ರಾಮನಗರ : ರಸ್ತೆ ಗುಡಿಸಲು ಪೊರಕೆ ಬದಲು ಯಂತ್ರಗಳು!

By Kannadaprabha News  |  First Published Jun 15, 2024, 12:21 PM IST

ಪೊರಕೆ ಹಿಡಿದು ರಸ್ತೆ ಗುಡಿಸುವ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ಬಂದಿರುವ ಪೌರ ಕಾರ್ಮಿಕರ ಕೈಗೆ ಕಸ ಗುಡಿಸುವ ಯಂತ್ರಗಳನ್ನು ನೀಡಲು ರಾಮನಗರ ನಗರಸಭೆ ಸಿದ್ಧತೆ ನಡೆಸಿದೆ.


 -ಎಂ.ಅಫ್ರೋಜ್ ಖಾನ್

 ರಾಮನಗರ :  ಪೊರಕೆ ಹಿಡಿದು ರಸ್ತೆ ಗುಡಿಸುವ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ಬಂದಿರುವ ಪೌರ ಕಾರ್ಮಿಕರ ಕೈಗೆ ಕಸ ಗುಡಿಸುವ ಯಂತ್ರಗಳನ್ನು ನೀಡಲು ರಾಮನಗರ ನಗರಸಭೆ ಸಿದ್ಧತೆ ನಡೆಸಿದೆ.

Tap to resize

Latest Videos

ನಗರದ ಪ್ರಮುಖ ರಸ್ತೆಗಳಲ್ಲಿ ಗಳ ಸಂಚಾರ ದಟ್ಟಣೆ ಇರುವ ಸಮಯದಲ್ಲೇ ರು ರಸ್ತೆಗಳನ್ನು ಸ್ವಚ್ಛ ಮಾಡುವುದರಿಂದ ಧೂಳು ಸವಾರರ ಮುಖಕ್ಕೆ ರಾಚುವುದು ಹಾಗೂ ಮತ್ತಷ್ಟು ಸಂಚಾರದಟ್ಟಣೆಗೂ ಇದು ಕಾರಣವಾಗುತ್ತಿತ್ತು. ಇನ್ನು ಮುಂದೆ ಪೌರಕಾರ್ಮಿಕರು ಮ್ಯಾನ್ಯುಯಲ್‌ ಸ್ವೀಪಿಂಗ್ ಮಿಷನ್ ಮೂಲಕ ಸಲೀಸಾಗಿ ರಸ್ತೆ ಗುಡಿಸುವ ವ್ಯವಸ್ಥೆಯನ್ನು ನಗರಸಭೆ ಜಾರಿಗೊಳಿಸುತ್ತಿದೆ.

ನಗರಸಭೆ ವ್ಯಾಪ್ತಿಯಲ್ಲಿ ಹಳೆಯ ಬೆಂಗಳೂರು - ಮೈಸೂರು ಹೆದ್ದಾರಿ, ಎಂ.ಜಿ.ರಸ್ತೆ, ರೈಲ್ವೆ ರಸ್ತೆ ಸೇರಿ ಇತರೆ ಪ್ರಮುಖ ರಸ್ತೆಗಳಿವೆ. ಉಳಿದ ರಸ್ತೆಗಳು ವಾರ್ಡ್‌ ರಸ್ತೆಗಳಾಗಿವೆ. ಈ ರಸ್ತೆಗಳನ್ನು ಪೌರಕಾರ್ಮಿಕರು ಪ್ರತಿ ದಿನ ಗುಡಿಸಿ, ರಸ್ತೆ ಬದಿ ಶೇಖರಣೆಯಾಗಿರುವ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡುತ್ತಾರೆ. ಅದರ ಜತೆಗೆ ಪ್ರಮುಖ ರಸ್ತೆಗಳಲ್ಲಿ ಶೇಖರಣೆಯಾದ ಮಣ್ಣು ಸೇರಿ ಇನ್ನಿತರ ತ್ಯಾಜ್ಯ ಸಂಗ್ರಹಕ್ಕಾಗಿ ಹಾಗೂ ರಸ್ತೆ ಗುಡಿಸುವುದಕ್ಕಾಗಿಯೇ ಮ್ಯಾನ್ಯುವೆಲ್ ಸ್ವೀಪಿಂಗ್‌ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ.

20 ಸ್ವೀಪಿಂಗ್ ಮಿಷನ್ ಖರೀದಿ:

