ರಾಮನಗರ: ಮುಂದಿನ ವಾರದಿಂದಲೇ ಕಾವೇರಿ ನೀರು ಪೂರೈಕೆ

By Kannadaprabha News  |  First Published Jul 11, 2024, 1:24 PM IST

ನೆಟ್ಕಲ್ ಕುಡಿಯುವ ನೀರಿನ ಯೋಜನೆ ಮೂಲಕ ರಾಮನಗರಕ್ಕೆ ಕಾವೇರಿ ನೀರು ಬಂದಿದೆ. ಮುಂದಿನ ವಾರದಿಂದಲೇ ಹಂತಹಂತವಾಗಿ ಕುಡಿಯುವ ನೀರು ಪೂರೈಸಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.


 ರಾಮನಗರ ;  ನೆಟ್ಕಲ್ ಕುಡಿಯುವ ನೀರಿನ ಯೋಜನೆ ಮೂಲಕ ರಾಮನಗರಕ್ಕೆ ಕಾವೇರಿ ನೀರು ಬಂದಿದೆ. ಮುಂದಿನ ವಾರದಿಂದಲೇ ಹಂತಹಂತವಾಗಿ ಕುಡಿಯುವ ನೀರು ಪೂರೈಸಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ನಗರಸಭೆ ಸಭಾಂಗಣದಲ್ಲಿ ಪಟ್ಟಣದ ನಾಗರಿಕರಿಂದ ಅಹವಾಲು ಆಲಿಸುವುದಕ್ಕೂ ಮುನ್ನ ಮಾತನಾಡಿದ ಅವರು, ನೆಟ್ಕಲ್ ಯೋಜನೆ ಮೂಲಕ ರಾಮನಗರ ಜನರ ದಶಕಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.

Tap to resize

Latest Videos

ಪ್ರಸ್ತುತ ಕುಡಿಯುವ ನೀರಿನ ಬಿಲ್ 11 ಕೋಟಿ ಮತ್ತು ಬಡ್ಡಿ 5 ಕೋಟಿ ಸೇರಿ ಒಟ್ಟು 16 ಕೋಟಿ ಬಾಕಿ ಇದೆ ಎಂದು ಅಧಿಕಾರಿಗಳು ಶಾಸಕರಿಗೆ ತಿಳಿಸಿದರು. ಇದಕ್ಕೆ ನಗರಸಭಾ ಸದಸ್ಯರು ಮತ್ತು ಸಾರ್ವಜನಿಕರು ಸರ್ಕಾರದ ಜೊತೆ ಚರ್ಚಿಸಿ ನೀರಿನ ಬಾಕಿ ಮೊತ್ತವನ್ನು ಮನ್ನಾ ಮಾಡಿಸಿಕೊಡಿ ಎಂದು ಶಾಸಕರಲ್ಲಿ ಮನವಿ ಮಾಡಿದರು.

ಬಡವರಿಗೆ ನಿವೇಶನಗಳನ್ನು ನೀಡಲು ಈಗಾಗಲೇ ಭೂಮಿ ಗುರುತಿಸಲಾಗಿದೆ. ವಾರ್ಡ್ ಸಮಿತಿ ಜೊತೆ ನಾನೇ ಕುಳಿತು ಅರ್ಹರನ್ನು ಆಯ್ಕೆ ಮಾಡಿ ಬಡವರ ನೆರವಿಗೆ ನಿಲ್ಲುತ್ತೇನೆ. ಯಾವುದೇ ಒತ್ತಡ ಮತ್ತು ಅಕ್ರಮಗಳಿಗೆ ಆಸ್ಪದ ನೀಡುವುದಿಲ್ಲ, ನಗರಸಭೆಯಲ್ಲಿ ಆಶ್ರಯ ಯೋಜನೆ, ಇ-ಖಾತಾ ಮಾಡಿಕೊಡಲು ಸಾರ್ವಜನಿಕರಿಂದ ಹಣ ಕೇಳುತ್ತಿದ್ದೀರಾ ಎಂದು ನಗರಸಭೆ ಅಧಿಕಾರಿಗಳ ವಿರುದ್ದ ಹರಿಹಾಯ್ದರು.

ಹಕ್ಕುಪತ್ರ ವಿತರಣೆ:  ಬೀಡಿ ಕಾರ್ಮಿಕರ ಕಾಲೋನಿಯ 430 ಪಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮ ವಹಿಸಲಾಗುವುದು. ನಗರಸಭೆಯಲ್ಲಿ ಭ್ರ್ರಷ್ಟಾಚಾರದ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಈ ಕಳಂಕ ತೆಗೆದು ಹಾಕಲು ಅಧಿಕಾರಿಗಳಿಂದ ಮಾತ್ರ ಸಾಧ್ಯವಾಗಲಿದೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

ಈ ವೇಳೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಮುಖ್ಯಾಧಿಕಾರಿ ಎಲ್.ನಾಗೇಶ್ ಸೇರಿದಂತೆ ನಗರಸಭಾ ಸದಸ್ಯರು ಅಧಿಕಾರಿಗಳು ಇದ್ದರು.

