ಸರ್ವರ್ ಸಮಸ್ಯೆಯಿಂದಾಗಿ ತರ್ತು ಸೇವೆಗೂ ಪಡಿತರ ಚೀಟಿ ಇಲ್ಲದಂತಾಗಿದೆ. ಚೀಟಿ ಇಲ್ಲವಾದಲ್ಲಿ ಸಾವಿರಾರು ರುಪಾಯಿ ಹಣವನ್ನು ವೈದ್ಯಕೀಯ ಚಿಕಿತ್ಸೆಗಾಗಿ ವೆಚ್ಚ ಮಾಡಬೇಕಾದ ಅನಿವಾರ್ಯ ಎದುರಾಗಿದ್ದರಿಂದ ಬಡ ಹಾಗೂ ಮಧ್ಯಮ ವರ್ಗದ ಫಲಾನುಭವಿಗಳು ದಿಕ್ಕು ತೋಚದೆ ಕಂಗಾಲಾಗಿದ್ದಾರೆ.
ಜಗದೀಶ ವಿರಕ್ತಮಠ
ಬೆಳಗಾವಿ(ಆ.20): ರಾಜ್ಯ ವಿಧಾನಸಭೆಗೆ ಜರುಗಿದ ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಪಡಿತರ ಚೀಟಿ ವಿತರಣೆ ಹಾಗೂ ಅರ್ಜಿ ಸ್ವೀಕಾರವನ್ನು ಸ್ಥಗಿತ ಮಾಡಿದ್ದ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಇದೀಗ ಪರಿಷ್ಕರಣೆ ಹಾಗೂ ತಿದ್ದುಪಡಿಗೆ ಅವಕಾಶ ನೀಡಿದೆ. ಆದರೆ, ಸರ್ವರ್ ಸಮಸ್ಯೆಯಿಂದಾಗಿ ಫಲಾನುಭವಿಗಳು ಹೈರಾಣಾಗಿದ್ದಾರೆ.
undefined
ವಿಧಾನಸಭೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗುತಿದ್ದಂತೆ ಮಾದರಿ ನೀತಿ ಸಂಹಿತೆ ಪಾಲನೆಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಮ್ಮ ಇಲಾಖೆಯ ತಂತ್ರಾಂಶದ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಇದರಿಂದಾಗಿ ಹೊಸ ಅರ್ಜಿ ಸಲ್ಲಿಕೆ, ಹೊಸ ಪಡಿತರ ಚೀಟಿ ವಿತರಣೆ, ಪರಿಷ್ಕರಣೆ ಅಥವಾ ತಿದ್ದುಪಡಿ ಕಾರ್ಯವೂ ಸ್ಥಗಿತವಾಗಿತ್ತು. ಕಳೆದ 4 ತಿಂಗಳಿಂದ ಸ್ಥಗಿತವಾಗಿದ್ದ ಆಹಾರ ಇಲಾಖೆಯ ತಂತ್ರಾಂಶಕ್ಕೆ ಆ.16 ರಿಂದ ಆ.19 ವರೆಗೆ ಪೂರ್ವಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗಿತ್ತು.
