ವಿಜಯಪುರ (ಜು.3): ಮುಂಗಾರು ಪೂರ್ವ ಮಳೆಯಿಂದ ಮೇ.21 ರಿಂದಲೇ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭಗೊಂಡಿದ್ದರೂ, ಜೂನ್ ಅಂತ್ಯಕ್ಕೆ ಜಲಾಶಯ ಅರ್ಧದಷ್ಟೂ ಭರ್ತಿಯಾಗಿಲ್ಲ.
ಅತ್ಯಂತ ಬೇಗನೆ ಒಳಹರಿವು ಆರಂಭಗೊಂಡರೂ ಜೂ.19 ರ ನಂತರ ಒಳಹರಿವು ಸಂಪೂರ್ಣ ಸ್ಥಗಿತವಾಗಿತ್ತು. ಕರ್ನಾಟಕ ವ್ಯಾಪ್ತಿಯ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿದ ಅಲ್ಪ ಮಳೆಯಿಂದಾಗಿ ಶುಕ್ರವಾರ ಜಲಾಶಯಕ್ಕೆ ಕೇವಲ 810 ಕ್ಯುಸೆಕ್ ನೀರು ಮಾತ್ರ ಹರಿದು ಬಂದಿದೆ. 123.081 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥದ ಜಲಾಶಯದಲ್ಲಿ ಶುಕ್ರವಾರ 48.209 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹಗೊಂಡಿದೆ. ಕಳೆದ ವರ್ಷ ಇದೇ ದಿನದಂದು 90.465 ಟಿಎಂಸಿ ಅಡಿ ನೀರು ಸಂಗ್ರಹವಿತ್ತು.
ಕೊಡಗು: ಹಾರಂಗಿ ಡ್ಯಾಂ ಭರ್ತಿ, 1200 ಕ್ಯೂಸೆಕ್ ನೀರು ನದಿಗೆ ಬಿಡುಗಡೆ
ಕೊಯ್ನಾ ಜಲಾಶಯದಲ್ಲಿ ಕೇವಲ ಶೇ. 13 ರಷ್ಟುನೀರು: ಕಳೆದ ವರ್ಷದ ಹೋಲಿಸಿದರೆ ಈ ವರ್ಷ ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಮಳೆಯ ಪ್ರಮಾಣ ಕಡಿಮೆ. ಈ ವರ್ಷದ ಜೂನ್ ತಿಂಗಳ ಅಲ್ಲಿಯ ಸರಾಸರಿ ಮಳೆಯ ಪ್ರಮಾಣ, ಕಳೆದ ವರ್ಷದ ಅರ್ಧದಷ್ಟೂಇಲ್ಲ ಎಂದು ಅಧಿಕಾರಿಯೊಬ್ಬರು ಅಂಕಿ ಅಂಶ ಸಮೇತ ಮಾಹಿತಿ ನೀಡಿದರು. ಕೊಯ್ನಾ ಸೇರಿದಂತೆ ಬಹುತೇಕ ಕೃಷ್ಣಾ ಕಣಿವೆಯ ಜಲಾಶಯಗಳು ಅವುಗಳ ಸಂಗ್ರಹ ಸಾಮರ್ಥದ ಶೇ.15 ರಷ್ಟೂಭರ್ತಿರ್ತಿಯಾಗಿಲ್ಲ ಎಂದು ತಿಳಿಸಿದರು.
ಸೋಮವಾರದಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮಳೆಯ ಪ್ರಮಾಣ ಕ್ರಮೇಣ ಏರಿಕೆಯಾದರೂ ಅದು ನಿರೀಕ್ಷೆಯಷ್ಟಿಲ್ಲ. ಕೊಯ್ನಾದಲ್ಲಿ 2.6 ಸೆಂ.ಮೀ, ನವಜಾ 4.9 ಸೆಂ.ಮೀ, ಮಹಾಬಳೇಶ್ವರದಲ್ಲಿ 4.4 ಸೆಂ.ಮೀ, ಧೋಮ 1.1 ಸೆಂ.ಮೀ, ರಾಧಾನಗರಿ 2 ಸೆಂ.ಮೀ, ಕಾಸರಿ 5.2 ಸೆಂ.ಮೀ, ಪಾಥಗಾಂವ 6.2 ಸೆಂ.ಮೀ ಮಳೆಯಾಗಿದೆ. ಇದೇ ರೀತಿ 10 ದಿನಗಳ ಕಾಲ ಮಳೆ ಮುಂದುವರೆದರೆ ಮಾತ್ರ ಆಲಮಟ್ಟಿಜಲಾಶಯದ ಒಳಹರಿವು ಹೆಚ್ಚಾಗುತ್ತದೆ.
