Bengaluru| ಬಿಡಿಎಯಲ್ಲಿ ಬಗೆದಷ್ಟು ಬ್ರಹ್ಮಾಂಡ ಭ್ರಷ್ಟಾಚಾರ..!

By Kannadaprabha News  |  First Published Nov 21, 2021, 6:20 AM IST

*   ಎಸಿಬಿಯಿಂದ ಸತತ 48 ತಾಸು ಕಡತಗಳ ಪರಿಶೀಲನೆ
*   134 ಕೋಟಿ ಅವ್ಯವಹಾರ ಬೆಳಕಿಗೆ
*   ಅನರ್ಹರಿಗೆ ಸೈಟ್‌ ಹಂಚಿಕೆ, ಪರಿಹಾರ ವಿತರಣೆಯಲ್ಲಿ ಮೋಸ ಸೇರಿ ಕೋಟಿ ಕೋಟಿ ಅಕ್ರಮ ಪತ್ತೆ
 


ಬೆಂಗಳೂರು(ನ.21):  ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ದ ಕೇಂದ್ರ ಕಚೇರಿಯಲ್ಲಿ ಸತತವಾಗಿ ಎರಡು ದಿನಗಳ ಕಡತಗಳ ಶೋಧನೆ ಬಳಿಕ 13 ನಿವೇಶನಗಳಿಗೆ ಸಂಬಂಧಿಸಿದ 134.4 ಕೋಟಿ ಮೌಲ್ಯದ ಭೂ ಅಕ್ರಮ ನಡೆದಿರುವುದನ್ನು ಭ್ರಷ್ಟಾಚಾರ ನಿಗ್ರಹ ದಳ (ACB) ಪತ್ತೆ ಹಚ್ಚಿದೆ. ಇದಲ್ಲದೆ ಕೆಲವು ಬಡಾವಣೆಗಳಲ್ಲಿ ಭೂ ಸ್ವಾಧೀನದಲ್ಲಿ ಕಾನೂನು ಬಾಹಿರವಾಗಿ ಪರಿಹಾರ ವಿತರಣೆ ಮತ್ತು ಅರ್ಹರಿಗೆ ನಿವೇಶನಗಳ ಹಂಚಿಕೆಯಲ್ಲೂ ಬಿಡಿಎ ದೊಡ್ಡ ಮೊತ್ತದ ಭ್ರಷ್ಟಾಚಾರ ನಡೆಸಿದೆ ಎಂದು ಎಸಿಬಿ ಅನುಮಾನ ವ್ಯಕ್ತಪಡಿಸಿದೆ.

ಅಕ್ರಮ ಭೂ ವ್ಯವಹಾರ(Illegal Land Deal) ದೂರು ಹಿನ್ನೆಲೆಯಲ್ಲಿ ನಗರದ ಕುಮಾರ ಕೃಪಾ ಪಶ್ಚಿಮದಲ್ಲಿರುವ ಬಿಡಿಎ ಕೇಂದ್ರ ಕಚೇರಿಗೆ ಮೂವರು ಎಸ್ಪಿಗಳ ನೇತೃತ್ವದಲ್ಲಿ 75 ಪೊಲೀಸರ(Police) ತಂಡವು ಶುಕ್ರವಾರ ದಿಢೀರ್‌ ದಾಳಿ ನಡೆಸಿದ್ದರು. ಬಳಿಕ ಇಡೀ ಬಿಡಿಎ ಕಾರ್ಯಾಲಯವನ್ನು ಸುಪರ್ದಿಗೆ ಪಡೆದ ಎಸಿಬಿ, 48 ಗಂಟೆಗಳ ಕಡತಗಳನ್ನು ಶೋಧಿಸಿ ಪ್ರಾಥಮಿಕ ಹಂತದಲ್ಲಿ .134 ಕೋಟಿ ಮೌಲ್ಯದ ಭೂ ಹಗರಣವನ್ನು ಬಯಲುಗೊಳಿಸಿದೆ. ಈ ಬಗ್ಗೆ ಅಕ್ರಮವೆಸಗಿರುವ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಮಧ್ಯವರ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.

Tap to resize

Latest Videos

ಬೆಂಗಳೂರು: ಕೆಂಪೇಗೌಡ ಲೇಔಟಲ್ಲಿ ಮನೆ ಕಟ್ಟಲು ಬಿಡಿಎ ಅಡ್ಡಿ..!

ನಾಡಿದ್ದು ಮತ್ತೆ ಶೋಧ

ಬಿಡಿಎ ನೌಕರರ ಸಂಘದ ಚುನಾವಣೆ ಹಾಗೂ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಬಿಡಿಎ ಕೇಂದ್ರ ಕಚೇರಿಯಲ್ಲಿ ಕಡತ ಶೋಧನೆಗೆ ಎರಡು ದಿನಗಳು ತಾತ್ಕಾಲಿಕವಾಗಿ ಬ್ರೇಕ್‌ ಹಾಕಿರುವ ಎಸಿಬಿ, ಮಂಗಳವಾರ ಮತ್ತೆ ಬಿಎಡಿಯಲ್ಲಿ ತಪಾಸಣೆ ಮುಂದುವರೆಸಲಿದೆ.

