
ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ಬಂಡೂರು ತಳಿ ಕುರಿಯೊಂದು ದಾಖಲೆ ಬೆಲೆಗೆ ಮಾರಾಟವಾಗಿದ್ದು, ರೈತರ ವಲಯದಲ್ಲಿ ಹಾಗೂ ಪಶುಸಂಗೋಪನಾ ಕ್ಷೇತ್ರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೇವಲ 11 ತಿಂಗಳ ಟಗರುವಾಗಿದ್ದ ಬಂಡೂರು ಕುರಿ, ರೂಪಾಯಿ 1 ಲಕ್ಷ 35 ಸಾವಿರ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಈ ಅಪರೂಪದ ಬಂಡೂರು ಟಗರು ಕಿರುಗಾವಲು ಗ್ರಾಮದ ರೈತ ಉಲ್ಲಾಸ್ ಗೌಡರಿಗೆ ಸೇರಿದ್ದಾಗಿದ್ದು, ಉತ್ತಮ ಪೋಷಣೆ, ತಳಿ ಶುದ್ಧತೆ ಹಾಗೂ ದೇಹದ ತೂಕದ ಕಾರಣದಿಂದ ಈ ಟಗರು ವಿಶೇಷ ಗಮನ ಸೆಳೆದಿತ್ತು. ಹೀಗಾಗಿ ಮಾರುಕಟ್ಟೆಯಲ್ಲಿ ಈ ಕುರಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿತ್ತು.
ಈ ಬಂಡೂರು ಟಗರುವನ್ನು ಬೆಂಗಳೂರು ಮೂಲದ ಇಂಜಿನಿಯರ್ ಹರೀಶ್ ಅವರು ದಾಖಲೆ ಹಣ ನೀಡಿ ಖರೀದಿಸಿದ್ದಾರೆ. ಬಂಡೂರು ತಳಿ ಕುರಿಗಳ ಅಭಿವೃದ್ದಿ ಹಾಗೂ ಸಂರಕ್ಷಣೆಯ ಉದ್ದೇಶದಿಂದಲೇ ಈ ಟಗರು ಖರೀದಿಸಲಾಗಿದೆ ಎಂದು ಹರೀಶ್ ತಿಳಿಸಿದ್ದಾರೆ. ಬಂಡೂರು ತಳಿ ಕುರಿಗಳು ಅಪರೂಪವಾಗುತ್ತಿದ್ದು, ಅವುಗಳ ಅಭಿವೃದ್ಧಿಗೆ ಈ ರೀತಿಯ ಪ್ರಯತ್ನಗಳು ಅಗತ್ಯವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಟಗರು ಖರೀದಿ ಬಳಿಕ ಹರೀಶ್ ಅವರು ಸ್ವತಃ ಕುರಿ ಸಾಗಾಣಿಕೆಯನ್ನು ನಡೆಸಿಕೊಂಡು ಹೋಗುತ್ತಿರುವ ದೃಶ್ಯಗಳು ಸ್ಥಳೀಯರಲ್ಲಿ ವಿಶೇಷ ಗಮನ ಸೆಳೆದವು. ತಳಿ ಅಭಿವೃದ್ಧಿಗಾಗಿ ಇಂತಹ ದೊಡ್ಡ ಮೊತ್ತ ಹೂಡುವುದು ಅಪರೂಪದ ಸಂಗತಿಯಾಗಿದ್ದು, ರೈತರಿಗೆ ಪ್ರೇರಣೆಯಾಗಿ ಪರಿಣಮಿಸಿದೆ. ಇನ್ನೊಂದೆಡೆ, ದಾಖಲೆ ಬೆಲೆಗೆ ಟಗರು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ರೈತ ಉಲ್ಲಾಸ್ ಗೌಡರಿಗೆ ಸ್ಥಳೀಯರಿಂದ ಸನ್ಮಾನ ಕೂಡ ನಡೆಯಿತು. ಟಗರುವನ್ನು ಅಧಿಕೃತವಾಗಿ ಹಸ್ತಾಂತರಿಸಿ, ಬಿಳ್ಕೊಡಿಗೆ ನೀಡುವ ಮೂಲಕ ಉಲ್ಲಾಸ್ ಗೌಡರು ಸಂತಸ ವ್ಯಕ್ತಪಡಿಸಿದರು.
ಈ ಘಟನೆ ಮಂಡ್ಯ ಜಿಲ್ಲೆಯಲ್ಲಿ ಪಶುಸಂಗೋಪನೆ ಮತ್ತು ಕುರಿ ಸಾಕಾಣಿಕೆಯ ಮಹತ್ವವನ್ನು ಮತ್ತೊಮ್ಮೆ ಸಾರಿದ್ದು, ರೈತರಿಗೆ ಉತ್ತಮ ಆದಾಯ ಸಾಧ್ಯತೆ ಇದೆ ಎಂಬುದನ್ನು ಸಾಬೀತುಪಡಿಸಿದೆ. ಬಂಡೂರು ತಳಿ ಕುರಿಗಳ ಸಂರಕ್ಷಣೆ ಹಾಗೂ ವಾಣಿಜ್ಯ ಮೌಲ್ಯ ಹೆಚ್ಚುತ್ತಿರುವುದು ಗ್ರಾಮೀಣ ಆರ್ಥಿಕತೆಗೆ ಹೊಸ ದಿಕ್ಕು ನೀಡುತ್ತಿದೆ.
ಇದು ಮಂಡ್ಯ ಜಿಲ್ಲೆಯ ಬಂಡೂರು ಗ್ರಾಮದಿಂದ ಬಂದ ಪ್ರಸಿದ್ಧ ಕುರಿ ತಳಿಯಾಗಿದ್ದು, ಇದು ಮಾಂಸ ಮತ್ತು ತುಪ್ಪಕ್ಕೆ ಹೆಸರುವಾಸಿಯಾಗಿದೆ, ಮಾಂಸದಲ್ಲಿ ಕೊಬ್ಬಿನ ತೆಳುವಾದ ಎಳೆಗಳು ಇರುತ್ತವೆ. ಈ ತಳಿಯನ್ನು ಸಂರಕ್ಷಿಸಲು ಮತ್ತು ಸಂತಾನೋತ್ಪತ್ತಿ ಮಾಡಲು ಕೃತಕ ಗರ್ಭಧಾರಣೆ ತಂತ್ರಗಳನ್ನು ಅಳವಡಿಸಲಾಗುತ್ತಿದೆ.