ರಾಮನಗರ: ಪೂರ್ವ ಮುಂಗಾರಿನಲ್ಲಿ ಶೇ.82.87ರಷ್ಟು ಬಿತ್ತನೆ

By Kannadaprabha News  |  First Published Jun 19, 2024, 8:01 AM IST

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು ಪೂರ್ವ ಮುಂಗಾರಿನಲ್ಲಿ ಶೇ. 82.87ರಷ್ಟು ಬಿತ್ತನೆ ಮಾಡಿದ್ದಾರೆ.


-ಎಂ.ಅಫ್ರೋಜ್ ಖಾನ್

 ರಾಮನಗರ :  ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು ಪೂರ್ವ ಮುಂಗಾರಿನಲ್ಲಿ ಶೇ. 82.87ರಷ್ಟು ಬಿತ್ತನೆ ಮಾಡಿದ್ದಾರೆ.

Tap to resize

Latest Videos

ಕಳೆದೊಂದು ವರ್ಷದಿಂದ ಮಳೆ ಇಲ್ಲದೆ ಬೆಳೆಯನ್ನೇ ಮಾಡಿರಲಿಲ್ಲ. ಕೆರೆ ಭಾಗದ ಪ್ರದೇಶಗಳಲ್ಲಿ ಹಾಗೂ ಕೊಳವೆಬಾವಿ ಇದ್ದವರು ಮಾತ್ರ ಬೆಳೆ ಮಾಡಿದ್ದರು. ಆದರೆ, ಭೀಕರ ಬರಕ್ಕೆ ಕೊಳವೆಬಾವಿಗಳೂ ಬತ್ತಿ ಹೋದ ಕಾರಣ ಭೂಮಿ ಬರಡಾಗುವ ಸ್ಥಿತಿ ತಲುಪಿತ್ತು. ಇಂತಹ ಸಂದರ್ಭದಲ್ಲಿ ಬಂದ ಮಳೆಯಿಂದಾಗಿ ಎಲ್ಲೆಡೆ ನೀರು ಹರಿಯುತ್ತಿದ್ದು ರೈತರಲ್ಲಿ ಸಂತಸ ಕಡಲಿನಂತಾಗಿದೆ.

ಕಳೆದ ವರ್ಷ ಬಿತ್ತನೆ ಇಲ್ಲದ ಕಾರಣ ರೈತರು ಬಿತ್ತನೆ ಬೀಜವನ್ನು ಮನೆಯಲ್ಲೇ ಸಂಗ್ರಹಿಸಿ ಇಟ್ಟುಕೊಂಡಿದ್ದರು. ಈಗ ಬಿತ್ತನೆಗೆ ಸಕಾಲವಾಗಿದ್ದು, ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮುಂಗಾರು ಬಿತ್ತನೆಗೂ ಮೊದಲು ಅಲ್ಪಾವಧಿಯಲ್ಲಿ ಬರುವ ದ್ವಿದಳ ಧಾನ್ಯಗಳ ಬಿತ್ತನೆ ಎಲ್ಲಡೆ ನಡೆಯುತ್ತಿದೆ.

ಎಳ್ಳು, ಅಲಸಂದೆ, ತೊಗರಿ ಬಿತ್ತನೆ ಭರದಿಂದ ಸಾಗಿದೆ. ಕಳೆದೊಂದು ವರ್ಷದಿಂದ ಹೊಲ ಉಳುಮೆ ಮಾಡಲು ಸಾಧ್ಯವಾಗಿರಲಿಲ್ಲ. ಹಲವರು ಮೊದಲು ಹೊಲ ಉಳುಮೆಗೆ ಆದ್ಯತೆ ನೀಡಿದ್ದಾರೆ. ಬಹುತೇಕ ರೈತರು ಹೊಲ ಹಸನು ಮಾಡುವತ್ತ ಚಿತ್ತ ಹರಿಸಿದ್ದಾರೆ. ಇನ್ನೂ ಕೆಲವರು ಮೊದಲು ಬಿತ್ತನೆ ಮಾಡಿ ನಂತರ ಉಳುಮೆ ಮಾಡುತ್ತಿದ್ದಾರೆ.

