ಉತ್ತರಕನ್ನಡ: ದಾಂಡೇಲಿಯಲ್ಲಿ ಅಪರೂಪದ ಪಕ್ಷಿ ಹಾರ್ನ್‌ಬಿಲ್ ಉತ್ಸವ

By Suvarna News  |  First Published Feb 11, 2023, 10:01 PM IST

ಅಪರೂಪದ ಪಕ್ಷಿ ಹಾರ್ನ್‌ಬಿಲ್ ದಕ್ಷಿಣ ಭಾರತದಲ್ಲಿ ನೋಡಲು  ಕಂಡು ಬರುವುದು ಕೇವಲ ಕರ್ನಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿ ಮಾತ್ರ. ಹಾರ್ನಬಿಲ್ ಪಕ್ಷಿಯ ಬಗ್ಗೆ ಪ್ರವಾಸಿಗರಿಗೆ ಪರಿಚಯಿಸುವ ಹಾಗೂ ಪಕ್ಷಿಯನ್ನು ಸಂರಕ್ಷಿಸುವ ಉದ್ದೇಶದಿಂದ ಇದೀಗ ಅರಣ್ಯ ಇಲಾಖೆ ದಾಂಡೇಲಿಯಲ್ಲಿ ಹಾರ್ನಬಿಲ್ ಹಕ್ಕಿ ಹಬ್ಬವನ್ನು ಆಯೋಜನೆ ಮಾಡಲಾಗಿದೆ.


ವರದಿ: ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್  

ಕಾರವಾರ (ಫೆ.11): ಉತ್ತರಕನ್ನಡ ಜಿಲ್ಲೆಯ ಕಾಳಿ ದಡದ ಅರಣ್ಯ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಅಪರೂಪದ ಪಕ್ಷಿ ಹಾರ್ನ್‌ಬಿಲ್. ಎಂತವರನ್ನು ಕೂಡಾ ಆಕರ್ಷಿಸುವಂತಹ ಸುಂದರತೆ ಹೊಂದಿರುವ ಹಾರ್ನಬಿಲ್ ಪಕ್ಷಿ ದಕ್ಷಿಣ ಭಾರತದಲ್ಲಿ ನೋಡಲು  ಕಂಡು ಬರುವುದು ಕೇವಲ ಕರ್ನಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿ ಮಾತ್ರ. ಹಾರ್ನಬಿಲ್ ಪಕ್ಷಿಯ ಬಗ್ಗೆ ಪ್ರವಾಸಿಗರಿಗೆ ಪರಿಚಯಿಸುವ ಹಾಗೂ ಪಕ್ಷಿಯನ್ನು ಸಂರಕ್ಷಿಸುವ ಉದ್ದೇಶದಿಂದ ಇದೀಗ ಅರಣ್ಯ ಇಲಾಖೆ ದಾಂಡೇಲಿಯಲ್ಲಿ ಹಾರ್ನಬಿಲ್ ಹಕ್ಕಿ ಹಬ್ಬವನ್ನು ಆಯೋಜನೆ ಮಾಡಿದ್ದು, ನೂರಾರು ಪಕ್ಷಿ ಪ್ರಿಯರು ಹಾಗೂ ಜನಸಾಮಾನ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.  

Latest Videos

undefined

ತನ್ನ ಅಮೋಘ ಸೌಂದರ್ಯದಿಂದ ಅನೇಕರ ಮನಸೆಳೆಯುವ ವಿಭಿನ್ನ ಮಾದರಿಯ ಪಕ್ಷಿ ಹಾರ್ನಬಿಲ್. ಈ ಪಕ್ಷಿಯ ಹೆಸರು ಹೇಳಿದ ಕೂಡಲೇ ನಮಗೆ ತಕ್ಷಣ ನೆನಪಾಗೋದು ಉತ್ತರಕನ್ನಡ ಜಿಲ್ಲೆಯ ದಾಂಡೇಲಿ. ದಕ್ಷಿಣ ಭಾರತದಲ್ಲಿಯೇ ಕರ್ನಾಟದ ಕಾಳಿ ನದಿಯ ದಡದಲ್ಲಿನ ಅರಣ್ಯ ಪ್ರದೇಶದಲ್ಲಿ ಕಂಡು ಬರುವ ಅಪರೂಪದ ಹಾರ್ನಬಿಲ್ ಪಕ್ಷಿ ಇಂದು ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದರೂ ಹಲವರಿಗೆ ಹಾರ್ನಬಿಲ್ ಪರಿಚಯ ಇನ್ನೂ ಕೂಡಾ ಇಲ್ಲ. ಅಲ್ಲದೇ, ಅಪರೂಪದ ಪಕ್ಷಿ ಪ್ರಭೇದವಾಗಿರುವ ಹಾರ್ನಬಿಲ್ ರಕ್ಷಣೆಯನ್ನು ಕೂಡಾ ಮಾಡುವ ಉದ್ದೇಶದಿಂದ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಹಾರ್ನಬಿಲ್ ಹಕ್ಕಿಹಬ್ಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

