ಅಫಜಲ್ಪುರ: ಚಿಕ್ಕ ವಯಸ್ಸಲ್ಲೇ ಪಿಎಸ್‌ಐ ಆದ ಹಳ್ಳಿ ಪ್ರತಿಭೆ

By Kannadaprabha News  |  First Published Sep 23, 2020, 2:53 PM IST

ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ಮಾವನ ಆಸರೆಯಲ್ಲಿ ಬೆಳೆದ ಲಕ್ಷ್ಮಿ| ಪೋಲಿಸ್‌ ಅಧಿಕಾರಿಯಾಗಿ ಆಯ್ಕೆಯಾದ ಲಕ್ಷ್ಮಿ| ಭವಿಷ್ಯದಲ್ಲಿ ಕೆಎಎಸ್‌ ಪರೀಕ್ಷೆ ಬರೆದು ಸಹಾಯಕ ಆಯುಕ್ತ (ಎಸಿ) ಅಥವಾ ಡಿವೈಎಸ್ಪಿ ಆಗುವ ಕನಸು ಹೊಂದಿರುವ ಲಕ್ಷ್ಮಿ| 


ಬಿಂದುಮಾಧವ ಮಣ್ಣೂರ

ಅಫಜಲ್ಪುರ(ಸೆ.23): ತಾಲೂಕಿನ ಕುಗ್ರಾಮ ಭೋಸ್ಗಾದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗಳು ಈಗ ಪೋಲಿಸ್‌ ಇನ್ಸಪೆಕ್ಟರ್‌ ಆಗುವ ಯೋಗ ಕೂಡಿ ಬಂದಿದೆ. ಭೋಸ್ಗಾದ ಶಿವಣ್ಣ ಹಾಗೂ ಕಮಲಾಬಾಯಿ ದೇಗಿನಾಳ ದಂಪತಿ ಪುತ್ರಿ ಲಕ್ಷ್ಮಿ ದೇಗಿನಾಳ ಇದೀಗ ಪೋಲಿಸ್‌ ಅಧಿಕಾರಿಯಾಗಿ ಆಯ್ಕೆಯಾಗಿದ್ದಾಳೆ.

Tap to resize

Latest Videos

ಇವರು ಹುಟ್ಟಿದ್ದು 1996ರಲ್ಲಿ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ಎರಡು ವರ್ಷ ಇದ್ದಾಗ ವಿಜಯಪುದಲ್ಲಿರುವ ಸೋದರ ಮಾವ ಸಾತಲಿಂಗಪ್ಪ ಸಂಗೋಳಗಿ ಅವರು ಲಕ್ಷ್ಮಿ ಅವರನ್ನು ತಮ್ಮ ಜೊತೆ ವಿಜಯಪುರಕ್ಕೆ ಕರೆದುಕೊಂಡು ಹೋಗಿ ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಬೆಳೆಸಿ ಅವರಿಗೆ ಒಂದನೇ ತರಗತಿಯಿಂದ ಡಿ ಫಾರ್ಮಸಿ ಹಾಗೂ ಬೆಂಗಳೂರಿನಲ್ಲಿ ಪಿಎಸ್‌ಐ ಕೋಚಿಂಗ್‌ ಪಡೆದುಕೊಂಡು ಪಿಎಸ್‌ಐ ಆಗಿ ಆಯ್ಕೆಯಾಗುವವರೆಗೂ ವಿದ್ಯಾಭ್ಯಾಸಕ್ಕೆ ಬೇಕಾಗುವ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಿದ್ದಾರೆ.

