೇಖ್ರಿ ಸರ್ಕಲ್‌, ಮೆಜೆಸ್ಟಿಕ್‌, ಮಾಗಡಿ ರಸ್ತೆ, ಮೈಸೂರು ರಸ್ತೆ, ವಿಲ್ಸನ್‌ಗಾರ್ಡನ್‌ ಸೇರಿದಂತೆ ಕೆಲವು ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.

ಭಾರೀ ಮಳೆಯ ಹಿನ್ನೆಲೆಯಲ್ಲಿ ಶುಕ್ರವಾರ ಶಾಲೆಗಳ(Schools) ವಿದ್ಯಾರ್ಥಿಗಳಿಗೆ(Students) ಜಿಲ್ಲಾಡಳಿತ ರಜೆ ಘೋಷಣೆ ಮಾಡಿತ್ತು. ಆದರೆ, ಶನಿವಾರ ಎಂದಿನಂತೆ ಶಾಲಾ-ಕಾಲೇಜುಗಳು ತೆರೆದಿದ್ದು ವಿದ್ಯಾರ್ಥಿಗಳು ಉತ್ಸಾಹದಿಂದಲೇ ತರಗತಿಗಳಿಗೆ ಹಾಜರಾಗಿದ್ದರು. ಮಧ್ಯಾಹ್ನದ ಶಾಲೆ ಬಿಡುವಿನ ವೇಳೆಯಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಸಿದ್ಧರಾಗಿಯೇ ಆಗಮಿಸಿದ್ದ ಅವರು, ಕೊಡೆಗಳು, ಜರ್ಕಿನ್‌ ಗಳನ್ನು ಧರಿಸಿ ಮನೆಗಳಿಗೆ ತೆರಳಿದ್ದರು.

ಬೆಂಗ್ಳೂರಲ್ಲಿ ಜಿಟಿ ಜಿಟಿ ಮಳೆ, ಮೋಡ ಮುಸುಕಿದ ವಾತಾವರಣ

ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆ

ನಗರದಲ್ಲಿ ಮಳೆ ಕಡಿಮೆಯಾಗಿದ್ದರೂ ಶೀತ ವಾತಾವರಣ ಮಕ್ಕಳು, ಮಹಿಳೆಯರ ಅನಾರೋಗ್ಯಕ್ಕೆ ಮಾರಕವಾಗಿದೆ. ಹಲವರಲ್ಲಿ ಶೀತ, ಕಫ, ಕೆಮ್ಮು, ವೈರಲ್‌ ಜ್ವರಗಳು ಹೆಚ್ಚೆಚ್ಚು ಕಾಣಿಸಿಕೊಂಡಿದೆ. ಸಂಜಯನಗರ, ಕೆಂಪಾಪುರ, ನಾಗವಾರ, ಬಾಣಸವಾಡಿ, ಕಸ್ತೂರಿನಗರ, ಹೆಬ್ಬಾಳ, ಯಲಹಂಕ, ಜೆ.ಪಿ.ನಗರ, ಜಯನಗರ, ಬೊಮ್ಮನಹಳ್ಳಿ, ವಿಜಯನಗರ ಸೇರಿದಂತೆ ಹಲವೆಡೆ ನರ್ಸಿಂಗ್‌ ಹೋಂಗಳು, ಕ್ಲಿನಿಕ್‌ಗಳಿಗೆ ಹೆಚ್ಚು ಜನರು ಚಿಕಿತ್ಸೆಗಾಗಿ ಧಾವಿಸಿದ್ದು ಕಂಡುಬಂತು.

ಸಾಧಾರಣ ಮಳೆ

ಶನಿವಾರ ಜ್ಞಾನಭಾರತಿಯಲ್ಲಿ 1.9 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಬೆಂಗಳೂರು ಪೂರ್ವ, ಪಶ್ಚಿಮ, ದಕ್ಷಿಣ, ದಾಸರಹಳ್ಳಿ, ಆರ್‌.ಆರ್‌. ನಗರ, ಯಲಹಂಕ, ಬೊಮ್ಮನಹಳ್ಳಿ ಮತ್ತು ಮಹಾದೇವಪುರ ಸೇರಿದಂತೆ ಎಲ್ಲ ವಲಯಗಳಲ್ಲಿ ಏಕಪ್ರಕಾರವಾಗಿ ಮಳೆ ಸುರಿದಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 23.4 ಡಿಗ್ರಿ ಮತ್ತು 20.1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ನಗರದಲ್ಲಿ ಭಾನುವಾರವು ಇದೇ ರೀತಿಯ ವಾತಾವರಣ ಮುಂದುವರಿಯಲಿದ್ದು ಗರಿಷ್ಠ ಮತ್ತು ಕನಿಷ್ಠ ತಾಪಮಾನ(Temperature) ಕ್ರಮವಾಗಿ 24 ಡಿಗ್ರಿ ಮತ್ತು 20 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ(Department of Meteorology) ತಿಳಿಸಿದೆ.
 

click me!