
ಬೆಳಗಾವಿ: ಲಕ್ಷ್ಮಣ ಸವದಿ ಬಿಜೆಪಿಗೆ ಬರುವುದಿಲ್ಲ. ಬಿಜೆಪಿಯಲ್ಲಿದ್ದಾಗ ಚುನಾವಣೆಯಲ್ಲಿ ಸೋತು ಮನೆಯಲ್ಲಿ ಕುಳಿತಾಗ ಕರೆದು ಡಿಸಿಎಂ ಸ್ಥಾನ ನೀಡಿದವರಿಗೆ ಅವಮಾನವಾಗಿದೆ. ಈಗ ಅವರೇ ವಿರೋಧ ಮಾಡುತ್ತಿದ್ದಾರೆ. ಅದೇ ರೀತಿ ನನಗೂ ಕಾಂಗ್ರೆಸ್ ಪಕ್ಷದಿಂದ ಮೇಲಿಂದ ಮೇಲೆ ಆಫರ್ ಬರುತ್ತಿವೆ. ಆದರೆ, ನಾನು ಕಾಂಗ್ರೆಸ್ಗೆ ಹೋಗಲ್ಲ. 2028ರ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಥಣಿ ಕ್ಷೇತ್ರದ ಬಿಜೆಪಿ ನಾಯಕರಲ್ಲಿ ಯಾವುದೇ ಭಿನಾಭಿಪ್ರಾಯಗಳಿಲ್ಲ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮುಖಂಡರ ಆಂತರಿಕ ಸಮಸ್ಯೆಯಿಂದ ಹಿನ್ನಡೆಯಾಗಿದೆ. ಆಡಳಿತ ಪಕ್ಷದ ವೈಫಲ್ಯ ಖಂಡಿಸಿ ಪ್ರತಿಭಟನೆ ಮಾಡಿದರೆ ಮಾತ್ರ ಪಕ್ಷದ ಮುಖಂಡರು ಕ್ರಿಯಾಶೀಲರಾಗಿದ್ದಾರೆ ಎಂದು ಭಾವಿಸುವುದು ತಪ್ಪು. ಕೆಲವು ಸಂದರ್ಭದಲ್ಲಿ ಸೈಲೆಂಟ್ ತಂತ್ರವನ್ನೇ ಅನುಸರಿಸಿ ಗೆಲುವು ಸಾಧಿಸಿದ್ದೇವೆ. ಜಿ.ಪಂ, ತಾ.ಪಂ ಚುನಾವಣೆಗಳನ್ನು ಗೆಲ್ಲುತ್ತೇವೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಮತ್ತು ಕಾಗವಾಡ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಪಕ್ಕಾ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಕಾಗವಾಡ ಮತಕ್ಷೇತ್ರದ ಬಗ್ಗೆ ಶಾಸಕ ರಾಜು ಕಾಗೆ ಅವರ ಜೊತೆ ಈಗಾಗಲೇ ಮಾತನಾಡಿದ್ದೇವೆ. ಈ ಕ್ಷೇತ್ರವನ್ನು ಸುಲಭವಾಗಿ ಗೆಲ್ಲುತ್ತೇವೆ. ಇನ್ನು ಅಥಣಿ ರಾಜಕೀಯ ಲೆಕ್ಕಾಚಾರವನ್ನು ನಾವು ಗೋಕಾಕನಲ್ಲಿ ನಡೆದ ಅನೇಕ ಸಭೆಗಳಲ್ಲಿ ಚರ್ಚಿಸಿದ್ದೇವೆ. ಇಲ್ಲಿ ನಾವು ಅನೇಕ ಸಭೆಗಳನ್ನು ಮಾಡುವುದರಿಂದ ಲಕ್ಷ್ಮಣ ಸವದಿ ಎಚ್ಚರವಾಗುತ್ತಾನೆ. ಆದ್ದರಿಂದ, ನಾವು ಸೈಲೆಂಟ್ ತಂತ್ರವನ್ನು ಅನುಸರಿಸಿದ್ದೇವೆ. ಆಗಾಗ, ನಮ್ಮ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಧೈರ್ಯ ತುಂಬಲು ನಾನು ಬರುತ್ತೇನೆ ಎಂದರು.
