ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ 1253 ಕೋಟಿ

By Kannadaprabha NewsFirst Published Feb 23, 2020, 9:57 AM IST
Highlights

ಅನುದಾನಕ್ಕೆ ಬಿಬಿಎಂಪಿ ಮನವಿ| ಬಜೆಟ್‌ನಲ್ಲಿ ಹಣ ಮೀಸಲಿಡಲು ಸರ್ಕಾರಕ್ಕೆ ಮನವಿ: ಅಧಿಕಾರಿಗಳು|ಕೆರೆಗಳನ್ನು ಬಿಬಿಎಂಪಿ ಹಾಗೂ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಅನುದಾನದಡಿ ಅಭಿವೃದ್ಧಿ ಪಡಿಸುವುದಕ್ಕೆ ಯೋಜನೆ|

ಬೆಂಗಳೂರು(ಫೆ.23): ಇತ್ತೀಚಿನ ದಿನಗಳಲ್ಲಿ ನಗರದ ಹಲವು ಕೆರೆಗಳ ವ್ಯಾಪ್ತಿಯಲ್ಲಿ ಕೆರೆ ದಂಡೆ ಒಡೆಯುವುದು ಸೇರಿದಂತೆ ವಿವಿಧ ರೀತಿಯ ಅನಾಹುತಗಳು ಸಂಭವಿಸುತ್ತಿವೆ. ಈ ಕೆರೆಗಳನ್ನು ಆದ್ಯತೆಯ ಮೇಲೆ ಅಭಿವೃದ್ಧಿ ಮಾಡಬೇಕಾಗಿದೆ. ಹೀಗಾಗಿ 1,253 ಕೋಟಿ ಅನುದಾನವನ್ನು ಬಿಬಿಎಂಪಿ ಕೆರೆ ಅಭಿವೃದ್ಧಿ ವಿಭಾಗಕ್ಕೆ ನೀಡುವಂತೆ ಸರ್ಕಾರಕ್ಕೆ ಬಿಬಿಎಂಪಿ ಮನವಿ ಮಾಡಿದೆ.

ಬಿಡಿಎ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸುರ್ಪದಿಯಲ್ಲಿರುವ ಕೆರೆಗಳನ್ನು ಯಥಾಸ್ಥಿತಿಯಲ್ಲಿ ಬಿಬಿಎಂಪಿಗೆ ಹಸ್ತಾಂತರ ಮಾಡುವಂತೆ ಸರ್ಕಾರದ ಆದೇಶ ಮಾಡಿದೆ. ಈ ಎಲ್ಲ ಕೆರೆಗಳ ನಿರ್ವಹಣೆ ಮಾಡುವ ಜವಾಬ್ದಾರಿಯೂ ಪಾಲಿಕೆಯ ಮೇಲಿದೆ. ಹೀಗಾಗಿ ರಾಜ್ಯ ಸರ್ಕಾರದ 2020-21ರ ಬಜೆಟ್‌ನಲ್ಲಿ ಹೆಚ್ಚಿನ ಪ್ರಮಾಣದ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ ಎಂದು ಬಿಬಿಎಂಪಿ ಕೆರೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವರೆಗೆ ವಿವಿಧ ಇಲಾಖೆಗಳಿಂದ ಪಾಲಿಕೆಗೆ 38 ಕೆರೆಗಳನ್ನು ಹಸ್ತಾಂತರ ಮಾಡಲಾಗಿದ್ದು, ಇನ್ನೂ 38 ಕೆರೆಗಳು ಅಭಿವೃದ್ಧಿ ಹಂತದಲ್ಲಿವೆ. ಇದರೊಂದಿಗೆ 76 ಕೆರೆಗಳನ್ನು ಸಂರಕ್ಷಣೆ ಹಾಗೂ ನಿರ್ವಹಣೆ ಮಾಡುವ ಜವಾಬ್ದಾರಿಯೂ ಪಾಲಿಕೆಯ ಮೇಲಿದೆ. ಕೆರೆ ಅಂಗಳದಲ್ಲಿ ಪಾದಚಾರಿ ಮಾರ್ಗ ಹಾಗೂ ವಿಶ್ರಾಂತ ಸ್ಥಳಗಳು ದುರಸ್ತಿ, ಜತೆಗೆ ಹೊರಾಂಗಣದಲ್ಲಿ ಜಿಮ್‌ ಹಾಗೂ ವ್ಯಾಯಾಮಕ್ಕೆ ಅನುಕೂಲಕರವಾದ ಸಾಧನಗಳನ್ನು ಅಳವಡಿಸುವಂತೆ ಸಾಕಷ್ಟು ಮನವಿ ಬಂದಿವೆ. ಈ ಬಗ್ಗೆಯೂ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ವಿವಿಧ ಕೆರೆಗಳನ್ನು ಬಿಬಿಎಂಪಿ ಹಾಗೂ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಅನುದಾನದಡಿ ಅಭಿವೃದ್ಧಿ ಪಡಿಸುವುದಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!