ಬಳ್ಳಾರಿಯಲ್ಲಿ ಮತ್ತೊಂದು ಕೋವಿಡ್-19 ಪಾಜಿಟಿವ್ ಪ್ರಕರಣ: ಜಿಲ್ಲಾಧಿಕಾರಿ ಎಸ್.ಎಸ್. ನಕುಲ್|ಕೌಲ್‌ಬಜಾರ್ ಪ್ರದೇಶದ ನಿವಾಸಿಗೆ ಸೋಂಕು ಇರುವುದು ದೃಢ| ಒಟ್ಟು ಪ್ರಕರಣಗಳು 14, ಗುಣಮುಖರು 8, ಹಾಲಿ ಪ್ರಕರಣಗಳು 6| ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ|
ಬಳ್ಳಾರಿ(ಮೇ.06): ಲಾಕ್‌ಡೌನ್ ಸಡಿಲಿಕೆಗೊಳಿಸಿದ ಬೆನ್ನಲ್ಲೇ ನಗರದಲ್ಲಿ ಮತ್ತೊಂದು ಕೋವಿಡ್-19 ಪಾಜಿಟಿವ್ ಪ್ರಕರಣ ಪತ್ತೆಯಾಗಿದೆ. ಇಲ್ಲಿನ ಕೌಲ್‌ಬಜಾರ್ ಪ್ರದೇಶದ ವ್ಯಕ್ತಿಯೋರ್ವರಿಗೆ ಸೋಂಕು ಇರುವುದು ದೃಢಗೊಂಡಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದ್ದಾರೆ.
ನಗರದ ಕೌಲ್‌ಬಜಾರ್ ಪ್ರದೇಶದ ವ್ಯಕ್ತಿ ಸೇರಿದಂತೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಣೇಕಲ್ ಗ್ರಾಮದ ನಾಲ್ವರು ಸೇರಿ ಒಟ್ಟು 18 ಜನರು ಕಳೆದ ಮಾ. 16ರಂದು ಪ್ರವಾಸ ಹೋಗಿದ್ದರು. ಉತ್ತರಾಖಂಡ ರಾಜ್ಯದ ಲುಡಿಕಿಯಲ್ಲಿ ಸಿಲುಕಿಕೊಂಡಿದ್ದರು. ಎರಡು ದಿನಗಳ ಹಿಂದೆ ಆ ಜಿಲ್ಲೆಯ ಜಿಲ್ಲಾಧಿಕಾರಿಯಿಂದ ಪಾಸ್ ಪಡೆದು ಬಳ್ಳಾರಿಗೆ ಬಂದಿದ್ದರು. ಇವರ ಆರೋಗ್ಯ ತಪಾಸಣೆ ನಡೆಸಿ, ಗಂಟಲುದ್ರವ ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿತ್ತು. ಈ ಪೈಕಿ ಕೌಲ್‌ಬಜಾರ್ ಪ್ರದೇಶದ ವ್ಯಕ್ತಿಗೆ ಸೋಂಕು ಇರುವುದು ಗೊತ್ತಾಗಿದೆ. ಉಳಿದವರದ್ದು ನೆಗೆಟಿವ್ ಬಂದಿದೆ ಎಂದು ತಿಳಿಸಿದರು.
ರಸ್ತೆ ಪಕ್ಕ ಬಿದ್ದಿದ್ದ ವ್ಯಕ್ತಿಯ ರಕ್ಷಿಸಿ ಮಾನವೀಯತೆ ಮೆರೆದ ಮಾಜಿ ಶಾಸಕ ಸಿರಾಜ್‌ಶೇಕ್
ಕೌಲ್‌ಬಜಾರ್ ಸುತ್ತಮುತ್ತಲಿನ ಪ್ರದೇಶದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ (ಸೋಂಕಿತ) ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಅಂಗನವಾಡಿ, ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರಿಂದ ಮನೆಮನೆ ಸಮೀಕ್ಷೆ ಶುರು ಮಾಡಲಾಗಿದೆ. ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಮಗಳು, ಅಳಿಯ ಸೇರಿ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 22 ಜನರನ್ನು ಸಹ ಸಾಂಸ್ಥಿಕ ಪ್ರತ್ಯೇಕ ವಾಸದಲ್ಲಿಡಲಾಗಿದೆ. ಸೋಂಕಿತ ವ್ಯಕ್ತಿ ಬಳ್ಳಾರಿಗೆ ಬಂದ ಬಳಿಕ ಅನೇಕ ಕಡೆ ಸುತ್ತಾಡಿದ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಹಂತದ ಕ್ರಮಗಳನ್ನು ಕೈಗೊಳ್ಳುತ್ತೇವೆ. ಅಂತರ ರಾಜ್ಯದಿಂದ ಬಂದವರಿಗೆ ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುವುದು. ಹೊರ ರಾಜ್ಯದಿಂದ ವಿಮ್ಸ್ ಬರುವವರು ಅಲ್ಲಿನ ಜಿಲ್ಲಾಧಿಕಾರಿ ಪಾಸ್ ಪಡೆದಿರಬೇಕು. ಆ್ಯಂಬುಲೆನ್ಸ್‌ನಲ್ಲಿ ಬರಲು ಮಾತ್ರ ಅವಕಾಶ ನೀಡಲಾಗುವುದು. ಬೇರೆ ರೀತಿಯಲ್ಲಿ ಬಂದದ್ದು ಗೊತ್ತಾದ ಕೂಡಲೇ 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಮಾತನಾಡಿ, ಹೊರ ರಾಜ್ಯದ ಜನರು ಜಿಲ್ಲೆಯೊಳಗೆ ನುಸುಳದಂತೆ ಕಟ್ಟೆಚ್ಚರ ವಹಿಸಲಾಗಿದೆ. ಒಳ ದಾರಿಗಳಿಂದ ಬರುವವರ ಮೇಲೂ ನಿಗಾ ವಹಿಸಲಾಗುತ್ತಿದೆ ಎಂದರು. ಜಿಪಂ ಸಿಇಒ ಕೆ. ನಿತೀಶ್, ಅಪರ ಜಿಲ್ಲಾಧಿಕಾರಿ ಮಂಜುನಾಥ್ ಇದ್ದರು.