ಕೊಪ್ಪಳದ ಸಾವಜಿ ಹೋಟೆಲ್‌ ಬೆಳಗೆರೆಗೆ ಅಚ್ಚುಮೆಚ್ಚು..!

By Kannadaprabha NewsFirst Published Nov 14, 2020, 2:15 PM IST
Highlights

ಕೊಪ್ಪಳದ ಸಾವಜಿ ಹೋಟೆಲ್‌ಗೆ ಬಂದಾಗ ಒಂದು ಬಾರಿ ಗಲಾಟೆ ಮಾಡಿಕೊಂಡಿದ್ದ ಬೆಳಗೆರೆ| ತಡವಾಗಿ ಬಂದು ಊಟ ಬೇಕು ಎಂದು ಹಠ ಹಿಡಿದು ಗಲಾಟೆ ಮಾಡಿಸಿಕೊಂಡಿದ್ದರು. ಕೊನೆಗೂ ಸಾವಜಿ ಹೋಟೆಲ್‌ನಲ್ಲಿ ಊಟ ಮಾಡಿಯೇ ಪ್ರಯಾಣ ಬೆಳೆಸಿದ್ದ ರವಿ| 

ಸೋಮರಡ್ಡಿ ಅಳವಂಡಿ

ಕೊಪ್ಪಳ(ನ.14): ಪತ್ರಕರ್ತ ರವಿ ಬೆಳಗೆರೆಗೂ ಮತ್ತು ಕೊಪ್ಪಳಕ್ಕೂ ಅವಿನಾಭಾವ ಸಂಬಂಧ ಇದೆ. ಅದರಲ್ಲೂ ಇಲ್ಲಿಯ ಸಾವಜಿ ಹೋಟೆಲ್‌ ಊಟ ಎಂದರೆ ಅವರಿಗೆ ಅಚ್ಚುಮೆಚ್ಚು. ಉತ್ತರ ಕರ್ನಾಟಕದವರು ಯಾರೇ ಕಂಡರೂ ಕೊಪ್ಪಳ ಸಾವಜಿ ಹೋಟೆಲ್‌ ಪ್ರಸ್ತಾಪ ಮಾಡುತ್ತಿದ್ದರು.

ರವಿ ಬೆಳಗೆರೆ ಅವರು ಪಕ್ಕದ ಬಳ್ಳಾರಿ ಜಿಲ್ಲೆಯವರೇ ಆಗಿರುವುದರಿಂದ ಪತ್ರಕರ್ತನಾಗುವ ಮೊದಲು ಇಲ್ಲಿಗೆ ಆಗಾಗ ಬಂದು ಹೋಗುತ್ತಿದ್ದರು. ಇನ್ನು ಕೆಲ ದಿನಗಳ ಕಾಲ ಇಲ್ಲಿಯೇ ಉದ್ಯೋಗವೊಂದರಲ್ಲಿ ತೊಡಗಿಕೊಂಡಿದ್ದರು. ಮೆಡಿಕಲ್‌ ರಿಪ್ರಸಂಟೇಟೀವ್‌ ಆಗಿ ಕೆಲಸ ಮಾಡುವ ವೇಳೆ ಕೊಪ್ಪಳಕ್ಕೆ ಬಂದು ಹೋಗುತ್ತಿದ್ದರು. ರಾಯಚೂರು ಜಿಲ್ಲೆಯ ಪ್ರತಿನಿಧಿಯಾಗಿದ್ದರಿಂದ ಆಗ ಅದರ ವ್ಯಾಪ್ತಿಯಲ್ಲಿಯೇ ಇದ್ದ ಕೊಪ್ಪಳಕ್ಕೆ ಆಗಾಗ ಬರುತ್ತಿದ್ದರು. ಹಲವು ನಗರದಲ್ಲಿ ತಂಗಿದ ಉದಾಹರಣೆಗಳು ಇವೆ.

ಆಗ ಕೊಪ್ಪಳದಿಂದ ರೈಲ್ವೆ ಮೂಲಕ ಬಳ್ಳಾರಿಗೆ ತೆರಳುವಾಗ ಅವರು ಕೊಪ್ಪಳದ ಸಾವಜಿ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದರು. ಸುತ್ತಮುತ್ತ ಯಾವುದೇ ಊರಿಗೆ ಬಂದರೂ ನಗರಕ್ಕೆ ಬಂದು ಇಲ್ಲಿಯ ಸಾವಜಿ ಹೋಟೆಲ್‌ನಲ್ಲಿ ಊಟ ಮಾಡಿ ಹೋಗುತ್ತಿದ್ದರು. ಇದನ್ನು ಅವರು ಅನೇಕ ಬಾರಿ ಬರೆದುಕೊಂಡಿದ್ದರು.

