ಮೈಸೂರಿನ ಕೃಷ್ಣೇಗೌಡ, ಮಾದೇಗೌಡರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

By Kannadaprabha News  |  First Published Oct 31, 2022, 5:29 AM IST

ಮೈಸೂರಿನ ಇಬ್ಬರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ


 ಅಂಶಿ ಪ್ರಸನ್ನಕುಮಾರ್‌

ಮೈಸೂರು : (ಅ.31):  ಕುಂಬಾರಕೊಪ್ಪಲಿನ ದೊಡ್ಡತಮ್ಮಯ್ಯ ಮಾದೇಗೌಡರು ‘ಮನೆ’ ಮಾದೇಗೌಡ ಎಂದೇ ಖ್ಯಾತರಾದವರು. ಅವರು ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿ (ಸಿಐಟಿಬಿ- ಈಗಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷರಾಗಿದ್ದಾಗ ಪ್ರತಿಯೊಬ್ಬರಿಗೂ ತಲೆಯ ಮೇಲೊಂದು ಸೂರು (house)  ಕೊಡಬೇಕು ಎಂಬ ಉದ್ದೇಶದಿಂದ ಆಶಾಮಂದಿರ ಯೋಜನೆ ರೂಪಿಸಿ, ಎಲ್ಲಾ ವರ್ಗದ ಜನರ ಮನೆ ಮನೆ ಬಾಗಿಲಿಗೆ ತೆರಳಿ, ಹಾಗೂ ನಿವೇಶನಗಳನ್ನು ಹಂಚಿಕೆ ಮಾಡುವ ಮೂಲಕ ಕ್ರಾಂತಿಯನ್ನೇ ಮಾಡಿದರು. ಇದು ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು.

Latest Videos

undefined

1942 ರಲ್ಲಿ ಜನಿಸಿದ ಮಾದೇಗೌಡರು ಬಿ.ಎ. ಬಿ.ಎಲ್‌ ರು. ಎಂಭತ್ತರ ದಶಕದಲ್ಲಿ ರಾಮಕೃಷ್ಣ ಹೆಗಡೆ (Ramakrishna hegade)  ನೇತೃತ್ವದ ಜನತಾ ಪಕ್ಷದ ಸರ್ಕಾರ ಇದ್ದಾಗ ಅವರನ್ನು ಸಿಐಟಿಬಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅಧ್ಯಕ್ಷರಾಗಿ ಅವರು ಮಾಡಿದ ಸಾಧನೆಯನ್ನು ಪರಿಗಣಿಸಿ, ‘ಹುಡ್ಕೋ’ ಪ್ರಕಟಿಸಿದ ಪುಸ್ತಕದ ರಕ್ಷಾಪುಟದಲ್ಲಿ ಮನೆ ಎಂಬ ಕನ್ನಡ ಪದ ಬಳಕೆ ಮಾಡಲಾಗಿತ್ತು.

ಇಂತಹ ಮಾದೇಗೌಡರಿಗೆ ಏಕೋ ಏನೋ ನೇರ ಚುನಾವಣೆ ಆಗಿಬರಲೇ ಇಲ್ಲ. ರಾಜಕೀಯವಾಗಿ ಸಾಕಷ್ಟುಏಳುಬೀಳು ಕಂಡವರು. 1983ರಲ್ಲಿ ನಡೆದ ನಗರಪಾಲಿಕೆಯ ಪ್ರಥಮ ಚುನಾವಣೆಯಲ್ಲಿ ಕುಂಬಾರ ಕೊಪ್ಪಲು ವಾರ್ಡಿನಿಂದ ಸ್ಪರ್ಧಿಸಿದ್ದರು. ಗೆದ್ದರೇ ಅವರೇ ನಗರದ ಪ್ರಪ್ರಥಮ ಮೇಯರ್‌ ಎಂಬ ವಾತಾವರಣ ಇತ್ತು. ಆದರೆ ಸ್ವಪಕ್ಷೀಯರೇ ಕಾಲೆಳೆದಿದ್ದರಿಂದ ಮಾದೇಗೌಡರು ಸೋತರು. ಆದರೆ ಜನತಾಪಕ್ಷ ಸರ್ಕಾರ ಅವರನ್ನು 1986 ರಲ್ಲಿ ಅವರನ್ನು ಸಿಐಟಿಬಿ ಅಧ್ಯಕ್ಷರನ್ನಾಗಿ ನೇಮಿಸಿ, ಸಾರ್ವಜನಿಕರ ಸೇವೆಗೆ ಅವಕಾಶ ಕಲ್ಪಿಸಿತು. ಇದನ್ನು ಮಾದೇಗೌಡರು ಸದುಪಯೋಗಪಡಿಸಿಕೊಂಡು ಹೆಸರು ಮಾಡಿದರು. 1989ರ ವೇಳೆಗೆ ಜನತಾಪಕ್ಷವು ಜನತಾದಳ ಹಾಗೂ ಜನತಾದಳ ಇಬ್ಭಾಗವಾಯಿತು. ಮಾದೇಗೌಡರು ಎಚ್‌.ಡಿ. ದೇವೇಗೌಡರ ಜೊತೆ ಗುರುತಿಸಿಕೊಂಡರು.

