ವಿಜಯಪುರ: ಭೀಮಾ, ಡೋಣಿ ನದಿಯಲ್ಲಿ ತಗ್ಗಿದ ಪ್ರವಾಹ

By Kannadaprabha NewsFirst Published Sep 23, 2020, 3:19 PM IST
Highlights

ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಮಾನಾಂತರ ಗಡಿ ಪ್ರದೇಶದ ಮೂರು ಬ್ಯಾರೇಜ್‌ಗಳು ಸಂಚಾರಕ್ಕೆ ಮುಕ್ತ| ಸಿಂದಗಿ ತಾಲೂಕಿನ ದೇವಣಗಾಂವ ಬಳಿ ಇರುವ ಸೇತುವೆಯಲ್ಲಿ ಭೀಮಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ| ಕಲಬುರಗಿ ಜಿಲ್ಲೆಯ ಸೊನ್ನ ಬ್ಯಾರೇಜ್‌ನಲ್ಲಿಯೂ ನೀರಿನ ಪ್ರಮಾಣ ಇಳಿಮುಖ| 
 

ವಿಜಯಪುರ(ಸೆ.23):ಜಿಲ್ಲೆಯಲ್ಲಿ ತುಂಬಿ ಹರಿಯುತ್ತಿದ್ದ ಭೀಮಾ ನದಿ ಪ್ರವಾಹ ತಗ್ಗಿದೆ. ಡೋಣಿ ನದಿ ಪ್ರವಾಹವೂ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ನದಿ ತೀರದ ಗ್ರಾಮಸ್ಥರು ಪ್ರವಾಹ ಭೀತಿಯಿಂದ ಹೊರ ಬಂದಿದ್ದಾರೆ.

ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಮಳೆಯಾಗಿಲ್ಲ. ಸಂಜೆವರೆಗೂ ಇಡೀ ದಿನ ಜಿಲ್ಲೆಯಲ್ಲಿ ಮಳೆಯಾಗಲಿಲ್ಲ. ಜಿಲ್ಲೆಯಲ್ಲಿ ಭೀಮಾ ನದಿ ಈಗಲೂ ತುಂಬಿ ಹರಿಯುತ್ತಿದ್ದರೂ ಪ್ರವಾಹ ಇಳಿಮುಖವಾಗಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಮಾನಾಂತರ ಗಡಿ ಪ್ರದೇಶದಲ್ಲಿ ನಿರ್ಮಿಸಿದ ಮೂರು ಬ್ಯಾರೇಜ್‌ಗಳು ಸಂಚಾರಕ್ಕೆ ಮುಕ್ತವಾಗಿವೆ. ಇನ್ನುಳಿದ ಬ್ಯಾರೇಜ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಸಿಂದಗಿ ತಾಲೂಕಿನ ದೇವಣಗಾಂವ ಬಳಿ ಇರುವ ಸೇತುವೆಯಲ್ಲಿ ಭೀಮಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಕಲಬುರಗಿ ಜಿಲ್ಲೆಯ ಸೊನ್ನ ಬ್ಯಾರೇಜ್‌ನಲ್ಲಿಯೂ ನೀರಿನ ಪ್ರಮಾಣ ಇಳಿಮುಖವಾಗಿದೆ. ಇದರಿಂದ ವಿಜಯಪುರ ಜಿಲ್ಲೆಯ ನದಿ ದಂಡೆಯ ಗ್ರಾಮಸ್ಥರಿಗೆ ಪ್ರವಾಹದ ಭೀತಿ ಕಡಿಮೆಯಾಗಿದೆ.

ವಿಜಯಪುರ ಜಿಲ್ಲೆಯ ತಿಕೋಟಾ, ಸಾರವಾಡ ಮತ್ತಿತರ ಕಡೆಗಳಲ್ಲಿ ಹರಿದ ಡೋಣಿ ನದಿ ಪ್ರವಾಹ ತಗ್ಗಿದೆ. ಡೋಣಿ ನದಿಯಲ್ಲಿ ನೀರು ಹರಿಯುತ್ತಿದೆ. ಆದರೆ ಅದು ನದಿ ಪಾತ್ರದಲ್ಲಿಯೇ ಹರಿಯುತ್ತಿದೆ. ರೈತರ ಹೊಲಗಳಿಗೆ ನುಗ್ಗಿದ ನೀರು ಇಳಿಮುಖವಾಗಿದೆ.

ವಿಜಯಪುರ: ಖಾಸಗಿ ಲಾಡ್ಜ್‌ನಲ್ಲಿ ಯುವಕ ಆತ್ಮಹತ್ಯೆ

ತಾಳಿಕೋಟೆ ಬಳಿ ಹಡಗಿನಾಳ ಸೇತುವೆ ಡೋಣಿ ನದಿ ಪ್ರವಾಹದಿಂದ ಸಂಚಾರಕ್ಕೆ ಇನ್ನೂ ಮುಕ್ತವಾಗಿಲ್ಲ. ಸೇತುವೆ ಮೇಲೆ ನೀರು ಹರಿಯುತ್ತಿದೆ. ಆದರೆ ಸೋಮವಾರಕ್ಕಿಂತ ಸೇತುವೆ ಮೇಲೆ ಹರಿಯುವ ನೀರಿನ ಪ್ರಮಾಣದಲ್ಲಿ ಕಡಿಮೆಯಾಗಿದೆ. ಜನರು ಸೇತುವೆ ಮೇಲೆ ಹರಿಯುತ್ತಿರುವ ನೀರಿನಲ್ಲೇ ಹೋಗುವುದು ಸಾಮಾನ್ಯವಾಗಿದೆ.

ಆಲಮಟ್ಟಿ ಯಥಾಸ್ಥಿತಿ:

ಆಲಮಟ್ಟಿ ಆಣೆಕಟ್ಟೆಸಂಪೂರ್ಣ ಭರ್ತಿಯಾಗಿದ್ದು, ಆಣೆಕಟ್ಟೆಯಲ್ಲಿ 519.60 ಮೀಟರ್‌ (123.081 ಟಿಎಂಸಿ) ನೀರು ಸಂಗ್ರಹವಿದೆ. ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣ ನೀರು ಹರಿದು ಬಂದಿಲ್ಲ. ಹೀಗಾಗಿ ಈ ಭಾಗದಲ್ಲಿ ಪ್ರವಾಹದ ಭೀತಿ ಇಲ್ಲ. ಅಣೆಕಟ್ಟೆಗೆ 52,197 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಆಣೆಕಟ್ಟೆಯಿಂದ ಹೊರ ಹರಿವು 49,339 ಕ್ಯುಸೆಕ್‌ ಇದೆ. ಆಣೆಕಟ್ಟೆ ಒಳ ಹರಿವು, ಹೊರ ಹರಿವಿನಲ್ಲಿ ಯಥಾಸ್ಥಿತಿ ಮುಂದುವರಿದಿದೆ.
 

click me!