Basavaraj Rayareddi ಇಸ್ಲಾಂ ಹೊಗಳಿದ ರಾಯರೆಡ್ಡಿಗೆ ಮುಸ್ಲಿಂ ಪೋಷಾಕು! ಹಜ್‌ ಯಾತ್ರೆಗೆ ದೇಣಿಗೆ ಅಭಿಯಾನಕ್ಕೆ ಮುಂದಾದ ಕಾರ್ಯಕರ್ತರು!

Published : Sep 03, 2026, 06:14 PM IST
Basvaraj Rayareddi

ಸಾರಾಂಶ

ಶಾಸಕ ಬಸವರಾಜ್ ರಾಯರೆಡ್ಡಿ ಅವರ ಇಸ್ಲಾಂ ಪರ ಹೇಳಿಕೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ವಿನೂತನ ಪ್ರತಿಭಟನೆ ನಡೆಸಿವೆ. ರಾಯರೆಡ್ಡಿ ಅವರ ಹಜ್ ಯಾತ್ರೆಗೆ ಹಣ ಸಂಗ್ರಹಿಸಲು ಭಿಕ್ಷಾಟನೆ ಅಭಿಯಾನ ನಡೆಸಿದ ಕಾರ್ಯಕರ್ತರು, ಅವರ ರಾಜೀನಾಮೆಗೆ ಆಗ್ರಹಿಸಿದರು. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ್ ರಾಯರೆಡ್ಡಿ ಅವರು ಇಸ್ಲಾಂ ಧರ್ಮ ಹಾಗೂ ಹಜ್ ಯಾತ್ರೆ ಕುರಿತು ನೀಡಿದ್ದಾರೆ ಎನ್ನಲಾದ ವಿವಾದಾತ್ಮಕ ಹೇಳಿಕೆ ಈಗ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಾಯರೆಡ್ಡಿ ಅವರ ಹೇಳಿಕೆಯನ್ನು ಖಂಡಿಸಿ ಗದಗ ನಗರದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಿಕ್ಷಾಟನೆ ನಡೆಸುವ ಮೂಲಕ ವಿಶಿಷ್ಟ ಹಾಗೂ ವಿನೂತನ ಪ್ರತಿಭಟನೆ ನಡೆಸಿ ಸಾಂಕೇತಿಕ ಟಾಂಗ್ ನೀಡಿದ್ದಾರೆ.

ಹುಯಿಲಗೋಳ ವೃತ್ತದಲ್ಲಿ ಭಿಕ್ಷಾಪಾತ್ರೆ ಹಿಡಿದು ಪ್ರತಿಭಟನೆ!

ಗದಗ ನಗರದ ಪ್ರಮುಖ ಕೇಂದ್ರವಾದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಜಮಾಯಿಸಿದ ಹಿಂದೂ ಸಂಘಟನೆಯ ನೂರಾರು ಕಾರ್ಯಕರ್ತರು, ಬಸವರಾಜ್ ರಾಯರೆಡ್ಡಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುಸ್ಲಿಂ ಧರ್ಮವೇ ಶ್ರೇಷ್ಠ ಹಾಗೂ ತಮಗೂ ಹಜ್ ಯಾತ್ರೆಗೆ ಹೋಗುವ ಆಸೆಯಿದೆ ಎಂದು ರಾಯರೆಡ್ಡಿ ಹೇಳಿಕೆ ನೀಡಿದ್ದರು ಎನ್ನಲಾಗಿದ್ದು, ಇದನ್ನು ಖಂಡಿಸಿ ಕಾರ್ಯಕರ್ತರು ಕೈಯಲ್ಲಿ ಭಿಕ್ಷಾಪಾತ್ರೆ ಹಿಡಿದು ಬೀದಿಗಿಳಿದರು. ರಾಯರೆಡ್ಡಿ ಅವರಿಗೆ ಹಜ್ ಯಾತ್ರೆಗೆ ಹೋಗಲು ಹಣದ ಅಭಾವವಿದ್ದರೆ ನಾವು ಸಾರ್ವಜನಿಕರಿಂದ ಧನ ಸಂಗ್ರಹಿಸಿ ಕೊಡುತ್ತೇವೆ ಎಂದು ವ್ಯಂಗ್ಯವಾಡಿದರು.

ರಾಯರೆಡ್ಡಿಗೆ ಮುಸ್ಲಿಂ ಪೋಷಾಕು ತೊಡಿಸಿದ ಪೋಸ್ಟರ್‌ ಪ್ರದರ್ಶನ!