ನಗರದಲ್ಲಿ ಧೂಳು ಸೇರಿ ಇನ್ನಿತರ ಕಾರಣ ಗಳಿಂದಾಗಿ ವಾಯು ಮಾಲಿನ್ಯ ಹೆಚ್ಚುತ್ತಿದೆ. ಅದನ್ನು ತಡೆಯುವ ಸಲುವಾಗಿ ಪ್ರತಿನಿತ್ಯ ಪೌರಕಾರ್ಮಿಕರು ಪೊರಕೆ ಹಿಡಿದು ರಸ್ತೆ ಗುಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೂ, ಸಮರ್ಪಕವಾಗಿ ಧೂಳು ಶೇಖರಣೆ ಮಾಡಿ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಅದರ ಜತೆಗೆ ರಸ್ತೆ ಬದಿಯಲ್ಲಿ ಶೇಖರಣೆಯಾಗುವ ಮರದ ಎಲೆಗಳನ್ನು ಸರಿಯಾಗಿ ಸಂಗ್ರಹಿಸಿ ವಿಲೇವಾರಿ ಮಾಡುವುದೂ ಪೌರಕಾರ್ಮಿಕರಿಗೆ ಹೊರೆಯಾಗುತ್ತಿದೆ. ಪೊರಕೆಯಲ್ಲಿ ಧೂಳು, ತ್ಯಾಜ್ಯ ಸಂಗ್ರಹಣೆ ಕಷ್ಟವಾಗುತ್ತಿದೆ. ಇದನ್ನು ಮನಗಂಡಿರುವ ನಗರಸಭೆ ನಗರ ವ್ಯಾಪ್ತಿಯಲ್ಲಿ ರಸ್ತೆ ಗುಡಿಸುವ ಪೌರ ಕಾರ್ಮಿಕರಿಗೆ ಅನುಕೂಲವಾಗಲೆಂದು 20 ಮ್ಯಾನ್ಯುಯಲ್ ಸ್ವೀಪಿಂಗ್‌ ಯಂತ್ರಗಳನ್ನು ಖರೀದಿ ಮಾಡಿದೆ.

ಪ್ರತಿ ನಿತ್ಯ ಬೆಳಗ್ಗೆ ಧೂಳಿನಿಂದ ವಾಹನ ಸವಾರರು, ಸಾರ್ವಜನಿಕರು ಮತ್ತು ಪೌರಕಾರ್ಮಿಕರೂ ಶ್ವಾಸಕೋಶ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಪ್ರಮುಖ ರಸ್ತೆಗಳಲ್ಲಿ ಸದಾ ವಾಹನ ಸಂಚಾರ ಇರುವುದರಿಂದ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಲೋಪವಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಯಂತ್ರದ ಬಳಕೆಯಿಂದ ರಸ್ತೆಗಳು ಕ್ಲೀನ್ ಇರಲಿದ್ದು, ಧೂಳಿನ ಸಮಸ್ಯೆಗೂ ಮುಕ್ತಿಸಿಗಲಿದೆ. ಸಾರ್ವಜನಿಕರಿಗೆ ಕಿರಿಕಿರಿಯೂ ತಪ್ಪಲಿದೆ.

ನಗರಸಭೆ ರೂಪಿಸಿರುವ ಯೋಜನೆಯಂತೆ ಒಟ್ಟು 20 ಮ್ಯಾನ್ಯುಯಲ್‌ ಪುಶ್‌ ಆಪರೇಟಿವ್‌ ಸ್ವೀಪಿಂಗ್‌ ಯಂತ್ರಗಳನ್ನು ಖರೀದಿಸಿದೆ. ಪ್ರತಿ ಯಂತ್ರವು ಧೂಳು ಸಂಗ್ರಹ ಸಾಮರ್ಥ್ಯವನ್ನು ಹೊಂದಿರಲಿದೆ. ಯಂತ್ರದ ಕೆಳಭಾಗದಲ್ಲಿ ಟ್ರಾಲಿ ಮಾದರಿ ಚಕ್ರಗಳನ್ನು ಅಳವಡಿಸಲಾಗಿರುತ್ತದೆ. ಹೀಗಾಗಿ ಯಂತ್ರವನ್ನು ಸುಲಭವಾಗಿ ತಳ್ಳಿಕೊಂಡು ಸಾಗಿದರೆ ರಸ್ತೆ ಸ್ವಚ್ಛಗೊಳ್ಳಲಿದೆ. ಯಂತ್ರಗಳ ಬಳಕೆಗೆ ಪೌರಕಾರ್ಮಿಕರಿಗೆ ತರಬೇತಿಯನ್ನೂ ನೀಡಲಾಗಿದೆ.