ಲಕ್ಷ್ಮಣ ಸವದಿ ಮಂತ್ರಿಯಾದ ನಂತರ ಗೋಕಾಕ ಸಾಹುಕಾರ ಅಥಣಿಗೆ ಬರುವುದನ್ನು ನಿಲ್ಲಿಸಿದ್ದಾರೆ ಅಂದುಕೊಂಡರೆ ಅದು ತಪ್ಪು. ನಾನು ಯಾರಿಗೆ ಹೆದರುವ ಮಗನೇ ಅಲ್ಲ. ನಮ್ಮ ಕಾರ್ಯಕರ್ತರು ಕೂಡ ಯಾರಿಗೆ ಹೆದರುವ ಅಗತ್ಯವಿಲ್ಲ. ಜಿಪಂ, ತಾಪಂ ಚುನಾವಣೆಗಳನ್ನು ಗೆಲ್ಲುವ ನಿಟ್ಟಿನಲ್ಲಿ ಮುಖಂಡರೊಂದಿಗೆ ಅನೇಕ ಸಭೆಗಳನ್ನು ಮಾಡಿದ್ದೇವೆ. ಜಿಲ್ಲಾ ಪಂಚಾಯತ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆಗಳನ್ನು ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂದು ಶಾಸಕ, ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಪಟ್ಟಣದ ಆರ್.ಎಸ್.ಪಿ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರ ಸುಮಾಲೋಚನ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ಪಕ್ಷದ ದೊಡ್ಡ ಶಕ್ತಿ, ಅವರ ಸಲಹೆ ಪಡೆದು ಮಹತ್ವದ ಜವಾಬ್ದಾರಿಗಳನ್ನು ನೀಡುವ ಮೂಲಕ ಪಕ್ಷವನ್ನ ಬಲಪಡಿಸಲಾಗುವುದು. ನಮಗೆ ಗೋಕಾಕ ಕ್ಷೇತ್ರದ ಬಗ್ಗೆ ಯಾವುದೇ ಭಯ ಇಲ್ಲ, ಅಥಣಿ ಮತ್ತು ಕಾಗವಾಡ ಮತಕ್ಷೇತ್ರಗಳನ್ನು ಗೆಲ್ಲುವುದೇ ನಮ್ಮ ಮುಖ್ಯ ಗುರಿ. ಬಿಜೆಪಿ ಪಕ್ಷವನ್ನ ಬೇರು ಮಟ್ಟದಿಂದ ಸಂಘಟಿಸಿ 2028ರ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಮತ್ತು ಕಾಗವಾಡ 2 ಕ್ಷೇತ್ರಗಳಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸೋಣ ಎಂದು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಿದರು.
ಮಾಜಿ ಸಚಿವ ಶ್ರೀಮಂತ ಪಾಟೀಲ, ಬಿಜೆಪಿ ಮುಖಂಡ ಸಿದ್ದಪ್ಪ ಮುದುಕಣ್ಣವರ, ರಾಜೇಂದ್ರ ಐಹೊಳೆ, ಅಪ್ಪಾಸಾಹೇಬ ಅವತಾಡೆ, ರವಿ ಪೂಜಾರಿ ಮಾತನಾಡಿದರು.
ಈ ವೇಳೆ ಮುಖಂಡರಾದ ಬಿಜೆಪಿ ಮಂಡಲ ಅಧ್ಯಕ್ಷ ಗಿರೀಶ್ ಬೂಟಾಳಿ, ಸತ್ಯಪ್ಪ ಭಾಗಣ್ಣವರ, ಮಲ್ಲಿಕಾರ್ಜುನ ಅoದಾನಿ, ಡಾ.ರವಿ ಸಂಕ, ದೀಪಕ್ ಬುರ್ಲಿ, ಚಿದಾನಂದ ಶೇಗುಣಸಿ, ಗುರಪ್ಪ ಅಜೂರ, ನಾನಾಸಾಹೇಬ ಅವತಾಡೆ, ಉತ್ತಮ ಪಾಟೀಲ, ಭೀಮು ಕೇರಿ, ಸಿದ್ದು ಪಾಟೀಲ, ಮುತ್ತಯ್ಯ ಕಾಡದೇವರಮಠ, ಸಿದ್ದು ಮಾಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.