'ಜಲಸಂಪನ್ಮೂಲ ಖಾತೆ ನಿಭಾಯಿಸಿ ಉತ್ತರ ಕೊಡ್ತೇನೆ'

By Kannadaprabha NewsFirst Published Feb 23, 2020, 10:24 AM IST
Highlights

ರಾಜಕೀಯ ವಿರೋಧಿಗಳಿಗೆ ಜಲಸಂಪನ್ಮೂಲ ರಮೇಶ್‌ ಜಾರಕಿಹೊಳಿ ಟಾಂಗ್‌| ನಾನು ನೀರಾವರಿ ಖಾತೆಯನ್ನು ಕೇಳಿಯೇ ಇರಲಿಲ್ಲ, ಸಿಕ್ಕಿದೆ ಎಂದು ಸ್ಪಷ್ಟನೆ|ಶೀಘ್ರದಲ್ಲೇ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗುತ್ತೇನೆ: ರಮೇಶ್‌ ಜಾರಕಿಹೊಳಿ|

ಬೆಳಗಾವಿ(ಫೆ.23): ನನ್ನಿಂದ ಜಲಸಂಪನ್ಮೂಲ ಖಾತೆ ನಿಭಾಯಿಸಲು ಆಗಲ್ಲ ಎಂದು ವಿರೋಧಿಗಳು ಹೇಳಿದ್ದರು. ಅದನ್ನು ನಿಭಾಯಿಸಿ ತೋರಿಸಬೇಕಿದೆ ಎಂದು ನೂತನ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ನೀರಾವರಿ ಖಾತೆಗೆ ಬೇಡಿಕೆ ಇಟ್ಟಿರಲಿಲ್ಲ. ಬಹುತೇಕ ನೀರಾವರಿ ಸಚಿವರು ಉತ್ತರ ಕರ್ನಾಟಕದವರೇ ಆಗಿದ್ದಾರೆ. ಅದರಂತೆ ನನಗೆ ನೀರಾವರಿ ಇಲಾಖೆ ಸಿಕ್ಕಿದೆ. ನೀರಾವರಿ ಇಲಾಖೆಯಲ್ಲಿ ಪಕ್ಷ, ಜಾತಿ ಬರುವುದಿಲ್ಲ. ರೈತರಿಗೆ ಒಳ್ಳೆಯದಾಗಬೇಕು ಎಂಬುದಷ್ಟೇ ಉದ್ದೇಶವಾಗಿರುತ್ತದೆ. ರಮೇಶ್‌ ಜಾರಕಿಹೊಳಿ ಸೇಡಿನ ರಾಜಕೀಯ ಮಾಡುತ್ತಾರೆ ಎಂದು ಆರೋಪಿಸುವುದು ಸುಳ್ಳು. ಎಲ್ಲರನ್ನೂ ಒಗ್ಗೂಡಿಸಿಕೊಂಡು ನೀರಾವರಿ ಯೋಜನೆ ಅನುಷ್ಠಾನಗೊಳಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಶೀಘ್ರ ಕೇಂದ್ರ ಜಲಸಂಪನ್ಮೂಲ ಸಚಿವರ ಭೇಟಿ: 

ಮಹದಾಯಿ ವಿಚಾರವಾಗಿ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಅಧಿಸೂಚನೆ ಹೊರಡಿಸುವಂತೆ ಸೂಚಿಸಿದೆ. ಶೀಘ್ರದಲ್ಲೇ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗುತ್ತೇನೆ. ಮಹದಾಯಿ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ 200 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಈ ವಿಚಾರದಲ್ಲಿ ಗೋವಾ ಹಾಗೂ ಮಹಾರಾಷ್ಟ್ರ ಸರ್ಕಾರ ಖ್ಯಾತೆ ತೆಗೆದರೆ ಕಾನೂನು ಹೋರಾಟ ಮಾಡುವಲ್ಲಿ ರಾಜ್ಯ ಸರ್ಕಾರ ಬದ್ದವಾಗಿದೆ. ಕಾವೇರಿ, ಕೃಷ್ಣಾ ನದಿ ವಿವಾದ ನ್ಯಾಯಾಲಯದಲ್ಲಿ ಇದೆ. ಮಹದಾಯಿ ನದಿ ನೀರಿನ ವಿವಾದ ಇತ್ಯರ್ಥವಾಗಿದೆ. ಶೀಘ್ರದಲ್ಲೇ ಉತ್ತರ ಕರ್ನಾಟಕದ ಭಾಗದಲ್ಲಿ ನೀರಿನ ಅನುಷ್ಠಾನ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳೆದ 20 ವರ್ಷದಿಂದ ನೀರಾವರಿ ಸಚಿವರ ಕೆಲಸದ ರೀತಿ ಬೇರೆ ಇರುತ್ತದೆ. ಕೆಲ ಕಾಮಗಾರಿಗಳನ್ನು ತರಾತುರಿಯಲ್ಲಿ ಟೆಂಡರ್‌ ಮಾಡಿದ್ದಾರೆ. ನಾನು ಗಡಿಬಿಡಿ ಮಾಡುವುದಿಲ್ಲ. ಹಂತ ಹಂತವಾಗಿ ರಾಜ್ಯದ ನೀರಾವರಿ ಯೋಜನೆ ಅನುಷ್ಠಾನಗೊಳಿಸುತ್ತೇನೆ ಎಂದರು.
 

click me!