ಬೆಂಗಳೂರಿಗೆ ಸರಬರಾಜು ಆಗುತ್ತಿದೆಯೇ ನಾಯಿ ಮಾಂಸ? ರಾಜಸ್ಥಾನದಿಂದ ಬಂದ 4000 ಕೆಜಿ ಉದ್ದಬಾಲದ ಮಾಂಸ ಯಾವುದು?

By Sathish Kumar KH  |  First Published Jul 26, 2024, 7:24 PM IST

ರಾಜಸ್ಥಾನದಿಂದ ಬೆಂಗಳೂರಿಗೆ ರೈಲಿನಲ್ಲಿ ಸರಬರಾಜು ಆಗುತ್ತಿದ್ದ 4,500 ಕೆ.ಜಿ. ಮಟನ್ ಮಾಂಸ ನಾಯಿ ಮಾಂಸ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಆರೋಪ ಮಾಡಿದ್ದಾರೆ.


ಬೆಂಗಳೂರು (ಜು.26): ರಾಜಸ್ಥಾನದಿಂದ ಸಿಲಿಕಾನ್ ಸಿಟಿ ಬೆಂಗಳೂರಿಗೆ ರೈಲಿನಲ್ಲಿ ವಾರದ ಮೂರು ದಿನಗಳು ಸರಬರಾಜು ಆಗುತ್ತಿದ್ದ 4,500 ಕೆ.ಜಿ. ಮಟನ್ ಮಾಂಸ ನಾಯಿ ಮಾಂಸ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಮಾಂಸ ಮಾರಾಟ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೌದು, ಪ್ರತಿನಿತ್ಯ ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಬರುವ ರೈಲುಗಳಲ್ಲಿ ಅಕ್ರಮವಾಗಿ ಮಾಂಸ ಸರಬರಾಜು ಆಗುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು ಯಶವಂತಪುರಕ್ಕೆ ಆಗಮಿಸಿದ ಜೈಪುರ ರೈಲು ಬಂದಾಕ್ಷಣ ದಾಳಿ ಮಾಡಿದ್ದಾರೆ. ಈ ವೇಳೆ ಒಂದೆರಡು ಬಾಕ್ಸ್‌ಗಳನ್ನು ತೆರೆದು ನೋಡಿದ್ದು, ಅದರಲ್ಲಿ ಮಟನ್ ಮಾಂಸದ ಬದಲಾಗಿ ನಾಯಿ ಮಾಂಸ ಪತ್ತೆಯಾಗಿದೆ ಎಂದು ಹಿಂದೂ ಕಾರ್ಯಕರ್ತರು ಗಲಾಟೆ ಆರಂಭಿಸಿದ್ದಾರೆ. ಶಿವಾಜಿನಗರದಿಂದ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದ ಮಾಂಸ ಖರೀದಿ ವ್ಯಾಪಾರಿಗಳು, ಇದು ನಾಯಿ ಮಾಂಸವಲ್ಲ ಎಂದು ಹೇಳಿ ಬಾಕ್ಸ್ ತೆರೆದ ಹಿಂದೂ ಕಾರ್ಯಕರ್ತರ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ.

Latest Videos

undefined

ಇದಾದ ನಂತರ ರೈಲಿನಲ್ಲಿ ಬಂದಿದ್ದ ಮಟನ್ ಮಾಂಸವನ್ನು ಎತ್ತಿ ನೋಡಿದ್ದಾರೆ. ಆಗ ಉದ್ದ ಬಾಲವಿರುವ ನಾಯಿಯ ಆಕಾರದಲ್ಲಿ ಹೋಲುತ್ತಿರುವ ಮಾಂಸವನ್ನು ನೋಡಿ ಮತ್ತಷ್ಟು ಜನರು ಸೇರಿಕೊಂಡಿದ್ದಾರೆ. ಇದರಿಂದ ಮಟನ್ ತರಿಸಿಕೊಳ್ಳುವ ವ್ಯಾಪಾರಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. ಉಳಿದ ಬಾಕ್ಸ್‌ಗಳನ್ನು ಬಿಚ್ಚಲು ಬಿಡದೇ ಕೂಗಾಟ ಮಾಡಿದ್ದಾರೆ. ಜೊತೆಗೆ, ಉಳಿದ ಬಾಕ್ಸ್‌ಗಳನ್ನು ತೆರೆಯಲು ಬಿಡದೇ ಅದನ್ನು ತೆರೆದರೆ ವ್ಯಾಪಾರ ಮಾಡುವುಕ್ಕೆ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು ರಾಜಸ್ಥಾನದಿಂದ ರೈಲಿನಲ್ಲಿ ಬೆಂಗಳೂರಿಗೆ 90 ಮಾಂಸದ ಬಾಕ್ಸ್‌ಗಳು ಪಾರ್ಸಲ್‌ ಬಂದಿವೆ. ಅದರಲ್ಲಿ ಒಟ್ಟು 4,500 ಕೆ.ಜಿ. ಮಾಂಸವಿದೆ. ಇನ್ನು ಹಿಂದೂ ಕಾರ್ಯಕರ್ತರು ಬಂದು ಗಲಾಟೆ ಮಾಡುತ್ತಿದ್ದರೂ ಸ್ಥಳಕ್ಕೆ ಬಂದ ಮಾಂಸ ತರಿಸಿಕೊಂಡ ವ್ಯಾಪಾರಿ ಮಾತ್ರ ಬೇರೆ ಬಾಕ್ಸ್‌ಗಳನ್ನು ತೆರೆಯಲು ಬಿಡಲೇ ಇಲ್ಲ. ಈ ವೇಳೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದರೂ ಮಾಂಸದ ಬಾಕ್ಸ್‌ಗಳನ್ನು ತೆರೆಯಲು ಬಿಡಲಿಲ್ಲ.

click me!