 ದಾಂಡೇಲಿ ವಲಯ ಅರಣ್ಯ ಇಲಾಖೆ ಹಾರ್ನಬಿಲ್ ಸಂರಕ್ಷಣೆ ಹಾಗೂ ಪರಿಚಯಿಸುವ ನಿಟ್ಟಿನಲ್ಲಿ ಹಾರ್ನಬಿಲ್ ಹಕ್ಕಿ ಹಬ್ಬವನ್ನು ಆಯೋಜನೆ ಮಾಡಿದ್ದು, ಈ ಹಿನ್ನಲೆಯಲ್ಲಿ ದಾಂಡೇಲಿ ನಗರದಲ್ಲಿ ಹಾರ್ನಬಿಲ್ ಪಕ್ಷಿಯ ಪ್ರತಿಕೃತಿಯ ಮೆರವಣಿಗೆ ಮಾಡಲಾಯಿತು. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಪಕ್ಷಿಪ್ರಿಯರು, ಹವ್ಯಾಸಿ ಛಾಯಾಗ್ರಾಹಕರು ಜಾಥದಲ್ಲಿ ಪಾಲ್ಗೊಂಡು ಹಾರ್ನಬಿಲ್ ಪಕ್ಷಿಯ ಸಂರಕ್ಷಣೆ ಮಾಡುವಂತೆ ಹಾಗೂ ಪಕ್ಷಿಯ ಕುರಿತು ಸಾರ್ವಜನಿಕರಿಗೆ ಪರಿಚಯಿಸುವ ಕಾರ್ಯ ಮಾಡಿದರು. ನಂತರ ದಾಂಡೇಲಿಯ ಹಾರ್ನ್ ಬಿಲ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಆರ್ ವಿ ದೇಶಪಾಂಡೆ  ಚಾಲನೆ ನೀಡಿದರು. ಇಡೀ ದೇಶದ ವಿವಿಧ ಭಾಗದಿಂದ ಸುಮಾರು 150ಕ್ಕೂ ಅಧಿಕ ಪಕ್ಷಿ ಪ್ರಿಯರು ಹಕ್ಕಿಹಬ್ಬಕ್ಕೆ ಆಗಮಿಸಿದ್ದು, ಇಂದಿನಿಂದ ಎರಡು ದಿನಗಳ ಕಾಲ ಹಾರ್ನಬಿಲ್ ಬಗ್ಗೆ ಪಕ್ಷಿಪ್ರಿಯರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಕಾರ್ಯ ಮಾಡಲಾಗುತ್ತಿದೆ..

ಇನ್ನು ಹಾರ್ನಬಿಲ್ ಹಕ್ಕಿ ಹಬ್ಬದಲ್ಲಿ ದೇಶ ವಿದೇಶದಿಂದ ಪಕ್ಷಿ ಪ್ರಿಯರು ಪಾಲ್ಗೊಂಡಿದ್ದು, ಪ್ರತಿದಿನ ಪಕ್ಷಿ ವೀಕ್ಷಣೆ, ಹಾರ್ನಬಿಲ್ ಕುರಿತು ಚರ್ಚೆಗಳು, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಇನ್ನು ಹಾರ್ನಬಿಲ್ ಪಕ್ಷಿಯ ಆಕರ್ಷಕ ಛಾಯಾಗ್ರಾಹಕ ಪ್ರದರ್ಶನವನ್ನು ಕೂಡಾ ಮಾಡಲಾಗುತ್ತಿದೆ. ಹಾರ್ನಬಿಲ್ ಪಕ್ಷಿ ಇಡೀ ಪ್ರಪಂಚದಲ್ಲಿ 57 ಪ್ರಭೇದದಲ್ಲಿ ಕಂಡು ಬರುತ್ತಿದ್ದು, ನಮ್ಮ ದೇಶದಲ್ಲಿ 9 ಪ್ರಭೇದದಲ್ಲಿ ಪಕ್ಷಿ ಕಂಡು ಬರುತ್ತದೆ. ಇನ್ನು ದಾಂಡೇಲಿಯಲ್ಲಿ ಈ ಪಕ್ಷಿಯ 4 ಪ್ರಭೇದಗಳನ್ನು ಕಾಣಬಹುದಾಗಿದ್ದು, ಈ ಪಕ್ಷಿಯನ್ನು ಅರಣ್ಯದ ರೈತ ಎಂದು ಕೂಡಾ  ಕರೆಯುತ್ತಾರೆ.

