5 ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟು ಎಚ್ಚರಿಕೆ ಸಂದೇಶ ರವಾನೆ

By Kannadaprabha News  |  First Published Jan 13, 2020, 10:19 AM IST

ರೆಡ್ಡಿ ಸಮುದಾಯಕ್ಕೆ ಐದು ಸಚಿವ ಸ್ಥಾನಗಳನ್ನು ನೀಡಬೇಕು. ಇಲ್ಲವಾದಲ್ಲಿ ಹೋರಾಟ ನಡೆಯುವುದು ಖಚಿತ ಎಂದು ಬಿ ಎಸ್ ವೈ ಮುಂದೆ ಬೇಡಿಕೆ ಇಡಲಾಗಿದೆ. 


ತುಮಕೂರು[ಜ.13]:  ಬಿಜೆಪಿ ಸರಕಾರದಲ್ಲಿ ರೆಡ್ಡಿ ಸಮುದಾಯಕ್ಕೆ ಸಚಿವ ಸ್ಥಾನ ನೀಡುವಂತೆ ಜಿಲ್ಲಾ ರೆಡ್ಡಿ ಸಂಘದ ಅಧ್ಯಕ್ಷ ಆರ್‌.ಶ್ರೀನಿವಾಸರೆಡ್ಡಿ ಆಗ್ರಹಿಸಿದ್ದಾರೆ.

ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 80 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ರೆಡ್ಡಿ ಜನಾಂಗಕ್ಕೆ ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಕನಿಷ್ಠ 5 ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದ ಪಕ್ಷದಲ್ಲಿ ಜನಾಂಗದ ಹಿರಿಯರ ನೇತೃತ್ವದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Tap to resize

Latest Videos

ಸವದಿ, ಶಂಕರ್‌ಗೆ ಎಂಎಲ್‌ಸಿ ಆತಂಕ! ಒಂದೇ ಸ್ಥಾನಕ್ಕೆ ಇಬ್ಬರ ಕಣ್ಣು...

ಕಾಯಕ ನಿಷ್ಠೆಯಿಂದ ದುಡಿದು ಜೀವನ ಸಾಗಿಸುತ್ತಿರುವ ಶ್ರಮಜೀವಿ ಜನಾಂಗವಾದ ರೆಡ್ಡಿ ಜನರನ್ನು ಯಡಿಯೂರಪ್ಪ ಸರಕಾರ ನಿರ್ಲಕ್ಷಿಸಿದ್ದು, ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ 8 ಜನರಿಗೆ, ಎಚ್‌.ಡಿ.ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ 2 ಜನರಿಗೆ ಸಚಿವ ಸ್ಥಾನ ನೀಡಲಾಗಿತ್ತು. 2008ರ ಯಡಿಯೂರಪ್ಪ ಸಚಿವ ಸಂಪುಟದಲ್ಲಿಯೂ ಕರುಣಾಕರರೆಡ್ಡಿ ಸೇರಿದಂತೆ ಹಲವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ, 2018ರ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 18ಕ್ಕೂ ಹೆಚ್ಚು ಶಾಸಕರಿದ್ದಾರೆ. ಬಿಜೆಪಿ ಪಕ್ಷದಲ್ಲಿಯೇ ಹಿರಿಯರಾದ ಕರುಣಾಕರ ರೆಡ್ಡಿ, ಸೋಮಶೇಖರ್‌ ರೆಡ್ಡಿ, ಸುಧಾಕರ ರೆಡ್ಡಿ ಸೇರಿದಂತೆ 10ಕ್ಕೂ ಹೆಚ್ಚು ಶಾಸಕರಿದ್ದಾರೆ. ಆದರೆ, ಒಬ್ಬರಿಗೂ ಸಚಿವ ಸ್ಥಾನ ನೀಡಿಲ್ಲ. ಅಲ್ಲದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಲ್ಲಿಯೂ ನಮ್ಮ ಸಮುದಾಯದ ಸಂಸದರನ್ನು ಸಚಿವರನ್ನಾಗಿ ಮಾಡಿಲ್ಲ. ಅತಿ ದೊಡ್ಡ ಸಂಖ್ಯೆಯಲ್ಲಿರುವ ರೆಡ್ಡಿ ಸಮುದಾಯವನ್ನು ಬಿಜೆಪಿ ಸರಕಾರ ಕಡೆಗಣಿಸುತ್ತಿದೆ. ಮುಂದಿನ ಸಂಪುಟ ವಿಸ್ತರಣೆ ವೇಳೆ ಸೂಕ್ತ ಸ್ಥಾನಮಾನ ದೊರೆಯದಿದ್ದರೆ, ಹೋರಾಟ ಅನಿವಾರ್ಯ ಎಂದು ತಿಳಿಸಿದರು.

ಸಂಪುಟ ವಿಸ್ತರಣೆಗೆ ಹೊಸ ಸಮಸ್ಯೆ : ಸಿಎಂಗೆ ವರಿಷ್ಠರ ತಾಕೀತು?...

ಸಚಿವರನ್ನಾಗಿ ಮಾಡಿದರೆ ಸಮುದಾಯ ಅಭಿವೃದ್ಧಿ:

ಒಂದು ಸಮುದಾಯದ ಜನಪ್ರತಿನಿಧಿಗಳು ಸಚಿವರಾಗುವುದರಿಂದ ಆ ಸಮುದಾಯ ಅರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಬೆಳೆಯಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಅಲ್ಲದೆ ಸಮುದಾಯದ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡಬಹುದಾಗಿದೆ.ಹಾಗಾಗಿ ಸಚಿವ ಸ್ಥಾನದ ಬೇಡಿಕೆಯನ್ನು ಸರಕಾರದ ಮುಂದಿಡುತ್ತಿದ್ದೇವೆ. ಬಿಜೆಪಿ ಮುಖಂಡರು ಹಾಗೂ ಮುಖ್ಯಮಂತ್ರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಈ ಹಿಂದಿನ ಯಾವುದೇ ಸರಕಾರಗಳು ರೆಡ್ಡಿ ಜನರನ್ನು ನಿರ್ಲಕ್ಷಿಸಿರಲಿಲ್ಲ. ಇದೇ ಮನಸ್ಥಿತಿಯನ್ನು ಬಿಜೆಪಿ ಮುಂದುವರಿಸಿದರೆ ಮುಂದಿನ ಚುನಾವಣೆಯಲ್ಲಿ ಜನಾಂಗದ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

21ಕ್ಕೆ ವೇಮನ ಜಯಂತಿ:

ಜ.21ರಂದು ರೆಡ್ಡಿ ಜನಸಂಘದ ವತಿಯಿಂದ ನಮ್ಮ ಸಮುದಾಯದ ಶರಣರಾದ ಶ್ರೀವೇಮನ ಅವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ ಎಂದರು. ಇದೇ ವೇಳೆ ರೆಡ್ಡಿ ಕ್ರೆಡಿಟ್‌ ಕೋ ಅಪರೇಟಿವ್‌ ಸೊಸೈಟಿಯ 2020ನೇ ವರ್ಷದ ಕ್ಯಾಲೆಂಡರ್‌ನ್ನು ಬಿಡುಗಡೆ ಮಾಡಲಾಯಿತು.

click me!