ಉಪ ಕಾರ್ಯದರ್ಶಿಗಳಿಗೆ ವಿಚಾರಣೆಗೆ ಬುಲಾವ್‌?

ಈ ಬಹುಕೋಟಿ ಭೂ ಹಗರಣ ಸಂಬಂಧ ಬಿಡಿಎ ಉಪ ಕಾರ್ಯದರ್ಶಿಗಳಾದ ಡಾ.ಎನ್‌.ಎನ್‌.ಮಧು, ನವೀನ್‌ ಜೋಸೆಫ್‌, ಗೀತಾ ಉಡೇದಾ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿ ಡಾ.ಸೌಜನ್ಯ ಸೇರಿದಂತೆ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗೆ ವಿಚಾರಣೆಗೆ ಎಸಿಬಿ ನೋಟಿಸ್‌(Notice) ನೀಡಿದ್ದು, ಗುರುವಾರ ಎಸಿಬಿ ಮುಂದೆ ಅಧಿಕಾರಿಗಳು ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಭೂ ಅಕ್ರಮದ ವಿವರ ಹೀಗಿದೆ

*ಅರ್ಕಾವತಿ, ಕೆಂಪೇಗೌಡ ಹಾಗೂ ವಿಶ್ವೇಶ್ವರಯ್ಯ ಬಡಾವಣೆಗಳಲ್ಲಿ ಸುಮಾರು .75 ಕೋಟಿ ಬೆಲೆ ಬಾಳುವ 6 ನಿವೇಶಗಳನ್ನು ಸುಳ್ಳು ದಾಖಲೆ ಸೃಷ್ಟಿಸಿ ಅನರ್ಹ ವ್ಯಕ್ತಿಯೊಬ್ಬನಿಗೆ ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿ ಹಂಚಿಕೆ ಮಾಡಿದ್ದಾರೆ.

*ಜಮೀನು ಸ್ವಾಧೀನ ಪಡಿಸಿಕೊಳ್ಳದಿದ್ದರೂ ಕೆಂಗೇರಿ ಸಮೀಪದ ಉಲ್ಲಾಳ ಗ್ರಾಮದ ವ್ಯಕ್ತಿಯೊಬ್ಬರಿಂದ ಭೂಮಿ ಸ್ವಾದೀನ ಪಡಿಸಿರುವುದಾಗಿ ಸಹ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಆತನಿಗೆ ಬದಲಿ ನಿವೇಶನವಾಗಿ 1800 ಚ.ಅಡಿ ಅಳತೆಯ ಸುಮಾರು .1.5 ಕೋಟಿ ಮೌಲ್ಯದ ನಿವೇಶನವನ್ನು ಬಿಡಿಎ ಮಂಜೂರು ಮಾಡಿದೆ.

*ನಕಲಿ ದಾಖಲೆಗಳ(Fake Documents) ಆಧಾರದ ಮೇಲೆ ಕೆಂಗೇರಿ ಸ್ಯಾಟ್‌ಲೈಟ್‌ ಟೌನ್‌ ಬಳಿ 1000 ಚ.ಅ ಅಳತೆಯ ಸುಮಾರು .80 ಲಕ್ಷ ಮೌಲ್ಯದ ನಿವೇಶ ಹಾಗೂ ಚಂದ್ರಾಲೇಔಟ್‌ ಪ್ರದೇಶದಲ್ಲಿ .5 ಕೋಟಿ ಮೌಲ್ಯದ 2400 ಚದುರ ಅಡಿ ನಿವೇಶನವನ್ನು ಇಬ್ಬರು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಬಿಡಿಎ ಅಧಿಕಾರಿ ಮಂಜೂರು ಮಾಡಿದ್ದಾರೆ.

*ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲ ನಿವೇಶನದ ಫಲಾನುಭವಿಗಳ ಮೂಲ ದಾಖಲಾತಿಗಳನ್ನು ತಿದ್ದುಪಡಿಗೊಳಿಸಿ ಅನರ್ಹ ವ್ಯಕ್ತಿಗೆ .30 ಲಕ್ಷ ಮೌಲ್ಯದ ನಿವೇಶನ ಹಾಗೂ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಮೂಲ ಫಲಾನುಭವಿಗೆ ಮಂಜೂರಾದ .52 ಲಕ್ಷ ಮೌಲ್ಯದ ನಿವೇಶನವನ್ನು ಅನರ್ಹ ವ್ಯಕ್ತಿಗೆ ಬಿಡಿಎ ಮಂಜೂರು ಮಾಡಿದೆ.