1989 ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಎಚ್‌.ಡಿ. ದೇವೇಗೌಡ ನೇತೃತ್ವದ ಸಮಾಜವಾದಿ ಜನತಾಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್‌ನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಎದುರು ಸೋತರು. 1991 ರಲ್ಲಿ ಎಚ್‌.ಡಿ. ದೇವೇಗೌಡರು ಕರ್ನಾಟಕ ವಿಕಾಸ ವೇದಿಕೆಯಡಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಎಸ್‌. ನಿಜಲಿಂಗಪ್ಪ, ಸಿದ್ದಯ್ಯ ಪುರಾಣಿಕ್‌ ಮೊದಲಾದವರ ಸಮ್ಮುಖದಲ್ಲಿ ಕಾವೇರಿ ಮಧ್ಯಂತರ ತೀರ್ಪಿನ ವಿರುದ್ಧ ನಡೆಸಿದ ಬೃಹತ್‌ ಹೋರಾಟದ ಹಿಂದಿನ ರೂವಾರಿ ಡಿ. ಮಾದೇಗೌಡರಾಗಿದ್ದರು.

ಬಿಜೆಪಿ ಬೆಂಬಲ ಹಿಂತೆಗೆತದಿಂದ ವಿ.ಪಿ. ಸಿಂಗ್‌ ನೇತೃತ್ವದ ಕೇಂದ್ರ ಸರ್ಕಾರ ಉರುಳಿ, 1991 ರಲ್ಲಿ ಮಧ್ಯಂತರ ಚುನಾವಣೆ ಎದುದಾದಾಗ ಮೈಸೂರು ಲೋಕಸಭಾ ಕ್ಷೇತ್ರದಿಂದ ಸಜಪ- ಜನತಾದಳ ಒಮ್ಮತದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್‌ನ ಚಂದ್ರಪ್ರಭ ಅರಸು ಹಾಗೂ ಬಿಜೆಪಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಎದರು ಸೋತರು. 1994 ರಲ್ಲಿ ಚಾಮರಾಜ ಕ್ಷೇತ್ರದಿಂದ ಜನತಾದಳದ ಟಿಕೆಟ್‌ ಕೇಳಿದರು. ಸಿಗದಿದ್ದಾಗ ಅಧಿಕೃತ ಅಭ್ಯರ್ಥಿ ಸಿ. ಬಸವೇಗೌಡರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತರು. ಬಸವೇಗೌಡ- ಮಾದೇಗೌಡ ಈ ಇಬ್ಬರ ಜಗಳದಲ್ಲಿ ಆಗ ಲಾಭ ಮಾಡಿಕೊಂಡ ಮೂರನೇ ವ್ಯಕ್ತಿ ಬಿಜೆಪಿಯ ಎಚ್‌.ಎಸ್‌. ಶಂಕರಲಿಂಗೇಗೌಡರು. ಎರಡು ವರ್ಷ ಮೌನವಾಗಿದ್ದ ಮಾದೇಗೌಡರು ನಂತರ ಕಾಂಗ್ರೆಸ್‌ ಸೇರಿದರು. 1999 ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾದರು. ಹೀಗಾಗಿ ಮಾದೇಗೌಡರು ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷರಾದರು. 2002 ರಲ್ಲಿ ನರಸಿಂಹರಾಜ ಕ್ಷೇತ್ರದಿಂದ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ತನ್ವೀರ್‌ ಸೇಠ್‌ ಜಯಗಳಿಸಿದರು. ಆಗ ಡಿ. ಮಾದೇಗೌಡರಿಗೆ ಎಸ್‌.ಎಂ. ಕೃಷ್ಣ ಅವರು ವಿಧಾನಸಭೆಯಿಂದ ವಿಧಾನಪರಿಷತ್‌ ಸದಸ್ಯರಾಗಿ ಆಯ್ಕೆ ಮಾಡಿದರು. ಮಾದೇಗೌಡರು ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಈಗಲೂ ವಾರ್ಡ್‌‚ ಕಾರ್ಪೋರೇಷನ್‌ ಸಂಘಟನೆ ಮೂಲಕ ಕುಂಬಾರಕೊಪ್ಪಲಿನಲ್ಲಿ ತ್ಯಾಜ್ಯ ಶುದ್ಧೀಕರಣ ಘಟಕ ನಡೆಸುತ್ತಾ, ಯೂತ್‌ ಹಾಸ್ಟೆಲ್‌ ಮತ್ತಿತರ ಕಡೆ ಸಕ್ರಿಯರಾಗಿದ್ದಾರೆ.

