ಕನಿಷ್ಟ ಬೆಂಬಲ ಬೆಲೆ ನಿಗದಿಗೆ ರೈತಸಂಘ ಆಗ್ರಹ

By Kannadaprabha NewsFirst Published Jun 6, 2020, 6:54 AM IST
Highlights

 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಡಾ. ಸ್ವಾಮಿನಾಥನ್‌ ಆಯೋಗದ ವರದಿ ಪ್ರಕಾರ ಬೆಲೆ ಕೊಡುವುದಾಗಿ ಚುನಾವಣಾ ಪ್ರನಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಆದರೆ ಇಲ್ಲಿಯವರೆಗೂ ಈ ಬೆಲೆ ಕೊಡಲು ಸಾಧ್ಯವಾಗಲಿಲ್ಲ ಎಂದು ರೈತ ಸಂಘ ಆರೋಪಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ(ಜೂ.06): 2020​-21ರ ಮುಂಗಾರು ಬೆಳೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಕನಿಷ್ಠ ವೈಜ್ಞಾನಿಕವಾಗಿಲ್ಲ. ಹಾಗಾಗಿ ಡಾ. ಸ್ವಾಮಿನಾಥನ್‌ ಆಯೋಗದ ವರದಿ ಆಧಾರದ ಮೇಲೆ ಬೆಲೆ ನಿಗದಿಪಡಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸರ್ಕಾರವನ್ನು ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ರೈತಸಂಘದ ಕಾರ್ಯಾಧ್ಯಕ್ಷ ಎಚ್‌.ಆರ್‌. ಬಸವರಾಜಪ್ಪ ಮಾತನಾಡಿ, ವಾಸ್ತವದಲ್ಲಿ ಕಳೆದ ವರ್ಷ ಭತ್ತದ ಬೆಂಬಲ ಬೆಲೆ 1815 ರು. ಇತ್ತು. ಪ್ರಸಕ್ತ ಸಾಲಿನಲ್ಲಿ ಸಾವಿರ 1868 ರು. ನಿಗದಿಪಡಿಸಲಾಗಿದೆ. ಅಂದರೆ ಶೇ. 2.92 ಎಷ್ಟು ಬೆಲೆ ಹೆಚ್ಚಿದಂತಾಗಿದೆ. ಹಾಗೆಯೇ ರಾಗಿ ಬೆಳೆಗೆ ಹೋದ ವರ್ಷ 3150 ರು. ಇತ್ತು. ಈ ವರ್ಷ 3295 ರು. ನಿಗದಿ ಪಡಿಸಲಾಗಿದೆ. ಅಂದರೆ ಶೇ. 4 ರಷ್ಟುಹೆಚ್ಚಿದೆಯಷ್ಟೆ ಎಂದರು.

ಕೃಷಿ ಬೆಲೆ ಆಯೋಗ ಪ್ರಕಟಿಸಿದ ಉತ್ಪಾದನಾ ವೆಚ್ಚ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿದೆ. ಸರ್ಕಾರ ಪ್ರಕಟಿಸಿರುವ ಬೆಂಬಲ ಬೆಲೆಯಿಂದ ರೈತರಿಗೆ ಲಾಭ ಇರಲಿ, ಉತ್ಪಾದನಾ ವೆಚ್ಚವು ದೊರಕುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

50 ಸಾವಿರ ಸೋಂಕಿತರಿಂದ ತುಳುಕುತ್ತಿರುವ ಮುಂಬೈನಿಂದ ಬಂತು ಗುಡ್‌ನ್ಯೂಸ್!

