ಸಂಕ್ರಾಂತಿ ಹಬ್ಬಕ್ಕೆ ಉತ್ಸವ ಗಾರ್ಡನ್ ಸಜ್ಜು| ಪೊಲೀಸ್ ಬಂದೋಬಸ್ತ್|ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ|ಗಾರ್ಡನ್‌ನ ಕ್ಯಾಂಟೀನ್‌ನಲ್ಲಿ ಉತ್ತರ ಕರ್ನಾಟಕ ಶೈಲಿಯ ಊಟದ ರುಚಿ ಸವಿಯಲು ಪ್ರತ್ಯೇಕ ಪೆಂಡಾಲ್ ವ್ಯವಸ್ಥೆ|
ಶಿಗ್ಗಾಂವಿ(ಜ.13): ಜ. 15ರಂದು ಮಕರ ಸಂಕ್ರಾಂತಿ. ಇದು ಗ್ರಾಮೀಣ ಸಂಪ್ರದಾಯದ ಹಬ್ಬ. ಹೊಸ ವರ್ಷಾಚರಣೆಯ ಮೊದಲ ಹಬ್ಬ ಎಂಬ ವಾಡಿಕೆಯು ಇದೆ. ದಕ್ಷಿಣಾಯನ ಕಳೆದು ಉತ್ತರಾಯಣ ಪ್ರಾರಂಭವಾಗುವ ಪುಣ್ಯ ದಿನ.
ಈ ಹಬ್ಬವನ್ನು ಮನೆ ಮಂದಿ, ಸಂಬಂಧಿಗಳು, ಹಿತೈಷಿಗಳು, ನೆರೆ ಹೊರೆಯವರು, ಬಡವರು, ಶ್ರೀಮಂತರು ಒಗ್ಗೂಡಿ ಆಚರಿಸುವ ಮೂಲಕ ಮಾನವ ಸಂಬಂಧಗಳು ಎಷ್ಟು ಶ್ರೇಷ್ಠ ಹಾಗೂ ಅಗತ್ಯ ಎಂಬುದನ್ನು ಸಾರುತ್ತಾರೆ.
ಜನರು ಸಂಕ್ರಾಂತಿಯಂದು ನದಿಗಳಲ್ಲಿ, ಪುಷ್ಕರಣಿಗಳಲ್ಲಿ ಮಿಂದು ಹೊಸ ಬಟ್ಟೆಗಳನ್ನು ಧರಿಸಿ ಹಳೆಯದನ್ನು ಮರೆತು ಪರಸ್ಪರ ಎಳ್ಳು ಬೆಲ್ಲ ತೆಗೆದುಕೊಂಡು ಒಳ್ಳೊಳ್ಳೆ ಮಾತಾಡೋಣ ಎಂಬ ಸಂಕಲ್ಪದೊಂದಿಗೆ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ವರ್ಷದ ಮೊದಲ ಹಬ್ಬವನ್ನು ತುಂಬು ಹೃದಯದಿಂದ ಸ್ವಾಗತಿಸುತ್ತಾರೆ.
ಪ್ರವಾಸಿಗರಿಗೆ ಉತ್ಸವ ಸ್ವಾಗತ
ರಾಜ್ಯ ಹಾಗೂ ಹಾವೇರಿ ಜಿಲ್ಲೆಯ ಹೆಮ್ಮೆಯ ಪ್ರವಾಸಿ ತಾಣ ಉತ್ಸವ ರಾಕ್ ಗಾರ್ಡನ್ ಸಂಕ್ರಾಂತಿ ಹಬ್ಬ ಆಚರಣೆಗೆ ಬರುವ ಪ್ರವಾಸಿಗರ ಸ್ವಾಗತಕ್ಕೆ ಸಜ್ಜಾಗಿದೆ.ಎಲ್ಲರೂ ಸರದಿಯಲ್ಲಿ ಬಂದು ಶಾಂತ ರೀತಿಯಿಂದ ಗಾರ್ಡನ್‌ನಲ್ಲಿ ಹಬ್ಬದೂಟ ಸವಿಯಲು ಪ್ರವೇಶದ್ವಾರದ ಎದುರು ತಂತಿ ಬೇಲಿ ಜತೆಗೆ ಮರದ ಕಂಬಗಳನ್ನು ಅಡ್ಡಲಾಗಿ ಅಳವಡಿಸಲಾಗಿದೆ.
ಮನೆಯಿಂದ ತಂದ ರುಚಿಯಾದ ಹಬ್ಬದ ಊಟ ಸವಿಯಲು ವಿಶಾಲವಾದ ಸ್ಥಳಗಳನ್ನು ಸ್ವಚ್ಛಗೊಳಿಸಲಾಗಿದೆ. ಜತೆಗೆ ಗಾರ್ಡನ್‌ನ ಕ್ಯಾಂಟೀನ್‌ನಲ್ಲಿ ಉತ್ತರ ಕರ್ನಾಟಕ ಶೈಲಿಯ ಊಟದ ರುಚಿ ಸವಿಯಲು ಪ್ರತ್ಯೇಕ ಪೆಂಡಾಲ್ ಹಾಕಲಾಗಿದೆ.
ಪ್ರತಿ 200 ಮೀಟರ್ ಅಂತರದಲ್ಲಿ ಕುಡಿವ ನೀರಿನ ಸೌಲಭ್ಯ ವ್ಯವಸ್ಥೆಯೊಂದಿಗೆ ಮಹಿಳೆಯರು, ಪುರುಷರಿಗಾಗಿ ಈಗಿರುವ ಕಾಯಂ ಶೌಚಾಲಯಗಳೊಂದಿಗೆ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗಾರ್ಡನ್ ವೀಕ್ಷಿಸಲು ಬಂದವರಿಗೆ ಆಕಸ್ಮಿಕ ಆರೋಗ್ಯದಲ್ಲಿ ಏರು ಪೇರು ಆದಾಗ ಚಿಕಿತ್ಸೆ ನೀಡಲು ಜಿಲ್ಲಾ ಆರೋಗ್ಯ ಇಲಾಖೆಯ ವೈದ್ಯರು ಮತ್ತು ಅವರ ತಂಡ ಸೇವೆ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.ಹಾವೇರಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಸಹಕಾರದೊಂದಿಗೆ ಹಬ್ಬದ ಎರಡು ದಿನ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ಜೊತೆಗೆ ವಾಹನಗಳ ನಿಲುಗಡೆಗೆ ಅಗತ್ಯ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.