ಅಲ್ಲದೇ ಅಂಬಿಗರಹಳ್ಳಿ-ಸಂಗಾಪುರ- ಪುರ ಗ್ರಾಮಗಳ ಬಳಿ ಇರುವ ಕಾವೇರಿ- ಹೇಮಾವತಿ- ಲಕ್ಷ್ಮಣತೀರ್ಥ ನದಿಗಳ ತ್ರಿವೇಣಿ ಸಂಗಮದಲ್ಲಿ ಶ್ರೀ ಮಹೇಶ್ವರ ಕುಂಭಮೇಳ ನಡೆಯಲು ಪ್ರಮುಖ ಕಾರಣಕರ್ತರಲ್ಲಿ ಒಬ್ಬರಾಗಿದ್ದಾರೆ. ದಸರೆ ಸಂದರ್ಭದಲ್ಲಿ ಅವರಿಗೆ ನಾಲ್ಡಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ ಕೂಡ ಸಂದಿತ್ತು.

ಸರ್ಕಾರ ನನ್ನನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದರಿಂದ ಸಂತೋಷ ಆಗಿದೆ. ಸಮಾಜ ಸೇವಾ ಕ್ಷೇತ್ರದಲ್ಲಿ ನಾನು ಮಾಡಿರುವ ಕೆಲಸಕ್ಕೆ ಸಾರ್ಥಕತೆ ಬಂದಿದೆ.

-ಡಿ. ಮಾದೇಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯರು

ಅಂಕಣಕಾರ, ಪ್ರಖ್ಯಾತ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ

ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ, ಅದೇ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದ ಎಂ. ಕೃಷ್ಣೇಗೌಡರು ನಾಡು ಕಂಡ ಪ್ರಖ್ಯಾತ ವಾಗ್ಮಿ. ಉದಯ ಟಿವಿಯ ಹರಟೆ ಕಾರ್ಯಕ್ರಮದ ಮೂಲಕ ಪ್ರಸಿದ್ಧರಾದ ಅವರು ಸುತ್ತದ ದೇಶಗಳಿಲ್ಲ. ಅಮೆರಿಕಾ ಅಕ್ಕ ಸಮ್ಮೇಳನಗಳಿಂದ ಹಿಡಿದು ದುಬೈ, ಮಲೇಷಿಯಾ ಮತ್ತಿತರ ಕನ್ನಡ ಸಮ್ಮೇಳನಗಳವರೆಗೆ ಪಾಲ್ಗೊಂಡು ತಮ್ಮ ಮಾತಿನ ಮೂಲಕ ಕನ್ನಡಿಗರನ್ನು ರಂಜಿಸಿರುವುದು ಮಾತ್ರವಲ್ಲದೇ ಕನ್ನಡ ಭಾಷೆಯ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಕನಗನಮರಡಿ ಗ್ರಾಮದವಾದ ಕೃಷ್ಣೇಗೌಡರು 1958ರ ಡಿ.8ರಂದು ಮರೀಗೌಡ ಮತ್ತು ದೇವಮ್ಮ ಅವರ ಪುತ್ರರಾಗಿ ಜನಿಸಿದರು. ಹುಟ್ಟೂರು, ವಿಜಯ ಪ್ರೌಢಶಾಲೆಯಲ್ಲಿ ಆರಂಭಿಕ ಶಿಕ್ಷಣ ಪಡೆದ ಅವರು, ನಂತರ ಮೈಸೂರಿನ ಶಾರದಾವಿಲಾಸ, ಯುವರಾಜ ಕಾಲೇಜಿನಲ್ಲಿ ಓದಿ ಪದವಿ ಪಡೆದರು. ಅತ್ಯುತ್ತಮ ಜಾನಪದ ಗಾಯಕರೂ ಹೌದು. ವಿಜ್ಞಾನ ವಿದ್ಯಾರ್ಥಿಯಾಗಿದ್ದ ಅವರು ಕನ್ನಡದ ಮೇಲಿನ ಸೆಳೆತದಿಂದ ಸ್ನಾತಕೋತ್ತರ ಪದವಿಯನ್ನು ಪ್ರಥಮ ದರ್ಜೆ ಹಾಗೂ ಚಿನ್ನದ ಪದಕದೊಂದಿಗೆ ಪಡೆದು, 1983ರಲ್ಲಿ ಅಧ್ಯಾಪನಾ ವೃತ್ತಿಯನ್ನು ಆರಿಸಿಕೊಂಡವರು.