ಗ್ರಾಮಮಟ್ಟದಲ್ಲಿ ಸಮಸ್ಯೆಗಳಿಗೆ ಪರಿಹಾರ

ರಾಮನಗರ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುವಂತಹ ಆಡಳಿತ ನನ್ನ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಬೇಕೆಂಬ ಆಶಯದಿಂದ ಜನಸಂಪರ್ಕ ಸಭೆ ನಡೆಸುತ್ತಿದ್ದೇನೆ. ಗ್ರಾಪಂ ಅಧಿಕಾರಿಗಳು ಯಾರ ಮುಲಾಜಿಗು ಒಳಗಾಗದೆ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಸೂಚನೆ ನೀಡಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಜನಸ್ಪಂದನಾದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ಸರ್ಕಾರದ ಕಾರ್ಯಕ್ರಮಗಳು ಅನುಷ್ಟಾನ ಆಗಬೇಕು. ಅಧಿಕಾರಿಗಳು ಸಕಾಲದಲ್ಲಿ ಸಾರ್ವಜನಿಕರ ಕೆಲಸಗಳನ್ನು ಸ್ಥಳೀಯ ಆಡಳಿತವಾಗಿರುವ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುವಂತಹ ಆಡಳಿತ ನನ್ನ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಬೇಕೆಂಬ ಆಶಯದಿಂದ ಜನಸಂಪರ್ಕ ಸಭೆ ನಡೆಸುತ್ತಿದ್ದೇನೆ. ಕಳೆದ ವಾರ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿರುವ ಬಗ್ಗೆ ನನಗೆ ಮಾಹಿತಿ ಒದಗಿಸಿ, ಅರ್ಜಿ ನೊಂದಣಿ ಮಾಡಿಕೊಳ್ಳುವಂತೆ ಹೇಳಿದರು.

ನಾನು ಪಂಚಾಯಿತಿ ಮಟ್ಟದಲ್ಲಿ ಪ್ರವಾಸ ಆರಂಭಿಸಿ ಇ-ಸ್ವತ್ತು ವಿತರಣೆ ಮಾಡಲು ಮುಂದಾಗುತ್ತೇನೆ. ನಿಮ್ಮಗಳ ಕೆಲಸ ತೃಪ್ತಿ ಕೊಡದೆ ಸಾರ್ವಜನಿಕರಿಂದ ದೂರುಗಳು ಬಂದರೆ ನಾನು ಶಿಸ್ತು ಕ್ರಮ ವಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಆಶ್ರಯ ಮನೆಗಳ ನಿರ್ಮಾಣ ಫಲಾನುಭವಿಗಳ ಆಯ್ಕೆ ಮಾಡುವಾಗ ಬಡವರು ವಂಚಿತರಾಗಬಾರದು, ಅಗತ್ಯವಿರುವ ಮನೆಗಳ ಮಂಜೂರಾತಿ ಕೊಡಿಸಲು ನಾನು ಸಿದ್ದನಿದ್ದೇನೆ. ಇ-ಸ್ವತ್ತು ಗಳು, ಸ್ಮಶಾನ ಗುರುತಿಸುವಿಕೆ, ಈಗಾಗಲೇ ಮಂಜೂರು ಸ್ಥಳಕ್ಕೆ ಕಾಂಪೌಂಡ್ ನಿರ್ಮಿಸುವುದು ಪಿಡಿಓಗಳ ಜವಾಬ್ದಾರಿ. ಕಸಬಾ ಮತ್ತು ಕೈಲಾಂಚ ಹೋಬಳಿಗಳಲ್ಲಿರುವ 78 ಶುದ್ದ ಕುಡಿಯುವ ನೀರು ಘಟಕಗಳ ಪೈಕಿ ಕೆಲವು ದುರಸ್ಥಿಗೆ ಬಂದಿವೆ. ನಾನು ದುರಸ್ಥಿ ಮಾಡಿಸುತ್ತೇನೆ. ನಿರ್ವಹಣೆಗೆ ಗ್ರಾಪಂಗಳು ಜವಬ್ದಾರಿ ತೆಗೆದುಕೊಳ್ಳಬೇಕಿದೆ ಎಂದರು.

ಡೆಂಗ್ಯೂ ಬಗ್ಗೆ ಎಚ್ಚರ ವಹಿಸಿ ಚರಂಡಿಗಳ ಸ್ಚಚ್ಚತೆ ಕಾರ್ಯ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಿ ಬ್ಲೀಚಿಂಗ್ ಅಳವಡಿಸಿ ಸ್ಪ್ರೇ ಮಾಡಲು ಕ್ರಮವಹಿಸಿ ಎಂದು ಪಿಡಿಒಗಳಿಗೆ ಇಕ್ಬಾಲ್ ಹುಸೇನ್ ಸೂಚಿಸಿದರು.

ಈ ವೇಳೆ ತಹಸೀಲ್ದಾರ್ ತೇಜಸ್ವಿನಿ, ತಾಪಂ ಇಒ ಪ್ರದೀಪ್ ಸೇರಿದಂತೆ ಇಲಾಖಾ ಅಧಿಕಾರಿಗಳು ಮತ್ತು ಪಿಡಿಒಗಳು ಹಾಜರಿದ್ದರು. 

click me!