ಮುರ್ಡೇಶ್ವರದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಏರ್ಪಡಿಸಿದ್ದ ಶಿವರಾತ್ರಿ ಜಾಗರಣೆ ಉತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು.
ಭಟ್ಕಳ (ಮಾ.10): ಮುರ್ಡೇಶ್ವರದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಏರ್ಪಡಿಸಿದ್ದ ಶಿವರಾತ್ರಿ ಜಾಗರಣೆ ಉತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು. ಆನಂತರ ಮಾತನಾಡಿದ ಅವರು, ಮುರ್ಡೇಶ್ವರದಂತಹ ಪುಣ್ಯ ಕ್ಷೇತ್ರ ಸಿಕ್ಕಿರುವುದು ನಮ್ಮ ಭಾಗ್ಯ. ಮುರ್ಡೇಶ್ವರ ಇಂದು ಈ ಮಟ್ಟದಲ್ಲಿ ಬೆಳವಣಿಗೆ ಕಾಣಲು ಆರ್.ಎನ್. ಶೆಟ್ಟಿಯವರೇ ಕಾರಣ. ಶೆಟ್ಟರು ಬಹಳಷ್ಟು ಪುಣ್ಯದ ಕೆಲಸ ಮಾಡಿದ್ದಾರೆ. ಅವರನ್ನು ಈ ಪುಣ್ಯದ ದಿನ ನೆನೆಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಮುರ್ಡೇಶ್ವರ ಅಭಿವೃದ್ಧಿಯಿಂದ ಎಲ್ಲರಿಗೂ ಒಳ್ಳೆಯದಾಗಿದೆ. ಇಲ್ಲಿ ಮತ್ತಷ್ಟು ಅಭಿವೃದ್ಧಿಗೆ, ಇಲ್ಲಿನ ಮೂಲಭೂತ ವ್ಯವಸ್ಥೆಗೆ ಏನೋ ಮಾಡಬೇಕೋ ಅದನ್ನು ಮಾಡಲು ನಾನು ಸಿದ್ಧನಿದ್ದೇನೆ ಎಂದ ಅವರು, ನಮ್ಮೂರಿನಲ್ಲಿ ವರ್ಷಂಪ್ರತಿ ಇಂತಹ ಕಾರ್ಯಕ್ರಮ ನಡೆಯಬೇಕು ಎನ್ನುವುದು ನನ್ನ ಆಶಯವಾಗಿದ್ದು, ಇನ್ನುಮುಂದೆ ಇದು ನಿರಂತರ ನಡೆಯುವ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಾತನಾಡಿ, ಮುರ್ಡೇಶ್ವರದಲ್ಲಿ ಪ್ರವಾಸೋದ್ಯಮ ಹೆಚ್ಚು ಬೆಳೆಯಬೇಕು. ಇಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ವ್ಯವಸ್ಥೆ ಆಗಬೇಕು. ಹೆಚ್ಚಿನ ಪ್ರವಾಸಿಗರು ಆಗಮಿಸಬೇಕು. ಇಂತಹ ಕಾರ್ಯಕ್ರಮ ಮುಂದುವರಿಸಿಕೊಂಡು ಹೋಗಬೇಕು ಎಂದರು.
undefined
ಮುರ್ಡೇಶ್ವರ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಸ್.ಎಸ್. ಕಾಮತ್ ಮಾತನಾಡಿ, ಇಲ್ಲಿ ಅನೇಕ ಸಮಸ್ಯೆಗಳಿದ್ದು, ಸಚಿವರು ಬಗೆಹರಿಸುತ್ತಾರೆಂಬ ವಿಶ್ವಾಸವಿದೆ ಎಂದರು. ದೇವಸ್ಥಾನದ ಪ್ರಧಾನ ಅರ್ಚಕ ಜಯರಾಮ ಅಡಿಗಳ್ ಮಾತನಾಡಿ, ಮಹಾಶಿವರಾತ್ರಿ ದಿನದಂದು ಇಂತಹ ಜಾಗರಣೆ ಉತ್ಸವ ಹಮ್ಮಿಕೊಂಡಿರುವುದು ಶ್ಲಾಘನೀಯ. ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿರುವ ವೈದ್ಯರು ಒಬ್ಬ ರಾಜಕಾರಣಿಯಲ್ಲ, ಬದಲಾಗಿ ಸಮಾಜಕಾರಿಣಿ ಆಗಿದ್ದಾರೆ. ಮುರ್ಡೇಶ್ವರ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಆಗಬೇಕು ಎಂದರು.
ಕಾಂಗ್ರೆಸ್ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಸರ್ಕಾರವಾಗಿದೆ: ಸಚಿವೆ ಶೋಭಾ ಕರಂದ್ಲಾಜೆ
ಜಿಪಂ ಸಿಇಒ ಈಶ್ವರ್ ಕಾಂದೂ, ಹೊನ್ನಾವರ ಡಿಎಫ್‌ಒ ಯೋಗೇಶ, ಸಹಾಯಕ ಆಯುಕ್ತೆ ಡಾ. ನಯನಾ, ಮುರ್ಡೇಶ್ವರ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಂಕರ್ ಭಟ್ರಹಿತ್ಲು, ಮಾವಳ್ಳಿ-2 ಗ್ರಾಪಂ ಅಧ್ಯಕ್ಷೆ ನಾಗರತ್ನ ಪಡಿಯಾರ, ತಹಸೀಲ್ದಾರ್ ತಿಪ್ಪೇಸ್ವಾಮಿ, ಉದ್ಯಮಿ ಮಂಜುನಾಥ ನಾಯ್ಕ ಉಪಸ್ಥಿತರಿದ್ದರು. ಶಿಕ್ಷಕ ಶ್ರೀಧರ ಶೇಟ್ ಸ್ವಾಗತಿಸಿ ನಿರೂಪಿಸಿದರು. ವನಿತಾ ಶೇಟ್ ವಂದಿಸಿದರು. ಶಿವರಾತ್ರಿ ಜಾಗರಣೆ ಪ್ರಯುಕ್ತ ಶನಿವಾರ ಬೆಳಗ್ಗೆ 6 ಗಂಟೆ ವರೆಗೂ ಖ್ಯಾತ ಕಲಾವಿದರಿಂದ ವಿವಿಧ ಕಾರ್ಯಕ್ರಮ ನಡೆಯಿತು. ಜಾಗರಣೆ ಉತ್ಸವದಲ್ಲಿ ಸಾವಿರಾರು ಜನರು ಪಾಲ್ಗೊಂಡು ಕಾರ್ಯಕ್ರಮ ವೀಕ್ಷಿಸಿದರು.