ಇ-ಕೆವೈಸಿ ಮಾಡಿಸದಿದ್ದರೆ ರೆಷನ್‌ ಕಾರ್ಡ್‌ ರದ್ದು

By Kannadaprabha NewsFirst Published Aug 25, 2023, 11:00 PM IST
Highlights

ಆಧಾರ್‌ ಸಂಖ್ಯೆಯನ್ನು ಬ್ಯಾಂಕ್‌ ಖಾತೆಗೆ ಲಿಂಕ್‌ ಮಾಡುವ ಪ್ರಕ್ರಿಯೆಯನ್ನು ಇ-ಕೆವೈಸಿ ಎಂದು ಕರೆಯಲಾಗುತ್ತಿದೆ. ಇದೀಗ ಜಿಲ್ಲೆಯಲ್ಲಿ 2,95,309ಅಂತ್ಯೋದಯ (ಎಎವೈ) ಮತ್ತು ಆದ್ಯತಾ (ಪಿಎಚ್‌ಎಚ್‌) ಪಡಿತರ ಚೀಟಿ ಹೊಂದಿರುವ 9.48 ಲಕ್ಷ ಸದಸ್ಯರ ಪೈಕಿ 9,09,861 ಮಂದಿ ಇ ಕೆವೈಸಿ (ಶೇ.95.98) ಮಾಡಿಸಿದ್ದಾರೆ. ಇನ್ನು 29,593 ಪಡಿತರ ಚೀಟಿಯಲ್ಲಿನ 38,139 ಸದಸ್ಯರು (ಶೇ.4.02) ಇ-ಕೆವೈಸಿ ಮಾಡಿಸಿಲ್ಲ.
 

ಎಂ.ಅಫ್ರೋಜ್‌ ಖಾನ್‌

ರಾಮನಗರ(ಆ.25): ಪಡಿತರ ಚೀಟಿದಾರರು ಕಡ್ಡಾಯವಾಗಿ ಆ.31ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಅಂಥವರ ರೇಷನ್‌ ಕಾರ್ಡ್‌ ರದ್ದಾಗಲಿದೆ. ಇಷ್ಟೇ ಅಲ್ಲದೆ ಸೆಪ್ಟೆಂಬರ್‌ ತಿಂಗಳಿನಿಂದಲೇ ಅವರಿಗೆ ಅನ್ನಭಾಗ್ಯ ಅಕ್ಕಿಯಾಗಲಿ ಹಾಗೂ ಅಕ್ಕಿ ಬದಲಿಗೆ ನೀಡುತ್ತಿರುವ ಹಣವಾಗಲಿ ಸಿಗುವುದಿಲ್ಲ.

ಆಧಾರ್‌ ಸಂಖ್ಯೆಯನ್ನು ಬ್ಯಾಂಕ್‌ ಖಾತೆಗೆ ಲಿಂಕ್‌ ಮಾಡುವ ಪ್ರಕ್ರಿಯೆಯನ್ನು ಇ-ಕೆವೈಸಿ ಎಂದು ಕರೆಯಲಾಗುತ್ತಿದೆ. ಇದೀಗ ಜಿಲ್ಲೆಯಲ್ಲಿ 2,95,309ಅಂತ್ಯೋದಯ (ಎಎವೈ) ಮತ್ತು ಆದ್ಯತಾ (ಪಿಎಚ್‌ಎಚ್‌) ಪಡಿತರ ಚೀಟಿ ಹೊಂದಿರುವ 9.48 ಲಕ್ಷ ಸದಸ್ಯರ ಪೈಕಿ 9,09,861 ಮಂದಿ ಇ ಕೆವೈಸಿ (ಶೇ.95.98) ಮಾಡಿಸಿದ್ದಾರೆ. ಇನ್ನು 29,593 ಪಡಿತರ ಚೀಟಿಯಲ್ಲಿನ 38,139 ಸದಸ್ಯರು (ಶೇ.4.02) ಇ-ಕೆವೈಸಿ ಮಾಡಿಸಿಲ್ಲ.

ಕಾಂಗ್ರೆಸ್‌ನ 5 ಗ್ಯಾರಂಟಿಗಳು ಐದೂ ವರ್ಷ ಇರುತ್ತೆ: ಸಂಸದ ಡಿ.ಕೆ.ಸುರೇಶ್‌

ಅನ್ನಭಾಗ್ಯ ಯೋಜನೆಯನ್ನು ಬಡವರು ಮತ್ತು ನಿರ್ಗತಿಕರಿಗೆಂದು ರೂಪಿಸಲಾಗಿದ್ದು, ಸ್ಥಿತಿವಂತರೂ ಕೂಡ ಯೋಜನೆಯ ದುರ್ಲಾಭ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಇದರಿಂದಾಗಿ ಅನರ್ಹ ರೇಷನ್‌ ಕಾರ್ಡ್‌ ರದ್ದುಗೊಳಿಸುವ ಹಿನ್ನಲೆಯಲ್ಲಿ ಆಧಾರ್‌ಗೆ ಲಿಂಕ್‌ ಮಾಡಲಾಗುತ್ತಿದೆ.