2ಎ ಮೀಸಲಾತಿ ನೀಡಲಿಲ್ಲವೆಂಬ ಕಾರಣಕ್ಕೆ ಕಾಂಗ್ರೆಸ್‌ಗೆ ಮತ: ಶಾಸಕ ವಿನಯ್ ಕುಲಕರ್ಣಿ
ಸಾರ್ವಜನಿಕರ ಒತ್ತಾಯದ ಮೇಲೆ ಸರ್ಕಾರ ಆ.21ವರೆಗೆ ಕಾಲಾವಧಿ ವಿಸ್ತರಿಸಿ ಅವಕಾಶ ಕಲ್ಪಿಸಿದೆ. ಆದರೆ, ಗೃಹಲಕ್ಷ್ಮಿ ಯೋಜನೆ ಘೋಷಣೆ ನಂತರ ಪಡಿತರ ಚೀಟಿಯಲ್ಲಿನ ಹೆಸರು ತಿದ್ದುಪಡಿ, ಫೋಟೊ ಹಾಗೂ ನ್ಯಾಯಬೆಲೆ ಅಂಗಡಿ ಬದಲಾವಣೆ, ಹೊಸ ಹೆಸರು ಸೇರಿಸುವುದು ಹಾಗೂ ಈಗಾಗಲೇ ಚೀಟಿಯಲ್ಲಿರುವ ಹೆಸರನ್ನು ತೆಗೆದು ಹಾಕುವುದಕ್ಕೆ ಅವಕಾಶ ನೀಡಲಾಗಿದೆ. ಫಲಾನುಭವಿಗಳ ತುರ್ತಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸರ್ವರ್ ಸಮಸ್ಯೆಯಿಂದಾಗಿ ಆನ್‌ಲೈನ್ ಸೆಂಟರ್‌ಗಳ ಮುಂದೆ ಪಡಿತರ ಚೀಟಿ ತಿದ್ದುಪಡಿಗಾಗಿ ಸರತಿ ಸಾಲಿನಲ್ಲಿ ಮಹಿಳೆಯರು, ವೃದ್ಧರು, ಸಾರ್ವಜನಿಕರು ಆನ್‌ಲೈನ್ ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಕಾಯ್ದು ಸುಸ್ತಾಗಿದ್ದಾರೆ. ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆ, ವೈದ್ಯಕೀಯ ಚಿಕಿತ್ಸೆ ಜತೆಗೆ ಸರ್ಕಾರದ ಇನ್ನೀತರ ಯೋಜನೆ ಹಾಗೂ ಸೌಲಭ್ಯಗಳನ್ನು ಪಡೆಯಲು ಚುನಾವಣೆ ಪೂರ್ವದಲ್ಲಿಯೆ ಪಡಿತರ ಚೀಟಿಗಾಗಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಇದುವರೆಗೆ ಮುಕ್ತಿ ಸಿಕ್ಕಿಲ್ಲ. ಈ ಮೊದಲು ವೈದ್ಯಕೀಯ ಚಿಕಿತ್ಸೆಗೆಂದು ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಪಡಿತರ ಚೀಟಿ ವಿತರಣೆಗೆ ಆಹಾರ ಇಲಾಖೆಯ ನಿರೀಕ್ಷಕರು ತಹಸೀಲ್ದಾರ್ ಮೂಲಕ ಉಪನಿದೇರ್ಶಕರಿಗೆ ಅಥವಾ ಜಂಟಿ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಿದ ಬಳಿಕ ಜಿಲ್ಲಾಮಟ್ಟದ ಅಧಿಕಾರಿಗಳು ಪಡಿತರ ಚೀಟಿ ವಿತರಣೆಗೆ ಅನುಮೋದನೆ ಕೊಡುವ ಮೂಲಕ, ಫಲಾನುಭವಿಗಳಿಗೆ ಹಲವು ಬಾರಿ, ಅನೇಕ ಕಚೇರಿಗಳಿಗೆ ಅಲೆದಾಡಿದ ಬಳಿಕವಾದರೂ ಪಡಿತರ ಚೀಟಿ ಕೈ ಸೇರುತ್ತಿತ್ತು. ಆದರೆ, ಕಳೆದ 4 ತಿಂಗಳಿಂದ ಅದಕ್ಕೂ ಸರ್ಕಾರ ಬ್ರೇಕ್ ಹಾಕಿತ್ತು. ಇದೀಗ ಅವಕಾಶ ನೀಡಲಾಗಿದೆಯಾದರೂ ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಒಂದು ಕಡೆ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿದ ವೇಳೆ ಸೌಲಭ್ಯಕ್ಕಾಗಿ ಪಡಿತರ ಚೀಟಿ ಬೇಡುತ್ತಿದ್ದಾರೆ. ಸರ್ವರ್ ಸಮಸ್ಯೆಯಿಂದಾಗಿ ತರ್ತು ಸೇವೆಗೂ ಪಡಿತರ ಚೀಟಿ ಇಲ್ಲದಂತಾಗಿದೆ. ಚೀಟಿ ಇಲ್ಲವಾದಲ್ಲಿ ಸಾವಿರಾರು ರುಪಾಯಿ ಹಣವನ್ನು ವೈದ್ಯಕೀಯ ಚಿಕಿತ್ಸೆಗಾಗಿ ವೆಚ್ಚ ಮಾಡಬೇಕಾದ ಅನಿವಾರ್ಯ ಎದುರಾಗಿದ್ದರಿಂದ ಬಡ ಹಾಗೂ ಮಧ್ಯಮ ವರ್ಗದ ಫಲಾನುಭವಿಗಳು ದಿಕ್ಕು ತೋಚದೆ ಕಂಗಾಲಾಗಿದ್ದಾರೆ.