*ಒಂದೇ ನಿವೇಶವನ್ನು ಒಂದಕ್ಕಿಂತ ಹೆಚ್ಚಿನ ವ್ಯಕ್ತಿಗಳಿಗೆ ನೋಂದಣಿ ಮಾಡಿಕೊಟ್ಟು ಫಲಾನುಭವಿಗಳು ಅನವಶ್ಯಕವಾಗಿ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದ ಬಿಡಿಎ ಅಧಿಕಾರಿಗಳು, ಅರ್ಕಾವತಿ ಬಡಾವಣೆಯಲ್ಲಿ ಫಲಾನುಭವಿಯೊಬ್ಬರಿಗೆ ನಿವೇಶನ ಮಂಜೂರಾಗಿದ್ದರು ಕೂಡಾ ದುರುದ್ದೇಶದಿಂದ ಕೆಂಪೇಗೌಡ ಬಡಾವಣೆಯಲ್ಲಿ ಆತನಿಗೆ ನಿವೇಶನವನ್ನು ನೀಡಿ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.

*ಭೀಮನಕುಪ್ಪೆ ಗ್ರಾಮ, ನಾಡಪ್ರಭು ಕೆಂಪೇಗೌಡ ಹಾಗೂ ಡಾ.ಕೆ.ಶಿವರಾಮ ಕಾರಂತ ಬಡಾವಣೆಗಳು ಸೇರಿ ಇತರೆಡೆ ಬಿಡಿಎ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಕೆಲವು ಕಡೆ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಕೋಟ್ಯಂತರ ಮೌಲ್ಯದ ಭೂ ಸ್ವಾಧೀನದ ಪರಿಹಾರ ಧನವನ್ನು ಆ ಖಾಸಗಿ ವ್ಯಕ್ತಿಗಳಿಗೆ ಬಿಡಿಎ ಅಧಿಕಾರಿಗಳು ವಿತರಿಸಿದ್ದಾರೆ.

*ಅಂಜನಾಪುರ ಬಡಾವಣೆಯಲ್ಲಿ ಫಲಾನುಭವಿಗೆ ಸೇರಿದ ನಿವೇಶನವೊಂದರ ಒತ್ತುವರಿ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸದೆ ಬಿಡಿಎ ಅಧಿಕಾರಿಗಳು, ಆ ವ್ಯಕ್ತಿಗೆ ಬೇರೆ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಿ ಬಳಿಕ ಒತ್ತುವರಿ ನಿವೇಶನವನ್ನು ಮೂರನೇ ವ್ಯಕ್ತಿಗೆ ಮಂಜೂರು ಮಾಡಿಕೊಟ್ಟಿದ್ದಾರೆ.

*ಅರ್ಕಾವತಿ ಸೇರಿ ಕೆಲ ಬಡಾವಣೆಗಳಲ್ಲಿ ಕೆಲವು ಅರ್ಜಿದಾರರು ನಿವೇಶನ ಮಂಜೂರಾತಿ ಪಡೆದು ನಿಗದಿತ ಸಮಯದಲ್ಲಿ ಹಣ ಸಂದಾಯ ಮಾಡಿದ್ದರು ಕೂಡಾ ಅವರಿಗೆ ಲೀಸ್‌ ಕಂ ಸೇಲ್‌ ಡೀಡ್‌ (ಎಲ್‌ಸಿಎಸ್‌ಡಿ) ಮಾತ್ರ ಬಿಡಿಎ ಅಧಿಕಾರಿಗಳು ಮಾಡಿಕೊಟ್ಟಿದ್ದರು. ನಂತರ ನಿಗದಿತ ಅವಧಿಯೊಳಗೆ ಮನೆಗಳನ್ನು ಕಟ್ಟಿಕೊಂಡಿದ್ದರೂ ಕೂಡ ಆ ವ್ಯಕ್ತಿಗಳಿಗೆ ಅಬ್ಸ್‌ ಲ್ಯೂಟ್‌ ಸೇಲ್‌ ಡೀಡ್‌ (ಎಎಸ್‌ಡಿ)ಗಳನ್ನು ಮಾಡಿ ಕೊಡದೆ ದುರುದ್ದೇಶದಿಂದ ವಿಳಂಬ ನೀತಿಯನ್ನು ಅನುಸರಿಸಿ ತೊಂದರೆ ಕೊಟ್ಟಿದ್ದಾರೆ. ಇದೇ ರೀತಿ ನಿಗದಿತ ಅವಧಿಯೊಳಗೆ ಬಿಡಿಎ ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿದ ಅರ್ಜಿದಾರರಿಗೆ ನಿವೇಶನ ಹಂಚಿಕೆ ಪತ್ರ ನೀಡದೆ ಅನವ್ಯಶಕ ಸಮಸ್ಯೆ ಮಾಡಿದ್ದಾರೆ.
 

click me!