24 ವರ್ಷದ ಲಕ್ಷ್ಮಿ ದೇಗಿನಾಳ ಒಂದನೇ ಹಾಗೂ ಎರಡನೇ ತರಗತಿ ವಿಜಯಪುರದ ಸತ್ಯ ಸಾಯಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, 3 ರಿಂದ 7ನೇ ತರಗತಿವರೆಗೆ ಆದರ್ಶ ವಿದ್ಯಾ ಮಂದಿರ ವಿಜಯಪುರ, 8 ರಿಂದ 10, ಪ್ರಥಮ ಹಾಗೂ ದ್ವಿತೀಯ ಪಿಯುಸಿ ಬಿಎಲ್‌ಡಿ ಕಾಲೇಜಿನಲ್ಲಿ, ಬ್ಯಾಚುಲರ್‌ ಆಫ್‌ ಫಾರ್ಮಸಿ ವಿಜಯಪುರದ ಬಿಎಲ್‌ಡಿ ಫಾರ್ಮಸಿ ಕಾಲೇಜಿನಲ್ಲಿ ಮುಗಿಸಿದ್ದಾರೆ. ಪೋಲಿಸ್‌ ಇಲಾಖೆಗೆ ಸೇರಿದರೆ ಸಮಾಜದಲ್ಲಿ ನಾಲ್ಕು ಜನರಿಗೆ ಸಹಾಯ ಮಾಡಬಹುದು ಎಂಬ ಉದ್ದೇಶದಿಂದ ಪಿಎಸ್‌ಐ ಪರೀಕ್ಷೆಗೆ ಸಿದ್ಧತೆ ನಡೆಸಿದರು.

ಕರ್ನಾಟಕ ಕೇಂದ್ರೀಯ ವಿವಿಯಿಂದ ಸಾಲು ಮರದ ತಿಮ್ಮಕ್ಕ ಸೇರಿ ಐವರಿಗೆ ಗೌರವ ಡಾಕ್ಟರೇಟ್

ಬೆಂಗಳೂರಿನಲ್ಲಿ ಕೋಚಿಂಗ್‌ ಪಡೆದುಕೊಂಡು ಮೊದಲ ಬಾರಿಗೆ ಪರೀಕ್ಷೆ ಬರೆದಾಗ ಯಶಸ್ಸು ಸಿಗಲಿಲ್ಲ. ಆದರೆ, ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ. ಸಾಧಿಸುವ ಛಲ ಬೇಕು ಎನ್ನುವಂತೆ ಸತತ ಪ್ರಯತ್ನ ಹಾಗೂ ಛಲ ಬಿಡದೆ ಎರಡನೇ ಬಾರಿ ಬರೆದು ಪರೀಕ್ಷೆಯಲ್ಲಿ ಪಾಸಾಗಿ 28ನೇ ರಾರ‍ಯಂಕ್‌ನಲ್ಲಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದಾರೆ.

ರೈತ ಕುಟುಂಬದಲ್ಲಿ ಜನಿಸಿದ ಲಕ್ಷ್ಮಿ ಗೆ ಒಬ್ಬ ತಂಗಿ (ಸಹೋದರಿ) ಇದ್ದಾಳೆ. ತಂಗಿಯ ವಿದ್ಯಾಭ್ಯಾಸದ ಜೊತೆಗೆ ಎಲ್ಲ ಜವಾಬ್ದಾರಿ, ಸೋದರ ಮಾವನ ಜೊತೆಗೆ ಲಕ್ಷ್ಮಿ ಅವರ ಮೇಲಿದೆ. ಭವಿಷ್ಯದಲ್ಲಿ ಕೆಎಎಸ್‌ ಪರೀಕ್ಷೆ ಬರೆದು ಸಹಾಯಕ ಆಯುಕ್ತ (ಎಸಿ) ಅಥವಾ ಡಿವೈಎಸ್ಪಿ ಆಗುವ ಕನಸು ಹೊಂದಿದ್ದಾರೆ.

ಸಾಧನೆ ಮಾಡಬೇಕೆಂಬ ಆಸೆ ಛಲ ಇತ್ತು, ಅದು ಈಡೇರಿದೆ. ಬಡವರಿಗೆ ಅದರಲ್ಲೂ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತೇನೆ. ಜನರಿಗೆ ಸಾರ್ವಜನಿಕರಿಗೆ ನನ್ನ ಇಲಾಖೆಯ ವ್ಯಾಪ್ತಿಯಲ್ಲಿ ಸಹಾಯ ಸಹಕಾರ ಮಾಡುತ್ತೇನೆ ಎಂದು ಲಕ್ಷ್ಮಿ ಶಿವಣ್ಣ ದೇಗಿನಾಳ ಅವರು ತಿಳಿಸಿದ್ದಾರೆ. 

ಇದನ್ನೂ ನೋಡಿ | ಓದಿದ್ದು ಕಂಪ್ಯೂಟರ್ ಇಂಜಿನಿಯರಿಂಗ್, ಆಗಿದ್ದು ಉದ್ಯಮಿ: ಎಲ್ಲರಿಗೂ ಮಾದರಿ ಈ ಯುವತಿ

"

click me!