ಕಿಡಿಗೇಡಿಗಳ ಕೌರ್ಯಕ್ಕೆ ಅಳವಿನಂಚಿನ ಹಾರ್ನ್‌ಬಿಲ್ ಹಕ್ಕಿ ಬಲಿ, ಕಾಲಿನಿಂದ ತುಳಿದುಕೊಂದು ವಿಕೃತಿ!

ಸುಮಾರು 120 ಬಗೆಯ ಹಣ್ಣುಗಳನ್ನು ತಿಂದು ಅದರ ಬೀಜಗಳನ್ನು ಅರಣ್ಯದೆಲ್ಲೆಡೆ ಚೆಲ್ಲುತ್ತಾ ಸಾಗುವ ಹಾರ್ನಬಿಲ್ ಪಕ್ಷಿಯಿಂದ ಅರಣ್ಯ ಬೆಳೆಯಲು ಸಹಕಾರಿಯಾಗಿರುವುದರಿಂದ ಇದನ್ನು ಅರಣ್ಯ ರೈತ ಎಂದು ಕರೆಯಲಾಗುತ್ತದೆ. ಹಾರ್ನಬಿಲ್ ಪಕ್ಷಿ ನಾಗಾಲ್ಯಾಂಡ್ ರಾಜ್ಯ ಬಿಟ್ಟರೇ ನಮ್ಮ ರಾಜ್ಯದ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ, ಕಾರವಾರ, ಅಂಕೋಲಾ, ಗೋಕರ್ಣ, ಶಿರಸಿ ಸಿದ್ದಾಪುರ, ಯಲ್ಲಾಪುರ ತಾಲೂಕಿನ ಕೆಲಭಾಗದಲ್ಲೂ ಕಂಡು ಬರುತ್ತವೆ. ಕನ್ನಡದಲ್ಲಿ ಮಂಗಟ್ಟೆ ಎಂದು ಕರೆಯಲ್ಪಡುವ ಹಾರ್ನಬಿಲ್ ಪಕ್ಷಿಯ ಪರಿಚಯ ಹಲವರಿಗೆ ಇಲ್ಲದ ಕಾರಣ ಈ ಪಕ್ಷಿಯ ಪರಿಚಯವನ್ನು ಎಲ್ಲರಿಗೂ ಮಾಡಿಕೊಡುವ ಉದ್ದೇಶದಿಂದ  ಹಕ್ಕಿಹಬ್ಬವನ್ನ ಆಯೋಜನೆ ಮಾಡಲಾಗಿದೆ ಅಂತಾರೆ ಅರಣ್ಯಾಧಿಕಾರಿಗಳು.

ಉತ್ತರಕನ್ನಡದಲ್ಲಿ ಹಾರ್ನ್‌ಬಿಲ್ ಪಕ್ಷಿಯ ಮನುಷ್ಯ ಪ್ರೀತಿ, ಹಕ್ಕಿ ಬರೋದನ್ನೇ ಕಾಯುವ ಕುಟುಂಬ

 ಒಟ್ಟಿನಲ್ಲಿ ಅಪರೂಪದ ಆಕರ್ಷಕ ಪಕ್ಷಿಯಾದ ಹಾರ್ನಬಿಲ್ ಸಂರಕ್ಷಣೆ ಹಾಗೂ ಪರಿಚಯಿಸುವ ನಿಟ್ಟಿನಲ್ಲಿ ಹಾರ್ನಬಿಲ್ ಹಕ್ಕಿಹಬ್ಬ ಆಯೋಜನೆ ಮಾಡಲಾಗಿದ್ದು, ಈ ಮೂಲಕ ಜನರಲ್ಲಿ ಹಾರ್ನಬಿಲ್ ಪರಿಚಯ ಹೆಚ್ಚಿನ ಮಟ್ಟದಲ್ಲಾಗುವ ಮೂಲಕ ಹಾರ್ನಬಿಲ್ ಪಕ್ಷಿಯ ಸಂರಕ್ಷಣೆ ಮಾಡುವಂತಾಗಲಿ ಅನ್ನೋದು ನಮ್ಮ ಆಶಯ.

click me!