Bengaluru: ಪೌರಕಾರ್ಮಿಕರ ಪ್ರತಿಭಟನೆ: ಕಸಮಯವಾಗುತ್ತಿದೆ ಸಿಲಿಕಾನ್ ಸಿಟಿ

Published : Jul 03, 2022, 03:59 PM ISTUpdated : Jul 03, 2022, 04:59 PM IST
Bengaluru: ಪೌರಕಾರ್ಮಿಕರ ಪ್ರತಿಭಟನೆ: ಕಸಮಯವಾಗುತ್ತಿದೆ ಸಿಲಿಕಾನ್ ಸಿಟಿ

ಸಾರಾಂಶ

ತಮ್ಮ ಬೇಡಿಕೆ ಈಡೇರಿಸುವಂತೆ ನೇರ ವೇತನದಡಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರು ಕಳೆದ ಎರಡು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವುದರಿಂದ ನಗರದ ರಸ್ತೆ, ಆಟದ ಮೈದಾನ, ಬಸ್‌ ನಿಲ್ದಾಣ ಹಾಗೂ ಮಾರುಕಟ್ಟೆ ಪ್ರದೇಶದಲ್ಲಿ ಕಸ ತುಂಬಿಕೊಳ್ಳುತ್ತಿದೆ.

ಬೆಂಗಳೂರು (ಜು.03): ತಮ್ಮ ಬೇಡಿಕೆ ಈಡೇರಿಸುವಂತೆ ನೇರ ವೇತನದಡಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರು ಕಳೆದ ಎರಡು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವುದರಿಂದ ನಗರದ ರಸ್ತೆ, ಆಟದ ಮೈದಾನ, ಬಸ್‌ ನಿಲ್ದಾಣ ಹಾಗೂ ಮಾರುಕಟ್ಟೆ ಪ್ರದೇಶದಲ್ಲಿ ಕಸ ತುಂಬಿಕೊಳ್ಳುತ್ತಿದೆ. ಸ್ವಚ್ಛತಾ ಕಾರ್ಯ ನಡೆಸುವ ಬಿಬಿಎಂಪಿಯ ಬಹುತೇಕ ಪೌರಕಾರ್ಮಿಕರು ಶುಕ್ರವಾರ ಹಾಗೂ ಶನಿವಾರ ರಸ್ತೆ ಗುಡಿಸುವ ಕಾರ್ಯ ನಡೆಸಿಲ್ಲ. ಹೀಗಾಗಿ, ಎಲ್ಲೆಂದರಲ್ಲಿ ಕಸ ಕಂಡು ಬಂದಿದೆ. ಆದರೆ, ಮನೆ ಮನೆಯಿಂದ ಕಸ ಸಂಗ್ರಹಣೆ ಹಾಗೂ ಮಾರುಕಟ್ಟೆ, ವ್ಯಾಪಾರಿ ಸ್ಥಳದಲ್ಲಿ ಕಸ ವಿಲೇವಾರಿಯಲ್ಲಿ ಭಾರೀ ಪ್ರಮಾಣ ವ್ಯತ್ಯಯ ಕಂಡು ಬರಲಿಲ್ಲ.

ಮನೆ ಮನೆಯಿಂದ ಕಸ ಸಂಗ್ರಹಿಸುವ 5,205 ಆಟೋ ಟಿಪ್ಪರ್‌ಗಳ ಚಾಲಕರ ಪೈಕಿ 4,945 ಹಾಜರಾಗಿದ್ದಾರೆ. ಆಟೋಗಳಲ್ಲಿ 5,360 ಕಸ ಸಂಗ್ರಹಣೆ ಸಹಾಯಕ ಕಾರ್ಯ ಮಾಡುತ್ತಿದ್ದು, ಅವರಲ್ಲಿ 4,713 ಹಾಜರಾಗಿದ್ದಾರೆ. ಮತ್ತೊಂದೆಡೆ 644ರಲ್ಲಿ 630 ಕಸ ಸಾಗಣೆಯ ಲಾರಿ (ಕಾಂಪ್ಯಾಕ್ಟರ್‌) ಹಾಜರಾಗಿದ್ದು, ಕಸ ಸಂಗ್ರಹಣೆ ಮತ್ತು ವಿಲೇವಾರಿ ಪೂರ್ಣಗೊಂಡಿದೆ. ನಗರದಲ್ಲಿ 18 ಸಾವಿರ ಪೌರ ಕಾರ್ಮಿಕರಲ್ಲಿ ಶೇ.70 ಕಾರ್ಮಿಕರು ಪ್ರತಿಭಟನೆಯಲ್ಲಿ ತೊಡಗಿದ್ದು, ಕಾಯಂ ಸೇವೆಯ ಕಾರ್ಮಿಕರು ಸೇರಿ 3,615 ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಬ್ಸಿಡಿ ಸ್ಥಗಿತ: ಘಟಕದಲ್ಲೇ ಉಳಿದ 4 ಸಾವಿರ ಟನ್‌ ಗೊಬ್ಬರ