ಮಳೆಯಾಶ್ರಿತ ಪ್ರದೇಶವಾಗಿರುವ ಕಾರಣ ರೈತರಿಗೆ ಪೂರ್ವ ಮುಂಗಾರು ಬಿತ್ತನೆ ಕೊಂಚ ತಡವಾಗಿದೆ ಎಂಬ ಕೊರಗಿದೆ. ಹಿನ್ನಡೆಯಾದರೂ ಸರಿ, ಬಿತ್ತನೆ ನಿಲ್ಲಿಸಬಾರದು ಎಂಬ ಕಾರಣದಿಂದ ಬಿತ್ತನೆ ಮುಂದುವರಿಸಿದ್ದಾರೆ.

ಏಪ್ರಿಲಲ್ಲೇ ಬಿತ್ತನೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಮೇ ತಿಂಗಳ ಕೊನೆಯ ವಾರ ಹಾಗೂ ಜೂನ್ ಮೊದಲ ವಾರದಲ್ಲಿ ಉತ್ತಮ ಮಳೆಯಾಗಿರುವ ಕಾರಣ ಬೆಳೆ ಹಿಂದೆ ಬೀಳುವ ಸಾಧ್ಯತೆ ಇದೆ. ಈಗ ದ್ವಿದಳ ಧಾನ್ಯಗಳ ಬಿತ್ತನೆ ಮಾಡಿದರೆ ಆಗಸ್ಟ್ ವೇಳೆಗೆ ಬೆಳೆ ಬರುತ್ತದೆ. ಇದರಿಂದ ಮುಂಗಾರು ಬಿತ್ತನೆಗೆ ತೊಂದರೆ ಉಂಟಾಗುತ್ತದೆ ಎಂಬ ಕಾರಣದಿಂದ ಕೆಲ ರೈತರು ಪೂರ್ವ ಮುಂಗಾರು ಬಿತ್ತನೆಯಿಂದ ದೂರ ಉಳಿದಿದ್ದಾರೆ. ಆದರೂ ಕೆಲವರು ಜೋಳ ಸೇರಿದಂತೆ ಮೇವಿನ ಬೆಳೆಗಳ ಬಿತ್ತನೆ ಮಾಡುತ್ತಿದ್ದಾರೆ.

ಈಗಷ್ಟೇ ಬಿತ್ತನೆ ಆರಂಭವಾಗಿದ್ದು ಒಟ್ಟಾರೆ ಗುರಿಯಲ್ಲಿ ಉತ್ತಮ ಸಾಧನೆಯಾಗಿದೆ. 1670 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದ್ದು, ಇಲ್ಲಿವರೆಗೆ 1384 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿ ಶೇ.82.87ರಷ್ಟು ಗುರಿ ಸಾಧಿಸಲಾಗಿದೆ. ಇದೇ ವರ್ಷ ಮೇ 13ರಂದು ಬಿತ್ತನೆ ಕಾರ್ಯದಲ್ಲಿ ಶೂನ್ಯ ಸಾಧನೆ ಆಗಿತ್ತು.

ಜಿಲ್ಲೆಯಲ್ಲಿ 1200 ಹೆಕ್ಟೇರ್ ಎಳ್ಳು ಗುರಿ ಹೊಂದಿದ್ದು, 900 ಹೆಕ್ಟೇರ್ ನಲ್ಲಿ ಬಿತ್ತನೆ (ಶೇ.75ರಷ್ಟು ) ಮಾಡಲಾಗಿದೆ. 300 ಹೆಕ್ಟೇರ್ ಅಲಸಂದೆ ಗುರಿ ಇಟ್ಟುಕೊಳ್ಳಲಾಗಿದ್ದು, ನಿರೀಕ್ಷೆಗೂ ಮೀರಿ 354 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ಇನ್ನು 170 ಹೆಕ್ಟೇರ್ ಪೈಕಿ 130 ಹೆಕ್ಟೇರ್ ನಲ್ಲಿ ತೊಗರಿ ಬಿತ್ತನೆ (ಶೇ.76.47) ಮಾಡಲಾಗಿದೆ.