ಕೊಯ್ನಾ ಜಲಾಶಯ ಅದರ ಸಂಗ್ರಹ ಸಾಮರ್ಥದ ಶೇ.13 ವಾರಣಾ ಶೇ.30, ಧೋಮ ಶೇ.31, ಉರ್ಮೋದಿ ಶೇ. 41, ತರಳಿ ಶೇ.35, ರಾಧಾನಗರಿ ಶೇ. 27, ದೂಧಗಂಗಾ ಶೇ.24 ರಷ್ಟುಮಾತ್ರ ಭರ್ತಿಯಾಗಿದೆ. ಇನ್ನೂ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದು ಸೇರುವ ರಾಜಾಪುರ ಬ್ಯಾರೇಜ್ ಬಳಿ ಕೃಷ್ಣೆಯ ಹರಿವು ಕೇವಲ 3,400 ಕ್ಯುಸೆಕ್ ಇದೆ. ಅಲ್ಲಿ ಈ ಪ್ರಮಾಣ 50 ಸಾವಿರ ಕ್ಯುಸೆಕ್ ದಾಟಿದರೆ ಆಲಮಟ್ಟಿಜಲಾಶಯಕ್ಕೆ ಹೆಚ್ಚಿನ ಒಳಹರಿವು ಬರುತ್ತದೆ.
ಹಳ್ಳಿ, ಪಟ್ಟಣಕ್ಕೆ ನೀರೊದಗಿಸಲು 2,500 ಕೋಟಿ: ಸಿಎಂ ಬೊಮ್ಮಾಯಿ
ಪ್ರವಾಹ ನಿಯಂತ್ರಣಕ್ಕಾಗಿ ಸಭೆ: ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯ ಮಧ್ಯೆಯೂ ಕರ್ನಾಟಕ ಹಾಗೂ ಮಹಾರಾಷ್ಟ್ರದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಸಭೆ ಸೋಮವಾರ (ಜೂ.27) ರಂದು ಮುಂಬೈನಲ್ಲಿ ಜರುಗಿದೆ. ಇದಕ್ಕೂ ಮೊದಲು ಬೆಳಗಾವಿ, ಬಾಗಲಕೋಟೆ, ಮಹಾರಾಷ್ಟ್ರದ ಸಾಂಗ್ಲಿ ಭಾಗದ ಜಿಲ್ಲಾಡಳಿತದ ಸಮನ್ವಯ ಸಭೆಯೂ ಜರುಗಿದೆ.
ಪ್ರವಾಹ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು, ಪರಸ್ಪರ ತಕ್ಷಣ ಮಾಹಿತಿ ಹಂಚುವಿಕೆ, ಪ್ರವಾಹ ಸಮಯದಲ್ಲಿ ಕೇಂದ್ರ ಜಲ ಆಯೋಗ ಸೂಚಿಸಿದ ಮಾನದಂಡ ಪ್ರಕಾರ ಜಲಾಶಯದ ಮಟ್ಟವನ್ನು ಕಾಪಾಡುವುದು ಸೇರಿ ನಾನಾ ವಿಷಯಗಳ ಬಗ್ಗೆ ಚರ್ಚೆಯಾಗಿದೆ. ಈಗಾಗಲೇ ರಚಿಸಿರುವ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದ ಕೃಷ್ಣಾ ಕಣಿವೆಯ ಅಧಿಕಾರಿಗಳ ವಾಟ್ಸ್ ಆಪ್ ಗ್ರುಪ್‌ನಲ್ಲಿ ನಿತ್ಯ ಜಲಾಶಯದ ಮಟ್ಟ, ಮಳೆ ಹಾಗೂ ನೀರಿನ ಹರಿವಿನ ನಿಖರ ಮಾಹಿತಿ ತಕ್ಷಣ ಹಂಚಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.