ಖರ್ಗೆ ಹಿಂದೆ ಸರಿದರೆ ಮಾಜಿ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್..?

By Kannadaprabha NewsFirst Published Jun 5, 2020, 3:39 PM IST
Highlights

ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಕೇಳಿ ಬರುತ್ತಿದೆ. ಒಂದು ವೇಳೆ ಅವರು ಸ್ಪರ್ಧೆಯಿಂದ ಹಿಂದೆ ಸರಿದರೆ ಮಾಜಿ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡುವಂತೆ ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ ಮುಖಂಡ ಕೆ.ಎನ್‌.ರಾಜಣ್ಣ ಆಗ್ರಹಿಸಿದ್ದಾರೆ.

ತುಮಕೂರು(ಜೂ.05): ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಕೇಳಿ ಬರುತ್ತಿದೆ. ಒಂದು ವೇಳೆ ಅವರು ಸ್ಪರ್ಧೆಯಿಂದ ಹಿಂದೆ ಸರಿದರೆ ಮಾಜಿ ಸಂಸದ ಮುದ್ದಹನುಮೇಗೌಡರಿಗೆ ನೀಡುವಂತೆ ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ ಮುಖಂಡ ಕೆ.ಎನ್‌.ರಾಜಣ್ಣ ಆಗ್ರಹಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಖರ್ಗೆ ಅವರು ನಮ್ಮ ರಾಜ್ಯದ ಪ್ರಶ್ನಾತೀತ ನಾಯಕರು. ಅವರ ಸ್ಪರ್ಧೆಗೆ ಯಾರದ್ದೂ ವಿರೋಧ ಇಲ್ಲ, ಎಲ್ಲರ ಬೆಂಬಲ ಇದೆ. ಒಂದು ವೇಳೆ ಅವರ ಸ್ಪರ್ಧಿಸದಿದ್ದರೆ ಮುದ್ದಹನುಮೇಗೌಡರಿಗೆ ಟಿಕೆಟ್‌ ನೀಡಲಿ ಎಂದಿದ್ದಾರೆ.

ನಾಗಲಮಡಿಕೆಗೆ ಡ್ಯಾಂಗೆ ಆಂಧ್ರದ ಕೃಷ್ಣ ನದಿ ನೀರು

ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಮುದ್ದಹನುಮೇಗೌಡರಿಗೆ ಟಿಕೆಟ್‌ ತಪ್ಪಿತ್ತು. ಅಂದು ಕೇಂದ್ರದ ನಾಯಕರು ಅವರಿಗಾದ ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ಮುಂದೆ ನ್ಯಾಯ ಕೊಡಿಸುವುದಾಗಿ ಮಾತು ಕೊಟ್ಟಿದ್ದರು. ಆ ಹಿನ್ನೆಲೆಯಲ್ಲಿ ರಾಜ್ಯಸಭೆಗೆ ಮುದ್ದಹನುಮೇಗೌಡರು ಪ್ರಯತ್ನ ಮಾಡುತ್ತಿದ್ದು, ಅವ್ರಿಗೆ ನಮ್ಮ ಬೆಂಬಲ ನೀಡಲು ತೀರ್ಮಾನಿಸಿದ್ದೇವೆ ಎಂದರು.

ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಯಿಂದ ದೇವೇಗೌಡರಿಗೆ ರಾಜ್ಯಸಭಾ ಸ್ಥಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಎಂಎಲ್ಸಿಗೆ 26,27 ವೋಟ್‌ಗಳು ಬೇಕು, 46 ವೋಟ್‌ ರಾಜ್ಯಸಭೆಗೆ ಬೇಕು. ನಮ್ಮಲ್ಲಿ ಹೆಚ್ಚಿನ ವೋಟ್‌ಗಳಿವೆ, ಆ ವೋಟುಗಳನ್ನು ನಮ್ಮವರಿಗೆ ಹಾಕೋಣ. ಬಿಜೆಪಿಯನ್ನು ಸೋಲಿಸಬೇಕು ಅಂತೇನಾದರೂ ದೇವೇಗೌಡರಿಗೆ ಅಥವಾ ಅವರ ಅಭ್ಯರ್ಥಿಗೆ ಕೊಡಬೇಕು ಅಂದರೆ ಅವರ ಕೌನ್ಸಿಲ… ಸೀಟನ್ನು ಒಂದು ನಮಗೆ ಬಿಟ್ಟುಕೊಡಬೇಕು ಎಂದರು.

ಬಿಜೆಪಿಯಲ್ಲಿ ಭಿನ್ನಮತ ಸ್ಫೋಟದ ಮಧ್ಯೆ ಡಿಕೆ ಶಿವಕುಮಾರ್ ಮಾಸ್ಟರ್ ಪ್ಲಾನ್..!