ಶೇ.3 ರಷ್ಟು ಮಳೆ ಕೊರತೆ:

ಜಿಲ್ಲೆಯಲ್ಲಿ ತಿಂಗಳ ವಾರು ಮಳೆಯ ಪ್ರಮಾಣವನ್ನು ಗಮನಿಸಿದಾಗ ಜನವರಿ ಹೊರತುಪಡಿಸಿ ಇನ್ನುಳಿದ ಎಲ್ಲ ತಿಂಗಳಲ್ಲೂ ಮಳೆ ಕೊರತೆ ಉಂಟಾಗಿದೆ. ಜನವರಿಯಲ್ಲಿ ವಾಡಿಕೆ ಮಳೆ 2 ಮಿ.ಮೀ.ಇದ್ದು, 3 ಮಿ.ಮೀ. ಮಳೆಯಾಗಿತ್ತು.

ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ವರುಣ ಕೃಪೆಯನ್ನೇ ತೋರಿಲ್ಲ. ಏಪ್ರಿಲ್ ನಲ್ಲಿ ಶೇ. 93ರಷ್ಟು ಮಳೆ ಕೊರತೆ ಉಂಟಾಗಿದೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ 16.8ಮಿ.ಮೀ. ಮಳೆಯಾಗಿದ್ದರೆ, ಈ ಬಾರಿ ಶೇ.100ರಷ್ಟು ಮಳೆ ಅಭಾವ ಕಂಡಿದೆ. ಮೇ ತಿಂಗಳಲ್ಲಿ ಶೇ.27 ರಷ್ಟು ಮಳೆ ಆಗಿದೆ. 109 ಮಿ.ಮೀ ಪೈಕಿ 138 ಮಿ.ಮೀ ನಷ್ಟು ಮಳೆಯಾಗಿದೆ. ಜೂನ್ 1 ರಿಂದ 14ರವರೆಗೆ 47 ಮಿ.ಮೀ ಪೈಕಿ 75 ಮಿ.ಮೀ.ನಷ್ಟು (ಶೇ.58) ಮಳೆ ಆಗಿದೆ.

ಕಳೆದ ವರ್ಷ ವ್ಯಾಪಕ ಬರಗಾಲದಿಂದ ಮುಂಗಾರು ಮತ್ತು ಹಿಂಗಾರು ಕೈಕೊಟ್ಟಿದ್ದ ಕಾರಣ ರೈತರು ಆತಂಕಕ್ಕೀಡಾಗಿದ್ದರು. ಈ ಬಾರಿ ಉತ್ತಮ ಮಳೆಯಾಗುತ್ತಿದ್ದು ಬೆಳೆ ರೈತರ ಕೈಹಿಡಿಯುವ ಭರವಸೆ ಮೂಡಿದೆ.

ಜನವರಿ 1ರಿಂದ ಜೂನ್ 14ರವರೆಗಿನ ಮಳೆ ವಿವರ (ಮಿ.ಮೀ.)

ತಾಲೂಕು ವಾಡಿಕೆ ಮಳೆ ಆಗಿರುವ ಮಳೆ ಶೇಕಡವಾರು

ಚನ್ನಪಟ್ಟಣ 229.6 212.8 - 7

ಕನಕಪುರ 237.4 178.0 - 25

ಮಾಗಡಿ 258.6 281.2 9

ರಾಮನಗರ 225.7 279.0 24

ಹಾರೋಹಳ್ಳಿ 219.0 139.3 - 36

ಒಟ್ಟು 225 219 - 3

ಪೂರ್ವ ಮುಂಗಾರು ಬೆಳೆ ವಿವರ (ಹೆಕ್ಟೇರ್‌ಗಳಲ್ಲಿ)

ಬೆಳೆಗಳು ರಾಮನಗರ ಚನ್ನಪಟ್ಟಣ ಕನಕಪುರ ಮಾಗಡಿ ಒಟ್ಟು

ಎಳ್ಳು 00 60 840 00 900

ಅಲಸಂದೆ 50 124 00 180 118

ತೊಗರಿ 10 00 00 120 130

ಒಟ್ಟು 60 184 840 300 1384

18ಕೆಆರ್ ಎಂಎನ್ 1.ಜೆಪಿಜಿ

ರೈತರು ಬಿತ್ತನೆ ಕಾರ್ಯಕ್ಕೆ ಭೂಮಿ ಹದಗೊಳಿಸುತ್ತಿರುವುದು (ಸಂಗ್ರಹ ಚಿತ್ರ)

click me!