ಧಾರವಾಡ ಎಂದರೆ ರವಿಗೆ ಎಲ್ಲಿಲ್ಲದ ಪ್ರೀತಿ, ಬಳ್ಳಾರಿಯಿಂದ ಬೈಕ್‌ ಮೇಲೆ ಬಂದಿದ್ದ ಬೆಳಗೆರೆ..!

ಇನ್ನು ಪತ್ರಕರ್ತರಾದ ಮೇಲೆಯೂ ಅವರು ನಗರದ ಕುರಿತು ಅನೇಕ ಸುದ್ದಿಗಳನ್ನು ಮಾಡಿದ್ದಾರೆ. ಇಲ್ಲಿಯ ರಾಜಕೀಯ ಕುರಿತು ವಿಶ್ಲೇಷಣೆ ಮಾಡಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಅನೇಕ ಶಿಷ್ಯರನ್ನು ಹೊಂದಿದ್ದಾರೆ.
ಅವರ ಹಾಯ್‌ ಬೆಂಗಳೂರು ಪತ್ರಿಕೆಯಲ್ಲಿ ಕೊಪ್ಪಳ ಜಿಲ್ಲಾ ವರದಿಗಾರರಾಗಿ ವಿಠ್ಠಪ್ಪ ಗೋರಂಟ್ಲಿ ಅವರು ಕೆಲಸ ಮಾಡಿದ್ದಾರೆ. ಹಾಯ್‌ ಬೆಂಗಳೂರು ಪತ್ರಿಕೆಯ ಪ್ರಮುಖ ಹುದ್ದೆಯಲ್ಲಿ ಚಾಮರಾಜ್‌ ಸವಡಿ ಅವರು ಕಾರ್ಯ ನಿರ್ವಹಿಸಿದ್ದಾರೆ.
ಇತ್ತೀಚೆಗೆ ಅವರು ಕೊಪ್ಪಳಕ್ಕೆ ಬಂದಿರುವುದು ಅಪರೂಪವಾಗಿದ್ದರೂ ನಗರದಲ್ಲಿ ಅವರ ಅಭಿಮಾನಿ ಬಳಗವೇ ಇದೆ. ಗೋಕಾಕ್‌ ಚಳವಳಿಯ ವೇಳೆ ಇಲ್ಲಿಗೆ ಆಗಮಿಸಿದ್ದ ಅವರು, ಅದಾದ ಮೇಲೆ ಜಿಲ್ಲೆಯಲ್ಲಿ ಪತ್ರಿಕೆಯೊಂದನ್ನು ಲೋಕಾರ್ಪಣೆ ಮಾಡಲು ಆಗಮಿಸಿದ್ದರು.

ಗಲಾಟೆ ಮಾಡಿಕೊಂಡಿದ್ದರು:

ಬೆಳಗೆರೆ ಅವರು ಕೊಪ್ಪಳ ಸಾವಜಿ ಹೋಟೆಲ್‌ಗೆ ಬಂದಾಗ ಒಂದು ಬಾರಿ ಗಲಾಟೆಯನ್ನು ಮಾಡಿಕೊಂಡಿದ್ದಾರೆ. ತಡವಾಗಿ ಬಂದು ಊಟ ಬೇಕು ಎಂದು ಹಠ ಹಿಡಿದು ಗಲಾಟೆ ಮಾಡಿಸಿಕೊಂಡಿದ್ದರು. ಕೊನೆಗೂ ಸಾವಜಿ ಹೋಟೆಲ್‌ನಲ್ಲಿ ಊಟ ಮಾಡಿಯೇ ಪ್ರಯಾಣ ಬೆಳೆಸಿದ್ದಾರೆ. ಆದರೆ, ಇಂಥದ್ದೆ ಹೋಟೆಲ್‌ ಎಂದು ಇರಲಿಲ್ಲವಂತೆ. ಒಟ್ಟಾರೆ ಸಾವಜಿ ಹೋಟೆಲ್‌ ಯಾವುದಾದರೂ ಸರಿ ಎನ್ನುತ್ತಿದ್ದರಂತೆ.

ರವಿ ಬೆಳಗೆರೆಯವರು ಅವರು ಕೊಪ್ಪಳಕ್ಕೆ ಈ ಹಿಂದೆ ಬರುತ್ತಿದ್ದರು ಎಂದು ಹೇಳಲಾಗುತ್ತಿದೆಯಾದರೂ ಅವರು ಗೋಕಾಕ್‌ ಚಳವಳಿಯ ಸಂದರ್ಭದಲ್ಲಿ ಆಗಮಿಸಿದ್ದರು ಮತ್ತು ಪತ್ರಿಕೆಯೊಂದರ ಲೋಕಾರ್ಪಣೆಗೆ ಆಗಮಿಸಿದ್ದರು ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ತಿಳಿಸಿದ್ದಾರೆ. 
 

click me!