ಹಿಂದೂ ಮುಖಂಡ ರಾಜು ಖಾನಪ್ಪನವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಗದಗ ನಗರದ ಮಾರುಕಟ್ಟೆ ಭಾಗದ ಅಂಗಡಿ ಮುಂಗಟ್ಟುಗಳಿಗೆ, ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರ ಬಳಿ ತೆರಳಿ ಹಣ ಸಂಗ್ರಹಿಸಿದರು. ಈ ವೇಳೆ ಬಸವರಾಜ್ ರಾಯರೆಡ್ಡಿ ಅವರಿಗೆ ಮುಸ್ಲಿಂ ಸಾಂಪ್ರದಾಯಿಕ ಪೋಷಾಕು (ಕುರ್ತಾ, ಟೋಪಿ) ತೊಡಿಸಿರುವಂತೆ ವಿನ್ಯಾಸಗೊಳಿಸಿದ ಪೋಸ್ಟರ್‌ಗಳನ್ನು ಪ್ರದರ್ಶಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಯೊಬ್ಬ ವ್ಯಾಪಾರಿಯಿಂದಲೂ ಸಾಂಕೇತಿಕವಾಗಿ ಹಣ ಪಡೆಯುವ ಮೂಲಕ ರಾಯರೆಡ್ಡಿ ಅವರ ಹಜ್ ಯಾತ್ರೆಗೆ ಧನ ಸಂಗ್ರಹಣಾ ಅಭಿಯಾನ ನಡೆಸಿದರು.

ಮುಸ್ಲಿಂ ಓಲೈಕೆ ಮತ್ತು ಹಿಂದೂ ಭಾವನೆಗಳಿಗೆ ಧಕ್ಕೆ!

ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಮುಖಂಡ ರಾಜು ಖಾನಪ್ಪನವರು, "ಕಾಂಗ್ರೆಸ್ ನಾಯಕರು ಮುಸ್ಲಿಂ ಓಲೈಕೆ ರಾಜಕಾರಣದ ಭರದಲ್ಲಿ ಮಿತಿಮೀರಿ ವರ್ತಿಸುತ್ತಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶಾಸಕ ರಾಯರೆಡ್ಡಿ ಅವರು ಇಸ್ಲಾಂ ಧರ್ಮವನ್ನು ಶ್ರೇಷ್ಠ ಎಂದು ಹೊಗಳುವ ನೆಪದಲ್ಲಿ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತಂದಿದ್ದಾರೆ. ಕಾಂಗ್ರೆಸ್ ನಾಯಕರ ಈ ರೀತಿಯ ನಡೆಗಳನ್ನು ಹಿಂದೂ ಸಮಾಜ ಎಂದಿಗೂ ಸಹಿಸುವುದಿಲ್ಲ" ಎಂದು ಎಚ್ಚರಿಸಿದರು.

ರಾಜೀನಾಮೆ ಹಾಗೂ ಬೇಷರತ್ ಕ್ಷಮೆಗೆ ಆಗ್ರಹ!

ರಾಯರೆಡ್ಡಿ ಅವರು ತಕ್ಷಣವೇ ತಾವು ನೀಡಿರುವ ಹೇಳಿಕೆಯನ್ನು ಹಿಂಪಡೆದು, ರಾಜ್ಯದ ಸಾರ್ವಜನಿಕರಲ್ಲಿ ಹಾಗೂ ಹಿಂದೂ ಸಮಾಜದ ಬಳಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಅಷ್ಟೇ ಅಲ್ಲದೆ, ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಕೆಲಸ ಮಾಡುತ್ತಿರುವ ಬಸವರಾಜ್ ರಾಯರೆಡ್ಡಿ ಅವರು ಕೂಡಲೇ ತಮ್ಮ ಶಾಸಕ ಸ್ಥಾನ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಗಡುವು ನೀಡಿದರು. ಗದಗದಲ್ಲಿ ನಡೆದ ಈ ವಿನೂತನ ಭಿಕ್ಷಾಟನಾ ಅಭಿಯಾನವು ಈಗ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಭಾರಿ ಕೂತುಹಲಕ್ಕೆ ಕಾರಣವಾಗಿದೆ.

PREV
Read more Articles on
click me!

Recommended Stories

Hostels: 847 ಹಾಸ್ಟೆಲ್‌ಗಳಲ್ಲಿ ಕಳಪೆ ಧಾನ್ಯ: ಸುವರ್ಣ ನ್ಯೂಸ್ ವರದಿ ಉಲ್ಲೇಖಿಸಿ ನೂರಾರು ಕೋಟಿ ಲೂಟಿ ಆರೋಪ ಮಾಡಿದ ರವಿಕುಮಾರ್!
Tumkuru: ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ; ಬಿಜೆಪಿ ಶಾಸಕನ ಪುತ್ರಿಗೆ ಎದುರಾಯ್ತು ಕಾನೂನು ಸಂಕಷ್ಟ!