ಪಡಿತರ ಧಾನ್ಯ ವಿತರಣೆ ಹಾಗೂ ಪಡಿತರ ಚೀಟಿ ಪರಿಷ್ಕರಣೆ, ತಿದ್ದುಪಡಿ ಕಾರ್ಯ ಏಕಕಾಲಕ್ಕೆ ನಡೆಯುತ್ತಿರುವುದರಿಂದ ಕಾರ್ಯದ ಒತ್ತಡದಿಂದ ಸರ್ವರ್ ಹ್ಯಾಂಗ್ ಆಗಿದೆ. ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸೋಮವಾರದೊಳಗೆ ಸಮಸ್ಯೆಗೆ ಬಗೆಹರಿಯಲಿದೆ ಎಂದು ಬೆಳಗಾವಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ್ ಕಂಕಣವಾಡಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಮಹಿಳೆಗೆ ಮುಖ್ಯಮಂತ್ರಿಯಾಗುವ ಯೋಗವಿದೆ: ಕೋಡಿಶ್ರೀಗಳ ಭವಿಷ್ಯ
ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಕೇವಲ 2 ದಿನಗಳ ಕಾಲ ಅವಕಾಶ ನೀಡಿತ್ತು. ಆದರೆ, ಸರ್ವ ಸಮಸ್ಯೆ ಇರುವ ಕಾರಣ ಅದನ್ನು ಆ.21ರವರೆಗೂ ಕಾಲಾವಕಾಶ ನೀಡಿದೆ. ಸರ್ವರ ಸಮಸ್ಯೆ ಇರುವ ಕಾರಣಕ್ಕೆ ಮೊದಲ ದಿನವಾದ ಆ.18ರಂದು 2 ಅರ್ಜಿ ಹಾಗೂ 19ರಂದು ಯಾವುದೇ ಅರ್ಜಿ ಹಾಕಿಲ್ಲ. ಹೀಗಾಗಿ ಜನರು ತಮ್ಮ ಕೆಲಸ ಬಿಟ್ಟು ಬರುತ್ತಿದ್ದಾರೆ. ಅರ್ಜಿ ಹಾಕುವ ಅವಧಿಯನ್ನು ಇನ್ನಷ್ಟುಹೆಚ್ಚಿಸಬೇಕು. ಇದರಿಂದ ಜನರಿಗೂ, ನಮಗೂ ಅನುಕೂಲ ಎಂದು ಆನ್‌ಲೈನ್ ಕೇಂದ್ರದ ಸಿಬ್ಬಂದಿ ದಶರಥ ಬಡಿಗೇರ ಹೇಳಿದ್ದಾರೆ.
ರೇಷನ್ ಕಾರ್ಡ್‌ನಲ್ಲಿ ಹೆಸರು ಸೇರ್ಪಡೆ ಇದೆ. 6 ತಿಂಗಳ ನಂತರ ಇದೀಗ ಹೆಸರು ಸೇರ್ಪಡೆಗೆ ಅವಕಾಶ ಕೊಟ್ಟಿದ್ದಾರೆ. ಆದರೆ, ಇದೀಗ ಸರ್ವ ಸಮಸ್ಯೆ ಇರುವ ಕಾರಣ ಅರ್ಜಿ ಹಾಕಲು ಆಗುತ್ತಿಲ್ಲ. 2 ದಿನಗಳಿಂದ ಅರ್ಜಿ ಹಾಕಲು ಅಲೆದಾಡುತ್ತಿದ್ದೇನೆ ಎಂದು ಪಡಿತರದಾರ ಪ್ರಕಾಶ ಪಾಟೋಳಿ ತಿಳಿಸಿದ್ದಾರೆ.