ಈಗ ನಗರದಲ್ಲಿನ ಹಳೆಯ ಬೆಂಗಳೂರು - ಮೈಸೂರು ಹೆದ್ದಾರಿ ಮಾತ್ರ ಡಾಂಬರೀಕರಣ ಕಂಡಿದೆ. ಉಳಿದಂತೆ ಕುಡಿಯುವ ನೀರಿನ ಕಾಮಗಾರಿಗಾಗಿ ಎಲ್ಲ ರಸ್ತೆಗಳನ್ನು ಅಗೆಯಲಾಗಿದ್ದು, ಯಾವ ರಸ್ತೆಗೂ ಡಾಂಬರೀಕರಣ ಮಾಡಿಲ್ಲ. ಅಲ್ಲದೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಮ್ಯಾನ್ಯುಯಲ್ ಸ್ವೀಪಿಂಗ್ ಯಂತ್ರಗಳನ್ನು ಬಳಕೆ ಮಾಡಿರಲಿಲ್ಲ. ಶೀಘ್ರದಲ್ಲಿ ಸ್ಥಳೀಯ ಶಾಸಕ ಇಕ್ಬಾಲ್ ಹುಸೇನ್ ಯಂತ್ರಗಳ ಬಳಕೆಗೆ ಚಾಲನೆ ನೀಡಲಿದ್ದಾರೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ರಾಮನಗರದಲ್ಲಿನ ಪ್ರಮುಖ ರಸ್ತೆಗಳು ಧೂಳುಮಯವಾಗಿದ್ದು, ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಪ್ರಗತಿಯಲ್ಲಿರುವ ರಸ್ತೆ ಕಾಮಗಾರಿಗಳು ಮತ್ತಷ್ಟು ಮಾಲಿನ್ಯವನ್ನು ಉಂಟು ಮಾಡುತ್ತಿವೆ. ರಸ್ತೆ ಸ್ವಚ್ಛ ಗೊಳಿಸುವ ಜೊತೆಗೆ ಮಾಲಿನ್ಯವನ್ನು ತಡೆಗಟ್ಟಲು ಮ್ಯಾನ್ಯುಯಲ್ ಸ್ವೀಪಿಂಗ್ ಮಿಷನ್ ಸಹಕಾರಿ. ಹೀಗಾಗಿ 20 ಯಂತ್ರಗಳನ್ನು ಖರೀದಿ ಮಾಡಲಾಗಿದ್ದು, ಶೀಘ್ರದಲ್ಲಿ ರಸ್ತೆಗೆ ಇಳಿಯಲಿವೆ. ಈಗಾಗಲೇ ಖರೀದಿಸಿರುವ 1 ಜೆಸಿಬಿ, 2 ಟಿಪ್ಪರ್ ಹಾಗೂ 13 ಆಟೋ ಟಿಪ್ಪರ್‌ಗಳನ್ನು ಸ್ವಚ್ಛತಾ ಕಾರ್ಯಕ್ಕೆ ಬಳಕೆ ಮಾಡಲಾಗುತ್ತಿದೆ.

- ನಾಗೇಶ್, ಆಯುಕ್ತರು, ನಗರಸಭೆ, ರಾಮನಗರ

ರಸ್ತೆಗಳ ಸ್ವಚ್ಛತೆಗೆ ಮ್ಯಾನ್ಯುಯಲ್ ಸ್ವೀಪಿಂಗ್ ಮಿಷನ್ ಅನ್ನು ಪರಿಚಯಿಸಿರುವುದರಿಂದ ಸಿಬ್ಬಂದಿ ಮೇಲಿನ ಹೊರೆಯೂ ಕಡಿಮೆಯಾಗಲಿದೆ. ಅವರ ಆರೋಗ್ಯವೂ ಸುಧಾರಿಸಲಿದೆ. ಪ್ರಮುಖ ರಸ್ತೆಗಳಲ್ಲಿ ಮಿಷನ್ ಅನ್ನು ಬಳಕೆ ಮಾಡಲಾಗುತ್ತದೆ.

-ಎಂ.ಕೆ.ಸುಬ್ರಹ್ಮಣ್ಯ, ಎಇಇ (ಪರಿಸರ), ನಗರಸಭೆ, ರಾಮನಗರ

ಮ್ಯಾನ್ಯುಯಲ್ ಸ್ವೀಪಿಂಗ್ ಮಿಷನ್ ವಿಶೇಷತೆ ಮತ್ತು ಲಾಭ

-ಸ್ವೀಪಿಂಗ್‌ ಯಂತ್ರ ವ್ಯಾಕ್ಯೂಮ್‌ ಕ್ಲೀನರ್‌ ರೀತಿಯಲ್ಲಿ ಕೆಲಸ ಮಾಡುತ್ತದೆ. ರಸ್ತೆಯಲ್ಲಿರುವ ಧೂಳು ಮತ್ತು ತ್ಯಾಜ್ಯವನ್ನು ಸಂಪೂರ್ಣವಾಗಿ ಎಳೆದುಕೊಳ್ಳುತ್ತದೆ.

-ಈ ಸ್ವೀಪಿಂಗ್ ಯಂತ್ರ ಬಳಸುವುದರಿಂದ ರಸ್ತೆ ಸ್ವಚ್ಛತೆಗೆ ಆದ್ಯತೆ, ಸಂಚಾರದಟ್ಟಣೆ ಕಡಿಮೆ ಹಾಗೂ ಧೂಳಿನ ಸಮಸ್ಯೆಗೆ ಪರಿಹಾರ ಸಿಗಲಿದೆ.

-ಯಂತ್ರದ ಬಳಕೆಯಿಂದ ದಿನಕ್ಕೆ ಎಷ್ಟು ಕಿ.ಮೀ ರಸ್ತೆ ಬೇಕಾದರು ಸ್ವಚ್ಛಗೊಳಿಸಬಹುದು.

-ಪೌರಕಾರ್ಮಿಕರಿಂದ ಪುಟ್‌ಪಾತ್‌ ಸ್ವಚ್ಛತೆಗೆ ಆದ್ಯತೆ.

click me!