ಕೇಂದ್ರ ಸರ್ಕಾರ 2017-18ನೇ ಸಾಲಿನಲ್ಲಿ 13 ಬೆಳೆಗಳ ಎಂಎಸ್‌ಪಿ ಬೆಲೆ ಮತ್ತು ಡಾ. ಸ್ವಾಮಿನಾಥನ್‌ ಆಯೋಗದ ವರದಿಯ ಬೆಲೆಗಳ ಲೆಕ್ಕಾಚಾರ ಮಾಡಿದರೆ ಕರ್ನಾಟಕ ರಾಜ್ಯದ ರೈತರಿಗೆ ಸುಮಾರು 21, 469 ಕೋಟಿ ರು. ನಷ್ಟ ಅನುಭವಿಸಿದ್ದಾರೆ. ಹಿಂದಿನ ಸರ್ಕಾರಗಳು ರೈತರಿಗೆ ನ್ಯಾಯಯುತ ಬೆಲೆ ಕೊಡಿಸುವ ಪ್ರಯತ್ನ ಮಾಡಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಡಾ. ಸ್ವಾಮಿನಾಥನ್‌ ಆಯೋಗದ ವರದಿ ಪ್ರಕಾರ ಬೆಲೆ ಕೊಡುವುದಾಗಿ ಚುನಾವಣಾ ಪ್ರನಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಆದರೆ ಇಲ್ಲಿಯವರೆಗೂ ಈ ಬೆಲೆ ಕೊಡಲು ಸಾಧ್ಯವಾಗಲಿಲ್ಲ. ರೈತರಿಗೆ ಡಾ. ಸ್ವಾಮಿನಾಥನ್‌ ಆಯೋಗದ ವರದಿ ಪ್ರಕಾರ ನ್ಯಾಯಯುತ ಬೆಲೆಕೊಟ್ಟರೆ ಯಾವ ಸಬ್ಸಿಡಿ, ಧನಸಹಾಯದ ಪ್ಯಾಕೇಜ್‌ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯ ಪಟ್ಟರು.

ಕೊರೋನಾ ಸಂದರ್ಭದಲ್ಲಿ ರೈತರು ಬೆಳೆದ ಬೆಳೆಗಳನ್ನು ಕೊಳ್ಳುವವರೆ ಇಲ್ಲದೇ ಜಮೀನಿನಲ್ಲಿ ಕೊಳೆತು ಹೋಗಿದೆ. ಖರ್ಚು ಮಾಡಿದ ವೆಚ್ಚ ಸಹ ವಾಪಸ್ಸು ಬರುತ್ತಿಲ್ಲ. ಈಗ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಕಂಪನಿಗಳ ಹಿಡಿತದಲ್ಲಿ ರೈತರು ಸಿಲುಕಿಕೊಂಡು ಅವರು ಕೇಳಿದ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ ಎಂದರು.

ಕೃಷಿ ಮಾರುಕಟ್ಟೆ, ವಿದ್ಯುತ್‌ಚ್ಚಕ್ತಿ ರಾಜ್ಯ ಸರ್ಕಾರದ ಜವಾಬ್ದಾರಿ. ಆದರೂ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿದೆ. ಈಗ 2003 ರ ವಿದ್ಯುತ್‌ ಕಾಯ್ದೆಗೆ ತಿದ್ದುಪಡಿಗೆ ಹೊರಟಿದೆ. ಪ್ರತಿಯೊಂದು ಕಾಯ್ದೆ ತಿದ್ದುಪಡಿಗೆ ಮುಂದಾದಲ್ಲಿ ದೇಶಾದ್ಯಂತ ಜನರ ಕ್ರಾಂತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೇಂದ್ರ ಘೋಷಿಸಿರುವ 20 ಲಕ್ಷ ಕೋಟಿ ರು.ವಿಶೇಷ ಪ್ಯಾಕೇಜ್‌ನಲ್ಲಿ ಇದುವರೆಗೂ ರೈತರಿಗೆ, ಕಾರ್ಮಿಕರಿಗೆ ಹಾಗೂ ಬಡವರಿಗೆ ಹಣಕಾಸಿನ ನೆರವು ದೊರಕಿಲ್ಲ. ಬಹುಕೋಟಿ ಒಡೆಯರಿಗೆ, ಬಹುರಾಷ್ಟ್ರೕಯ ಕಂಪನಿಗಳಿಗೆ, ದೇಶದ ಶ್ರೀಮಂತ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಾಯ್ದೆಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ರೈತರು, ಕಾರ್ಮಿಕ ವಿರೋಧಿ, ಜನಸಾಮಾನ್ಯರ ವಿರೋಧಿ ಕಾಯ್ದೆಗಳನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ಒತ್ತಾಯಿಸಿದರು. ಮುಖಂಡ ಪಿ.ಶೇಖರಪ್ಪ, ಕೆ.ರಾಘವೇಂದ್ರ, ಹಿಟ್ಟೂರ್‌ ರಾಜು, ಪಿ.ಡಿ.ಮಂಜಪ್ಪ, ಎಚ್‌.ಎಂ.ಚಂದ್ರಪ್ಪ ಇದ್ದರು.

click me!