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್‌ ಕುಮಾರ್‌, ರಸ್ತೆ, ಮೈದಾನ, ಸಾರ್ವಜನಿಕ ಸ್ಥಳ ಸ್ವಚ್ಛಪಡಿಸುವ ನೇರ ವೇತನದ ಪೌರಕಾರ್ಮಿಕರು ಮಾತ್ರ ಗೈರಾಗಿರುವುದರಿಂದ ಕಸ ವಿಲೇವಾರಿಯಲ್ಲಿ ಮಾತ್ರ ವ್ಯತ್ಯಯ ಉಂಟಾಗಿದೆ. ಹಾಗಾಗಿ, ರಸ್ತೆ ಗುಡಿಸುವ ವಾಹನಗಳನ್ನು ಬಳಸಿಕೊಂಡು ಹೆಚ್ಚು ಕಸ ಇರುವ ರಸ್ತೆಗಳನ್ನು ಸ್ವಚ್ಛಗೊಳಿಸಲಾಗಿದೆ. ಯಥಾ ಪ್ರಕಾರ ಮನೆ ಮನೆ ಕಸ ಸಂಗ್ರಹಣೆ ವಿಲೇವಾರಿಯಾಗಿದೆ. ಪ್ರತಿಭಟನೆಯಿಂದ ಸಮಸ್ಯೆ ಉಂಟಾಗಿಲ್ಲ ಎಂದು ತಿಳಿಸಿದರು.

ಬಿಬಿಎಂಪಿ ಪೌರ ಕಾರ್ಮಿಕರ ಹಾಜರಾತಿ ವಿವರ
ಕಾರ್ಮಿಕರ ವಿಧ ಒಟ್ಟು ಹಾಜರಿ ಗೈರು
ಗುತ್ತಿಗೆ ಪೌರ ಕಾರ್ಮಿಕರು 17,425 3,615 13,028
ಮೇಲ್ವಿಚಾರಕರು 1,481 454 717
ಆಟೋ, ಟಿಪ್ಪರ್‌ ಚಾಲಕರು 5,205 4,945 250
ಆಟೋ, ಟಿಪ್ಪರ್‌ ಸಹಾಯಕರು 5,360 4,713 622
ಕಾಂಪ್ಯಾಕ್ಟರ್‌ಗಳು 644 630 14

ಲಿಖಿತ ಭರವಸೆಗೆ ಪೌರಕಾರ್ಮಿಕ ಬಿಗಿಪಟ್ಟು: ನೇರ ಪಾವತಿ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಮೂರು ತಿಂಗಳಲ್ಲಿ ಕಾಯಂ ಮಾಡುವುದು ಸೇರಿದಂತೆ ಮೂರು ಪ್ರಮುಖ ಅಂಶಗಳನ್ನು ಮುಖ್ಯಮಂತ್ರಿಯವರ ಜೊತೆ ನಡೆದ ಸಭೆಯ ನಡಾವಳಿಯಲ್ಲಿ ಸೇರಿಸುವ ತನಕ ಅನಿರ್ದಿಷ್ಟಾವಧಿ ಮುಷ್ಕರ ಕೈಬಿಡದಿರಲು ಪೌರ ಕಾರ್ಮಿಕರು ತೀರ್ಮಾನಿಸಿದ್ದಾರೆ.

ಕಸ ಬೇರ್ಪಡಿಸಿ ನೀಡುವವರಿಗೆ- ತೆರಿಗೆ ವಿನಾಯಿತಿ ನೀಡಿ: ನಟ ಅನಿರುದ್ಧ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ವಿವಿಧ ಇಲಾಖೆಗಳ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ಪೌರ ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ನಡೆಸಿದ್ದ ಸಭೆಯಲ್ಲಿ ಮೂರು ತಿಂಗಳಲ್ಲಿ ನೇರ ಪಾವತಿ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಕಾಯಂ ಮಾಡುತ್ತೇವೆ ಹಾಗೂ ಕಸ ಸಂಗ್ರಹಿಸುವ ವಾಹನಗಳ ಚಾಲಕರು ಮತ್ತು ಲೋಡರ್‌ಗಳನ್ನು ನೇರ ಪಾವತಿ ವ್ಯವಸ್ಥೆಯಡಿ ತರುತ್ತೇವೆ. ಜೊತೆಗೆ ಪೌರ ಕಾರ್ಮಿಕರ ಕಲ್ಯಾಣಕ್ಕೆ ಸಮಗ್ರ ನೀತಿ ತರುವುದಾಗಿ ಭರವಸೆ ನೀಡಿದ್ದರು. ಆದರೆ, ನಂತರ ಬಿಡುಗಡೆ ಮಾಡಲಾದ ಸಭೆಯ ನಡಾವಳಿಯಲ್ಲಿ ಈ ಮೂರು ಅಂಶಗಳ ಪ್ರಸ್ತಾಪವನ್ನೇ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