ಚಾಮರಾಜನಗರದಲ್ಲಿ ಶ್ರೀಲಂಕಾ ಕ್ರಿಕೆಟರ್ ಮುತ್ತಯ್ಯ ಮುರುಳೀಧರನ್ 1,400 ಕೋಟಿ ರೂ. ಹೂಡಿಕೆ!

By Sathish Kumar KHFirst Published Jun 18, 2024, 6:48 PM IST
Highlights

ಶ್ರೀಲಂಕಾದ ಮಾಜಿ ಕ್ರಿಕೆಟರ್ ಮುತ್ತಯ್ಯ ಮುರುಳೀಧರನ್ ಅವರು ಚಾಮರಾಜನಗರ ಜಿಲ್ಲೆಯಲ್ಲಿ 1,400 ಕೋಟಿ ರೂ. ಹೂಡಿಕೆ ಮಾಡಿ ಉದ್ಯಮ ಆರಂಭಿಸಲಿದ್ದಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಬೆಂಗಳೂರು (ಜೂ.18): ಚಾಮರಾಜನಗರ ಜಿಲ್ಲೆಯ ಬದನಕುಪ್ಪೆಯಲ್ಲಿ ಶ್ರೀಲಂಕಾದ ಖ್ಯಾತ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ (Sri Lanka cricketer Muttiah Murulidharan) ತಂಪು ಪಾನೀಯ ಮತ್ತು ಸಿಹಿತಿಂಡಿಗಳ ಉದ್ಯಮ ಆರಂಭಿಸುತ್ತಿದ್ದು, ಹಂತಹಂತವಾಗಿ ಒಟ್ಟು 1,400 ಕೋಟಿ ರೂ. ಹೂಡಿಕೆ ಮಾಡಲಿದ್ದಾರೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಶ್ರೀಲಂಕಾದಿಂದ ಬೆಂಗಳೂರಿಗೆ ಬಂದು ಕರ್ನಾಟಕ ರಾಜ್ಯ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ (Minister MB Patil) ಅವರೊಂದಿಗೆ ಮಂಗಳವಾರ ಉದ್ಯಮ ಆರಂಭಿಸುವ ಬಗ್ಗೆ ಚರ್ಚೆ ಮಾಡಿದ್ದಾರೆ. ಉದ್ಯಮದ ಬಗ್ಗೆ ಮಾತುಕತೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬದನಕುಪ್ಪೆಯಲ್ಲಿ ಮುರಳೀಧರನ್ ಅವರು 'ಮುತ್ತಯ್ಯ ಬ್ರಿವರೇಜಸ್ ಮತ್ತು ಕನ್ಫೆಕ್ಷನರೀಸ್' (Muttiah Breweries and Confectioneries) ಎನ್ನುವ ಬ್ರ್ಯಾಂಡ್‌ನಲ್ಲಿ ತಮ್ಮ ಉದ್ದಿಮೆ ಆರಂಭಿಸುತ್ತಿದ್ದಾರೆ. ಶುರುವಿನಲ್ಲಿ 230 ಕೋಟಿ ರೂಪಾಯಿ ಹೂಡಿಕೆಗೆ ಯೋಜನೆ ರೂಪಿಸಲಾಗಿತ್ತು. ನಂತರ, ಅದು ಈಗ 1,000 ಕೋಟಿ ರೂ. ಮುಟ್ಟುತ್ತಿದೆ. ಮುಂದಿನ ದಿನಗಳಲ್ಲಿ 1,400 ಕೋಟಿ ಆಗಲಿದೆ ಎಂದು ಮುತ್ತಯ್ಯ ತಮಗೆ ತಿಳಿಸಿದ್ದಾರೆಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.

Latest Videos

ಬಿಜೆಪಿ ಸರ್ಕಾರದಲ್ಲಿ ಹಂಚಿಕೆ ಮಾಡಿ ಅಪೂರ್ಣಗೊಂಡ ಕಾಮಗಾರಿಗಳಿಗೆ ಹೊಸ ಟೆಂಡರ್: ಸಿಎಂ ಸಿದ್ದರಾಮಯ್ಯ

ಉದ್ಯಮ ಆರಂಭಕ್ಕಾಗಿ ಈಗಾಗಲೇ ಅವರಿಗೆ 46 ಎಕರೆ ಭೂಮಿ ಕೊಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ಸಣ್ಣಪುಟ್ಟ ತೊಡಕುಗಳಿದ್ದವು. ಅವುಗಳನ್ನು ಕೂಡಲೇ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬದನಕುಪ್ಪೆಯಲ್ಲಿ ಮುಂಬರುವ ಜನವರಿಯಲ್ಲಿ ಉತ್ಪಾದನಾ ಚಟುವಟಿಕೆ ಆರಂಭವಾಗಲಿದೆ. ಮುಂಬರುವ ದಿನಗಳಲ್ಲಿ ಮುತ್ತಯ್ಯ ಧಾರವಾಡದಲ್ಲಿ ಕೂಡ ತಮ್ಮ ಉದ್ಯಮದ ಒಂದು ಘಟಕ ಸ್ಥಾಪಿಸಲಿದ್ದಾರೆ ಎಂದು ಸಚಿವರು ಹೇಳಿದರು.

ಇನ್ನು ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿ ಸಿಇಒ ಡಾ.ಮಹೇಶ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಈ ಸಂದರ್ಭದಲ್ಲಿ ಇದ್ದರು.

click me!