Latest Videos

ರೌಡಿ ಗುಂಪುಗಳ ನಡುವೆ ಸಚಿವ ಜಮೀರ್‌ ಸಂಧಾನ?: ವೈರಲ್‌

By Kannadaprabha NewsFirst Published Jun 15, 2024, 10:07 AM IST
Highlights

ಎರಡು ದಿನಗಳ ಹಿಂದೆ ಜ್ಞಾನಭಾರತಿ ಬಳಿ ಹತ್ಯೆಗೀಡಾದ ರೌಡಿ ನಾಗರಾಜ್ ಹಾಗೂ ಆತನ ಎದುರಾಳಿ ತಂಡದ ಜತೆ ಸಚಿವರೊಬ್ಬರು ರಾಜಿ ಸಂಧಾನ ನಡೆಸಿದ್ದರು ಎಂಬ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಬೆಂಗಳೂರು (ಜೂ.15): ಎರಡು ದಿನಗಳ ಹಿಂದೆ ಜ್ಞಾನಭಾರತಿ ಬಳಿ ಹತ್ಯೆಗೀಡಾದ ರೌಡಿ ನಾಗರಾಜ್ ಹಾಗೂ ಆತನ ಎದುರಾಳಿ ತಂಡದ ಜತೆ ಸಚಿವರೊಬ್ಬರು ರಾಜಿ ಸಂಧಾನ ನಡೆಸಿದ್ದರು ಎಂಬ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಪೂಜಿ ನಗರದ ನಿವಾಸಿ ರೌಡಿ ನಾಗರಾಜ್ (33) ಕೊಲೆಯಾಗಿದೆ. ಎರಡು ದಿನಗಳ ಹಿಂದೆ ಜ್ಞಾನಭಾರತಿ ಸಮೀಪ ಆತನನ್ನು ಕಿಡಿಗೇಡಿಗಳು ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಹಳೇ ದ್ವೇಷದ ಹಿನ್ನೆಲೆಯಲ್ಲಿ ಜ್ಞಾನಭಾರತಿ ಸಮೀಪ ಮುತ್ತುರಾಯನಗರದ ಬಳಿ ನಾಗರಾಜ್ ಮೇಲೆ ಮಂಗಳವಾರ ರಾತ್ರಿ ಎದುರಾಳಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಈ ಕೃತ್ಯ ಸಂಬಂಧ ರೌಡಿ ಸುನೀಲ್‌ನ ಇಬ್ಬರು ಸಹಚರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಫೇಸ್‌ಬುಕ್‌ ಲೈವ್‌ನಲ್ಲಿ ಬೆದರಿಕೆ ಹಾಕಿದ್ದ ನಾಗ: ಮೃತ ನಾಗರಾಜ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಬ್ಯಾಟರಾಯನಪುರ ಠಾಣೆಯಲ್ಲಿ ಆತನ ಮೇಲೆ ರೌಡಿಪಟ್ಟಿ ತೆರೆಯಲಾಗಿತ್ತು. ಈ ಮೊದಲು ಬಾಪೂಜಿನಗರದಲ್ಲಿ ನೆಲೆಸಿದ್ದ ಆತ, ಇತ್ತೀಚಿಗೆ ಜ್ಞಾನಭಾರತಿ ಸಮೀಪ ವಾಸವಾಗಿದ್ದ ಎನ್ನಲಾಗಿದೆ.

ಕೆರೆ ಸ್ವಚ್ಛತೆಗಾಗಿ ಬಿಬಿಎಂಪಿ ಯಂತ್ರ ಖರೀದಿ?: ತ್ಯಾಜ್ಯ ವಿಲೇವಾರಿಗೆ ಅನುಕೂಲ

ಎಂಟು ತಿಂಗಳ ಹಿಂದೆ ಫೇಸ್‌ಬುಕ್‌ ಲೈವ್‌ನಲ್ಲಿ ತನ್ನ ಎದುರಾಳಿ ವೆಂಕಟೇಶ್‌ನನ್ನು ಕೊಲ್ಲುವುದಾಗಿ ನಾಗರಾಜ್ ಬೆದರಿಕೆ ಹಾಕಿದ್ದ. ಇದಾದ ಬಳಿಕ ಎರಡು ರೌಡಿಗಳ ಗುಂಪುಗಳ ಮಧ್ಯೆ ಕಾದಾಟ ಶುರುವಾಗಿತ್ತು. ಆಗ ಬಾಪೂಜಿನಗರದಲ್ಲಿ ಶಾಂತಿ ನೆಲೆಸುವ ಉದ್ದೇಶಕ್ಕೆ ನಾಗರಾಜ ಹಾಗೂ ವೆಂಕಟೇಶ್‌ನನ್ನು ಕರೆಸಿ ರಾಜ್ಯ ವಸತಿ ಸಚಿವ ಜಮೀರ್ ಅಹಮದ್‌ ರಾಜಿ ಸಂಧಾನ ನಡೆಸಿದ್ದರು ಎನ್ನಲಾದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ಸಂಧಾನಕ್ಕೂ ರೌಡಿ ಕೊಲೆಗೂ ಸಂಬಂಧವಿಲ್ಲವೆಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

click me!