
ಶಿವಕುಮಾರ ಕುಷ್ಟಗಿ
ಗದಗ(ಡಿ.13): ಜಿಲ್ಲೆಯಾದ್ಯಂತ ಪಡಿತರ ಅಕ್ಕಿ ಮಾಫಿಯಾ ಪ್ರಭಾವಶಾಲಿಯಾಗಿ ಬೆಳೆದಿದ್ದು, ರಾಜಕೀಯ ಪಕ್ಷಗಳ ನಾಯಕರು, ಅವರ ಮಕ್ಕಳು, ಹಿಂಬಾಲಕರು, ರೌಡಿ ಶೀಟರ್ ಆಗಿರುವವರೇ ಇದರ ಕಿಂಗ್ ಪಿನ್. ಆಹಾರ ಇಲಾಖೆಯಾಗಲಿ, ಪೊಲೀಸ್ ಇಲಾಖೆಯಾಗಲಿ ಇದನ್ನು ತಡೆಗಟ್ಟಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.
ಗದಗ -ಬೆಟಗೇರಿ ಅವಳಿ ನಗರದಲ್ಲಿನ ಬಹುತೇಕರಿಗೆ ಈ ಮಾಫಿಯಾ ಬಗ್ಗೆ ಗೊತ್ತು. ಎಲ್ಲಿ ಸಂಗ್ರಹಣೆಯಾಗುತ್ತದೆ? ಅದು ಅಲ್ಲಿಂದ ಎಲ್ಲಿಗೆ ಸಾಗಾಟವಾಗುತ್ತದೆ. ಯಾವ ಮನೆಗಳಲ್ಲಿ ಸಂಗ್ರಹಿಸಿ, ರಾತ್ರೋರಾತ್ರಿ ಬೇರೆ ಜಿಲ್ಲೆಗಳಿಗೆ ಸಾಗಿಸುತ್ತಾರೆ ಎನ್ನುವ ವಿವರ ಗೊತ್ತು. ಆದರೆ, ಭಯದಿಂದ ಅವರೆಲ್ಲ ಬಹಿರಂಗವಾಗಿ ಹೇಳುವ ಸ್ಥಿತಿಯಲ್ಲಿ ಇಲ್ಲ.
ಮುಂಡರಗಿಯ ಯುವ ಶಿಲ್ಪಿಗೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಆಹ್ವಾನ
ಹುಬ್ಬಳ್ಳಿಯೇ ಕೇಂದ್ರ
ಗದಗ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಅಕ್ಕಿ ದಂಧೆಗೆ ಪಕ್ಕದ ಹುಬ್ಬಳ್ಳಿಗೆ ಹೋಗುತ್ತಿದೆ. ಈಚೆಗೆ ಹುಬ್ಬಳ್ಳಿ ಎಪಿಎಂಸಿಯಲ್ಲಿ ನಡೆದ ದಾಳಿಯಲ್ಲಿ ಪತ್ತೆಯಾದ ಅಕ್ಕಿಗೂ ಗದಗ ಜಿಲ್ಲೆಗೂ ವಿಶೇಷ ನಂಟಿದೆ. ಈ ಬಗ್ಗೆ ಆಹಾರ ಇಲಾಖೆ ತನಿಖೆ ನಡೆಸಬೇಕಿದೆ.
ಆಗ್ರಹ, ಅಕ್ರಮ:
ನಗರದಲ್ಲಿ ಇನ್ನೂ ನೂರಾರು ಕುಟುಂಬಗಳು ಪಡಿತರ ವ್ಯವಸ್ಥೆಯಿಂದ ಹೊರಗುಳಿದಿವೆ. ಅವರಿಗೆ ಆಹಾರ ಧಾನ್ಯವೂ ಸಿಗುತ್ತಿಲ್ಲ. ಆಹಾರ ಧಾನ್ಯದ ಬದಲಾಗಿ ಸರ್ಕಾರ ನೀಡುತ್ತಿರುವ ಹಣವೂ ಸಿಗುತ್ತಿಲ್ಲ ಎಂದು ಪ್ರತಿಭಟನೆ ನಡೆಸಿದರೆ, ಇನ್ನೊಂದೆಡೆ ಬಡವರಿಗೆ ಸರ್ಕಾರ ನೀಡುತ್ತಿರುವ ಅಕ್ಕಿ ಮಾತ್ರ ನಿರಂತರವಾಗಿ ಪ್ರಭಾವಿಗಳ ಬಳಿ ಸಂಗ್ರಹವಾಗಿ ಅಲ್ಲಿಂದ ಬೇರೆಡೆ ರವಾನೆಯಾಗುತ್ತಿದೆ. ಇದು ನೂರಾರು ಬಡ ಕುಟುಂಬಗಳಿಗೆ ಆಗುತ್ತಿರುವ ಅನ್ಯಾಯವಾಗಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳೇ ಗಮನ ಹರಿಸಬೇಕಿದೆ.