ಪಡಿತರ ವ್ಯವಸ್ಥೆಯಲ್ಲಿ ನೀಡುವ ಆಹಾರ ಸಾಮಗ್ರಿಗಳ ನಿರ್ದಿಷ್ಟಮಾಹಿತಿ ಹಾಗೂ ಕುಟುಂಬ ಸದಸ್ಯರ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರಕಾರ ವರ್ಷಗಳ ಹಿಂದೆಯೇ ಇ-ಕೆವೈಸಿ ಆರಂಭಿಸಿತ್ತು. ಹಲವು ಬಾರಿ ಅವಕಾಶ ನೀಡಿದ್ದರೂ ಶೇ.100 ಪ್ರಗತಿ ಸಾಧ್ಯವಾಗಿಲ್ಲ.

ಇದೀಗ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಇ- ಕೆವೈಸಿ ಕುರಿತು ಆದೇಶ ಹೊರ ಬಿದ್ದಿದೆ. ಹೀಗಾಗಿ ಇ-ಕೆವೈಸಿ ಮಾಡಲು ಬಾಕಿ ಇರುವವರಿಗೆ ಆ.31ರ ಕೊನೆಯ ಗಡುವು ನೀಡಲಾಗಿದೆ. ಒಂದು ವೇಳೆ ಮಾಡಿಸದಿದ್ದಲ್ಲಿ ಅಂತಹ ಸದಸ್ಯಗಳನ್ನು ಪಡಿತರ ಚೀಟಿಯಿಂದ ಅಮಾನತುಗೊಳಿಸುವ ಜತೆಗೆ ಫಲಾನುಭವಿಗಳಿಗೆ ಆಹಾರಧಾನ್ಯ ಮತ್ತು ಡಿಬಿಟಿ ನಗದು ಸೌಲಭ್ಯವನ್ನು ಸ್ಥಗಿತಗೊಳಿಸಲಾಗುತ್ತದೆ

ಇ-ಕೆವೈಸಿ ಮಾಡದಿದ್ದರೆ ಏನಾಗುತ್ತದೆ?:

ಪಡಿತರ ಚೀಟಿ ಇ ಕೆವೈಸಿ ಮಾಡದಿದ್ದರೆ ಪಡಿತರ ಸಾಮಗ್ರಿ ಮಾತ್ರವಲ್ಲದೆ ಸರ್ಕಾರದ ಅನೇಕ ಸವಲತ್ತುಗಳನ್ನು ಪಡೆಯಲು ಕೂಡ ತೊಂದರೆ ಉಂಟಾಗಲಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಇ-ಕೆವೈಸಿ ಕುರಿತು ಆದೇಶ ಹೊರಡಿಸಿದೆ.

ಇ-ಕೆವೈಸಿ ಆಗದೇ ಇರುವ ಪಡಿತರ ಚೀಟಿದಾರರಿಗೆ ಆಗಸ್ಟ್‌ 31ರೊಳಗೆ ಇ-ಕೆವೈಸಿ ಪೂರ್ಣಗೊಳಿಸುವ ಬಗ್ಗೆ ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ಜಾಗೃತಿ ಮೂಡಿಸಲು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದೆ. ಜಿಲ್ಲೆಗಳ ಜಂಟಿ/ಉಪ ನಿರ್ದೆಶಕರು ಇ-ಕೆವೈಸಿ ಆಗದ ಪಡಿತರ ಚೀಟಿದಾರರ ಹೆಸರುಗಳನ್ನು ಆಯಾಯ ನ್ಯಾಯ ಬೆಲೆ ಅಂಗಡಿಗಳ ಫಲಕದಲ್ಲಿ ಪ್ರದರರ್ಶಿಸಲು ಸೂಚಿಸಲಾಗಿದೆ.