ಸುಮ್ಮನೇ ನಮ್ಮ ಹೆಚ್ಚಿನ ವೋಟ್‌ ಅವರಿಗೆ ಯಾಕೆ ಕೊಡಬೇಕು. ರಾಜಕೀಯದಲ್ಲಿ ಎಲ್ಲ ಅಧಿಕಾರಕ್ಕಾಗಿಯೇ ರಾಜಕಾರಣ ಮಾಡೋದು ಎಂದ ಅವರು, ಹಾಗಾದಲ್ಲಿ ನಮಗಿದ್ದ 2 ಎಂಎಲ್ಸಿ ಸ್ಥಾನ 3 ಆಗುತ್ತೆ ಎಂದರು. ಅದನ್ನು ನಮ್ಮ ಪಕ್ಷದ ಯಾರಾದರೂ ಹಿಂದುಳಿದ ವರ್ಗದವರಿಗೆ ನೀಡಲಿ ಎಂದಿದ್ದಾರೆ.

ಅಸೆಂಬ್ಲಿಯಲ್ಲಿ ಗೆಲ್ಲುವುದಕ್ಕೆ ಆಗದಂತವರಿಗೆ ಕೌನ್ಸಿಲ್‌ನಲ್ಲಿ ಅವಕಾಶ ಕೊಡಬೇಕು. ಜೆಡಿಎಸ್‌ನ ಒಂದು ಸೀಟು ಕೊಡಬೇಕು ಅಂತಾ ಈಗಾಗಲೇ ನಾಯಕರ ಗಮನಕ್ಕೆ ತಂದಿದ್ದೇನೆ. ಏನು ಮಾಡುತ್ತಾರೆ ಅಂತಾ ನೋಡೊಣ ಎಂದರು.

ಕೋವಿಡ್‌ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರ ವಿಫಲ

ಮೊದಲ ದಿನದಿಂದಲೂ ಕೋವಿಡ್‌ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕೊರೋನಾ ಜನವರಿಯಲ್ಲೇ ರಿಪೋರ್ಟ್‌ ಆಗಿತ್ತು. ಎಲ್ಲೆಲ್ಲಿ ಕೊರೋನಾ ಹರಡುತ್ತೆ ಅನ್ನೋ ಮಾಹಿತಿ ಇದ್ದರೂ ಮುಂಜಾಗ್ರತೆ ತೆಗೆದುಕೊಂಡಿಲ್ಲ ಎಂದರು.

ಕ್ವಾರಂಟೈನ್‌ ಸೆಂಟರ್‌ಗಳೆಲ್ಲ, ಕೊರೋನಾ ಸ್ಪ್ರೆಡಿಂಗ್‌ ಸೆಂಟರ್‌ಗಳಾಗಿವೆ. ಒಂದು ಕ್ವಾರಂಟೈನ್‌ ಸೆಂಟರ್‌ ಕೂಡ ಹೈಜೆನಿಕ್‌ ಆಗಿಲ್ಲ, ಮುಂಜಾಗ್ರತಾ ಕ್ರಮ ಕೂಡ ಇಲ್ಲ ಎಂದರು. ನನ್ನ ಪರಿಚಯಸ್ಥ ಬಿಜೆಪಿ ನಾಯಕ ತನ್ನ ಮಗಳ ಜೊತೆ ವಿದೇಶದಿಂದ ಬಂದಿದ್ದಾರೆ. ಹೊಟೇಲ್ ಒಂದರಲ್ಲಿ ಮೇಲ್‌ ಮಹಡಿಯಲ್ಲಿ ಅಪ್ಪ, ಕೆಳ ಮಹಡಿಯಲ್ಲಿ ಮಗಳನ್ನು ಕ್ವಾರಂಟೈನ್‌ ಮಾಡಿದ್ದರು. ಬೆಳಗ್ಗೆ 6 ಗಂಟೆಗೆ ತಿಂಡಿ, ಮಧ್ಯಾಹ್ನ ಊಟವನ್ನ ಬಾಗಿಲಲ್ಲಿ ಇಟ್ಟು ಹೋಗುತ್ತಾರಂತೆ. ಒಂದು ಲೀಟರ್‌ ನೀರು ಕೊಡುತ್ತಾರಂತೆ, ಎಲ್ಲಿಗೆ ಸಾಕಾಗುತ್ತದೆ. ಅಲ್ಲಿ ಕೇಳೋಕು, ಹೇಳೋಕೂ ಯಾರು ಇರುವುದಿಲ್ಲವಂತೆ ಎಂದ ಅವರು, ಸ್ಟಾರ್‌ ಹೊಟೇಲ್ ಕ್ವಾರಂಟೈನ್‌ ಈ ಮಟ್ಟಕ್ಕಾದ್ರೇ ಇನ್ನೂ ಹಾಸ್ಟೆಲ್ಗಳ ಗತಿಯೇನು ಎಂದು ಪ್ರಶ್ನಿಸಿದ್ದಾರೆ.

click me!