ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿದ 8 ಬಡಾವಣೆಗಳನ್ನು ಜಿಬಿಎಗೆ ಒಪ್ಪಿಸುವಂತೆ ಆದೇಶ

Published : Jan 17, 2026, 11:01 AM IST
Real Estate

ಸಾರಾಂಶ

ನಗರಾಭಿವೃದ್ಧಿ ಇಲಾಖೆಯು ಬನಶಂಕರಿ 6ನೇ ಹಂತ ಮತ್ತು ಅಂಜನಾಪುರ ಸೇರಿದಂತೆ ಎಂಟು ಪ್ರಮುಖ ಬಿಡಿಎ ಬಡಾವಣೆಗಳನ್ನು ಸಂಬಂಧಿತ ನಗರ ಪಾಲಿಕೆಗಳಿಗೆ ಹಸ್ತಾಂತರಿಸಲು ಅಧಿಕೃತ ಆದೇಶ ಹೊರಡಿಸಿದೆ.  

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ಅಭಿವೃದ್ಧಿಪಡಿಸಲಾದ ಬನಶಂಕರಿ 6ನೇ ಹಂತದ ವಿವಿಧ ಬ್ಲಾಕ್‌ಗಳು ಹಾಗೂ ಅಂಜನಾಪುರ ಟೌನ್‌ಶಿಪ್‌ ಸೇರಿ ಒಟ್ಟು ಎಂಟು ಬಡಾವಣೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿರುವ ಸಂಬಂಧಿತ ನಗರ ಪಾಲಿಕೆಗಳಿಗೆ ಹಸ್ತಾಂತರಿಸಲು ನಗರಾಭಿವೃದ್ಧಿ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.

ಈ ಆದೇಶದಂತೆ, ಬನಶಂಕರಿ 6ನೇ ಹಂತದ 1ರಿಂದ 11ನೇ ಬ್ಲಾಕ್‌ಗಳು, ಬನಶಂಕರಿ 6ನೇ ಹಂತದ ಮುಂದುವರಿದ ಬಡಾವಣೆಗಳಾದ 4ನೇ ಎಚ್‌, ಬಿ ಮತ್ತು ಟಿ ಬ್ಲಾಕ್‌ಗಳು, ಜಯಪ್ರಕಾಶ್ ನಾರಾಯಣ ನಗರ (ಜೆ.ಪಿ.ನಗರ) 8ನೇ ಹಾಗೂ 9ನೇ ಹಂತಗಳು, ಅಂಜನಾಪುರ ಟೌನ್‌ಶಿಪ್‌ ಬಡಾವಣೆ, ಅಂಜನಾಪುರ ಮುಂದುವರೆದ ಬಡಾವಣೆ, ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯ 1ರಿಂದ 6ನೇ ಬ್ಲಾಕ್‌ಗಳು ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಮುಂದುವರಿದ ಬಡಾವಣೆಯ 7ರಿಂದ 9ನೇ ಬ್ಲಾಕ್‌ಗಳನ್ನು ನಗರ ಪಾಲಿಕೆಗಳಿಗೆ ಹಸ್ತಾಂತರಿಸುವಂತೆ ಸೂಚಿಸಲಾಗಿದೆ.

ಹಸ್ತಾಂತರ ಪ್ರಕ್ರಿಯೆಗೂ ಮೊದಲು ಸ್ಥಳ ಪರಿಶೀಲನೆ

ಈ ಎಂಟು ಬಡಾವಣೆಗಳನ್ನು ಪ್ರಸ್ತುತ ಯಾವ ಸ್ಥಿತಿಯಲ್ಲಿ ಇವೆಯೋ ಅದೇ ಸ್ಥಿತಿಯಲ್ಲಿ ಮುಂದಿನ ನಿರ್ವಹಣೆಯ ಉದ್ದೇಶದಿಂದ ಆಯಾ ನಗರ ಪಾಲಿಕೆಗಳಿಗೆ ಹಸ್ತಾಂತರಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಹಸ್ತಾಂತರ ಪ್ರಕ್ರಿಯೆಗೂ ಮೊದಲು ಬಿಡಿಎ, ಬೆಂಗಳೂರು ಜಲಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಹಾಗೂ ಸಂಬಂಧಿತ ನಗರ ಪಾಲಿಕೆಗಳ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ಅದರ ಬಗ್ಗೆ ದೃಢೀಕರಣ ಸಹಿ ಮಾಡಬೇಕೆಂದು ಸೂಚಿಸಲಾಗಿದೆ.