ವಿನಾಯಿತಿ ನೀಡಲಾಗಿರುವ ಪಡಿತರ ಚೀಟಿಯಲ್ಲಿ ಬೆರಳಚ್ಚು ಪಡೆಯಲು ಆಗದೇ ಇರುವ ಪಡಿತರ ಫಲಾನುಭವಿಗಳನ್ನು ಯಾವುದೇ ಕಾರಣಕ್ಕೂ ಅಮಾನತುಪಡಿಸದೇ, ಸದರಿ ಫಲಾನಭವಿಗಳಿಂದ ಪುನಃ ಬೆರಳಚ್ಚು ಪಡೆಯಲು ಪ್ರಯತ್ನಿಸತಕ್ಕದ್ದು. ಇಲ್ಲದಿದ್ದಲ್ಲಿ ಐಆರ್‌ಐಎಸ್‌ ತಂತ್ರಾಂಶವನ್ನು ಆಹಾರ ತಂತ್ರಾಂಶದೊಂದಿಗೆ ಜೋಡಣೆಯಾಗುವ ವರೆಗೆ ಕಾಯತಕ್ಕದ್ದು.

ಪಡಿತರ ಚೀಟಿ ಫಲಾನುಭವಿಗಳ ಇ-ಕೆವೈಸಿ ಸಂಗ್ರಹಣೆಯನ್ನು ಆ.31ರೊಳಗಾಗಿ ಪೂರ್ಣಗೊಳಿಸದೆ ಇದ್ದಲ್ಲಿ ಅಂತಹ ಪಡಿತರ ಚೀಟಿಗಳ ಸದಸ್ಯರುಗಳನ್ನು ಪಡಿತರ ಚೀಟಿಯಿಂದ ಅಮಾನತುಗೊಳಿಸಲಾಗುವುದು ಮತ್ತು ಈ ಫಲಾನುಭವಿಗಳಿಗೆ ಆಹಾರ ಧಾನ್ಯ ಮತ್ತು ಡಿಬಿಟಿ ನಗದು ಸೌಲಭ್ಯವನ್ನು ಸೆಪ್ಟೆಂಬರ್‌ ತಿಂಗಳಿನಿಂದಲೇ ಸ್ಥಗಿತಗೊಳಿಸಲಾಗುವುದು.

2 ದಿನದಲ್ಲಿ ನೈಸ್‌ ಅಕ್ರಮಗಳ ದಾಖಲೆ ಬಹಿರಂಗ: ಡಿಕೆ ಬ್ರದರ್ಸ್‌ ವಿರುದ್ಧ ​ಎಚ್ಡಿಕೆ ವಾ​ಗ್ದಾಳಿ

ಅನ್ನಭಾಗ್ಯ ಯೋಜನೆಯ ಪ್ರಯೋಜನ ಮತ್ತು ಇತರ ಸರ್ಕಾರಿ ಸವಲತ್ತುಗಳನ್ನು ಪಡೆಯಬೇಕೆಂದರೆ ಫಲಾನುಭವಿಗಳು ತುರ್ತಾಗಿ ಬ್ಯಾಂಕ್‌ಗಳಿಗೆ ತೆರಳಿ ಇ-ಕೆವೈಸಿ ಮಾಡಿಸಬೇಕು. ಇಲ್ಲಿಯವರೆಗೆ ಬ್ಯಾಂಕ್‌ ಖಾತೆ ಹೊಂದದೇ ಇರುವ ಫಲಾನುಭವಿಗಳು ಕೂಡಲೇ ಹೊಸ ಬ್ಯಾಂಕ್‌ ಖಾತೆಯನ್ನು ತೆರೆದು ಅದಕ್ಕೆ ಆಧಾರ್‌ ಕಾರ್ಡ್‌ ಹಾಗೂ ಪೋನ್‌ ನಂಬರ್‌ ಲಿಂಕ್‌ ಮಾಡಿಸಿಕೊಳ್ಳಬೇಕು ಎನ್ನುತ್ತಾರೆ ಆಹಾರ ಇಲಾಖೆ ಅಧಿಕಾರಿಗಳು.

ತಾಲೂಕು ಒಟ್ಟು ಪಡಿತರ ಸದಸ್ಯರ ಸಂಖ್ಯೆ ಇ-ಕೆವೈಸಿ ಮಾಡಿಸಿರುವವರು ಪ್ರತಿಶತ

ಚನ್ನಪ್ಟಟಣ 231712 222521 ಶೇ.96.03
ಕನಕಪುರ 306382 296862 ಶೇ.96.98
ಮಾಗಡಿ 182333 172480 ಶೇ.94.60
ರಾಮನಗರ 227573 217998 ಶೇ.95.79
ಒಟ್ಟು 948000 909861 ಶೇ.95.98
ತಾಲೂಕು ಇ-ಕೆವೈಸಿ ಮಾಡದಿರುವವರು ಪ್ರತಿಶತ
ಚನ್ನಪಟ್ಟಣ 9191 ಶೇ.3.96
ಕನಕಪುರ 9520 ಶೇ.3.10
ಮಾಗಡಿ 9853 ಶೇ.5.40
ರಾಮನಗರ 9575 ಶೇ.4.20
ಒಟ್ಟು 38319 ಶೇ.4.02

click me!