ವಿದ್ಯಾರ್ಥಿ ದೆಸೆಯಲ್ಲಿಯೇ ಅವರು ಅತ್ಯುತ್ತಮ ಚರ್ಚಾಪಟು. ಹಾಡುಗಾರ, 1979ರಲ್ಲಿ ಮಂಡ್ಯ ಜಿಲ್ಲಾ ವಿದ್ಯಾರ್ಥಿ ಬಳಗ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಪ್ರತಿಭಾವೀರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು. ಹೊನ್ನಾರು ಜಾನಪದ ತಂಡದಲ್ಲಿಯೂ ಇದ್ದರು. 1982 ರಿಂದ 1986 ರವರೆಗೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯದರ್ಶಿಯೂ ಆಗಿದ್ದರು. 1999ರಲ್ಲಿ ತಿರುಚಿರಾಪಳ್ಳಿಯಲ್ಲಿ ಕಾವೇರಿ ಜೀವಂತ ದಂತಕಥೆ ಪ್ರಬಂಧ ಮಂಡಿಸಿ, ಸೈ ಎನಿಸಿಕೊಂಡಿದ್ದರು.

ಮೈಸೂರು ಜಿಲ್ಲಾ ಸಾಕ್ಷರತಾ ಆಂದೋಲನದಲ್ಲಿ ಕೂಡ ತೊಡಗಿಸಿಕೊಂಡಿದ್ದರು. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಕುರಿತು ಟಿವಿಗಳು ಹಾಗೂ ಆಕಾಶವಾಣಿಯಲ್ಲಿ ವೀಕ್ಷಕ ವಿವರಣೆಕಾರರಾಗಿ ಪಾಲ್ಗೊಂಡಿದ್ದಾರೆ.

ಮುಸ್ಸಂಜೆಯ ಮಾತು, ಅಣ್ಣ ಬಸವಣ್ಣ, ಗೂಗ್ಲಿ, ಮೊದಲಾದ ಚಲನಚಿತ್ರಗಳಲ್ಲೂ ಕೂಡ ಅಭಿನಯಿಸಿದ್ದಾರೆ. ಶ್ರಾವಣಿ ಸುಬ್ರಹ್ಮಣ್ಯ ಚಿತ್ರಕ್ಕೆ ಗೀತೆ ರಚಿಸಿದ್ದಾರೆ. ಅವರು ಹಾಡಿರುವ ಜಾನಪದ ಗೀತೆಗಳ ಕ್ಯಾಸೆಟ್‌ಗಳು ಕೂಡ ಹೊರಬಂದಿವೆ.

‘ಕವಣೆ ಕಲ್ಲು’, ‘ಕೃಷ್ಣ ವಿನೋದ’, ‘ಜಲದಕಣು’್ಣ ಕೃತಿಗಳನ್ನು ಕೂಡ ಪ್ರಕಟಿಸಿದ್ದಾರೆ. ‘ಮೈಸೂರು ದಿಗಂತ’ದಲ್ಲಿ ಪ್ರತಿದಿನ ಹನಿಗವನ-ಕವಣೆ ಕಲ್ಲು, ವಾರಕ್ಕೊಮ್ಮೆ ವ್ಯಕ್ತಿ ಪರಿಚಯ- ಬೆಳಕಂಚು, ‘ವಿಜಯವಾಣಿ’ ಪತ್ರಿಕೆಗಳಲ್ಲಿ ಅಂಕಣ- ಜಲದಕಣ್ಣು ಕೂಡ ಬರೆದಿದ್ದಾರೆ.

ನನ್ನ ಗುರುಗಳಾದ ಪ್ರೊ.ಅ.ರಾ. ಮಿತ್ರ ಅವರೊಂದಿಗೆ ನನಗೂ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದರಿಂದ ಸಂತೋಷ ಆಗಿದೆ. ಪ್ರಥಮವಾಗಿ ವೇದಿಕೆಗೆ ತಂದವರೇ ಅವರು. ಇದು ಬಹಳ ದೊಡ್ಡ ಗೌರವ ಎಂದು ಭಾವಿಸಿರುವೆ. ಒಪ್ಪಿಕೊಂಡಿದ್ದೇನೆ ಎಂದರೆ ಆತ್ಮಪ್ರಶಂಸೆ ಆಗುತ್ತದೆ. ಇಲ್ಲ ಎಂದರೇ ಸರ್ಕಾರದ ವಿವೇಕವನ್ನು ಅಗೌರವಿಸಿದಂತೆ ಆಗುತ್ತದೆ. ಆದ್ದರಿಂದ ವಿನಯದಿಂದ ಸ್ವೀಕರಿಸುತ್ತೇನೆ.

- ಪ್ರೊ.ಎಂ. ಕೃಷ್ಣೇಗೌಡ, ಖ್ಯಾತ ವಾಗ್ಮಿ

click me!