ಗದಗ: ಜಮೀನಲ್ಲಿ ಮಲಗಿದ್ದ ರೈತ ಕಾರ್ಮಿಕನ ಬರ್ಬರ ಹತ್ಯೆ ಪ್ರಕರಣ, ರುಂಡ ಪತ್ತೆ ಹಚ್ಚಿದ ಪೊಲೀಸರು
ಭಾರೀ ಬೇಡಿಕೆ
ಗದಗ ಜಿಲ್ಲೆಯ ಪಡಿತರ ಅಕ್ಕಿ ಇದುವರೆಗೂ ಪಕ್ಕದ ಕೊಪ್ಪಳ ಮೂಲಕ ಗಂಗಾವತಿ ಸೇರುತ್ತಿತ್ತು. ಆದರೆ ಈಗ ಹುಬ್ಬಳ್ಳಿಗೆ ಹೋಗುತ್ತಿದ್ದು, ಅಲ್ಲಿಂದ ಪಾಲೀಶ್‌ಗಾಗಿ ಅಕ್ಕ ಪಕ್ಕದ ಜಿಲ್ಲೆಗಳಿಗೆ ರವಾನೆಯಾಗುತ್ತಿದೆ ಎನ್ನಲಾಗುತ್ತಿದೆ. ಅಲ್ಲಿ ಪಾಲೀಶ್ ಮಾಡಿದ ಅಕ್ಕಿಯನ್ನು ಹೈದ್ರಾಬಾದ್ ಹಾಗೂ ಮಹಾರಾಷ್ಟ್ರದ ಹಲವಾರು ಪ್ರಮುಖ ವಾಣಿಜ್ಯ ನಗರಗಳಿಗೆ ಉತ್ತಮ ಬೆಲೆಗೆ ಮಾರಾಟ ಮಾಡುವ ದಂಧೆ ಎಗ್ಗಿಲ್ಲದೇ ಸಾಗುತ್ತಿದೆ. ಈಚೆಗೆ ಯಾದಗಿರಿ ಜಿಲ್ಲೆಯಲ್ಲಿ ಸಂಗ್ರಹಿಸಿಡಲಾಗಿದ್ದ 2 ಕೋಟಿಗೂ ಅಧಿಕ ಮೌಲ್ಯದ ಅನ್ನಭಾಗ್ಯದ ಅಕ್ಕಿ ಕಳ್ಳತನ ಕೂಡಾ ಆಗಿತ್ತು. ಅದೂ ಇದೇ ಮಾಫಿಯಾ ರೀತಿ ಎನ್ನುವ ಮಾತುಗಳಿವೆ.
ಜಾಣತನ
ಅಕ್ರಮ ಪಡಿತರ ಅಕ್ಕಿ ಸಂಗ್ರಹಿಸುವವರು ಈ ಹಿಂದೆ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ನಂತರ ಅದನ್ನು ಬೇರೆಡೆ ಸಾಗಿಸುತ್ತಿದ್ದರು. ಆದರೀಗ ದಿನೇ ದಿನೇ ಸಣ್ಣ ಸಣ್ಣ ವಾಹನಗಳಲ್ಲಿ (ಟಂಟಂ), ಸಣ್ಣ ಚೀಲಗಳ ಮೂಲಕವೇ ರಾತ್ರಿಯೇ ಅವು ತಲುಪಬೇಕಾದ ಸ್ಥಳಗಳಿಗೆ ತಲುಪಿಸುತ್ತಿದ್ದು, ಒಂದೊಮ್ಮೆ ತಪಾಸಣೆಯ ವೇಳೆಯಲ್ಲಿ ವಾಹನ ಸಿಕ್ಕರೆ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದೇವೆ, ಇನ್ನೊಮ್ಮೆ ಮಾಡುವುದಿಲ್ಲ ಎನ್ನುವ ಸಬೂಬು ಹೇಳುತ್ತಾ, ಪ್ರಭಾವಿ ನಾಯಕರಿಂದ ಫೋನಾಯಿಸಿ ಬಚಾವ್ ಆಗುತ್ತಿರುವ ಪ್ರಕರಣಗಳು ಕೂಡಾ ವ್ಯಾಪಕವಾಗಿ ನಡೆಯುತ್ತಿವೆ ಎನ್ನುತ್ತಿವೆ ಇಲಾಖೆ ಮೂಲಗಳು.