ಬಾಕಿ ಉಳಿದಿರುವ ಎಲ್ಲಾ ತೆರಿಗೆಗಳನ್ನು ವಸೂಲಿ ಮಾಡಲು ಪಾಲಿಕೆಗಳಿಗೆ ಪೂರ್ಣಾಧಿಕಾರ

ಹಸ್ತಾಂತರಗೊಳ್ಳುವ ಬಡಾವಣೆಗಳಲ್ಲಿ ಬಾಕಿ ಉಳಿದಿರುವ ಆಸ್ತಿ ತೆರಿಗೆ ಮತ್ತು ಇತರೆ ತೆರಿಗೆಗಳನ್ನು ವಸೂಲಿ ಮಾಡಲು ಸಂಬಂಧಿತ ನಗರ ಪಾಲಿಕೆಗಳಿಗೆ ಪೂರ್ಣಾಧಿಕಾರ ನೀಡಲಾಗಿದೆ. ಹಸ್ತಾಂತರ ಸಮಯದಲ್ಲಿ ರಸ್ತೆ, ಉದ್ಯಾನ, ಬಯಲು ಜಾಗ ಸೇರಿದಂತೆ ಮೂಲಸೌಕರ್ಯಗಳು ಪೂರ್ಣವಾಗಿ ಅಭಿವೃದ್ಧಿಯಾಗಿರದಿದ್ದಲ್ಲಿ, ಆ ಅಭಿವೃದ್ಧಿಗೆ ಬೇಕಾಗುವ ವೆಚ್ಚದ ಶೇ.50ರಷ್ಟು ಮೊತ್ತವನ್ನು ಬಿಡಿಎ ನಗರ ಪಾಲಿಕೆಗಳಿಗೆ ಸಂದಾಯ ಮಾಡಬೇಕೆಂದು ಆದೇಶಿಸಿದೆ. ಇದೇ ನಿಯಮವನ್ನು ಬೆಂಗಳೂರು ಜಲಮಂಡಳಿಗೂ ಅನ್ವಯಿಸಲಾಗಿದೆ.

ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಜಮಾ ಮಾಡಿರುವ ಹಣವನ್ನು ಇತರೆ ಯಾವುದೇ ಉದ್ದೇಶಗಳಿಗೆ ಬಳಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬಿಡಿಎ ನೀಡುವ ಶೇ.50ರಷ್ಟು ಮೊತ್ತದ ಜೊತೆಗೆ ಸಂಬಂಧಪಟ್ಟ ನಗರ ಪಾಲಿಕೆಗಳು ಹಾಗೂ ಜಲಮಂಡಳಿ ಉಳಿದ ಶೇ.50ರಷ್ಟು ಮೊತ್ತವನ್ನು ತಮ್ಮ ಅನುದಾನದಿಂದ ಒದಗಿಸಿ, ಇಎಸ್‌ಸಿಆರ್‌ಒಡಬ್ಲ್ಯೂ (ESCROW) ಖಾತೆ ಮೂಲಕ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದೆ.

ಹಸ್ತಾಂತರಗೊಂಡ ಬಡಾವಣೆಗಳಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ನಗರ ಪಾಲಿಕೆಗಳು ನಿರ್ವಹಿಸಬೇಕು. ಉದ್ಯಾನಗಳು, ಬಯಲು ಜಾಗಗಳು ಹಾಗೂ ಆಟದ ಮೈದಾನಗಳನ್ನು ರಾಜ್ಯಪತ್ರದಲ್ಲಿ ಪ್ರಕಟಿಸುವಂತೆ ಸೂಚಿಸಲಾಗಿದೆ. ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ನಂತರ, ನಿವೇಶನಗಳು ಹಾಗೂ ಮನೆಗಳಿಗೆ ಖಾತಾ ವಿತರಣೆ ಮತ್ತು ತೆರಿಗೆ ಸಂಗ್ರಹಣೆ ಸಂಬಂಧಿತ ನಗರ ಪಾಲಿಕೆಗಳ ಜವಾಬ್ದಾರಿಯಾಗಿರಲಿದೆ.

ಆದಾಗ್ಯೂ, ನಿಯಮಾನುಸಾರ ಸಿಎ (ಸಿವಿಕ್ ಅಮೆನಿಟಿ) ನಿವೇಶನಗಳ ಮಾಲೀಕತ್ವ ಕುರಿತು ಬಿಡಿಎಗೆ ಸಂಬಂಧಿಸಿದ ಯಾವುದೇ ವಿವಾದಗಳಿದ್ದಲ್ಲಿ, ಅಂತಹ ಪ್ರದೇಶಗಳನ್ನು ಹಸ್ತಾಂತರ ಪ್ರಕ್ರಿಯೆಯಿಂದ ಹೊರಗಿಡಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

PREV
Read more Articles on
click me!

Recommended Stories

Gadag: ಬೆಂಕಿಗಾಹುತಿಯಾದ ದೇವರ ಮೂರ್ತಿಗಳು: ದೇವಸ್ಥಾನದಿಂದ ನಿಗೂಢ ಗೆಜ್ಜೆನಾದ! ಗ್ರಾಮದಲ್ಲಿ ಆತಂಕ
ಶಿರೂರು ಪರ್ಯಾಯೋತ್ಸವ : ಗರಿಗೆದರಿದ ಉಡುಪಿ